ಗದಗ: `ಬಿಜೆಪಿ ನನ್ನನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ಷಡ್ಯಂತ್ರ ರೂಪಿಸಿತ್ತು` ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಪಕ್ಷದ ಮೇಲಿನ ತಮ್ಮ ಸಿಟ್ಟನ್ನು ಬಹಿರಂಗಗೊಳಿಸಿದರು.
`ಶ್ರೀರಾಮುಲು ಪಕ್ಷ ಕೆಡವುವುದಿಲ್ಲ. ಬದಲಾಗಿ ಪಕ್ಷ ಕಟ್ಟುತ್ತಾನೆ. ನಾಲ್ಕೈದು ಜಿಲ್ಲೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಹಳ ಶ್ರಮಿಸಿದ್ದೇನೆ. ಆದರೆ ನನ್ನ ರಾಜೀನಾಮೆಯನ್ನು 4 ಗಂಟೆಗೆ ಅಂಗೀಕರಿಸಿ ನಂತರ 4.30ಕ್ಕೆ ಸಂಪುಟ ಸಭೆಯಲ್ಲಿ ಲೋಕಾಯುಕ್ತ ವರದಿ ಮೇಲೆ ಸ್ಪಷ್ಟನೆ ಕೇಳುವುದನ್ನು ಗಮನಿಸಿದಾಗ, ಬಿಜೆಪಿಯ ಕೆಲವರು ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ರೂಪಿಸಿದ್ದಾರೆ ಎನ್ನುವ ಸಂಶಯ ಕಾಡುತ್ತದೆ` ಎಂದರು.
ಗದುಗಿಗೆ ಸೋಮವಾರ ವಿವಿಧ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. `ಬಿಜೆಪಿಯಿಂದಲೇ ಸ್ಪರ್ಧಿಸಬೇಕು ಎಂದು ಸಚಿವ ಜಗದೀಶ ಶೆಟ್ಟರ ಹಾಗೂ ಸಂಸದ ಪ್ರಹ್ಲಾದ ಜೋಶಿ ಗದುಗಿನ ನನ್ನ ಮನೆಯಲ್ಲಿ ಭೇಟಿಯಾಗಿ ಮನವಿ ಮಾಡಿದ್ದಾರೆ. ಅವರ ಜೊತೆ ಕೂಡಾ ಕಳೆದ ಮೂರು ವರ್ಷಗಳಿಂದ ಬಿಜೆಪಿ ನನ್ನನ್ನು ನಡೆಸಿಕೊಂಡ ರೀತಿ ಕುರಿತು ಚರ್ಚಿಸಿರುವೆ. ಸಚಿವ ಸಿ.ಸಿ. ಪಾಟೀಲ ಕೂಡಾ ದೂರವಾಣಿ ಮೂಲಕ ಸಂಪರ್ಕಿಸಿ ಪಕ್ಷದಿಂದಲೇ ಸ್ಪರ್ಧಿಸಬೇಕು ಎಂದು ಕೇಳಿಕೊಂಡಿದ್ದಾರೆ. ಮಂಗಳವಾರ ಹೈದಾರಬಾದ್‌ಗೆ ಹೋಗಿ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡುತ್ತೇನೆ. ಅವರೊಂದಿಗೆ ಚರ್ಚಿಸಿ, ನಂತರ ನಿರ್ಧಾರ ತಿಳಿಸುತ್ತೇನೆ. ಆದರೆ ಬುಧವಾರ ನಾಮಪತ್ರ ಸಲ್ಲಿಸುವುದು ಗ್ಯಾರಂಟಿ` ಎಂದರು.
`ರಾಮುಲು ಪಕ್ಷವನ್ನು ನಂಬಿಕೊಂಡಿಲ್ಲ. ಕಾರ್ಯಕರ್ತರನ್ನು- ಜನರನ್ನು ನಂಬಿಕೊಂಡಿದ್ದಾನೆ. ಜನತಾ ನ್ಯಾಯಾಲಯಕ್ಕೆ ಹೋಗುತ್ತೇನೆ. ಜನರು ಕೊಡುವ ತೀರ್ಪಿಗೆ ತಲೆ ಬಾಗುತ್ತೇನೆ` ಎಂದು ಅವರು ತಿಳಿಸಿದರು.
ರಾಜಕೀಯವಾಗಿ ಮುಗಿಸಲು ಷಡ್ಯಂತ್ರ: ರಾಮುಲು
ಬೆಂಗಳೂರು: ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದರೆ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದ್ದು, ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ಆರಂಭಿಸಿದೆ.
ಅಂತಿಮ ಕ್ಷಣದವರೆಗೂ ಶ್ರೀರಾಮುಲು ಅವರನ್ನೇ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ಬಿಜೆಪಿ ಪ್ರಯತ್ನಿಸಲಿದೆ. ಪಕ್ಷದ ಮನವಿಗೆ ಅವರು ಸ್ಪಂದಿಸದಿದ್ದರೆ ಪರ್ಯಾಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ಖಚಿತ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪರ್ಯಾಯ ಅಭ್ಯರ್ಥಿ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. `ಸ್ಥಳೀಯರೇ ಅಥವಾ ಹೊರಗಿನವರೇ ಎಂಬುದು ಮುಖ್ಯವಲ್ಲ. ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗೆ ಟಿಕೆಟ್` ಎಂದು ಪಕ್ಷದ ಉನ್ನತ ನಾಯಕರೊಬ್ಬರು `ಪ್ರಜಾವಾಣಿ`ಗೆ ತಿಳಿಸಿದರು. ಈ ಕುರಿತು ಚರ್ಚಿಸಲು ಇದೇ 9ರಂದು ಪಕ್ಷದ ಚುನಾವಣಾ ಸಮಿತಿ ನಗರದಲ್ಲಿ ಸಭೆ ಸೇರಲಿದೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವರಾದ ಸಿ.ಎಂ.ಉದಾಸಿ, ಎಸ್.ಸುರೇಶ್‌ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಪಕ್ಷದ ಇತರ ಕೆಲ ಪ್ರಮುಖರು ಭಾಗವಹಿಸಲಿದ್ದಾರೆ.
ಈಶ್ವರಪ್ಪ ಅವರು ಶ್ರೀರಾಮುಲು ಜತೆ ದೂರವಾಣಿಯಲ್ಲಿ ಮಾತನಾಡಿದ್ದು, ಸ್ಪರ್ಧೆ ಬಗ್ಗೆ ಅವರು ಇನ್ನೂ ಖಚಿತವಾಗಿ ಏನನ್ನೂ ಹೇಳಿಲ್ಲ. ಲೋಕಾಯುಕ್ತ ವರದಿಯಲ್ಲಿ ಹೆಸರು ಇರುವ ಯಾವ ಶಾಸಕರನ್ನೂ ಸಂಪುಟಕ್ಕೆ ತೆಗೆದುಕೊಳ್ಳುವುದಿಲ್ಲ. ಈ ವಿಷಯದಲ್ಲಿ ಯಾವ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಬಳ್ಳಾರಿಯ ಗಣಿಧಣಿ ಬಳಗಕ್ಕೆ ಈಶ್ವರಪ್ಪ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ಗೊತ್ತಾಗಿದೆ.
ಇದರಿಂದ ಕುಪಿತರಾದ ಶ್ರೀರಾಮುಲು ಪಡೆ ಒತ್ತಡ ತಂತ್ರ ಅನುಸರಿಸುತ್ತಿದೆ. ಚುನಾವಣೆ ನಂತರವಾದರೂ ಸಚಿವ ಸ್ಥಾನ ನೀಡುವ ಭರವಸೆ ನೀಡಬೇಕು ಎಂಬ ಬೇಡಿಕೆ ಇಟ್ಟಿದೆ. ಇದಕ್ಕೆ ಪಕ್ಷ ಮಣಿದಿಲ್ಲ. ಇದರಿಂದ ಗೊಂದಲಕ್ಕೆ ಸಿಲುಕಿರುವ ಶ್ರೀರಾಮುಲು ನಿರ್ಧಾರ ಕೈಗೊಳ್ಳಲಾಗದೆ ಒದ್ದಾಟ ನಡೆಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಪತ್ನಿಯನ್ನಾದರೂ ಕಣಕ್ಕೆ ಇಳಿಸಿ ಎನ್ನುವ ಸಲಹೆಯನ್ನು ಶ್ರೀರಾಮುಲು ಅವರಿಗೆ ಪಕ್ಷ ನೀಡಿದೆ. ಸ್ಪರ್ಧಿಸಿ, ಚುನಾವಣೆಯಲ್ಲಿ ಗೆದ್ದರೆ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವುದರ ಬಗ್ಗೆ ನಂತರ ನಿರ್ಧರಿಸೋಣ ಎನ್ನುವ ಭರವಸೆಯನ್ನೂ ನೀಡಿದೆ. ಆದರೆ, ಇದಕ್ಕೂ ಅವರು ಒಪ್ಪಿಲ್ಲ.
ಅಭ್ಯರ್ಥಿ ಆಯ್ಕೆ ಸಲುವಾಗಿ ಪಕ್ಷದ ವತಿಯಿಂದ ವೀಕ್ಷಕರನ್ನು ಬಳ್ಳಾರಿಗೆ ಕಳುಹಿಸಿದ ಕ್ರಮದ ಬಗ್ಗೆಯೂ ಶ್ರೀರಾಮುಲು ಅವರಿಗೆ ಅಸಮಾಧಾನ ಆಗಿದೆ. ಮುಖ್ಯಮಂತ್ರಿ ಅಥವಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಖುದ್ದು ಮಾತನಾಡಲು ಆಗುತ್ತಿರಲಿಲ್ಲವೇ? ವೀಕ್ಷಕರನ್ನು ಏಕೆ ಕಳುಹಿಸಿದ್ದು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.
ಚುನಾವಣೆ ಬಹಿಷ್ಕಾರ: ಜೆಡಿಎಸ್ ಚಿಂತನೆ
ಬೆಂಗಳೂರು: ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಬಹಿಷ್ಕರಿಸುವ ಕುರಿತು ಜೆಡಿಎಸ್ ಗಂಭೀರ ಚಿಂತನೆ ನಡೆಸಿದೆ.
ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ಬೇಡ ಎಂಬುದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು ಉಳಿದವರು ಅದಕ್ಕೆ ಸಮ್ಮತಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
0 comments:
Post a Comment