PLEASE LOGIN TO KANNADANET.COM FOR REGULAR NEWS-UPDATES


ಮಂಗಳೂರು, ನ.30: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಷಷ್ಠಿ ಜಾತ್ರೆಯ ಸಂದರ್ಭ ನಡೆಯು ತ್ತಿರುವ ಮಡೆಸ್ನಾನವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಸಂಶೋಧನಾ ವರದಿಗೆಂದು ಕ್ಷೇತ್ರಕ್ಕೆ ಇಂದು ಭೇಟಿ ನೀಡಿದ್ದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಮತ್ತವರ ತಂಡದ ಮೇಲೆ ದೇವಳದ ಸಿಬ್ಬಂದಿಗಳಿಂದ ಅಮಾನವೀಯ ವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಬೂರಾಮ್‌ಗೆ ಮಾಹಿತಿ ನೀಡಿ ಪೊಲೀಸ್ ಬೆಂಗಾವಲಿನೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ್ದ ಪ್ರಗತಿಪರ ಹೋರಾಟಗಾರರೂ ಆಗಿರುವ ಶಿವರಾಮುಗೆ ಪೊಲೀಸರ ಸಮ್ಮುಖದಲ್ಲೇ ದೇವಳದ ಸಿಬ್ಬಂದಿ ಗುಂಪೊಂದು ಹಲ್ಲೆ ನಡೆಸಿದೆ.

ಘಟನೆಯ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ದ.ಕ. ಜಿಲ್ಲಾ ಎಸ್ಪಿ ಲಾಬೂರಾಮ್, ಸುಮಾರು 25 ಮಂದಿಯ ವಿರುದ್ಧ ಗಲಭೆ ಮತ್ತು ಹಲ್ಲೆ ಮೊಕದ್ದಮೆ ದಾಖಲಿಸಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ನಿನ್ನೆ ಕ್ಷೇತ್ರದಲ್ಲಿ ಮಡೆಸ್ನಾನ ಚಿತ್ರೀಕರಣ ಮಾಡಲು ಬಂದ ಖಾಸಗಿ ಟಿವಿ ವಾಹಿನಿಯೊಂದರ ವರದಿಗಾರರ ಮೇಲೆ ಹಲ್ಲೆ ನಡೆದ ಬೆನ್ನಿಗೇ ಇಂದು ಜಾಗೃತಿ ವೇದಿಕೆಯ ಕಾರ್ಯಕರ್ತರ ಮೇಲೆ ಬರ್ಬರ ದಾಳಿ ನಡೆದಿದೆ.

 ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಹರಕೆಯ ಹೆಸರಿನಲ್ಲಿ ನಡೆಯುತ್ತಿರುವ ಮಡೆಸ್ನಾನಕ್ಕೆ (ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಭಕ್ತರು ನಡೆಸುವ ಉರುಳು ಸೇವೆ) ಪ್ರಗತಿಪರರಿಂದ ಈ ಹಿಂದಿನಿಂದಲೂ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಕಳೆದ ವರ್ಷವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಗಳ ಜಾಗೃತ ವೇದಿಕೆಯ ನೇತೃತ್ವದಲ್ಲಿ ಮಡೆಸ್ನಾನದ ವಿರುದ್ಧ ಪ್ರತಿಭಟನೆ ನಡೆದಿತ್ತು. ಆ ಸಂದರ್ಭ ಜಿಲ್ಲಾಡಳಿತವು ಮುಂದಿನ ವರ್ಷದಿಂದ ಈ ಪದ್ಧತಿಯನ್ನು ನಿಲ್ಲಿಸುವ ಭರವಸೆಯನ್ನು ಪ್ರತಿಭಟನಕಾರರಿಗೆ ನೀಡಿತ್ತು. ಈ ಬಗ್ಗೆ ಕಳೆದ ರವಿವಾರ ಪುತ್ತೂರು ಸಹಾಯಕ ಆಯುಕ್ತ ಸುಂದರ ಭಟ್ ಆದೇಶವೊಂದನ್ನು ಹೊರಡಿಸಿ, ಈ ಬಾರಿ ಕ್ಷೇತ್ರದಲ್ಲಿ ಮಡೆಸ್ನಾನವನ್ನು ನಿಷೇಧಿಸಲಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು. ಆದರೆ ಮರುದಿನ ರಾಜಕೀಯ ಹಾಗೂ ಧಾರ್ಮಿಕ ಪ್ರಭಾವಕ್ಕೊಳಗಾಗಿ ಅಲ್ಲಿ ಮಡೆಸ್ನಾನ ಯಥಾಸ್ಥಿತಿಯಲ್ಲಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮೈಸೂರಿನಿಂದ ಶಿವರಾಮು ಹಾಗೂ ಅವರ ತಂಡ ನಿನ್ನೆ ಮಂಗಳೂರಿಗೆ ಆಗಮಿಸಿ ಪತ್ರಿಕಾಗೋಷ್ಠಿಯನ್ನು ನಡೆಸಿ ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿಗೆ ಮಡೆಸ್ನಾನದ ವಿರುದ್ಧ ಸವಾಲು ಹಾಕಿತ್ತು. ಇದೇ ಸಂದರ್ಭ ಮಡೆಸ್ನಾನವನ್ನು ನಿಷೇಧಿಸಲು ಆಗ್ರಹಿಸಿತ್ತು. ಅಲ್ಲದೇ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಮಡೆಸ್ನಾನ ಹಾಗೂ ಪಂಕ್ತಿ ಭೇದ ಭೋಜನದ ಬಗ್ಗೆ ಸತ್ಯ ಶೋಧನೆಯನ್ನು ನಡೆಸಿ ವರದಿಯನ್ನು ರಾಷ್ಟ್ರಪತಿಗೆ ಸಲ್ಲಿಸುವುದಾಗಿ ತಿಳಿಸಿತ್ತು.
   
ಅದರಂತೆ ಸತ್ಯ ಶೋಧನಾ ವರದಿಗಾಗಿ ತಂಡ ಕ್ಷೇತ್ರಕ್ಕೆ ಇಂದು ಭೇಟಿ ನೀಡಿತ್ತು. ಮುಜಯಿ ಇಲಾಖೆಗೊಳಪಟ್ಟಿರುವ ದೇವಳದಲ್ಲಿ ಮಡೆಸ್ನಾನವನ್ನು ನಿಷೇಧಿಸಬೇಕು ಹಾಗೂ ದೇವಳದಲ್ಲಿ ನಡೆಯುವ ಪಂಕ್ತಿ ಭೇದ ಭೋಜನವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ದೇವಳದ ಆಡಳಿತಾಧಿಕಾರಿ ಹಾಗೂ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಸುಂದರ ಭಟ್‌ರಿಗೆ ಮನವಿ ಸಲ್ಲಿಸಿತ್ತು. ಬಳಿಕ ವೇದಿಕೆಯ ಬೆಂಗಳೂರು ವಿಭಾಗದ ಅಧ್ಯಕ್ಷ ಡಾ.ವಿಜಯಕುಮಾರ್‌ರ ಉಪಸ್ಥಿತಿಯಲ್ಲಿ ಶಿವರಾಮು ಅಲ್ಲಿ ಸೇರಿದ್ದ ಮಾಧ್ಯಮದವರ ಜೊತೆ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಮಡೆ ಸ್ನಾನ ಸಾಮಾಜಿಕ ಅನಿಷ್ಟ ಪದ್ಧತಿ ಎಂದರು. ವೈಜ್ಞಾನಿಕ ಯುಗದಲ್ಲೂ ಈ ರೀತಿಯ ಆಚರಣೆ ಖಂಡನೀಯ. ಸಮಾನತೆ, ಮಾನವೀಯತೆಯ ನೆಲೆಯಲ್ಲಿ ಈ ಪದ್ಧತಿಯನ್ನು ವಿರೋಧಿಸಬೇಕು. ಕ್ಷೇತ್ರದಲ್ಲಿ ನಡೆಯುತ್ತಿರುವ ಪಂಕ್ತಿ ಭೇದ ಭೋಜನ ನಿಲ್ಲಿಸಿ ಸಾಮೂಹಿಕ ಭೋಜನಕ್ಕೆ ಅವಕಾಶ ನೀಡಬೇಕು. ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವ ವ್ಯವಸ್ಥೆಯಾಗಬೇಕು. ಆ ಬಳಿಕ ಮಡೆಸ್ನಾನ ನಡೆಸುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಈ ಬಗ್ಗೆ ಸತ್ಯ ಶೋಧನಾ ವರದಿಗೆ ಕ್ಷೇತ್ರದೊಳಗೆ ಭೇಟಿಗೆ ಎಸಿ ಅನುಮತಿ ನೀಡಿರುವುದಾಗಿ ತಿಳಿಸಿದ್ದರು.

ಅವರು ಮಾತು ಮುಗಿಸುತ್ತಿದ್ದಂತೆಯೇ ಅದಾಗಲೇ ಅಲ್ಲಿ ಸೇರಿದ್ದ 10-20 ಮಂದಿಯ ಗುಂಪೊಂದು ಶಿವರಾಮುರೊಂದಿಗೆ ವಾಗ್ವಾದಕ್ಕಿಳಿಯಿತು. ಶಾಂತ ರೀತಿಯಲ್ಲಿ ಶಿವರಾಮು ಪ್ರತಿಕ್ರಿಯಿಸಲು ಮುಂದಾದಾಗ ಪೊಲೀಸರು ಹಾಗೂ ಮಾಧ್ಯಮದರ ಸಮ್ಮುಖದಲ್ಲೇ ಗುಂಪು ಇವರ ಮೇಲೆ ಏಕಾಏಕಿಯಾಗಿ ಹಲ್ಲೆ ನಡೆಸಿತು. ಈ ಸಂದರ್ಭ ಬೆಂಗಾವಲಿಗಿದ್ದ ಪೊಲೀಸರು ಅಸಹಾಯಕರಾಗಿದ್ದರು. ಅಷ್ಟು ಹೊತ್ತಿಗಾಗಲೇ ಉದ್ರಿಕ್ತ ಗುಂಪು ಶಿವರಾಮುರ ಮೇಲೆ ಮುಗಿ ಬೀಳಲು ಮುಂದಾದಾಗ ಪ್ರಾಣ ರಕ್ಷಣೆಗಾಗಿ ಅವರು ಓಡಲಾರಂಭಿಸಿದರು. ದೇವಳದಲ್ಲಿ ಚಂಪಾ ಷಷ್ಠಿ ಪ್ರಯುಕ್ತ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು, ಅಲ್ಲದೇ ದೇವಳದ ಮುಂಬಾಗಿಲಲ್ಲಿ ರಥವನ್ನು ನಿಲ್ಲಿಸಲಾಗಿದ್ದರಿಂದ ಉದ್ರಿಕ್ತ ಗುಂಪಿನಿಂದ ತಪ್ಪಿಸಿಕೊಳ್ಳಲು ಅವರಿಗೆ ಅಸಾಧ್ಯವಾಯಿತು. ಆಗ ಶಿವರಾಮುರನ್ನು ಗುಂಪು ಎಳೆದಾಡಲು ಆರಂಭಿಸಿದಾಗ ಅವರಿಂದ ತಪ್ಪಿಸಿಕೊಂಡು ದೇವಳದ ಹೊರಾಂಗಣದಲ್ಲಿ ಓಡಲಾರಂಭಿಸಿದರು. ಅಲ್ಲಿಯೂ ಬೆನ್ನಟ್ಟಿದ ಗುಂಪು, ಶಿವರಾಮು ಧರಿಸಿದ್ದ ಅಂಗಿಯನ್ನು ಎಳೆದಾಡಿ ದೈಹಿಕ ಹಲ್ಲೆ ನಡೆಸಿತು. ಅಷ್ಟೊತ್ತಿಗೆ ಬೆಂಗಾವಲಿಗಿದ್ದ ಪೊಲೀಸರು ಗುಂಪಿನಿಂದ ಶಿವರಾಮುರನ್ನು ಮುಕ್ತಗೊಳಿಸಿ ಪೊಲೀಸ್ ವಾಹನದಲ್ಲಿ ಸುಬ್ರಹ್ಮಣ್ಯ ಠಾಣೆಗೆ ಕರೆದೊಯ್ದರು. ಠಾಣೆಯಲ್ಲಿ ಪೊಲೀಸರು ಕೂಡಾ ಏಕಪಕ್ಷೀಯವಾಗಿ ಶಿವರಾಮುರನ್ನು ನಿಂದಿಸಿ ಅವರ ಕೈಯಲ್ಲಿದ್ದ ಮೊಬೈಲ್ ಫೋನ್‌ನನ್ನು ಕಸಿದುಕೊಂಡರು. ಆ ಬಳಿಕ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳಿಗೆ ಬೆಂಗಳೂರಿನಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಹಲ್ಲೆಗೊಳಗಾಗಿದ್ದ ಶಿವರಾಮುರನ್ನು ವೈದ್ಯಕೀಯ ತಪಾಸಣೆಗಾಗಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ಠಾಣೆಗೆ ಘಟನೆಯ ಕುರಿತಂತೆ ದೂರು ನೀಡಲು ಬಂದ ಡಾ.ವಿಜಯಕುಮಾರ್ ಹಾಗೂ ಶಿವರಾಮುರ ಪತ್ನಿಯ ಜೊತೆ ಅಲ್ಲಿದ್ದ ಪೊಲೀಸ್ ಡಿವೈಎಸ್ಪಿ ಎಂ.ಬಿ.ನಾಗರಾಜು ಮಾಧ್ಯಮದವರ ಎದುರಲ್ಲೇ ಉದ್ಧಟತನದಿಂದ ವರ್ತಿಸಿದರು. ಇದರಿಂದ ಹತಾಶಗೊಂಡ ವಿಜಯಕುಮಾರ್ ಸಂವಿಧಾನದಲ್ಲಿ ಪ್ರಜೆಗೆ ರಕ್ಷಣೆಯೇ ಇಲ್ಲದ ಪರಿಸ್ಥಿತಿಯನ್ನು ಇಲ್ಲಿ ನಿರ್ಮಾಣ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

Advertisement

0 comments:

Post a Comment

 
Top