PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ನ.9: ಬಿಜೆಪಿಯಿಂದ ತಮಗಾಗಿರುವ ಅನ್ಯಾಯ, ನೋವಿನಿಂದ ತೀವ್ರವಾಗಿ ನೊಂದಿರುವ ಗಣಿ ರೆಡ್ಡಿ ಪಾಳಯದ ಪ್ರಮುಖ ನಾಯಕ, ಮಾಜಿ ಸಚಿವ ಶ್ರೀರಾಮುಲು ಬಿಜೆಪಿಗೆ ಗುಡ್‌ಬೈ ಹೇಳಿದ್ದು, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆಂಧ್ರದ ಜೈಲಿನಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯ ಬಲಗೈ ಬಂಟನಾಗಿರುವ ಶ್ರೀರಾಮುಲು ಬಿಜೆಪಿಯನ್ನು ತೊರೆಯುವ ಮೂಲಕ ಬಿಜೆಪಿಯೊಳಗೆ ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ಗೊಂದಲಕ್ಕೆ ಅಂತಿಮ ತೆರೆ ಎಳೆದಿದ್ದಾರೆ.
ಶ್ರೀರಾಮುಲು ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿರುವುದರಿಂದ ಬಿಜೆಪಿ ಮತ್ತೆ ಗೊಂದಲದ ಗೂಡಾಗಿದ್ದು, ಈ ಮಧ್ಯೆ ಶ್ರೀರಾಮುಲುರನ್ನು ಪಕ್ಷದಿಂದ ಉಚ್ಚಾಟಿಸುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿರುವುದರಿಂದ ಪಕ್ಷದೊಳಗೆ ಬಂಡಾಯ ಸೃಷ್ಟಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.
 ಜನಾರ್ದನ ರೆಡ್ಡಿ ಜೈಲು ಸೇರಿದ ನಂತರ ಬಿಜೆಪಿ ನಡೆದುಕೊಂಡ ರೀತಿ ಹಾಗೂ ತನ್ನ ಕುರಿತು ಪಕ್ಷದ ನಾಯಕರು ನಡೆಸಿದ ಷಡ್ಯಂತ್ರದಿಂದ ನೊಂದಿರುವ ಶ್ರೀರಾಮುಲು, ಬಿಜೆಪಿಗೆ ಸೆಡ್ಡು ಹೊಡೆದು, ಪಕ್ಷಕ್ಕೆ ಗುಡ್‌ಬೈ ಹೇಳಿದ್ದು, ಪಕ್ಷೇತರರಾಗಿ ನಿಂತು ಸರಕಾರದ ವಿರುದ್ಧವೇ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ಬಿಜೆಪಿ ಮತ್ತೆ ಒಡೆದ ಮನೆಯಾಗುವುದು ಸ್ಪಷ್ಟ.
ಬಿಜೆಪಿಯಿಂದ ತಮಗಾಗಿರುವ ನೋವು, ಅನ್ಯಾಯ, ತಮ್ಮನ್ನು ಪಕ್ಷ ಕಡೆಗಣಿಸಿರುವ ಕುರಿತು ತೀವ್ರವಾಗಿ ಮನನೊಂದಿದ್ದು, ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾಗಿ ಶ್ರೀರಾಮುಲು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಜೀನಾಮೆಗೆ ಸಂಬಂಧಿಸಿ ಶ್ರೀರಾಮುಲು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಹಾಗೂ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪರಿಗೆ 10 ಪುಟಗಳ ವಿಸ್ತೃತವಾದ ಪತ್ರವನ್ನು ಬರೆದಿದ್ದಾರೆ. ಮೂರು ಪುಟಗಳ ಸುದೀರ್ಘ ಪತ್ರದೊಂದಿಗೆ ಏಳು ಪುಟಗಳ ದಾಖಲೆಗಳನ್ನು ಸಲ್ಲಿಸಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ತನ್ನನ್ನು ಮುಕ್ತಿಗೊಳಿಸಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
14 ವರ್ಷದಿಂದ ತಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಪಕ್ಷದಲ್ಲಿ ಸಚಿವನಾಗಿ ಆಯ್ಕೆಯಾಗುವವರೆಗೂ ತಾನು ರಾಜಕೀಯದಲ್ಲಿ ಸಕ್ರಿಯನಾಗಿ ಬೆಳೆದಿದ್ದೇನೆ. ತನ್ನ ಅಧಿಕಾರವನ್ನು ಜನಸೇವೆಗಾಗಿ ಬಳಸಿಕೊಂಡಿರುವ ಕುರಿತು ಬಹಳಷ್ಟು ಹೆಮ್ಮೆ ಇದೆ. ತಮ್ಮ ಶ್ರಮದಿಂದಲೇ ರಾಜ್ಯದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ತಾನು ಹಾಗೂ ತನ್ನ ಆತ್ಮೀಯ ಗೆಳೆಯ ಜನಾರ್ದನ ರೆಡ್ಡಿಯ ಪರಿಶ್ರಮದಿಂದಲೇ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ಅಸ್ತಿತ್ವದಲ್ಲಿಲ್ಲದ ಕಡೆ ಬಿಜೆಪಿಯ ಬಲವರ್ಧನೆಗೆ ತಾನು ಶ್ರಮಪಟ್ಟಿದ್ದೇನೆ. ಕಳೆದ ಕೆಲವು ತಿಂಗಳುಗಳಿಂದ ಪಕ್ಷದ ವರ್ತನೆಯಿಂದ ತನಗೆ ನೋವಾಗಿದೆ. ಜೊತೆಗೆ ರಾಜ್ಯ ಬಿಜೆಪಿ ಘಟಕ ನಡೆದುಕೊಂಡ ರೀತಿಯೂ ತನ್ನ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ ಕಮಲ ಅರಳಲು ತನ್ನ ಹಾಗೂ ರೆಡ್ಡಿ ಸಹೋದರರ ಶ್ರಮ ಮಹತ್ವದ್ದು.ಆದರೆ ಅದ್ಯಾವುದನ್ನು ಪರಿಗಣಿಸದೆ, ಪಕ್ಷದಲ್ಲಿಯೇ ನಮ್ಮನ್ನು ವ್ಯವಸ್ಥಿತವಾಗಿ ಮುಗಿಸುವ ಸಂಚು ರೂಪಿಸಿರುವ ಬಗ್ಗೆಯೂ ಪತ್ರದಲ್ಲಿ ಅವರು ದೂರಿದ್ದಾರೆ.
ಅಧಿಕಾರಕ್ಕಾಗಿ ಕೆಲವರು ತನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಯತ್ನಿಸಿದ್ದಾರೆ. ತಾನು ಸರಕಾರಕ್ಕೆ ಬ್ಲಾಕ್‌ಮೇಲ್ ಮಾಡುತ್ತಿದ್ದೇನೆ ಎಂದು ಬಿಂಬಿಸುವ ಪ್ರಯತ್ನ ಕೂಡಾ ನಡೆದಿದೆ. ತನ್ನನ್ನು ರಾಜಕೀಯವಾಗಿ ಮುಗಿಸಲು ಪಕ್ಷದೊಳಗೆ ಷಡ್ಯಂತ್ರ ಕೂಡಾ ನಡೆದಿದೆ ಎಂದು ಪತ್ರದಲ್ಲಿ ಶ್ರೀರಾಮುಲು ಹೇಳಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ತಾನು ತೀವ್ರವಾಗಿ ನೊಂದಿದ್ದೇನೆ. ಇದರಿಂದಲೇ ಬಿಜೆಪಿ ತೊರೆಯಲು ನಿರ್ಧರಿಸಿದ್ದೇನೆ. ಇತ್ತೀಚೆಗೆ ತನ್ನ ಗೆಳೆಯ ಜನಾರ್ದನ ರೆಡ್ಡಿ ಜೈಲು ಪಾಲಾದ ಸಂದರ್ಭದಲ್ಲಿ ತನಗೆ ಪಕ್ಷದೊಳಗೆ ಯಾವುದೇ ರೀತಿಯ ಬೆಂಬಲ ನೀಡಲಿಲ್ಲ. ರೆಡ್ಡಿ ಜೈಲು ಪಾಲಾದ ನಂತರ ತಾನು ಏಕಾಂಗಿಯಾಗಿದ್ದು, ಪಕ್ಷದೊಳಗೆ ತನಗೆ ನೈತಿಕ ಬೆಂಬಲ ಕೂಡಾ ನೀಡಲಿಲ್ಲ. ಬಿಜೆಪಿ ನಾಯಕರು ಈ ಸಂದರ್ಭದಲ್ಲಿ ನಡೆದುಕೊಂಡ ವರ್ತನೆಯಿಂದ ಬೇಸತ್ತಿದ್ದೇನೆ. ತಾನು ಈ ಹಿನ್ನೆಲೆಯಲ್ಲಿ ರಾಜೀನಾಮೆ ಕೂಡಾ ನೀಡಿದ್ದು, ತನ್ನ ರಾಜೀನಾಮೆ ಅಂಗೀಕಾರವಾದ ಮೇಲೆ ಇದಕ್ಕೆ ಪಕ್ಷ ಸ್ಪಷ್ಟನೆಯನ್ನು ಕೇಳಿದ್ದಾರೆ. ಈ ರೀತಿಯ ಷಡ್ಯಂತ್ರ ತನ್ನ ವಿರುದ್ಧ ಬಿಜೆಪಿಯೊಳಗೆ ನಡೆದಿದೆ.ತನ್ನ ವಿರುದ್ಧ ಷಡ್ಯಂತ್ರ ನಡೆಸಿರುವ ಬಿಜೆಪಿ ನಾಯಕರ ಹೆಸರು ಉಲ್ಲೇಖಿಸಲು ಇಷ್ಟಪಡುವುದಿಲ್ಲ. ಈ ಕಾರಣಗಳಿಂದ ತಾನು ಪಕ್ಷ ತೊರೆಯುವುದಾಗಿ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ಶ್ರೀರಾಮುಲು ನಾಮಪತ್ರ ಸಲ್ಲಿಕೆ

 ಇದಕ್ಕೂ ಮುನ್ನ ಶ್ರೀರಾಮುಲು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರ ಆಪ್ತ ಶಾಸಕರು, ಸಂಸದರು ಸೇರಿದಂತೆ ಹಲವರು ಹಾಜರಿದ್ದರು. ಪಟ್ಟಣದಲ್ಲಿ ತಮ್ಮ ಬೆಂಬಲಿಗರೊಂದಿಗೆ ಭಾರೀ ಮೆರವಣಿಗೆ ನಡೆಸಿದ ಶ್ರೀರಾಮುಲು, ಜಿಲ್ಲಾಧಿಕಾರಿ ಕಚೇರಿಗೆ ಬರುವಾಗ ದಾರಿಯುದ್ಧಕ್ಕೂ ಸಿಕ್ಕಿದ ಮಸೀದಿ, ದರ್ಗಾ, ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದರು.
 ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎ.ಎ.ಬಿಸ್ವಾಸ್ ರಿಗೆ ತಮ್ಮ ಉಮೇದುವಾರಿಕೆ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಬಳ್ಳಾರಿ ಸಂಸದೆ ಜೆ.ಶಾಂತಾ, ರಾಯಚೂರು ಸಂಸದ ಸಣ್ಣ ಫಕೀರಪ್ಪ, ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ, ಶಾಸಕರಾದ ಬಿ.ನಾಗೇಂದ್ರ, ಸುರೇಶ್ ಬಾಬು, ಮೃತ್ಯುಂಜಯ ಸೇರಿದಂತೆ ಹಲವರು ನಾಯಕರು ಹಾಜರಿದ್ದರು. ಮೆರವಣಿಗೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಜರಿದ್ದ

Advertisement

0 comments:

Post a Comment

 
Top