ಕೊಪ್ಪಳ: ತುಂಗಭದ್ರಾ ನದಿಗೆ ಅಣೆಕಟ್ಟೆ ಕಟ್ಟುವಾಗ ಮುಳುಗಡೆಗೊಂಡ ಗ್ರಾಮವೊಂದರ ಜನರಿಗೆ ವಿತರಿಸಲು 1950ರಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ತ್ವರಿತ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣದ ಕಥೆ ಇದು.
ಜಿಲ್ಲಾ ನ್ಯಾಯಾಲಯ, ರಾಜ್ಯ ಹೈಕೋರ್ಟ್‌ನಲ್ಲಿ ಒಂದು ಸುತ್ತು ವಿಚಾರಣೆ ಮುಗಿದಿದ್ದು, ಹೈಕೋರ್ಟ್‌ನ ನಿರ್ದೇಶನದಂತೆ ಇಲ್ಲಿನ ಜಿಲ್ಲಾ ತ್ವರಿತ ನ್ಯಾಯಾಲಯದಲ್ಲಿ 1988ರಿಂದ ಈ ಪ್ರಕರಣದ ವಿಚಾರಣೆ ನಡೆದಿದೆ. ಇಂದು (ನ. 11ರಂದು, ಶುಕ್ರವಾರ) ಪ್ರಕರಣದ ತೀರ್ಪು ಪ್ರಕಟಗೊಳ್ಳಲಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಘಟನೆ ವಿವರ: 1950ರಲ್ಲಿ ತುಂಗಭದ್ರಾ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ತಾಲ್ಲೂಕಿನ ಹಲವಾರು ಗ್ರಾಮಗಳು ಮುಳುಗಡೆಯಾದವು. ಇಂತಹ ಗ್ರಾಮಗಳ ಪೈಕಿ ರಾಂಪೂರ ಎಂಬ ಗ್ರಾಮದಲ್ಲಿದ್ದ 17 ಕುಟುಂಬಗಳಿಗೆ ತಾಲ್ಲೂಕಿನ ಅಗಳಕೇರಾ ಗ್ರಾಮದಲ್ಲಿ ಜಮೀನು ನೀಡಲಾಯಿತು.
ಸರ್ವೆ ನಂ. 121, 122 ಹಾಗೂ 123ರ ಒಟ್ಟು 46 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡ ಸರ್ಕಾರ ಅದೇ ವರ್ಷ ರಾಜ್ಯಪತ್ರದಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಿತ್ತು. ಜಮೀನಿನ ಮಾಲಿಕ ಕುಬೇರಗೌಡ ಎಂಬುವವರಿಂದ ಸದರಿ ಜಮೀನು ಖರೀದಿ ಮಾಡಲಾಗಿದ್ದು, ಕುಬೇರಗೌಡ ಅವರಿಗೆ ರೂ 6,969ನ್ನು ಪರಿಹಾರಧನವಾಗಿ ನೀಡಲಾಗಿದೆ ಎಂದೂ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು.
ಅದೇ ವರ್ಷ ಅಗಳಕೇರಾ ಗ್ರಾಮದ ರೈತ ಬಿ.ಎಫ್.ಪಾಟೀಲ, `ಸದರಿ ಜಮೀನು ತಮಗೆ ಸೇರಿದ್ದು, ಹೀಗಾಗಿ ಯಾವುದೇ ಕಾರಣಕ್ಕೂ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ` ಎಂದು ಕೋರ್ಟ್ ಮೊರೆ ಹೋದರು. ಈ ಪ್ರದೇಶ ಆಗ ಹೈದರಾಬಾದ್‌ನಲ್ಲಿರುವ ಹೈಕೋರ್ಟ್‌ನ ವ್ಯಾಪ್ತಿಗೆ ಒಳಪಡುತ್ತಿದ್ದುದರಿಂದ ಪ್ರಕರಣದ ವಿಚಾರಣೆ ಹೈದರಾಬಾದ್‌ನಲ್ಲಿ ನಡೆಯಿತು ಎಂದು ಸದರಿ ಪ್ರಕರಣದಲ್ಲಿ ಸದ್ಯ ಸರ್ಕಾರದ ಪರ ವಾದ ಮಂಡಿಸುತ್ತಿರುವ ಸಹಾಯಕ ಸರ್ಕಾರಿ ವಕೀಲ ಬಿ.ಎಸ್.ಪಾಟೀಲ ವಿವರಿಸುತ್ತಾರೆ.
ಭಾಷಾವಾರು ಪ್ರಾಂತ್ಯಗಳ ರಚನೆಯಾದ ಮೇಲೆ ಈ ಪ್ರಕರಣ ರಾಜ್ಯಕ್ಕೆ ವರ್ಗಾವಣೆಗೊಂಡಿತು. ಕೊಪ್ಪಳ ಆಗ ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ಇದ್ದುದರಿಂದ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸರ್ಕಾರ ಹಾಗೂ 17 ಕುಟುಂಬಗಳ ಪರವಾಗಿ ತೀರ್ಪು ಹೊರಬಿತ್ತು.
ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ ಬಿ.ಎಫ್.ಪಾಟೀಲ, ನ್ಯಾಯ ದೊರಕಿಸಿಕೊಡುವಂತೆ ರಾಜ್ಯ ಹೈಕೋರ್ಟ್ ಮೊರೆ ಹೋದರು. ಅರ್ಜಿದಾರರ ವಾದವನ್ನು ಪುರಸ್ಕರಿಸದ ಹೈಕೋರ್ಟ್ ವ್ಯಾಜ್ಯವನ್ನು ಜಿಲ್ಲಾ ನ್ಯಾಯಾಲಯದಲ್ಲಿ ಬಗೆಹರಿಸಲು ನಿರ್ದೇಶನ ನೀಡಿತು ಎಂದೂ ವಿವರಿಸುತ್ತಾರೆ.
ಪುನಃ ಪ್ರಕರಣದ ವಿಚಾರಣೆ 1964ರಿಂದ ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಿತು. ಈ ಬಾರಿ ಜಿಲ್ಲಾ ಸಿವಿಲ್ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿತಲ್ಲದೇ ಅರ್ಜಿದಾರ ಬಿ.ಎಫ್. ಪಾಟೀಲ ಪರ 1988ರಲ್ಲಿ ತೀರ್ಪು ನೀಡಿತು.
1997ರಲ್ಲಿ ಕೊಪ್ಪಳ ಜಿಲ್ಲೆ ರಚನೆಗೊಂಡಿತು. ಹೀಗಾಗಿ ರಾಯಚೂರು ಸಿವಿಲ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕೊಪ್ಪಳದ ಜಿಲ್ಲಾ ತ್ವರಿತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಯಿತು ಎಂದು ಬಿ.ಎಸ್.ಪಾಟೀಲ ವಿವರಿಸುತ್ತಾರೆ.
ಯೋಜನಾ ನಿರಾಶ್ರಿತರಿಗಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಸಂಬಂಧಿಸಿದಂತೆ ಇತ್ಯರ್ಥವಾಗದೇ ಇರುವ ಅತ್ಯಂತ ಹಳೆಯ ಪ್ರಕರಣ ಇದಾಗಿದೆ. ಮೂಲ ಅರ್ಜಿದಾರ ಬಿ.ಎಫ್. ಪಾಟೀಲ ನಿಧನರಾಗಿದ್ದು, ಅವರ ಮೊಮ್ಮಕ್ಕಳು ಈ ಪ್ರಕರಣ ನಡೆಸುತ್ತಿದ್ದಾರೆ. ನಿರಾಶ್ರಿತರ ಪೈಕಿ ಹಲವರು ನಿಧನರಾಗಿದ್ದಾರೆ.
- ಕೃಪೆ : ಪ್ರಜಾವಾಣಿ
0 comments:
Post a Comment