ಸ್ಟಾಕ್‌ಹೋಂ, ಅ.6: ಸ್ವೀಡನ್‌ನ ಕವಿ ತೋಮಸ್ ಟ್ರಾನ್ಸ್‌ಟ್ರೋಮರ್ 2011ನೆ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿದ್ದಾರೆ. ಟ್ರಾನ್ಸ್‌ಟ್ರೋಮರ್ 1931ರ ಎ.15ರಂದು ಸ್ಟಾಕ್‌ಹೋಂನಲ್ಲಿ ಜನಿಸಿದರು. ಅವರ ತಾಯಿ ಹೆಲ್ಮಿ ಶಾಲಾ ಅಧ್ಯಾಪಕಿ ಹಾಗೂ ತಂದೆ ಗೋಸ್ಟಾ ಟ್ರಾನ್ಸ್‌ಟ್ರೋಮರ್ ಒಬ್ಬ ಪತ್ರಕರ್ತರಾಗಿದ್ದರು. ಸೋಡ್ರಾ ಲ್ಯಾಟಿನ್ ಗ್ರಾಮರ್ ಸ್ಕೂಲ್‌ನಲ್ಲಿ 1950ರಲ್ಲಿ ಪದವಿ ಪಡೆದ ಬಳಿಕ ತೋಮಸ್, 1956ರಲ್ಲಿ ಕಲಾ ಪದವಿ ಪಡೆಯಲು ಸ್ಟಾಕ್‌ಹೋಂ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ ಚರಿತ್ರೆ, ಕವಿತೆ, ಮತ ಚರಿತ್ರೆ ಹಾಗೂ ಮನಃಶಾಸ್ತ್ರವನ್ನು ಅಭ್ಯಾಸ ಮಾಡಿದರು.
ಅವರು, 1954ರಲ್ಲಿ ತನ್ನ ಪ್ರಥಮ ಕವನ ಸಂಕಲವನ್ನು ಪ್ರಕಟಿಸಿದರು. 1960ರಷ್ಟು ಹಿಂದೆಯೇ ಲೇಖಕ ರಾಬರ್ಟ್ ಬ್ಲೈ ಎಂಬವರು ತೋಮಸ್‌ರನ್ನು ಅಮೆರಿಕಕ್ಕೆ ಪರಿಚಯಿಸಿದ್ದರು. ಆ ಬಳಿಕ ಅವರ ಕವನಗಳಲ್ಲಿ ಅಂತಾರಾಷ್ಟ್ರೀಯ ಹಿತಾಸಕ್ತಿ ವೃದ್ಧಿಸಿತು ಹಾಗೂ ಅವರ ಬರಹಗಳು 60ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡವು. ತೋಮಸ್, ನಿಯತಕಾಲಿಕವಾಗಿ ತನ್ನ ಕವನಗಳನ್ನು ಸ್ವತಃ ಇತರ ಭಾಷೆಗಳಿಗೆ ತರ್ಜುಮೆ ಮಾಡಿ ಪ್ರಕಟಿಸುತ್ತಿದ್ದರು. 1999ರಲ್ಲಿ ಅವರ ಕವಿತಾ ಸಂಕಲನ ‘ಟಾಲ್ಕಿಂಗರ್’ (ವ್ಯಾಖ್ಯೆಗಳು) ಪ್ರಕಟವಾಯಿತು.
ಅವರ ಹೆಚ್ಚಿನ ಕವನ ಸಂಕಲನಗಳು ಹಿಡಿತ, ಗಟ್ಟಿತನ ಹಾಗೂ ಹೃದಯಸ್ಪರ್ಶಿ ರೂಪಕಗಳಿಂದ ಕೂಡಿವೆ.
1901ರಿಂದೀಚೆಗೆ 103 ಸಾಹಿತ್ಯ ನೊಬೆಲ್‌ಗಳನ್ನು ನೀಡಲಾಗಿದೆ. ಅವರಲ್ಲಿ ‘ದಿ ಜಂಗಲ್ ಬುಕ್’ ಖ್ಯಾತಿಯ ರುಡಿಯಾರ್ಡ್ ಕಿಪ್ಲಿಂಗ್ ಅತಿ ಕಿರಿಯರು. 1907ರಲ್ಲಿ ಸಾಹಿತ್ಯ ನೊಬೆಲ್ ಪಡೆದಾಗ ಅವರಿಗೆ 42ರ ಹರೆಯ. ಬೋರಿಸ್ ಪಾಸ್ಟರ್‌ನಾಕ್‌ಗೆ 1958ರಲ್ಲಿ ಸಾಹಿತ್ಯ ನೋಬೆಲ್ ನೀಡಲಾಗಿತ್ತು. ಮೊದಲು ಅವರು ಅದನ್ನು ಸ್ವೀಕರಿಸಿದ್ದರಾದರೂ, ಅವರ ದೇಶ ಸೋವಿಯತ್ ಒಕ್ಕೂಟದ ಅಧಿಕಾರಿಗಳಿಂದಾಗಿ ಬಳಿಕ ಅದನ್ನು ತಿರಸ್ಕರಿಸಿದ್ದರು.
1964ರಲ್ಲಿ ಪ್ರಶಸ್ತಿ ಪಡೆದಿದ್ದ ಜೀನ್ ಪಾಲ್ ಸಾರ್ತ್ರೆ ನೋಬೆಲನ್ನು ‘ಬಟಾಟೆಗಳ ಚೀಲ’ಕ್ಕೆ ಹೋಲಿಸಿ, ತನಗೆ ದೊರೆತಿದ್ದ ಇತರ ಪ್ರಶಸ್ತಿಗಳಂತೆಯೇ ಅದನ್ನೂ ನಿರಾಕರಿಸಿದ್ದರು.
0 comments:
Post a Comment