ಗಂಗಾವತಿ, ಅ.೧೫ : ಅಖಿಲ ಭಾರತ ಮಟ್ಟದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಮೂರು ದಿನಗಳ ಕಾಲ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಬೇಕು ಇದೆಕ್ಕಾಗಿ ಪ್ರಾಮಾಣಿಕವಾಗಿ, ಸ್ವಯಂಸ್ಪೂರ್ತಿಯಿಂದ ದುಡಿಯುವ ೨೦೦೦ ಸ್ವಾಯಂಸೇವಕರನ್ನು ಸಿದ್ಧಪಡಿಸಬೇಕಾದ ಅಗತ್ಯವಿದೆ, ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರು, ನಿಮ್ಮ ಸೇವೆಯನ್ನು ಗುರುತಿಸಿ ಸದಾಕಾಲ ನಿಮ್ಮನ್ನು ನೆನಪಿಸುವಂತಹ ಸೇವೆಯನ್ನು ಸ್ವಯಂಸೇವಕರು ನೀಡಬೇಕಾಗಿದೆ. ಸಾಹಿತ್ಯಸಕ್ತರ ಮನಸಿನಲ್ಲಿ ನಿಮ್ಮ ಸೇವೆ ಸದಾ ನೆನಪಿನಲ್ಲಿ ಉಳಿಯಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಸಮ್ಮೇಳನ ಹಣಕಾಸು ಸಮಿತಿಯ ಅಧ್ಯಕ್ಷರಾದ ತುಳಸಿ ಮದ್ದಿನೇನಿ ಅಭಿಪ್ರಾಯ ಪಟ್ಟರು.
ಅವರು ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ಸಮ್ಮೇಳನದ ಸ್ವಾಗತ ಸಮಿತಿ ಕಛೇರಿಯಲ್ಲಿ ನಡೆದ ಸ್ವಯಂಸೇವಕರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬಸ್ ನಿಲ್ದಾಣದ ಹತ್ತಿರ, ಸಮ್ಮೇಳನ ಸಭಾಂಗಣದ ಹತ್ತಿರ, ಊಟದ ವ್ಯವಸ್ಥೆ ಇರುವ ಕಡೆ ಸ್ವಯಂ ಸೇವಕರು ತಮ್ಮ ಸೇವೆಯನ್ನು ಸಲ್ಲಿಸಬೇಕು, ಮುಖ್ಯ ಅತಿಥಿಗಳು ವಾಸ್ತವ್ಯ ಇರುವ ಕಡೆ ಪ್ರತಿ ಕೊಠಡಿಗೆ ಇಬ್ಬರಂತೆ ಸ್ವಯಂ ಸೇವಕರನ್ನು ನಿಯೋಜಿಸಬೇಕು, ನೋಡತಕ್ಕ ಸ್ಥಳಗಳ ಸಂಪೂರ್ಣ ಮಾಹಿತಿಯು ಸ್ವಾಗತ ಮತ್ತು ವಿಚಾರಣಾ ಸಮಿತಿಯ ಕೇಂದ್ರದಲ್ಲಿರಬೇಕು, ಹತ್ತು ದಿನದೊಳಗಾಗಿ ಸ್ವಯಂ ಸೇವಕರ ಪಟ್ಟಿಯೊಂದಿಗೆ, ಅವರು ಸೇವೆ ನಿರ್ವಹಿಸುವ ಸ್ಥಳ, ಸೇವೆ ಸಲ್ಲಿಸುವವರ ಸಂಪೂರ್ಣ ಮಾಹಿತಿ ಸಿದ್ಧಗೊಂಡು ಒಂದು ವಾರದಲ್ಲಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು ಎಂದರು.
ಸ್ವಾಗತ ಸಮಿತಿ ಪ್ರಧಾನಕಾರ್ಯದರ್ಶಿ ಶೇಖರಗೌಡ ಮಾಲಿಪಾಟೀಲ ಮಾತನಾಡುತ್ತಾ, ಸಮ್ಮೇಳನಕ್ಕೆ ೩೦೦೦ ಅತಿಥಿ ಗಣ್ಯರು ಆಗಮಿಸುವರಲ್ಲದೆ, ೭೦೦೦ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಮಾಡಬೇಕಾಗಿದೆ. ಈ ಎಲ್ಲಾ ವ್ಯವಸ್ಥೆಗಳನ್ನು ಸ್ವಯಂಸೇವಕರು ನಿಯೋಜಿಸಿದ ಸ್ಥಳದಲ್ಲಿ ಮನಸಾಪೂರ್ವಕವಾಗಿ ಕಾರ್ಯನಿರ್ವಹಿಸಬೇಕು. ಸ್ವಯಂಸೇವಕರ ತಂಡಗಳಿಗೆ ಮೇಲ್ವಿಚಾರಕರನ್ನು ನೇಮಿಸಲಾಗುತ್ತದೆ ಎಂದರು.
ಸಭೆಯಲ್ಲಿ ಕೆ.ಹೆಚ್. ಅಂಗಡಿ, ಶಿವಕಾಂತ, ಸಂಗಯ್ಯ, ಮಹೇಶಗೌಡ ಇತರರು ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಕಾರ್ಯದರ್ಶಿ ಕೆ.ಜಿ.ಶಾಂತಾರಾಮ, ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷರಾದ ನೀಲವೇಣಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಡಿ. ಅಬ್ದುಲ ಕರೀಮ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಸ್.ವಿ.ಪಾಟೀಲ, ಬಾಲಕರ ಪ.ಪೂ.ಪ್ರಾಚಾರ್ಯರ ಕೆ.ಹೆಚ್. ಅಂಗಡಿ, ಬಾಲಕಿಯರ ಪ.ಪೂ.ಕಾಲೇಜ್ ಪ್ರಾಚಾರ್ಯರ ರಮೇಶ ಹೊನ್ನೂರು, ಜಿಲ್ಲಾ ಗೌರವಕಾರ್ಯದರ್ಶಿ ಎಸ್.ಬಿ. ಗೊಂಡಬಾಳ ಉಪಸ್ಥಿತರಿದ್ದು, ನಿರೂಪಿಸಿ ವಂದಿಸಿದರು.
0 comments:
Post a Comment