ಕೊಪ್ಪಳ ಅ. : ಅಸಂಘಟಿತ ವಲಯದ ಕಾರ್ಮಿಕರಿಗೆ ಹಾಗೂ ಬಿ.ಪಿ.ಎಲ್. ಕುಟುಂಬಗಳಿಗೆ ಉಚಿತವಾಗಿ ಚಿಕಿತ್ಸಾ ಸೌಲಭ್ಯ ಸಿಗುವಂತಹ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಯಡಿ (ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆ) ಬರುವ ನವೆಂಬರ್ ತಿಂಗಳಿನಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಳ್ಳಲಿದ್ದು, ಜಿಲ್ಲೆಯ ೧೩೮೭೭೭ ಫಲಾನುಭವಿಗಳು ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ರೈಲ್ವೆ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು ಅಲ್ಲದೆ ಉದ್ಯೋಗಖಾತ್ರಿಯಲ್ಲಿ ಹೆಸರು ನೋಂದಾಯಿಸಿರುವ ಕುಟುಂಬಗಳು ಹಾಗೂ ಬಿ.ಪಿ.ಎಲ್. ಕುಟುಂಬಗಳಿಗೆ ವಿವಿಧ ೧೦೪೦ ಬಗೆಯ ಕಾಯಿಲೆಗಳಿಗೆ ವಾರ್ಷಿಕ ಗರಿಷ್ಠ ೩೦೦೦೦ ರೂ.ಗಳಷ್ಟು ಮೊತ್ತದ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಬಹುದಾದ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಯನ್ನು ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದೆ. ಇದಕ್ಕಾಗಿ ಈಗಾಗಲೆ ಜಿಲ್ಲೆಯ ನಾಲ್ಕೂ ತಾಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳ ಜೊತೆಗೆ ೩ ಖಾಸಗಿ ಆಸ್ಪತ್ರೆಗಳು ಯೋಜನೆಯ ವ್ಯಾಪ್ತಿಯಲ್ಲಿವೆ. ಈ ಯೋಜನೆಯ ವೆಚ್ಚದಲ್ಲಿ ಕೇಂದ್ರ ಸರ್ಕಾರ ಶೇ. ೭೫ ರಷ್ಟು ಹಾಗೂ ರಾಜ್ಯ ಸರ್ಕಾರ ಶೇ. ೨೫ ರಷ್ಟು ವೆಚ್ಚವನ್ನು ಭರಿಸಲಿದ್ದು, ರಾಜ್ಯದಲ್ಲಿ ೨೦೦೨ ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಸರ್ವ ಕುಟುಂಬ ಸಮೀಕ್ಷೆಯಲ್ಲಿ ಗುರುತಿಸಲಾಗಿರುವ ಬಿ.ಪಿ.ಎಲ್. ಕುಟುಂಬಗಳನ್ನು ಹಾಗೂ ಸದ್ಯ ನಗರ/ಪಟ್ಟಣ ಪ್ರದೇಶದ ಬಿ.ಪಿ.ಎಲ್. ಕುಟುಂಬಗಳನ್ನು ಈ ಯೋಜನೆಗೆ ಅಳವಡಿಸಿಕೊಳ್ಳಲಾಗುತ್ತಿದೆ. ಫಲಾನುಭವಿಗಳ ನೋಂದಣಿಗಾಗಿ ಜಿಲ್ಲೆಯಾದ್ಯಂತ ಒಟ್ಟು ೨೩ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಇಂತಹ ಕುಟುಂಬಗಳಿಗೆ ಸ್ಥಳದಲ್ಲಿಯೇ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಯ ಸ್ಮಾರ್ಟ್ ಕಾರ್ಡ್ ಅನ್ನು ವಿತರಿಸಲಾಗುವುದು. ಈ ಕಾರ್ಡ್ ಕುಟುಂಬದ ಮುಖ್ಯಸ್ಥನ ಫೋಟೋ ಹಾಗೂ ಹೆಬ್ಬೆಟ್ಟಿನ ಬಯೋಮೆಟ್ರಿಕ್ ಮಾಹಿತಿ, ಕುಟುಂಬದ ಇತರೆ ಸದಸ್ಯರ ವಿವರವನ್ನು ಒಳಗೊಂಡಿರುತ್ತದೆ. ಒಂದು ವೇಳೆ ಯಾವುದೇ ಬಿಪಿಎಲ್ ಕುಟುಂಬ ಈ ಪಟ್ಟಿಯಲ್ಲಿ ಇಲ್ಲದಿದ್ದರೆ, ಅಂತಹವರು ನೋಂದಣಿ ಕೇಂದ್ರದಲ್ಲಿ ನೀಡಲಾಗುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ, ಮುಂದಿನ ಹಂತದ ನೋಂದಣಿ ಸಂದರ್ಭದಲ್ಲಿ ಪರಿಗಣಿಸಲಾಗುವುದು. ಒಂದು ಕುಟುಂಬದಲ್ಲಿ ಗರಿಷ್ಟ ೫ ಜನರಿಗೆ ಈ ವಿಮಾ ಸೌಲಭ್ಯವಿದ್ದು, ಸ್ಮಾರ್ಟ್ ಕಾರ್ಡ್ ಪಡೆಯುವ ಸಂದರ್ಭದಲ್ಲಿ ಒಂದು ಕುಟುಂಬದಿಂದ ೩೦ ರೂ.ಗಳ ಶುಲ್ಕವನ್ನು ಪಾವತಿಸಿ ರಸೀದಿ ಪಡೆಯಬೇಕು. ಖಾಸಗಿ ಇನ್ಸೂರೆನ್ಸ್ ಕಂಪನಿಯವರ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸ್ಮಾರ್ಟ್ ಕಾರ್ಡ್ ಪಡೆದ ಕೂಡಲೆ ಫಲಾನುಭವಿಗಳ ಕುಟುಂಬ ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಡಲಿದೆ. ಈಗಾಗಲೆ ರಾಜ್ಯದಲ್ಲಿ ಈ ಯೋಜನೆಯನ್ನು ರಾಜ್ಯದ ಮೈಸೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಳಗಾವಿ ಮತ್ತು ಶಿವಮೊಗ್ಗ ಜಿಲ್ಲೆ ಸೇರಿದಂತೆ ಒಟ್ಟು ೫ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆಯು ಅರ್ಹ ಫಲಾನುಭವಿಯಿಂದ ಯಾವುದೇ ನಗದು ಹಾಗೂ ದಾಖಲೆ ರಹಿತವಾಗಿ ಗರಿಷ್ಟ ೩೦೦೦೦ ರೂ. ಮೊತ್ತದ ಉಚಿತ ಚಿಕಿತ್ಸೆಯನ್ನು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ಈ ಯೋಜನೆಯ ವ್ಯಾಪ್ತಿಗೆ ಸೇರಿರುವ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವಂತಹ ವಿಶಿಷ್ಟ ಯೋಜನೆಯಾಗಿದೆ. ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಶ್ರಮ ವಹಿಸಬೇಕು. ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನದ ಹೊಣೆ ಪಡೆದುಕೊಂಡಿರುವ ಯುನೈಟೆಡ್ ಇನ್ಸೂರೆನ್ಸ್ ಲಿಮಿಟೆಡ್ ಸಮರ್ಪಕ ರೀತಿಯಲ್ಲಿ ಪ್ರಚಾರ ನಡೆಸಬೇಕು, ನೋಂದಣಿ ಪ್ರಕ್ರಿಯೆಯನ್ನು ಎರಡು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು. ಇದಕ್ಕಾಗಿ ಅಗತ್ಯವಿರುವ ಎಫ್.ಕೆ.ಓ. ಅಧಿಕಾರಿಗಳನ್ನು ಜಿಲ್ಲಾಡಳಿತದಿಂದ ನೇಮಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಹಾಯಕ ಆಯುಕ್ತ ಎಂ. ಶರಣಬಸಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಮುಸಿಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಯುನೈಟೆಡ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್‌ನ ಅಧಿಕಾರಿ ಶ್ರೀನಿವಾಸ್, ಪ್ರಮೋದ್, ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment