sಕೊಪ್ಪಳ ಅ. : ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ನಾಗರಿಕರ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸಿ, ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು ಕರ್ತವ್ಯ ನಿರತವಾಗಿರುವಾಗಲೇ ವೀರ ಮರಣವನ್ನಪ್ಪಿದ ಧೀಮಂತ ಪೊಲೀಸರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್ ಅವರು ಹೇಳಿದರು.
ಜಿಲ್ಲಾ ಪೊಲೀಸ್ ಕಾರ್ಯಾಲಯದ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯ ಅಂಗವಾಗಿ, ಶುಕ್ರವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.
ದೇಶದ ಭದ್ರತೆಗೆ ಅದು ದೇಶದ ಗಡಿಭಾಗದಲ್ಲೇ ಇರಬಹುದು ಅಥವಾ ದೇಶದ ಆಂತರಿಕವಾಗಿಯೇ ಇರಬಹುದು, ಇಂತಹ ಸಂದರ್ಭದಲ್ಲಿ ದೇಶದ ಹಿತಕ್ಕಾಗಿ ತಮ್ಮ ಜೀವವನ್ನೆ ಧಾರೆ ಎರೆದು ದೇಶದ ಗೌರವ ಕಾಪಾಡುವಂತಹ ಸಶಸ್ತ್ರ ಪಡೆಗಳ ಸೈನಿಕರು ಅಥವಾ ಪೊಲೀಸರ ತ್ಯಾಗ, ಬಲಿದಾನವನ್ನು ಸ್ಮರಿಸಿ, ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ. ಭಾರತ-ಚೀನಾ ಗಡಿಭಾಗದಲ್ಲಿ ೧೯೫೯ ರ ಅಕ್ಟೋಬರ್ ೨೧ ರಂದು ಚೀನಿ ಸೈನಿಕರಿಂದ ಗಡಿಭಾಗದ ಲೆಹ್ ಪ್ರದೇಶದಲ್ಲಿ ಅತಿಕ್ರಮಣ ನಡೆದಿತ್ತು. ಆಗ ದೇಶದ ಹಾರ್ಟ್‌ಸ್ವಿಂಗ್ ಫೋರ್ಸ್ ತುಕಡಿಯ ಸೈನಿಕರು ಕೆಚ್ಚೆದೆಯಿಂದ ಹೋರಾಟ ನಡೆಸಿ ಹುತಾತ್ಮರಾದರು. ಹುತಾತ್ಮರ ತ್ಯಾಗ ಬಲಿದಾನದ ಸ್ಮರಣೆಗಾಗಿ ಈಗಲೂ ಈ ಭಾಗದ ೧೮೦೦೦ ಅಡಿ ಎತ್ತರದ ಪ್ರದೇಶದಲ್ಲಿ ಬೃಹತ್ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ, ಹುತಾತ್ಮ ಮಹನೀಯರ ಸ್ಮರಣೆಗಾಗಿ ಪ್ರತಿ ವರ್ಷ ಅಕ್ಟೋಬರ್ ೨೧ ರಂದು ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈಗಲೂ ದೇಶದ ಹಿತಕಾಯಲು ಅನೇಕ ಪೊಲೀಸರು, ಸಶಸ್ತ್ರ ಪಡೆಗಳ ಸದಸ್ಯರು ತಮ್ಮ ಜೀವನ್ನವನೇ ಅರ್ಪಿಸಿ ದೇಶಭಕ್ತಿ ಮೆರೆಯುತ್ತಿದ್ದಾರೆ. ಇಂತಹ ಮಹನೀಯರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್ ಅವರು ನುಡಿದರು. ಕಳೆದ ವರ್ಷ ದೇಶದ ಹಿತಕ್ಕಾಗಿ ಹುತಾತ್ಮರಾದ ಕರ್ನಾಟಕದ ೧೦ ಜನ ಸೇರಿದಂತೆ ಒಟ್ಟು ೬೩೬ ಪೊಲೀಸರು/ ಸಶಶ್ತ್ರ ಪಡೆಗಳ ಸದಸ್ಯರ ಹೆಸರುಗಳನ್ನು ಈ ಸಂದರ್ಭದಲ್ಲಿ ಪ್ರಕಟಿಸಿ, ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಅವರು ಮಾತನಾಡಿ, ನಮ್ಮ ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಹಾಗೂ ಸುರಕ್ಷತೆಗೆ ಧಕ್ಕೆ ಬಂದಾಗ ಪೊಲೀಸರು ತಮ್ಮ ಜೀವವನ್ನು ಪಣಕ್ಕಿಟ್ಟು, ಶಾಂತಿ ಕಾಪಾಡಲು ಶ್ರಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ವೀರ ಮರಣವನ್ನಪ್ಪಿ ಹುತಾತ್ಮರಾಗುವ ಪೊಲೀಸರು ದೇಶದ ಎಲ್ಲಾ ಪೊಲೀಸರಿಗೆ ಆದರ್ಶ ಪ್ರಾಯವಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ, ನಗರಸಭೆ ಸದಸ್ಯರುಗಳಾದ ಇಂದಿರಾ ಭಾವಿಕಟ್ಟಿ, ಡಿವೈಎಸ್‌ಪಿ ಗಜಕೋಶ ಸೇರಿದಂತೆ ನಗರದ ವಿವಿಧ ಗಣ್ಯರು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಮಾಧ್ಯಮದವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು.
0 comments:
Post a Comment