PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು: ಜಂತಕಲ್ ಮೈನಿಂಗ್‌ ಕಂಪನಿಗೆ ಗುತ್ತಿಗೆ ನವೀಕರಣ ಮತ್ತು ವಿಶ್ವಭಾರತಿ ಸೊಸೈಟಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಲೋಕಾಯುಕ್ತ ಕಟಕಟೆ ಹತ್ತಿ ಇಳಿಯುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಇದೀಗ ಕಾನೂನು ಬಾಹಿರವಾಗಿ ಎರಡನೇ ಮದುವೆಯಾಗಿದ್ದು, ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಹೈಕೋರ್ಟ್‌ನಲ್ಲಿ ಮತ್ತೊಂದು ದೂರು ದಾಖಲಾಗಿದೆ.
ಮಾಜಿ ಮುಖ್ಯಮಂತ್ರಿ, ಜೆಡಿ‌ಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಚಿತ್ರನಟಿ ರಾಧಿಕಾ ಅವರನ್ನು ಕಾನೂನು ಬಾಹಿರವಾಗಿ ಎರಡನೇ ಮದುವೆಯಾಗಿದ್ದಾರೆ. ಸಂವಿಧಾನದಲ್ಲಿ ಹಾಗೂ ಐಪಿಸಿ 494ರ ಅಡಿಯಲ್ಲಿ ಮೊದಲ ಪತ್ನಿಗೆ (ಅನಿತಾ ಕುಮಾರಸ್ವಾಮಿ) ವಿಚ್ಛೇದನ ನೀಡದೆ ಎರಡನೇ (ರಾಧಿಕಾ) ಮದುವೆಯಾಗುವುದು ಅಪರಾಧ ಎಂದು ಶಶಿಧರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಕುಮಾರಸ್ವಾಮಿ ಅವರು ಕಾನೂನು ಬಾಹಿರವಾಗಿ ಎರಡನೇ ಮದುವೆಯಾಗಿರುವ ಹಿನ್ನೆಲೆಯಲ್ಲಿ ಸಂಸದ ಸ್ಥಾನದಿಂದ ಅವರನ್ನು ಅನರ್ಹಗೊಳಿಸಬೇಕೆಂದು ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಕೋರಿದ್ದಾರೆ. ಈ ಅರ್ಜಿಯ ವಿಚಾರಣೆ ಗುರುವಾರ ನಡೆಯುವ ಸಾಧ್ಯತೆ ಇದೆ.
ಮಾಜಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರು ಚಿತ್ರನಟಿ ರಾಧಿಕಾ ಅವರನ್ನು ಮದುವೆಯಾಗಿರುವುದಕ್ಕೆ ಇಂಟರ್ನೆಟ್‌ನಲ್ಲಿ ಲಭಿಸಿರುವ ದಾಖಲೆ ಹಾಗೂ ವಿವಿಧ ಪತ್ರಿಕೆಗಳಲ್ಲಿ ಬಂದಿರುವ ಫೋಟೋ, ರಾಧಿಕಾ ಹೇಳಿಕೆಗಳನ್ನು ದೂರಿನ ಜತೆ ಲಗತ್ತಿಸಿರುವುದಾಗಿ ದೂರುದಾರ ವಕೀಲ ಶಶಿಧರ್ ಬೆಳಗುಂಬ ವಿವರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಭೂ ಹಗರಣ ವಿಚಾರಣೆಯ ಸಂದರ್ಭ ದಲ್ಲಿಯೂ ಹೈಕೋರ್ಟ್ ಪೀಠದಲ್ಲಿ ವಾದ-ಪ್ರತಿವಾದ ನಡೆಯುತ್ತಿದ್ದ ವೇಳೆಯಲ್ಲಿ ಕುಮಾರಸ್ವಾಮಿ ಎರಡನೇ ಮದುವೆ ಬಗ್ಗೆ ಪ್ರಸ್ತಾಪವಾಗಿತ್ತು. ಆ ಬಳಿಕ ಕುಮಾರಸ್ವಾಮಿ-ರಾಧಿಕಾ ಮದುವೆ ಗುಟ್ಟಾಗೇನೂ ಉಳಿದಿಲ್ಲವಾಗಿತ್ತು. ಆದರೆ ಇದೀಗ ಕಾನೂನು ಸಮರಕ್ಕೆ ಎಡೆ ಮಾಡಿಕೊಟ್ಟಿರುವುದು ಮತ್ತೊಂದು ಬೆಳವಣಿಗೆಯಾಗಿದೆ. 

Advertisement

0 comments:

Post a Comment

 
Top