PLEASE LOGIN TO KANNADANET.COM FOR REGULAR NEWS-UPDATES



ಜೈಲಲ್ಲಿ ಅಂಬೇಡ್ಕರ್ ಚರಿತ್ರೆ ಓದುತ್ತಿರುವ ಯಡ್ಡಿ

ಬೆಂಗಳೂರು, ಅ.19: ವಿಕ್ಟೋರಿಯಾ ಆಸ್ಪತ್ರೆಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆದ ಮೇಲೆ ಮೌನಿಯಾಗಿರುವ ಮಾಜಿ ಮುಖ್ಯಮಂತ್ರಿ ಅವರಿಗೆ ಸೂಕ್ತ ಚಿಕಿತ್ಸೆ ನಂತರ ಪ್ರತ್ಯೇಕ ಕೊಠಡಿಗೆ ವರ್ಗಾಯಿಸಲಾಗಿದೆ.

ಸೆಂಟ್ರಲ್ ಜೈಲಿನ ಮೊದಲ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 5 ರಲ್ಲಿ ಸದ್ಯಕ್ಕೆ ಯಡಿಯೂರಪ್ಪ ಅವರು ವಾಸ್ತವ್ಯ ಹೂಡಿದ್ದಾರೆ.

ಜೈಲಿನ ಗ್ರಂಥಾಲಯದಿಂದ ಸುಮಾರು 10 ಪುಸ್ತಕಗಳನ್ನು ಪಡೆದಿದ್ದಾರೆ. 10/15 ವಿಸ್ತೀರ್ಣದ ಕೊಠಡಿಯಲ್ಲಿ ಶೌಚಾಲಯ, ಹಾಸಿಗೆ ದಿಂಬು ಎಲ್ಲವೂ ಇದೆ.

'ಡು ನಾಟ್ ಡಿಸ್ಟರ್ಬ್ ಮೀ': ನಾನು ನಾಳೆಯವರೆಗೂ ಯಾರನ್ನು ಭೇಟಿ ಮಾಡುವುದಿಲ್ಲ 'ಡು ನಾಟ್ ಡಿಸ್ಟರ್ಬ್ ಮೀ' ಎಂದು ಯಡಿಯೂರಪ್ಪ ಅವರು ಜೈಲಾಧಿಕಾರಿಗಳಿಗೆ ಹೇಳಿದ್ದಾರೆ.

ಹೀಗಾಗಿ ಯಡಿಯೂರಪ್ಪ ಅವರನ್ನು ನೋಡಲು ಬಂದಿದ್ದ ರೇಣುಕಾಚಾರ್ಯ ಹಾಗೂ ಪ್ರಭಾಕರ್ ಕೋರೆ ಅವರನ್ನು ಜೈಲಿನ ಅಧಿಕಾರಿಗಳು ಒಳಗೆ ಬಿಡಲಿಲ್ಲ.

ಮೊದಲಿಗೆ ಅಂಬೇಡ್ಕರ್ ಜೀವನ ಚರಿತ್ರೆ ಪುಸ್ತಕ ಕೈಗೆತ್ತಿಕೊಟ್ಟ ಯಡಿಯೂರಪ್ಪ ಒಂದು ನಿಮಿಷ ಕಣ್ಮುಚ್ಚಿ ನಂತರ ಪುಸ್ತಕವನ್ನು ಮನಸ್ಸಿನಲ್ಲೇ ಓದುತ್ತಿದ್ದಾರಂತೆ. ಉಳಿದಂತೆ ಯಾವ ಪುಸ್ತಕಗಳನ್ನು ಪಡೆದಿದ್ದಾರೆ ಎಂಬ ಮಾಹಿತಿಯಿಲ್ಲ.

ಯಡಿಯೂರಪ್ಪಗೆ ಆಸ್ಪತ್ರೆ ಸಿಬ್ಬಂದಿ ಭೀತಿ ಕಾಡಿತ್ತಾ?

ಬೆಂಗಳೂರು, ಅ.19: ಬಲಗೈಯಲ್ಲಿ ಸಿರೇಂಜ್ ಹಿಡಿದುಕೊಂಡು ಎಡಗೈ ಆಡಿಸುತ್ತಾ ಎಷ್ಟಿಟ್ಟಿದ್ದೀಯಾ ತೆಗಿ ಎಂದು ಇಲ್ಲಿನ ಸಿಬ್ಬಂದಿ ಕೇಳುತ್ತಾರೆ ಎಂದು ವಿಕ್ಟೋರಿಯಾ ಕುಖ್ಯಾತಿಯಾಗಿದೆ. ಆದರೆ, ವಿವಿಐಪಿ ರೋಗಿಗಳ ಕಾರಣದಿಂದ ಇಲ್ಲಿನ ಸಿಬ್ಬಂದಿಗೆ ಇರುಸು ಮುರುಸು ಉಂಟಾಗಿತ್ತು. ಅವರ ಮಾಮೂಲಿ ವ್ಯವಹಾರಕ್ಕೆ ಕಡಿವಾಣ ಬಿದ್ದಿತ್ತು.

ಹಾಲಪ್ಪ ಹಾಗೂ ತೆಲಗಿಗೆ ಸುಳ್ಳು ಸರ್ಟಿಫಿಕೇಟ್ ಕೊಟ್ಟು ಆಸ್ಪತ್ರೆಯಲ್ಲೇ ಉಳಿಸಿಕೊಂಡಿದ್ದ ವೈದ್ಯರು, ಕಟ್ಟಾ ಎಂಟ್ರಿ ನಂತರ ಗಡಗಡ ಎಂದು ಬಿಟ್ಟರು. ಸಚಿವರ ಉಳಿಸಲು ಹೋಗಿ ವೃತ್ತಿ ಜೀವನ ಅಂತ್ಯವಾಗಿಸಿಕೊಳ್ಳಲು ಯಾವೊಬ್ಬ ವೈದ್ಯರು ಸಿದ್ಧರಿರಲಿಲ್ಲ.

ಕಟ್ಟಾ ರಂತೆ ಬಿಎಸ್ ವೈ ಕೂಡಾ ತಮ್ಮ ವಾರ್ಡ್ ಅನ್ನು ಹೋಟೆಲ್ ಮಾದರಿಯಲ್ಲಿ ಇಟ್ಟಿರಬೇಕು ಎಂದು ಆಗ್ರಹಿಸಿದ್ದಕ್ಕೆ ಆಸ್ಪತ್ರೆ ಸಿಬ್ಬಂದಿ ಕ್ಯಾರೆ ಎನ್ನಲಿಲ್ಲ. ಈ ನಡುವೆ ಯಾಕೆ ಬೇಕು ಉಸಾಬರಿ ಎಂದು ಡಾ. ಬಿಜಿ ತಿಲಕ್ ಸ್ವಯಂ ನಿವೃತ್ತಿ ಘೋಷಿಸಿಬಿಟ್ಟರು.

ಉಳಿದಂತೆ ಡಾ. ಗೋವಿಂದಪ್ಪ, ಡಾ, ಪ್ರಕಾಶ್. ಡಾ. ಬಾಲಜಿ ಪೈ ಕೂಡಾ ಯಡ್ಡಿಗಾಗಿ ತ್ಯಾಗಕ್ಕೆ ಸಿದ್ಧರಿರಲಿಲ್ಲ. ಈ ರೀತಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಇಲ್ಲದ ಕಾಯಿಲೆ ಮೈಮೇಲೆ ಎಳೆದುಕೊಳ್ಳುವ ಭೀತಿ ಬಿಎಸ್ ಯಡಿಯೂರಪ್ಪ ಅವರನ್ನು ಕಾಡಿದ ಪರಿಣಾಮ ದಿಢೀರ್ ಎಂದು ಪರಪ್ಪನ ಅಗ್ರಹಾರಕ್ಕೆ ಹೋಗುವ ನಿರ್ಧಾರ ಮಾಡಿದ್ದಾರೆ.



ಬೆಂಗಳೂರು, ಅ.19: ಭೂ ಹಗರಣದ ಆರೋಪಿ ಯಡಿಯೂರಪ್ಪ ಅವರು ಜಯದೇವ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆ ಸೇರಿ ಆರಾಮವಾಗಿರುವ ಯೋಚನೆಯಲ್ಲಿದ್ದರು. ಆದರೆ, ಅವರಿಗೆ ರಾತ್ರೋರಾತ್ರಿ ಸಿಕ್ಕ ಕಟ್ಟಾ ಕೊಟ್ಟ ಸಲಹೆ ಅವರನ್ನು ವಿಕ್ಟೋರಿಯಾಗೆ ಕೈ ಕೊಟ್ಟು ಪರಪ್ಪನ ಸನ್ನಿಧಿಗೆ ಮತ್ತೆ ಕರೆದೊಯ್ಯುವಂತೆ ಮಾಡಿದೆ.
ವಿಕ್ಟೋರಿಯಾ ಆಸ್ಪತ್ರೆ ಮೂಲ ಸೌಕರ್ಯಗಳ ಕೊರತೆ, ನೀರಿಲ್ಲ, ಕರೆಂಟ್ ಇಲ್ಲ, ಕೇಬಲ್ ಟಿವಿ ಇಲ್ಲ, ಹಾಸಿಗೆ, ದಿಂಬು ಸರಿಯಿಲ್ಲ, ಶೌಚಾಲಯದಲ್ಲಿ ಸುಗಂಧವಿಲ್ಲ, ಮಲಗುವ ಕೋಣೆ ವಾಸ್ತು ಸರಿಯಿಲ್ಲ, ದಿಂಬು ಹಾಕಿದರೂ ಉತ್ತರ ದಿಕ್ಕಿಗೆ ಹಾಕಿ ಮಲಗಬೇಕು. ದಕ್ಷಿಣದಲ್ಲಿ ಶೌಚಾಲಯ ಅದು ನಿಮ್ಗೆ ಆಗಿಬರೋಲ್ಲ.

ಬೆಳಗ್ಗೆ ವಾಕಿಂಗ್ ಮಾಡೋಕೆ ಒಳ್ಳೆ ಪಾರ್ಕ್ ಇಲ್ಲ ಅದು ಇದೂ ಎಂದು ಕರ್ನಾಟಕದ ಮಾಜಿ ಸಚಿವರೇ ಸರ್ಕಾರಿ ಸ್ವಾಮ್ಯದ ಆಸ್ಪತ್ರೆ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ಕಿವಿಯೂದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಎಲ್ಲಾ ಕಾರಣಗಳಿಗಿಂತ ಯಡಿಯೂರಪ್ಪ ಪರಪ್ಪನ ಅಗ್ರಹಾರಕ್ಕೆ ಹಿಂತಿರುಗಲು ಮುಖ್ಯ ಕಾರಣ, ಡಾ. ತಿಲಕ್ ನಿರ್ಗಮನ ಎನ್ನಲಾಗಿದೆ. ಹಾಲಪ್ಪ, ತೆಲಗಿ, ಕಟ್ಟಾ ಸೇರಿದಂತೆ ವಿವಿಐಪಿ ರೋಗಿಗಳಿಗೆ ಬೇಕಾದ ಹಾಗೆ ಆರೈಕೆ ಮಾಡುತ್ತಿದ್ದ ವೈದ್ಯರ ತಂಡದ ಕೊರತೆಯೇ ಯಡಿಯೂರಪ್ಪ ಅವರನ್ನು ಕಾಡಿತ್ತು.

ಕೊನೆಗೂ ಬಿಎಸ್‌ವೈ ಜೈಲಿಗೆ
ಬೆಂಗಳೂರು: ಜಯದೇವ ಹೃದ್ರೋಗ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಿಕಿತ್ಸೆ ಪಡೆಯಲು ನಿರಾಕರಿಸಿದ್ದರಿಂದ ಬುಧವಾರ ಬೆಳಿಗ್ಗೆ ಅವರನ್ನು ಪರಪ್ಪನ ಅಗ್ರಹಾರ ದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ನ್ಯಾಯಾಂಗ ಬಂಧನಕ್ಕೆ ಒಳಗಾದ ಬಳಿಕ ಅನಾರೋಗ್ಯದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಳಿಕ ಇತರೆ ಚಿಕಿತ್ಸೆಗೆಂದು ಅವರನ್ನು ಮಂಗಳವಾರ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಚಿಕಿತ್ಸೆಯನ್ನು ನಿರಾಕರಿಸಿದ ಅವರು, ಬದಲಿಗೆ ತಾವು ಕೇಂದ್ರ ಕಾರಾಗೃಹದಲ್ಲಿರುವ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವುದಾಗಿ ಪಟ್ಟು ಹಿಡಿದರು. ಅವರ ಒತ್ತಾಯದ ಮೇಲೆ ಬುಧವಾರ ಬೆಳಿಗ್ಗೆ 10.15ರ ಹೊತ್ತಿಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಅಂಬುಲೆನ್ಸ್ ಮೂಲಕ ಅವರನ್ನು ಬೆಳಿಗ್ಗೆ 10.55ರ ವೇಳೆಗೆ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ಇದಕ್ಕೂ ಮೊದಲು ಆಸ್ಪತ್ರೆಯಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಸಿ.ಪಿ. ಯೋಗೀಶ್ವರ್, `ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಗಳಿಂದ ಯಡಿಯೂರಪ್ಪ ಅವರು ಬಹಳ ಬೇಸರಗೊಂಡಿದ್ದಾರೆ` ಎಂದರು.
`ನಾನೇನು ಹೆದರಿಕೆಯಿಂದ ಆಸ್ಪತ್ರೆಗೆ ದಾಖಲಾಗಿಲ್ಲ. ಧೈರ್ಯವಾಗಿ ಜೈಲಿಗೆ ಹೋಗುತ್ತೇನೆ. ಹಾಗಾಗಿ ಚಿಕಿತ್ಸೆ ಪಡೆಯುತ್ತಿಲ್ಲ ಎಂಬುದಾಗಿ ಯಡಿಯೂರಪ್ಪ ಹೇಳಿದರು` ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಅವರನ್ನು ಮೈಸೂರಿನ ಸುತ್ತೂರು ಮಠದ ಸ್ವಾಮಿಗಳು ಭೇಟಿ ಮಾಡಿದರು.
ಆಸ್ಪತ್ರೆಯ ಪ್ರತಿಕ್ರಿಯೆ: `ಯಡಿಯೂರಪ್ಪ ಅವರು ಮಂಗಳವಾರ ಸಂಜೆ 7.10ಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದರು. ನಿಯಂತ್ರಣವಿಲ್ಲದ ಮಧುಮೇಹ, ರಕ್ತದೊತ್ತಡ, ಹೈಪೋ ಥೈರಾಡಿಸಂ, ಉಸಿರಾಟದ ತೊಂದರೆ, ಬೆನ್ನು ನೋವು, ಕೈಕಾಲು ನೋವಿನಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಬೇಕಿತ್ತು` ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರೂ ಆದ ಡೀನ್ ಡಾ.ಒ.ಎಸ್. ಸಿದ್ದಪ್ಪ `ಪ್ರಜಾವಾಣಿ`ಗೆ ತಿಳಿಸಿದರು.
`ಆ ಹಿನ್ನೆಲೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನೀಡಲಾಗುತ್ತಿದ್ದ ಔಷಧವನ್ನೇ ಮುಂದುವರಿಸಲಾಯಿತು. ಅವರ ರಕ್ತದಲ್ಲಿ ಸೋಡಿಯಂ ಲವಣ ಕಡಿಮೆ ಇದ್ದ ಕಾರಣ ಲವಣ ಪ್ರಮಾಣ ಹೆಚ್ಚಳಕ್ಕೆ ಚಿಕಿತ್ಸೆ ನೀಡಲು ವೈದ್ಯರ ತಂಡ ಮುಂದಾಯಿತು. ಆದರೆ ಯಡಿಯೂರಪ್ಪ ಅವರು ಚಿಕಿತ್ಸೆ ಪಡೆಯಲು ನಿರಾಕರಿಸಿದರು` ಎಂದು ಹೇಳಿದರು.
`ರಾತ್ರಿ ಮನೆ ಊಟ ಸೇವಿಸಿ ವಿಶ್ರಾಂತಿ ಪಡೆದರು. ಬೆಳಿಗ್ಗೆ 8.30ರ ಹೊತ್ತಿಗೆ ವೈದ್ಯರ ತಂಡ ಮತ್ತೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲು ಮುಂದಾದರೂ ಅವರು ಅವಕಾಶ ನೀಡಲಿಲ್ಲ. 9 ಗಂಟೆಗೆ ನಾನು ಕೂಡ ವೈದ್ಯರೊಂದಿಗೆ ತೆರಳಿದಾಗ ಅವರು ಚಿಕಿತ್ಸೆ ಪಡೆಯಲು ನಿರಾಕರಿಸಿದರು` ಎಂದರು.
ಆ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ವಿರುದ್ಧವಾಗಿ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಅಲ್ಲದೇ ಕೆಲವು ಸಲಹೆಗಳನ್ನು ನೀಡಲಾಗಿದೆ.
ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯರು ಸೂಚಿಸಿರುವ ಔಷಧ ತೆಗೆದುಕೊಳ್ಳಬೇಕು. ಸೋಡಮಿಂಟ್ ಮಾತ್ರೆಯನ್ನು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳಬೇಕು. ಮೂರು ದಿನ ಬಳಿಕ ರಕ್ತದಲ್ಲಿ ಸೋಡಿಯಂ ಲವಣ ಪ್ರಮಾಣ ಪರೀಕ್ಷಿಸಬೇಕು ಎಂದು ಸಲಹೆ ನೀಡಲಾಗಿದೆ` ಎಂದರು.
`ಮೂತ್ರರೋಗತಜ್ಞರು, ನರರೋಗ ತಜ್ಞರು, ಮೂಳೆ ತಜ್ಞರು, ನೇತ್ರ ತಜ್ಞರು, ಮನೋವೈದ್ಯರು ಹಾಗೂ ಶ್ವಾಸಕೋಶ ತಜ್ಞರಿಂದ ಚಿಕಿತ್ಸೆ ಪಡೆಯಬಹುದು. ಹಾಗೆಯೇ ನಿತ್ಯ ಮಧುಮೇಹ ತಪಾಸಣೆ ನಡೆಸುವಂತೆ ಸಲಹೆ ನೀಡಲಾಗಿದೆ` ಎಂದು ವಿವರಿಸಿದರು.
ಜೈಲಿನಲ್ಲಿ: ಯಡಿಯೂರಪ್ಪ ಅವರಿಗೆ ಈ ಹಿಂದೆ ನೀಡಲಾಗಿದ್ದ ವಿಚಾರಣಾಧೀನ ಕೈದಿ ಸಂಖ್ಯೆ 10462 ಮುಂದುವರೆಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೊದಲನೇ ಮಹಡಿಯಲ್ಲಿರುವ ವಿಶೇಷ ಭದ್ರತಾ ವಿಭಾಗದ ಕೊಠಡಿ ಸಂಖ್ಯೆ ಐದರಲ್ಲಿ ಅವರನ್ನು  ಇರಿಸಲಾಗಿದೆ.
ಅಂಬುಲೆನ್ಸ್‌ನಲ್ಲಿ ಜೈಲಿಗೆ ಬಂದ ಯಡಿಯೂರಪ್ಪ ಅವರನ್ನು ಕಾರಾಗೃಹ ಆಸ್ಪತ್ರೆ ವೈದ್ಯರು ತಪಾಸಣೆಗೆ ಒಳಪಡಿಸಿದರು. ಆ ನಂತರ ಅವರನ್ನು ಕೊಠಡಿ ಸಂಖ್ಯೆ ಐದಕ್ಕೆ ಕಳುಹಿಸಲಾಯಿತು.
20/15 ಅಳತೆಯ ಕೊಠಡಿಯಲ್ಲಿ ಐದು ಅಡಿ ಅಗಲದ ಶೌಚಾಲಯವಿದೆ. ಮಂಡಿ ನೋವು ಇರುವ ಹಿನ್ನೆಲೆಯಲ್ಲಿ ಅವರಿಗೆ ಕಮೋಡ್ ನೀಡಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಆದ್ದರಿಂದ ಅವರಿಗೆ ಕಮೋಡ್ ನೀಡಲು ವ್ಯವಸ್ಥೆ ಮಾಡಲಾಗಿದೆ. ವೈದ್ಯರ ಸಲಹೆಯ ಹಿನ್ನೆಲೆಯಲ್ಲಿ ಅವರಿಗೆ ಮಂಚ ಮತ್ತು ಹಾಸಿಗೆ ನೀಡಲಾಗಿದೆ. ಫ್ಯಾನ್ ಮತ್ತು ಎರಡು ಕುರ್ಚಿಗಳನ್ನೂ ಕೊಠಡಿಯಲ್ಲಿ ಇಡಲಾಗಿದೆ.
ಏಕಾಂಗಿ ಯಡಿಯೂರಪ್ಪ:
ವಿಕ್ಟೋರಿಯಾ ಆಸ್ಪತ್ರೆಯಿಂದ ಜೈಲಿಗೆ ಹೋದ ನಂತರ ಯಡಿಯೂರಪ್ಪ ಅವರು ಯಾರೊಂದಿಗೂ ಮಾತನಾಡಿಲ್ಲ. ಗುರುವಾರ ಸಂಜೆಯ ತನಕ ಯಾರನ್ನೂ ಭೇಟಿ ಮಾಡಲು ಬಿಡಬೇಡಿ ಎಂದು ಅವರು ಜೈಲು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಜೈಲಿಗೆ ಬಂದು ಯಡಿಯೂರಪ್ಪ ಅವರನ್ನು ಭೇಟಿಯಾಗಲು ಯತ್ನಿಸಿದರು. ಆದರೆ ಅಧಿಕಾರಿಗಳು ಅವರಿಗೆ ಅವಕಾಶ ನೀಡಲಿಲ್ಲ.
ಮನೆ ಊಟಕ್ಕೆ ಜೈಲು ಅಧಿಕಾರಿಗಳು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಅವರು ಮನೆಯಿಂದ ತಂದಿದ್ದ ಊಟ ಮಾಡಿದರು. ಅಂಬೇಡ್ಕರ್ ಜೀವನ ಚರಿತ್ರೆ ಸೇರಿದಂತೆ ಗ್ರಂಥಾಲಯದಿಂದ ಅವರು ಒಟ್ಟು ಹತ್ತು ಪುಸ್ತಕಗಳನ್ನು ಪಡೆದಿದ್ದಾರೆ.
ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್, ಇಟಾಸ್ಕಾ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಎಸ್.ವಿ.ಶ್ರೀನಿವಾಸ್ ಅವರು ಕೊಠಡಿ ಸಂಖ್ಯೆ ನಾಲ್ಕರಲ್ಲಿದ್ದಾರೆ.
ಬಂಧಿಖಾನೆ ಸಚಿವರ ಭೇಟಿ: ಜೈಲಿಗೆ ಭೇಟಿ ನೀಡಿದ ಬಂಧಿಖಾನೆ ಸಚಿವ ಎ.ನಾರಾಯಣಸ್ವಾಮಿ ಅವರು, ಯಡಿಯೂರಪ್ಪ ಅವರಿಗೆ ನೀಡಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಆದರೆ ಯಡಿಯೂರಪ್ಪ ಅವರ ಜತೆ ಮಾತನಾಡಿಲ್ಲ ಎಂದು ತಿಳಿದುಬಂದಿದೆ.
ಜಯಲಲಿತಾ ಪ್ರಕರಣದ ವಿಚಾರಣೆ ನಡೆಯಲಿರುವ ವಿಶೇಷ ನ್ಯಾಯಾಲಯದ ಬಗ್ಗೆಯೂ ಸಚಿವರು ಮಾಹಿತಿ ಪಡೆದರು ಎಂದು   ಗೊತ್ತಾಗಿದೆ                                   ಕೃಪೆ : ಗಲ್ಫಕನ್ನಡಿಗ

Advertisement

0 comments:

Post a Comment

 
Top