ಬೆಂಗಳೂರು, ಅ.26: ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್‌ರ ರಾಜೀನಾಮೆಯಿಂದ ತೆರವಾಗಿರುವ ಲೋಕಾಯುಕ್ತ ಸ್ಥಾನಕ್ಕೆ ನ್ಯಾ. ಎಸ್.ಆರ್. ಬನ್ನೂರ ಮಠರನ್ನು ನೇಮಿಸುವ ಸಂಬಂಧ ರಾಜ್ಯ ಸರಕಾರ ರಾಜ್ಯಪಾಲರಿಗೆ ಶಿಫಾರಸು ಪತ್ರ ರವಾನಿಸಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಹೊಸದಿಲ್ಲಿ ಪ್ರವಾಸದಲ್ಲಿರುವ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಬೆಂಗಳೂರಿಗೆ ಹಿಂದಿರುಗಿದ ನಂತರ ಕಡತಕ್ಕೆ ಸಹಿ ಹಾಕಲಿದ್ದು, ನ. 1ರ ಬಳಿಕ ಈ ಸಂಬಂಧ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆಯಿದೆ.ನ್ಯಾ. ಸಂತೋಷ್ ಹೆಗ್ಡೆಯವರ ನಿವೃತ್ತಿಯ ನಂತರ ಲೋಕಾಯುಕ್ತರಾಗಿ ನೇಮಕವಾಗಿದ್ದ ನ್ಯಾ. ಶಿವರಾಜ್ ಪಾಟೀಲ್, ಅಕ್ರಮ ನಿವೇಶನ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಕಳೆದ ಸೆ.19 ರಂದು ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ನ್ಯಾ. ಪಾಟೀಲ್‌ರ ಅಕಾಲಿಕ ನಿರ್ಗಮನದ ನಂತರ ಕಳೆದ ಒಂದು ತಿಂಗಳಿಂದ ಲೋಕಾಯುಕ್ತ ಹುದ್ದೆ ಖಾಲಿ ಇತ್ತು.ಲೋಕಾಯುಕ್ತ ಹುದ್ದೆಗೆ ಸುಪ್ರೀಂಕೋರ್ಟ್‌ನ ನ್ಯಾಯಾಧೀಶ ಆರ್.ವಿ. ರವೀಂದ್ರನ್ ಹಾಗೂ ರಾಜ್ಯ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ಕೆ. ಸೋಧಿ ಮತ್ತು ನ್ಯಾ. ಬನ್ನೂರಮಠರ ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿದ್ದವು. ಪ್ರತಿಪಕ್ಷಗಳು ನ್ಯಾ. ಆರ್.ವಿ. ರವೀಂದ್ರನ್ ಅರವ ಬಗ್ಗೆ ಒಲವು ವ್ಯಕ್ತಪಡಿಸಿದ್ದರೆ, ಸರಕಾರ ನ್ಯಾ. ಬನ್ನೂರಮಠ ಹೆಸರು ಅಖೈರುಗೊಳಿಸಿದೆ ಎನ್ನಲಾಗಿದೆ.
ಮೂಲತಃ ಧಾರವಾಡ ಜಿಲ್ಲೆಯವರಾದ ನ್ಯಾ.ಬನ್ನೂರ್‌ಮಠ 1973ರಲ್ಲಿ ವಕೀಲ ವೃತ್ತಿ ಆರಂಭಿಸಿದರು. ಸರಕಾರಿ ಅಭಿಯೋಜಕ ಮತ್ತು ಸರಕಾರಿ ವಕೀಲರಾಗಿ ಏಳು ವರ್ಷ ಸೇವೆ ಸಲ್ಲಿಸಿದರು. 1997ರಲ್ಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಧೀಶರಾಗಿ ನೇಮಕಗೊಂಡ ನ್ಯಾ. ಬನ್ನೂರ್‌ಮಠ ಜೂನ್ 3, 1999ರಲ್ಲಿ ಖಾಯಂ ನ್ಯಾಯಮೂರ್ತಿಗಳಾಗಿ ನಿಯುಕ್ತಿಗೊಂಡರು. ನಂತರ 2009ರಲ್ಲಿ ಕೇರಳ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಪದನ್ನೋತಿ ಪಡೆದು 2010ರ ಜನವರಿಯಲ್ಲಿ ನಿವೃತ್ತಿ ಹೊಂದಿದರು.
0 comments:
Post a Comment