ಬೆಂಗಳೂರು,ಅ.16:ಕನ್ನಡ ಸಾಹಿತ್ಯದಲ್ಲಿ ಯಾವುದೇ ಮೀಸಲಾತಿ ಇಲ್ಲ.ಎಲ್ಲ ಜಾತಿಯ ಲೇಖಕರೂ ಇಲ್ಲಿದ್ದಾರೆ ಮತ್ತು ಶ್ರೇಷ್ಠ ಲೇಖಕರು ಬ್ರಾಹ್ಮಣೇತರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಹೇಳಿದರು.
ಅಭಿನವ ಪ್ರಕಾಶನವು ನಗರದ ಸುರಾನ ಕಾಲೇಜಿನಲ್ಲಿ ರವಿವಾರ ಹಮ್ಮಿಕೊಂಡಿದ್ದ ‘ಆಚೀಚೆ-ಮಾತು ಮತ್ತು ಬರಹಗಳು’ಹಾಗೂ ‘ಪಚ್ಚೆ ರೆಸಾರ್ಟ್-ಈಚಿನ ಕತೆ ಮತ್ತು ಕವಿತೆಗಳು’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಬೇಕು.ಆದರೆ ಜಾತಿಗಳಿಂದ ಉಂಟಾಗಿರುವ ಬಹುತ್ವ ಹೋಗಬಾರದು.ಬಹುತ್ವ ಉಳಿಸಿಕೊಂಡು ಜಾತಿಯನ್ನು ಹೋಗಲಾಡಿಸುವುದು ಘನವಾದ ಪ್ರಶ್ನೆಯಾಗಿದೆ.ಇಂತಹ ಬಿಕ್ಕಟ್ಟನ್ನು ವಿವರಿಸುವ ಮತ್ತು ಮೀರುವ ಶಕ್ತಿ ಲೇಖಕರಿಂದ ಮಾತ್ರ ಸಾಧ್ಯ ಎಂದರು.
ಬ್ರಾಹ್ಮಣಿಕೆಯನ್ನು ನಾನು ಉಳಿಸಿಕೊಂಡಿಲ್ಲ.ಆದರೆ ಈಗಲೂ ಜನ ಅದನ್ನು ನನ್ನಲ್ಲಿ ಉಳಿಸಿಕೊಂಡಿದ್ದಾರೆ ಎಂಬುದು ಕೆಲ ಘಟನೆಗಳಿಂದ ತಿಳಿದು ಬಂದಿದೆ.ಕನ್ನಡ ಲೋಕದಲ್ಲಿ ಬಹಳ ಅದ್ಭುತ ಲೇಖಕರಿದ್ದಾರೆ.ಕನ್ನಡ ತತ್ವ ಉಳಿಯುವಂತೆ ಬರೆಯುವವರಿದ್ದಾರೆ.ಇದರ ಮಧ್ಯೆ ಚೆನ್ನಾಗಿ ಬರೆಯುವುದು ಅಪ್ರಸ್ತುತವೇನೋ ಎನ್ನುವಂತಹ ಕಾಲ ಬಂದಿದೆ.ಓದು ವಿಸ್ತಾರವಾದಂತೆ ಅದರ ತೀವ್ರತೆ ಕಡಿಮೆಯಾಗುತ್ತಿದೆ.ಇಂಗ್ಲಿಷ್‌ನಲ್ಲಿ ಅಧ್ಯಾತ್ಮವನ್ನು ಮಾರುವುದಕ್ಕೆ ನನ್ನ ತೀವ್ರ ವಿರೋಧವಿದೆ.ಎಲ್ಲ ಭಾಷೆಗಳಲ್ಲಿ ಪ್ರೀತಿಯ ಚೈತನ್ಯವಿದೆ.ಆದರೆ ಅದು ಇಂಗ್ಲಿಷ್‌ನಲ್ಲಿಲ್ಲ ಎಂದು ಅಭಿಪ್ರಾಯಪಟ್ಟರು
ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ,ಯಾವುದೇ ಲೇಖಕನಿಗೆ ಗದ್ಯ-ಪದ್ಯ ಬರೆ ಯಬೇಕೆಂಬ ನಿರ್ದಿಷ್ಟ ಉದ್ದೇಶವಿರುವುದಿಲ್ಲ. ತನ್ನೊಳಗಿನ ಒತ್ತಡಗಳನ್ನು ಹೊರ ಹಾಕಿದಾಗ ಅದು ಒಂದು ನಿರ್ದಿಷ್ಟ ರೂಪ ತಳೆಯುತ್ತದೆ.ಈಚಿನ ದಿನಗಳಲ್ಲಿ ಗದ್ಯ ಮತ್ತು ಪದ್ಯಕ್ಕಿರುವ ವ್ಯತ್ಯಾಸವೇ ಮರೆಯಾಗಿದೆ ಎಂದು ವಿಷಾದಿಸಿದರು.
ಅನಂತಮೂರ್ತಿ ಅವರ ಕೃತಿಗಳಲ್ಲಿ ಅನುಭವ ತುಡಿತವೇ ಪ್ರಧಾನವಾಗಿದ್ದು, ಹೊರಗಿನ ತುಡಿತ ಪ್ರಧಾನವಾಗಿ ಕಾಣುವುದಿಲ್ಲ. ಆದರೆ ಮಿಶ್ರ ಜಗತ್ತಿನ ಸ್ಥಿತಿಯನ್ನು ಅದ್ಭುತವಾಗಿ ಕಟ್ಟಿಕೊಡುತ್ತಾ ಬಂದಿದ್ದಾರೆ.ಅವರ ಬರವಣಿಗೆ ಒಂದು ಓದಿಗೆ ಸೀಮಿತಗೊಳಿಸದೇ ಅನೇಕ ಓದುಗಳಿಗೆ ಒತ್ತಾಯಿಸುವ ಸಂಯೋಜನೆ ಹೊಂದಿದೆ ಎಂದರು.
‘ಪಚ್ಚೆ ರೆಸಾರ್ಟ್’ ಕತೆಯಲ್ಲಿ ಅನೇಕ ವಿರೋಧಿ ಅಂಶಗಳಿವೆ.ವಿಲಕ್ಷಣ ಪಾತ್ರಗಳನ್ನು ಸೃಷ್ಟಿಸಲಾಗಿದೆ.ಒಂದೊಂದು ಮಾತು,ದೃಶ್ಯ ಕಣ್ಣಿಗೆ ಕಟ್ಟುವಂತಹ ಅಕ್ಷರ ಸಂಯೋಜನೆ ಮಾಡಲಾಗಿದೆ.ಅದರಲ್ಲಿ ಪರ,ವಿರೋಧದ ಚರ್ಚೆಗಳಿದ್ದರೂ ಅವೆಲ್ಲವನ್ನು ಒಟ್ಟಿಗೆ ಗ್ರಹಿಸುವ ಶಕ್ತಿಯನ್ನು ಅನಂತಮೂರ್ತಿ ಅವರು ತಿಳಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಮರ್ಶಕ ಎಚ್.ಎಸ್.ರಾಘವೇಂದ್ರರಾವ್,ಕವಯಿತ್ರಿಯರಾದ ತಾರಿಣಿ ಶುಭದಾಯಿನಿ,ಜ.ನಾ.ತೇಜಶ್ರೀ,ಸುರಾನ ಕಾಲೇಜಿನ ಪ್ರಾಂಶುಪಾಲ ಎ.ಎಸ್. ಚಂದ್ರಮೌಳಿ ಉಪ ಸ್ಥಿತರಿದ್ದರು.
0 comments:
Post a Comment