ಕೊಪ್ಪಳ.ಅ.೧೭ : ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಂಘಟನಾ ಶಕ್ತಿ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಮುಖಂಡರು, ಯುವಕರು ಹೆಚ್ಚು ಶ್ರಮಿಸಬೇಕಾಗಿದೆ ಎಂದು ಗಂಗಾಮತ ಸಂಘದ ಜಿಲ್ಲಾಧ್ಯಕ್ಷ ಬಾಳಪ್ಪ ಬಾರಕೇರ ಕರೆ ನೀಡಿದರು.
ಅವರು ಇಲ್ಲಿಗೆ ಸಮೀಪದ ಭಾಗ್ಯನಗರ ಗ್ರಾಮದ ಶ್ರಿ ಗಂಗಾಪರಮೇಶ್ವರಿ ದೇವಿ ಮಂದಿರದ ಆವರಣದಲ್ಲಿ ಕರೆಯಲಾದ ಕೊಪ್ಪಳ ಜಿಲ್ಲಾ ಗಂಗಾ ಮತಸ್ಥರ ಸಂಘದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಡಿಸೆಂಬರ್ ಇಲ್ಲವೆ ಜನೆವರಿಯಲ್ಲಿ ಗಂಗಾಮತ ಸಮಾಜದ ಭೃಹತ್ ಜಿಲ್ಲಾ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು. ಈ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಶ್ರೀ ವೇದವ್ಯಾಸ ಗುರು ಪೀಠದ ೩ನೆಯ ವಾರ್ಷಿಕೋತ್ಸವ ಆಚರಣೆ ಹಾಗೂ ಪೀಠಾಧಿಪತಿಗಳಾದ ಶ್ರೀ ಸಹಜಾನಂದಸರಸ್ವತಿ ಮಹಾಸ್ವಾಮಿಗಳವರ ತುಲಾಭಾರ ಮತ್ತು ಉಚಿತ ಸಾಮೂಹಿಕ ವಿವಾಹ, ಚುನಾಯಿತ ಪ್ರತಿನಿಧೀಗಳಿಗೆ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲಿ ಚರ್ಚಿಸಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಈ ಕುರಿತು ಸಧ್ಯದಲ್ಲಿಯೇ ಜಿಲ್ಲೆಯ ನಾಲ್ಕೂ ತಾಲೂಕಿನ ಪದಾಧಿಕಾರಿಗಳು, ಸಮಾಜದ ಮುಖಂಡರು ಸಭೆ ಸೇರಿ ನಿಗದಿತ ದಿನಾಂಕವನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು ಗಂಗಾಮತ ಸಮಾಜದವರು ಆರ್ಥಿಕ, ಶೈಕ್ಷಣಿ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಈ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಸರಕಾರಕ್ಕೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರಲ್ಲದೇ ಸಮಾಜದ ಸರ್ವರೂ ಈ ಭೃಹತ್ ಸಮಾವೇಶಕ್ಕೆ ಸರ್ವರೀತಿಯಿಂದ ಸಹಕರಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ರಾಮಣ್ಣ ಕೌದಿ, ಯಮನಪ್ಪ ಆಗಲಗಡ್ಡಿ, ಶಾಮಣ್ಣ ಸುಣಗಾರ, ಸೋಮಣ್ಣ ಬಾರಕೇರ, ಶಂಕ್ರಗೌಡ ಮಾಲಿಪಾಟೀಲ, ಸಿದ್ಲಿಂಗಪ್ ಸಿದ್ನೆಕೊಪ್ಪ, ವಿರುಪಣ್ಣ ಕಲ್ಲೂರ, ಪರಶುರಾಮ ಮಡ್ಡೇರ, ಶಂಕರಪ್ಪ ಪೂಜಾರ, ಶಿವಶಂಕರಗೌಡ, ಯಲ್ಪ್ಪ ಕರ್ಕಿಹಳ್ಳಿ, ಮಾರ್ಕಂಡೆಪ್ಪ ಪೂಜಾರ ಸೇರಿದಂತೆ ಜಿಲ್ಲೆಯ ನಾಲ್ಕೂ ತಾಲೂಕುಗಳಿಂದ ಸಮಾಜದ ಮುಖಂಡರು ಆಗಮಿಸಿದ್ದರು.
0 comments:
Post a Comment