PLEASE LOGIN TO KANNADANET.COM FOR REGULAR NEWS-UPDATES


ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಂದರೆ ರಾಷ್ಟ್ರೀಯ ಸ್ವಯಂ ಭಕ್ಷಕ ಸಂಘ ಎಂದು ಧಾರವಾಡದ ಹಿರಿಯ ಸಮಾಜವಾದಿ ನೀಲಗಂಗಯ್ಯ ಪೂಜಾರ (ವಕೀಲರು) ಆಗಾಗ ಹೇಳುತ್ತಿದ್ದರು.ಡಾ. ರಾಮ ಮನೋಹರ ಲೋಹಿಯಾ ನಿಕಟವರ್ತಿಯಾಗಿದ್ದ ಪೂಜಾರ ವಕೀಲರು ಕರ್ನಾಟಕ ಏಕೀಕರಣವಾಗುವ ಮುನ್ನ ಮುಂಬೈ ವಿಧಾನಸಭಾ ಸದಸ್ಯರಾಗಿದ್ದರು.ತುಂಬ ಓದಿಕೊಂಡಿದ್ದ ಪೂಜಾರ ವಕೀಲರು ಸಂಘ ಪರಿವಾರ ಕೋಮುವಾದಿ ಮಾತ್ರವಲ್ಲ ಅತ್ಯಂತ ಭ್ರಷ್ಟ ರಾಷ್ಟ್ರಭಕ್ಷಕ ಸಂಘ ಎಂದು ಹೇಳುತ್ತಿದ್ದರು. ಆರೆಸ್ಸೆಸ್‌ನ ರಾಜಕೀಯ ವೇದಿಕೆಯಾದ ಬಿಜೆಪಿಯ ಭ್ರಷ್ಟಾಚಾರದ ಹಗರಣಗಳನ್ನು ನೋಡಿದಾಗ ಆಗ ಪೂಜಾರ ಹೇಳಿದ ಮಾತು ಮತ್ತೆ ಮತ್ತೆ ನೆನಪಿಗೆ ಬರುತ್ತಿದೆ. ಇಷ್ಟೆಲ್ಲ ಹಾದರ ಮಾಡಿದರೂ ಹಿಂದುತ್ವದ ತಿಪ್ಪೆಸಾರಿಸಿ ಎಲ್ಲವನ್ನು ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಲೇ ಇದೆ.
ಬಿಜೆಪಿ ಅಧಿಕಾರಕ್ಕೆ ಬಂದಿರುವ ರಾಜ್ಯಗಳಲ್ಲೆಲ್ಲ ಒಂದಿಲ್ಲೊಂದು ಹಗರಣಗಳು ಬೆಳಕಿಗೆ ಬರುತ್ತಲೇ ಇವೆ. ಕರ್ನಾಟಕದಲ್ಲಂತೂ ಭಯಂಕರ ಲಂಚಕೋರತನ ಮಾತ್ರವಲ್ಲ ನೆಲ-ಜಲ ಸಂಪತ್ತಿನ ಕೊಳ್ಳೆಯಲ್ಲಿ ಈ ರಾಷ್ಟ್ರಭಕ್ತರ ಸರಕಾರ ದಾಖಲೆ ಸ್ಥಾಪಿಸಿದೆ. ದೇಶದ ಬಿಜೆಪಿಗಳಿಗೆಲ್ಲ  ಮಾತ್ರವಲ್ಲ ಮಾಧ್ಯಮಗಳಲ್ಲಿರುವ ಸಂಘಪರಿವಾರಿಗಳಿಗೂ ಮಾದರಿಯಾಗಿರುವ ಗುಜರಾತ್‌ನ ನರೇಂದ್ರ ಮೋದಿ ಸರಕಾರದ ಹೂರಣ ಹೊರ ಬೀಳಗೊಡಗಿದೆ.
ಒಂದು ಅಂದಾಜಿನಂತೆ ಮೋದಿ ಆಡಳಿತದಲ್ಲಿ 24 ಸಾವಿರ ಕೋಟಿ ರೂ.ಗಳ ಅವ್ಯವಹಾರ ನಡೆದಿದೆ. ಆದರೂ ಯಾವುದೇ ತನಿಖೆಯಾಗಿಲ್ಲ. ಮೋದಿ ಅಧಿಕಾರಕ್ಕೆ ಬಂದು ಎಂಟು ವರ್ಷಗಳಾದರೂ ಅಲ್ಲಿ ಲೋಕಾಯುಕ್ತ ಸಂಸ್ಥೆಗೆ ಲೋಕಾಯುಕ್ತರನ್ನೇ ನೇಮಿಸಿಲ್ಲ. ಗುಜರಾತಿನ ರಾಜ್ಯಪಾಲರಾದ ಕಮಲಾ ಬೆನಿವಾಲ ಲೋಕಾಯುಕ್ತರ ನೇಮಕಕ್ಕೆ ಮುಂದಾದರೆ ಮೋದಿ ಅವರ ವಿರುದ್ಧ ಹರಿಹಾಯುತ್ತಾರೆ.
2002ರ ಹತ್ಯಾಕಾಂಡದಲ್ಲಿ ಸಾವಿರಾರು ಅಮಾಯಕ ಮುಸಲ್ಮಾನರನ್ನು ಕೊಚ್ಚಿ ಹಾಕಿದ್ದು ಮಾತ್ರವಲ್ಲ, ಹಂತಕರೊಂದಿಗೆ ಶಾಮೀಲಾಗುವಂತೆ ಪೊಲೀಸರಿಗೆ ಈತ ಪ್ರಚೋದಿಸಿದ. ಇದನ್ನು ಬಯಲಿಗೆಳೆದ ಹಿರಿಯ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಜೈಲಿಗೆ ಹಾಕಲ್ಪಟ್ಟಿದ್ದಾರೆ. ಇದು ಈತನ ಫ್ಯಾಸಿಸ್ಟ್ ಮುಖವಾದರೆ, ಅಭಿವೃದ್ಧಿಯಲ್ಲಿ ಈತ ಬಡಾಯಿಕೊಚ್ಚಿಕೊಳ್ಳುತ್ತಿರುವ ಸಾಧನೆ ಶೂನ್ಯ.
ಯೋಜನಾ ಆಯೋಗದ ಉಪಾಧ್ಯಕ್ಷರು 2010ರ ಮೇ ತಿಂಗಳಲ್ಲಿ ಗುಜರಾತ್ ಮುಖ್ಯಮಂತ್ರಿಗೆ ಬರೆದ ಪತ್ರದ ಪ್ರಕಾರ ಗುಜರಾತಿನ ಆರ್ಥಿಕ ಸೂಚ್ಯಂಕಗಳು ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಗಿಂತ ಹಿಂದೆ ಬಿದ್ದಿದೆ. ರಾಷ್ಟ್ರದ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳಿಗೆ ನೀಡಿರುವ ಅನುದಾನ ಪ್ರಮಾಣದ ತುಂಬ ಕಡಿಮೆ.
ಕರ್ನಾಟಕದಲ್ಲಿ ಭಾರೀ ಅಭಿವೃದ್ಧಿ ಮಾಡಿರುವುದು ಬೊಂಬಡಾ ಹೊಡೆಯುವ ಬಿಜೆಪಿ ಸರಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ. ಅದರ ಇಬ್ಬರು ಮಾಜಿ ಮಂತ್ರಿಗಳು ಜೈಲಿಗೆ ಹೋಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂಧನದ ಭೀತಿಯಿಂದ ಕಂಡ ಕಂಡ ದೇವರಿಗೆಲ್ಲ ಅರ್ಚನೆ ಮಾಡಿಸಿ ಶತ್ರು ನಾಶದ ಚಂಡಿಕಾ ಹೋಮ ಮಾಡಿಸುತ್ತಿದ್ದಾರೆ. ಆ ಭ್ರಷ್ಟ ಮುಖ್ಯಮಂತ್ರಿ ನೇಮಕ ಮಾಡಿದ್ದ ಲೋಕಾಯುಕ್ತ ಶಿವರಾಜ ಪಾಟೀಲರು ಅಧಿಕಾರ ವಹಿಸಿಕೊಂಡ ಎರಡೇ ತಿಂಗಳಲ್ಲಿ ರಾಜೀನಾಮೆ ನೀಡಿದ್ದಾರೆ.ಈಗ ನೂತನ ಮುಖ್ಯಮಂತ್ರಿ ಸದಾನಂದ ಗೌಡರು ಹೊಸ ಲೋಕಾಯುಕ್ತರ ಅನ್ವೇಷಣೆಯಲ್ಲಿ ತೊಡಗಿದ್ದಾರೆ. ಇದಕ್ಕಾಗಿ ವಿಧಾನಮಂಡಳದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಮತ್ತು ಮೋಟಮ್ಮನವರ ಸಲಹೆ ಸೂಚನೆ ಕೋರಿ ಪತ್ರ ಬರೆದಿದ್ದಾರೆ.
ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರಿಗೂ ಅಭಿಪ್ರಾಯ ತಿಳಿಸಲು ಮನವಿ ಮಾಡಿಕೊಂಡಿದ್ದಾರೆ. ಈ ಹಿಂದೆ ಶಿವರಾಜ ಪಾಟೀಲರನ್ನು ನೇಮಕ ಮಾಡುವಾಗ ಯಡಿಯೂರಪ್ಪ ಯಾರ ಅಭಿಪ್ರಾಯವನ್ನೂ ಕೇಳಿರಲಿಲ್ಲ. ಬಹುಶಃ ಅವರು ರಾಜಗುರುಗಳೆಂದು ಪಾದಕ್ಕೇರುವ ಮಠಾಧೀಶರ ಆಶೀರ್ವಾದ ಪಡೆದಿರಬಹುದೇನೋ?
ಆದರೆ ಲೋಕಾಯುಕ್ತರ ನೇಮಕ ಈ ಹಿಂದಿನಷ್ಟು ಸುಲಭವಲ್ಲ. ಮುಖ್ಯಮಂತ್ರಿ ಸದಾನಂದಗೌಡರ ಪತ್ರಕ್ಕೆ ಪ್ರತಿಪಕ್ಷ ನಾಯಕರು ತಕ್ಕ ಉತ್ತರ ನೀಡುವ ಸೂಚನೆ ಕಂಡು ಬರುತ್ತಿದೆ. ‘‘ಇಂಥ ಪತ್ರದ ಬದಲಾಗಿ ಸರ್ವಪಕ್ಷ ಸಭೆ ಕರೆದು ತೀರ್ಮಾನಿಸಿ’’ ಎಂದು ಅವರು ಪಟ್ಟು ಹಿಡಿದಿದ್ದಾರೆ. ಸದಾನಂದ ಗೌಡರು ಬಹುಶಃ ಹಾಗೇ ಮಾಡಬಹುದೇನೋ? ತನ್ನ ಅಧಿಕಾರ ನೀರ ಮೇಲಿನ ಗುಳ್ಳೆ ಎಂದು ದೃಢವಾಗಿ ನಂಬಿರುವ ಅವರು ಯಾವುದೇ ರಿಸ್ಕ್ ತೆಗೆದುಕೊಳ್ಳವುದಿಲ್ಲ. ಆದರೂ ಲೋಕಾಯುಕ್ತರ ನೇಮಕದಲ್ಲೂ ಯಡಿಯೂರಪ್ಪ ಕೈ ಆಡಿಸದೇ ಇರುವುದಿಲ್ಲ. ಭೂ ಹಗರಣದಿದಂದ ತನ್ನನ್ನು ಪಾರು ಮಾಡಬಲ್ಲ ವ್ಯಕ್ತಿ ಲೋಕಾಯುಕ್ತರಾಗ ಬೇಕೆಂಬುದು ಅವರ ಮನಸ್ಸಿನ ಇಂಗಿತವಾಗಿದೆ.
ಶಿವರಾಜ ಪಾಟೀಲರ ಮೇಲೂ ಲಿಂಗಾಯತ ಮಠಾಧೀಶರಿಂದ ಒತ್ತಡ ಬಂದ ನಂತರ ಉಸಾಬರಿಯೇ ಬೇಡ ಎಂದು ಅವರು ರಾಜೀನಾಮೆ ನೀಡಿದರಂತೆ. ಈಗ ಲೋಕಾಯುಕ್ತರಾಗಿ ಯಾರೇ ಬರಲಿ ಯಡಿಯೂರಪ್ಪ ತಮ್ಮ ಹುನ್ನಾರ ನಡೆಸುತ್ತಾರೆ. ಆದರೆ ಒತ್ತಡಕ್ಕೆ ಮಣಿಯುವ ಸ್ಥಿತಿಯಲ್ಲಿ ಸದಾನಂದ ಗೌಡರು ಇಲ್ಲ. ಯಡಿಯೂರಪ್ಪರ ವಿರುದ್ಧ ಭೂ ಹಗರಣದ ಪ್ರಕರಣ ಈಗ ಲೋಕಾಯುಕ್ತ ನ್ಯಾಯಾಲಯದಲ್ಲಿ ನಡೆದಿದೆ. ಅಲ್ಲಿನ ನ್ಯಾಯಾಧೀಶ ಸುಧೀಂದ್ರರಾವ್ ಅವರನ್ನೇ ಎತ್ತಂಗಡಿ ಮಾಡಿಸಲೂ ಮಾಜಿ ಮುಖ್ಯಮಂತ್ರಿ ಮಸಲತ್ತು ನಡೆಸಿದ್ದಾರಂತೆ.
ಆದರೆ ಸದಾನಂದ ಗೌಡರು ಮಾತ್ರ ಅಧಿಕಾರದಲ್ಲಿರುವಷ್ಟು ದಿನ ಯಾವುದೇ ವಿವಾದಕ್ಕೆ ಒಳಗಾಗದಂತೆ ಪಾರಾಗಿ ಹೋಗಬೇಕೆಂದು ಸಂಕಲ್ಪ ಮಾಡಿದಂತಿದೆ. ಇತ್ತೀಚೆಗೆ ದಸರಾ ಸಂದರ್ಭದಲ್ಲಿ ಆಯುಧ ಪೂಜೆ ದಿನ ತಮ್ಮ ಅಧಿಕೃತ ಕಚೇರಿ ಹಾಗೂ ಮನೆಗಳಾದ ಕೃಷ್ಣ ಹಾಗೂ ಅನುಗ್ರಹದಲ್ಲಿ ಪೂಜೆ ನಡೆದ ಸಂದರ್ಭದಲ್ಲಿ ತಮ್ಮ ಸಿಬ್ಬಂದಿಗೆ ಹಿಂದಿನ ಮುಖ್ಯಮಂತ್ರಿಯಂತೆ ಭಕ್ಷೀಸು ನೀಡಲು ಸದಾನಂದಗೌಡರು ನಿರಾಕರಿಸಿದರಂತೆ. ಆ ದಿನ ವಿಗ್ರಹಗಳ ಪೂಜೆ ನಡೆದ ನಂತರ ಗುಂಡು ಮತ್ತು ತುಂಡು ಪಾರ್ಟಿ ಮಾಡಲು ಹಿಂದಿನ ಮುಖ್ಯಮಂತ್ರಿ ತಮ್ಮ ಸಿಬ್ಬಂದಿಗೆ ಒಂದು ಲಕ್ಷ ರೂಪಾಯಿ ಭಕ್ಷಿಸು ನೀಡುತ್ತಿದ್ದರು.
ಆದರೆ ಈ ಬಾರಿ ಸದಾನಂದ ಗೌಡರು ಭಕ್ಷಿಸು ನೀಡಲು ನಿರಾಕರಿಸಿದರು. ಕಾಟಾಚಾರಕ್ಕೆ ಬರಿ 25 ಸಾವಿರ ರೂಪಾಯಿ ನೀಡಿ ಇದೇ ಕೊನೆ ಇನ್ನೆಂದೂ ಪೂಜೆ ನೆಪದಲ್ಲಿ ಭಕ್ಷಿಸು ಕೇಳಬಾರದೆಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. ಯಾಕೆಂದರೆ ಈ ಬಾರಿ ಗೌಡರು ತಮ್ಮ ಪರ್ಸ್ ತೆಗೆದು ಸ್ವಂತದ ಹಣ ನೀಡಿದರು. ಹಿಂದಿನ ಮುಖ್ಯಮಂತ್ರಿ ಸಿಬ್ಬಂದಿಗೆ ಭಕ್ಷಿಸು ನೀಡಲು ಗಣಿ ಹಾಗೂ ಭೂ ಮಾಫಿಯಾದ ಖದೀಮರಿಗೆ ಹೇಳುತ್ತಿದ್ದರು. ಅವರು ಒಂದು ಲಕ್ಷ ರೂ. ಭಕ್ಷೀಸು ನೀಡಿ 10 ಕೋಟಿ ರೂ. ಲಾಭ ಮಾಡಿಕೊಳ್ಳುತ್ತಿದ್ದರು.
ಸದಾನಂದ ಗೌಡರು ಲೋಕಾಯುಕ್ತರ ನೇಮಕದಲ್ಲೂ ಇದೇ ದಿಟ್ಟತನ ತೋರಿಸಬೇಕು. ಅಷ್ಟೇ ಅಲ್ಲ ರಾಜ್ಯದ ಪರ್ಯಾಯ ಅಧಿಕಾರ ಕೇಂದ್ರವಾದ ಕೇಶವ ಕೃಪಾದ ಆರೆಸ್ಸೆಸ್ ನಾಯಕರ ಸೂತ್ರದ ಗೊಂಬೆಯಂತೆ ನರ್ತಿಸಬಾರದು. ಸಂವಿಧಾನಕ್ಕೆ ನಿಷ್ಠನಾಗಿರುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗೆ ಸಂವಿಧಾನೇತರ ಅಧಿಕಾರ ಕೇಂದ್ರದ ನಿಯಂತ್ರಣ ಇರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಸದಾನಂದ ಗೌಡರು ಹಿಂದಿನ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ದೇವರಾಜ ಅರಸು, ಕೆಂಗಲ್ ಹನುಮಂತಯ್ಯ ಹೇಗೆ ಆಡಳಿತ ನಡೆಸಿದರೆಂಬುದನ್ನು ತಿಳಿದುಕೊಂಡು ಆ ನಿಟ್ಟಿನಲ್ಲಿ ಮುನ್ನಡೆಯ ಬೇಕು.
ಸದಾನಂದ ಗೌಡರು ಎಷ್ಟೇ ಹಸನ್ಮುಖಿಯಾದರೂ ಅವರು ಬಿಜೆಪಿ ಮುಖ್ಯಮಂತ್ರಿ ಎಂಬುದು ನಿಜ. ಕೋಮುವಾದಿ ಬ್ಯಾಕ್ಟೀರಿಯಾ ಹರಡುವ ಈ ರೋಗಗ್ರಸ್ತ ಪಕ್ಷ ಅಧಿಕಾರದಲ್ಲಿ ಇರುವವರೆಗೆ ಈ ರಾಜ್ಯಕ್ಕೆ ಉಳಿಗಾಲವಿಲ್ಲ. ಲೋಕಾಯುಕ್ತರ ನೇಮಕ ಪಾರದರ್ಶಕವಾಗಿ ನಡೆದರೆ ಈ ಸರಕಾರದ ಮೂರು ವರ್ಷಗಳ ಆಡಳಿತದ ಇನ್ನಷ್ಟು ಹಗರಣಗಳು ಬಯಲಿಗೆ ಬರಲಿವೆ. ಯಾವ ಪೂಜೆ, ಪುನಸ್ಕಾರ, ಹವನ, ಹೋಮಗಳಿಂದ ಈ ಪಾತಕಗಳನ್ನು ಮುಚ್ಚಿಡಲು ಸಾಧ್ಯವಿಲ್ಲ.  ಕೃಪೆ : ವಾರ್ತಾಭಾರತಿ

Advertisement

0 comments:

Post a Comment

 
Top