ಅ.14ಕ್ಕೆ ಕೇಂದ್ರಕ್ಕೆ ನಿಯೋಗ ಬೆಂಗಳೂರು, ಅ.8: ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತಲೆದೋರಿದ್ದು, ವಿದ್ಯುತ್ ಅಭಾವವನ್ನು ನೀಗಿಸಲು ಹೆಚ್ಚಿನ ವಿದ್ಯುತ್ ಹಾಗೂ ಸಮರ್ಪಕ ಕಲ್ಲಿದ್ದಲು ಪೂರೈಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಈ ತಿಂಗಳ 14ರಂದು ರಾಜ್ಯದ ನಿಯೋಗವೊಂದು ತೆರಳಲಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಅಧ್ಯಕ್ಷತೆಯಲ್ಲಿಂದು ನಗರದ ಶಕ್ತಿ ಭವನದಲ್ಲಿ ನಡೆದ ವಿದ್ಯುತ್ ಅಭಾವದ ಕುರಿತ ಇಲಾಖಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆಯ ನಂತರ ಸುದ್ದಿಗಾರರಿಗೆ ಅವರು ತಿಳಿಸಿದರು. ರಾಜ್ಯದಲ್ಲಿ ಸೃಷ್ಟಿಯಾಗಿರುವ ವಿದ್ಯುತ್ ಕೊರತೆಯನ್ನು ನೀಗಿಸುವ ಕುರಿತು ದಿಲ್ಲಿಯಲ್ಲಿ ಕೇಂದ್ರದ ಇಂಧನ, ಕಲ್ಲಿದ್ದಲು, ರೈಲ್ವೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಶೋಭಾ ತಿಳಿಸಿದರು.
ಕಲ್ಲಿದ್ದಲು ಕೂಡಾ ರಾಜ್ಯಕ್ಕೆ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ರಾಜ್ಯದಲ್ಲಿ ಈಗ ಸಂಗ್ರಹಿಸಿಟ್ಟಿರುವ ಒಂದು ಲಕ್ಷ ಟನ್ ಕಲ್ಲಿದ್ದಲನ್ನು ಬಳಸಿಕೊಂಡು ರಾಯಚೂರಿನ ಉಷ್ಣ ವಿದ್ಯುತ್ ಸ್ಥಾವರದ 5 ಘಟಕಗಳಲ್ಲಿ ವಿದ್ಯುತನ್ನು ಉತ್ಪಾದಿಸಬಹುದು. ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಕೊರತೆ ಉಂಟಾಗಿದೆ. ಈ ಸಂಬಂಧ ದಿಲ್ಲಿಯಲ್ಲಿ ಕಲ್ಲಿದ್ದಲು ಸಚಿವರನ್ನು ಭೇಟಿಯಾಗಿ ಸಮರ್ಪಕ ಕಲ್ಲಿದ್ದಲು ಪೂರೈಕೆಗೆ ಒತ್ತಾಯಿಸಲಾಗುವುದು ಎಂದವರು ಹೇಳಿದರು.
ತೆಲಂಗಾಣದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಯುತ್ತಿರುವುದರಿಂದ ಅಲ್ಲಿಂದ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಒಡಿಶಾ-ನಾಗ್ಪುರದ ಮೂಲಕ ಕಲ್ಲಿದ್ದಲು ಸರಬರಾಜು ಮಾಡುವಂತೆ ಕೇಂದ್ರ ಸಚಿವರನ್ನು ಒತ್ತಾಯಿಸಲಾಗುವುದು ಎಂದ ಶೋಭಾ, ಪರ್ಯಾಯ ಮಾರ್ಗದ ಮೂಲಕ ಕಲ್ಲಿದ್ದಲು ಸರಬರಾಜು ಆಗದಿದ್ದರೆ ರಾಯಚೂರಿನ ಸ್ಥಾವರದಲ್ಲೂ ವಿದ್ಯುತ್ ಉತ್ಪಾದಿಸುವುದು ಕಷ್ಟವಾಗಲಿದೆ ಎಂದರು. ರಾಜ್ಯಕ್ಕೆ ಕೇಂದ್ರದ ವಿದ್ಯುತ್ ಸ್ಥಾವರಗಳಿಂದ 1543 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಾಗಬೇಕಿತ್ತು. ಈ ಪೈಕಿ 1 ಸಾವಿರ ಮೆಗಾವ್ಯಾಟ್‌ನಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ರಾಜ್ಯದಲ್ಲಿ ಮತ್ತಷ್ಟು ವಿದ್ಯುತ್ ಅಭಾವ ಉಂಟಾ ಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪಾಲಿನ ವಿದ್ಯುತ್‌ನ್ನು ಪೂರೈಸುವ ಜೊತೆಗೆ ಇನ್ನೂ 500 ಮೆಗಾವ್ಯಾಟ್ ವಿದ್ಯುತ್‌ನ್ನು ಕೇಂದ್ರ ಪೂರೈಸಬೇಕೆಂದು ಕೇಂದ್ರದ ಇಂಧನ ಸಚಿವರನ್ನು ಒತ್ತಾಯಿಸಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿದರು.
0 comments:
Post a Comment