PLEASE LOGIN TO KANNADANET.COM FOR REGULAR NEWS-UPDATES



ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯವರ ಮತ್ತೊಂದು ರಥಯಾತ್ರೆ ಆರಂಭವಾಗಿದೆ. ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ನೂರು ಜಿಲ್ಲೆಗಳಲ್ಲಿ ಈ ಯಾತ್ರೆ ಸಂಚರಿಸಲಿದೆ. ಇದಕ್ಕೆ ಜನಚೇತನ ಯಾತ್ರೆಯೆಂದು ಯಾಕೆ ಹೆಸರಿಟ್ಟರೆಂದು ಗೊತ್ತಿಲ್ಲ. ಸ್ವಚೇತನ ಯಾತ್ರೆಯೆಂದು ಹೆಸರಿಟ್ಟಿದ್ದರೆ ಸೂಕ್ತವಾಗಿರುತ್ತಿತ್ತು. 84ರ ಇಳಿ ವಯಸ್ಸಿನಲ್ಲಿ ಅಡ್ವಾಣಿಯವರು ಪ್ರಧಾನಿ ಸ್ಥಾನಕ್ಕಾಗಿ ತನ್ನ ಶಿಷ್ಯ ನರೇಂದ್ರ ಮೋದಿಯವರ ಜೊತೆಗೆ ಪೈಪೋಟಿ ನಡೆಸಬೇಕಾಗಿ ಬಂದಿರುವುದರಿಂದ ಇಂತಹ ಯಾತ್ರೆ ಅವರಿಗೆ ಅನಿವಾರ್ಯವಾಗಿತ್ತೇನೋ? ರಥಯಾತ್ರೆ ಅಡ್ವಾಣಿಯವರಿಗೆ ಹೊಸತಲ್ಲ. 90ರ ದಶಕದಲ್ಲಿ ರಾಮಜನ್ಮ ಭೂಮಿಯನ್ನು ವಿಮೋಚನೆ ಮಾಡಲು ರಥಯಾತ್ರೆ ನಡೆಸಿ ದೇಶದ ತುಂಬಾ ನೆತ್ತರು ಚೆಲ್ಲಿ, ರಕ್ತದಿಂದ ಇತಿಹಾಸ ನಿರ್ಮಿಸಿ, ಓಟಿನ ಬೆಳೆ ತೆಗೆದವರು ಅಡ್ವಾಣಿ. ಆಗ ಭಾರತೀಯರನ್ನು ಕೋಮು ಹೆಸರಿನಲ್ಲಿ ವಿಭಜಿಸುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿದ್ದರು. ಈ ವಯೋವೃದ್ಧ ಆರೆಸ್ಸೆಸ್‌ನ ಸ್ವಯಂ ಸೇವಕ. ಈ ಬಾರಿ ಪ್ರಧಾನಿಯಾಗುವ ತನ್ನ ಕನಸನ್ನು ನನಸಾಗಿಸಲು ರಥವನ್ನೇರಿದ್ದಾರೆ.
ಈ ಬಾರಿ ಕೋಮುವಾದಿ ಕಾರ್ಯಸೂಚಿ ಕೆಲಸಕ್ಕೆ ಬರುವುದಿಲ್ಲವೆಂದು ಅದನ್ನು ಬದಿಗಿಟ್ಟು ಈಗಾಗಲೇ ದೇಶದಲ್ಲಿ ಎಲ್ಲರೂ ಮಾತನಾಡುತ್ತಿರುವ ಭ್ರಷ್ಟಾಚಾರದ ವಿಷಯ ಇಟ್ಟುಕೊಂಡು ಅಡ್ವಾಣಿ ರಥಯಾತ್ರೆಗೆ ಹೊರಟಿದ್ದಾರೆ. ಅವರ ರಥಯಾತ್ರೆಯ ಸಂಘಟಕ ಎನ್‌ಡಿಎ ಸರಕಾರವಿದ್ದಾಗ ಹೌಸಿಂಗ್ ಬೋರ್ಡ್ ಹಗರಣದಲ್ಲಿ ಸಿಲುಕಿದ್ದ ಹಾಗೂ ನೀರಾ ರಾಡಿಯಾ ಪ್ರಕರಣದಲ್ಲಿ ಕೆಸರು ಮೆತ್ತಿಕೊಂಡಿದ್ದ ಅನಂತ್ ಕುಮಾರ್. ಇದು ಬರೀ ಒಬ್ಬ ವ್ಯಕ್ತಿಯ ಭ್ರಷ್ಟಾಚಾರದ ಪ್ರಶ್ನೆಯಲ್ಲ. ಕೇಂದ್ರದ ಯುಪಿಎಯ ಭ್ರಷ್ಟಾಚಾರದ ವಿರುದ್ಧ ಕಹಳೆ ಊದುತ್ತಿರುವ ಅಡ್ವಾಣಿಯವರ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೆಲ್ಲ ಭ್ರಷ್ಟಾಚಾರದ ಗಬ್ಬು ವಾಸನೆ ಮೂಗಿಗೆ ರಾಚುತ್ತಿದೆ.
ಗುಜರಾತ್ ಭ್ರಷ್ಟಾಚಾರ, ಉತ್ತರಾಖಂಡದ ಭ್ರಷ್ಟಾಚಾರ, ಮಧ್ಯಪ್ರದೇಶದ ಮಾಹಿತಿ ಹಕ್ಕು ಕಾರ್ಯಕರ್ತೆಯ ಹತ್ಯೆ, ಇವೆಲ್ಲವುಗಳಿಗೆ ಕಳಶವಿಟ್ಟಂತೆ ಕರ್ನಾಟಕದ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಆಗ್ರ ಸ್ಥಾನದಲ್ಲಿದೆ. ಈ ಗಣಿ ಲೂಟಿ, ಭೂ ಮಾಫಿಯಾ, ಡಿನೋಫೀಕೇಶನ್, ಆಪರೇಶನ್ ಕಮಲ ಇವೆಲ್ಲವುಗಳ ಬಗ್ಗೆ ಬರುವ ಪ್ರಶ್ನೆಗಳಿಗೆ ಅಡ್ವಾಣಿಯವರು ತನ್ನ ರಥಯಾತ್ರೆಯಲ್ಲಿ ಉತ್ತರ ನೀಡಬೇಕಾಗುತ್ತದೆ. ಕರ್ನಾಟಕಕ್ಕೆ ಈ ರಥಯಾತ್ರೆ ಬಂದರೆ ಯಡಿಯೂರಪ್ಪನವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಕೇಂದ್ರದ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಅನಿವಾರ್ಯ ಅವರಿಗಿದೆ.
ಈ ಬಾರಿ ಯಾತ್ರೆ ಹೊರಡಲು ಅಡ್ವಾಣಿಯವರಿಗೆ ನಿರ್ದಿಷ್ಟವಾಗಿ ಯಾವುದೇ ಅಜೆಂಡಾ ಇರಲಿಲ್ಲ. ಅಣ್ಣಾ ಹಝಾರೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಯುಪಿಎ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದಾಗ ಅವರಿಗೆ ಸ್ವಯಂ ಸೇವಾ ಸಂಸ್ಥೆಗಳು, ಮಾಧ್ಯಮಗಳು ಬೆಂಬಲ ನೀಡಿದವು. ಆಗ ಒಮ್ಮೆಲೇ ಎಚ್ಚೆತ್ತ ಅಡ್ವಾಣಿಯವರಿಗೆ ಭ್ರಷ್ಟಾಚಾರದ ನೆನಪಾಯಿತು. ಭ್ರಷ್ಟಾಚಾರದ ವಿರುದ್ಧ ದೇಶದಲ್ಲಿ ಎದ್ದಿರುವ ಅಲೆಯನ್ನು ಬಳಸಿಕೊಂಡು ಕೇಂದ್ರದ ಅಧಿಕಾರ ಸೂತ್ರ ಹಿಡಿಯಲು ಅವರು ಮುಂದಾದರು. ಹಝಾರೆಯವರ ಸತ್ಯಾಗ್ರಹದಲ್ಲಿ ತಮ್ಮ ಸಂಘಟನೆ ಪ್ರಮುಖ ಪಾತ್ರ ವಹಿಸಿತ್ತೆಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿ ಹಝಾರೆ ಬಳಗದಿಂದ ಮಂಗಳಾರತಿ ಮಾಡಿಸಿಕೊಂಡರು.
ಆನಂತರ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ತಿಳಿದುಕೊಂಡ ಅಡ್ವಾಣಿ ರಥಯಾತ್ರೆಗೆ ಹೊರಟಾಗ ಆರೆಸ್ಸೆಸ್ ಹಸಿರು ನಿಶಾನೆ ತೋರಿಸಿತು. ಇದಕ್ಕೂ ಮುನ್ನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸದ್ಭಾವನೆಯ ಸೋಗಿನಲ್ಲಿ ನಿರಶನ ನಾಟಕ ನಡೆಸಿದರು. ದೇಶದ ಪ್ರಧಾನಿಯಾಗಲು ತನ್ನ ಹಿರಿಯ ನಾಯಕನೊಂದಿಗೆ ಪೈಪೋಟಿ ನೀಡಿದರು. ಇದರಿಂದ ಮುನಿಸಿಕೊಂಡ ಅಡ್ವಾಣಿ ಗುಜರಾತಿನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಲೇ ಇಲ್ಲ.
ಅಡ್ವಾಣಿ ರಥಯಾತ್ರೆಯ ಸಂದರ್ಭದಲ್ಲಿ ಮೋದಿಯವರು ಕೂಡ ಬರಲಿಲ್ಲ. ಈ ವಿದ್ಯಮಾನಗಳನ್ನು ಗಮನಿಸಿದರೆ ಲೋಕಸಭಾ ಚುನಾವಣೆಗೆ ಇನ್ನೂ ಸಾಕಷ್ಟು ಕಾಲಾವಕಾಶ ಇರುವಾಗಲೇ, ಜನ ತಮಗೆ ಬಹುಮತದಿಂದ ಗೆಲ್ಲಿಸುತ್ತಾರೆಂಬ ಭರವಸೆ ಇಲ್ಲದಿರುವಾಗ ದೇಶದ ಉನ್ನತ ಹುದ್ದೆ ಅಲಂಕರಿಸಲು ಅಡ್ವಾಣಿ ರಥಯಾತ್ರೆ ಹೊರಟಿರುವುದು ಅಪಹಾಸ್ಯವಾಗಿದೆ. ವಿಶ್ವಾಸಾರ್ಹತೆಯ ಕೊರತೆಯಲ್ಲಿ ರಥದ ಚಕ್ರಗಳು ತುಕ್ಕು ಹಿಡಿದಿವೆ. ತಾನು ಪರಿಶುದ್ಧನಾದರೆ ಸಾಲದು, ತನ್ನ ಪಕ್ಷವೂ ಪಾರದರ್ಶಕವಾಗಿರಬೇಕೆಂದು ಹೇಳುವ ಎದೆಗಾರಿಕೆ ಅಡ್ವಾಣಿಯವರಿಗಿಲ್ಲ.
ಹಗರಣಗಳಲ್ಲಿ ಸಿಲುಕಿರುವ ತಮ್ಮ ಪಕ್ಷದ ನಾಯಕರನ್ನು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿಯೂ ಅವರಿಲ್ಲ. ಹೀಗೆ ನೈತಿಕ ಬಲ ಮತ್ತು ಅತ್ಮ ವಿಶ್ವಾಸವಿಲ್ಲದ ಈ ವಯೋವೃದ್ಧ ನಾಯಕ ತನ್ನ ಶಿಷ್ಯ ಮೋದಿ ನಿರಶನ ಮಾಡಿದ ನಂತರ ತರಾತುರಿಯಲ್ಲಿ ಯಾತ್ರೆಗೆ ಹೊರಟರು. ಮೋದಿಯವರ ಹಗರಣಗಳನ್ನು ಬಯಲಿಗೆಳೆದುದಕ್ಕಿಂತ ಮುಂಬರುವ ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ಕುರ್ಚಿಗೆ ತನ್ನ ಜೊತೆ ಪೈಪೋಟಿ ನಡೆಸುತ್ತಿರುವ ಮೋದಿಯವರ ಪ್ರಭಾವವನ್ನು ಕುಗ್ಗಿಸುವುದು ಅಡ್ವಾಣಿಯವರ ಇಂಗಿತವಾಗಿದೆ.
ಪ್ರಧಾನಿ ಕುರ್ಚಿ ತಪ್ಪಿ ಹೋದಿತೆಂಬ ಆತಂಕ ಅವರನ್ನು ಈ ವಯಸ್ಸಿನಲ್ಲಿ ಕಾಡುತ್ತಿದೆ. ಈ ಹುದ್ದೆಗಾಗಿ ಅಡ್ವಾಣಿ ತನ್ನ ಕಿರಿಯ ಸಹೋದ್ಯೋಗಿಗಳ ಜೊತೆ ಪೈಪೋಟಿ ನಡೆಸಬೇಕಾಗಿದೆ ಮಾತ್ರವಲ್ಲ, ಆರೆಸ್ಸೆಸ್ ಕೂಡ ಅವರ ಜೊತೆ ಮೊದಲು ಇದ್ದಂತಿಲ್ಲ. ಹೀಗಾಗಿ ಅಡ್ವಾಣಿ ದಿಗಿಲುಕೊಂಡಿದ್ದಾರೆ. ಅಂದರೆ ಈಗ ಪರಿಸ್ಥಿತಿ ಬದಲಾಗಿದೆ. ಹೀಗಾಗಿ ಅಡ್ವಾಣಿಯವರ ರಥಯಾತ್ರೆ ಕೇವಲ ತೀರ್ಥಯಾತ್ರೆಯಾಗಿ ಕೊನೆಗೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ.

Advertisement

0 comments:

Post a Comment

 
Top