ಬೆಂಗಳೂರು: ಲೋಕಾಯುಕ್ತ ವಿಶೇಷ ಕೋರ್ಟ್ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರಿಗೆ ಜಾಮೀನು ತಿರಸ್ಕರಿಸಿ ಅತ್ತ ಆದೇಶ ಹೊರಡಿಸಿದರೆ, ಯಡಿಯೂರಪ್ಪನವರ ವಿರುದ್ಧ ದೂರು ದಾಖಲು ಮಾಡಿರುವ ವಕೀಲ ಸಿರಾಜಿನ್ ಬಾಷಾ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು ಮಾಡಲು ಇತ್ತ ಹೈಕೋರ್ಟ್, ರಿಜಿಸ್ಟ್ರಾರ್ ಅವರಿಗೆ ಶಿಫಾರಸು ಮಾಡಿದೆ.
ವಿಶೇಷ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ಕೋರಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಹಿಂದಕ್ಕೆ ಸರಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು, ಈ ಶಿಫಾರಸು ಮಾಡಿದ್ದಾರೆ.
ವಿಶೇಷ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ನ್ಯಾಯಮೂರ್ತಿಗಳು ಕಳೆದ ವಾರ ತಡೆ ನೀಡಿದ್ದರು.
ಸರಿಯಾಗಿ ವಿಚಾರಣೆ ನಡೆಸದೆ ಯಡಿಯೂರಪ್ಪನವರ ಪರ ಆದೇಶ ಹೊರಡಿಸಲಾಗಿದೆ ಎನ್ನುವು ದು ಬಾಷಾ ಅವರ ಆರೋಪ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ವಿಚಾರಣೆಯನ್ನು ಬೇರೆ ನ್ಯಾಯ ಮೂರ್ತಿಗಳಿಗೆ ವರ್ಗಾಯಿಸಬೇಕು ಎಂದು ಕೋರಿ ಅವರು ಪ್ರಮಾಣ ಪತ್ರ ಸಲ್ಲಿಸಿದ್ದರು.
ಆತ್ಮಸಾಕ್ಷಿಗೆ ವಿರುದ್ಧ: ಈ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಶನಿವಾರ ಸುದೀರ್ಘ ವಾದ, ಪ್ರತಿವಾದ ನಡೆದವು. ಇದನ್ನು ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದಕ್ಕೆ ಸರಿದರು. `ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ವಿಚಾರಣೆಯನ್ನು ಬೇರೊಬ್ಬ ನ್ಯಾಯಮೂರ್ತಿಗಳು ನಡೆಸಲಿ. ನ್ಯಾಯದಾನದಂತಹ ಪವಿತ್ರ ಕಾರ್ಯ ಮಾಡುವಾಗ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದು ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿದೆ. ವಕೀಲನಾಗಿ, ನ್ಯಾಯಮೂರ್ತಿಯಾಗಿ ಒಳ್ಳೆಯ ಸೇವೆ ಸಲ್ಲಿಸಿದ್ದೇನೆ.
ಆದರೆ ಸ್ವತಃ ವಕೀಲರೂ ಆಗಿರುವ ಬಾಷಾ ಅವರು ಈ ರೀತಿ ಪ್ರಮಾಣ ಪತ್ರ ಸಲ್ಲಿಸಿರುವುದು ಬೇಜವಾಬ್ದಾರಿಯನ್ನು ತೋರಿಸುತ್ತದೆ. ನ್ಯಾಯಾಂಗದ ಘನತೆಯನ್ನು ಕಾಪಾಡುವುದು ನನ್ನ ಕರ್ತವ್ಯ` ಎಂದು ನ್ಯಾ.ಪಾಟೀಲ್ ಹೇಳಿದರು.
`ಈ ರೀತಿಯ ಪ್ರಮಾಣಪತ್ರವನ್ನು ಪುರಸ್ಕರಿಸಿದರೆ ಇದು ಬೇರೆಯವರಿಗೂ ಮಾದರಿಯಾಗುವ ಸಾಧ್ಯತೆ ಇದೆ. ಇಂತಹ ಕೃತ್ಯಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ` ಎಂದ ನ್ಯಾಯಮೂರ್ತಿಗಳು ನ್ಯಾಯಾಂಗ ನಿಂದನೆಗೆ ಶಿಫಾರಸು ಮಾಡಿ, ಮುಂದಿನ ಕ್ರಮ ತೆಗೆದುಕೊಳ್ಳುವಂತೆ ರಿಜಿಸ್ಟ್ರಾರ್ ಅವರಿಗೆ ಆದೇಶಿಸಿದ್ದಾರೆ.
ಮುಂೀನು? ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವ ಪೀಠಕ್ಕೆ ಈ ಪ್ರಕರಣದ ವಿಚಾರಣೆಯನ್ನೂ ಒಪ್ಪಿಸಲಾಗುವುದು. ಅಲ್ಲಿ ವಾದ, ಪ್ರತಿವಾದಗಳು ನಡೆಯಲಿವೆ.
-ಬಿಎಸ್‌ವೈ ಜೈಲು ಸೇರಿಸಿದ ಬಾಷಗೆ ಬಂಧನ ಭೀತಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜೈಲು ಪಾಲಾಗುವಂತೆ ಮಾಡಿದ ವಕೀಲ ಸಿರಾಜಿನ್ ಬಾಷ ಅವರೇ ಈಗ ಬಂಧನದ ಭೀತಿ ಎದುರಿಸುತ್ತಿದ್ದಾರೆ.
ಯಡಿಯೂರಪ್ಪ ಅವರ ವಿರುದ್ಧದ ಹೋರಾಟದ ಹುಮ್ಮಸ್ಸಿನಲ್ಲಿ ನ್ಯಾಯಮೂರ್ತಿಗಳ ನ್ಯಾಯದಾನ ಪ್ರಕ್ರಿಯೆಯ ವಿರುದ್ಧ ಶಂಕೆ ವ್ಯಕ್ತಪಡಿಸಿ, ಪ್ರಮಾಣಪತ್ರ ಸಲ್ಲಿಸಿದ ಅವರು ಇದೀಗ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿದ್ದಾರೆ.
ನ್ಯಾಯದಾನ ಪ್ರಕ್ರಿಯೆಯನ್ನೇ ಬೊಟ್ಟು ಮಾಡಿ ತೋರಿಸಿದ ಹಾಗೂ ನ್ಯಾಯಮೂರ್ತಿಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಕಲಾಪಗಳಿಗೆ ಧಕ್ಕೆ ತರುವ ಪ್ರಯತ್ನ ನಡೆಸಿದ ಆರೋಪದ ಮೇಲೆ ಬಾಷ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ನ್ಯಾ.ಬಿ.ಎಸ್.ಪಾಟೀಲ್ ಆದೇಶಿದ್ದಾರೆ.
ಈ ಮಧ್ಯೆ ನ್ಯಾಯದಾನ ಘನತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿರುವ ನ್ಯಾ. ಬಿ.ಎಸ್.ಪಾಟೀಲ್, ಪ್ರಕರಣದ ವಿಚಾರಣೆಯನ್ನು ಬೇರೊಂದು ಪೀಠಕ್ಕೆ ವರ್ಗಾಯಿಸುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಿಗೆ ಶಿಫಾರಸು ಮಾಡಿದ್ದಾರೆ.
ಅಪಾಯಕಾರಿ ಬೆಳವಣಿಗೆ: ತಾವು ಸಲ್ಲಿಸಿದ ಪ್ರಮಾಣಪತ್ರ ಇಲ್ಲವೇ ಮೆಮೋ ತಿರಸ್ಕರಿಸಿದರು ಎಂಬ ಒಂದೇ ಕಾರಣಕ್ಕೆ ಅರ್ಜಿದಾರರು ನ್ಯಾಯಮೂರ್ತಿಗಳ ಬಗ್ಗೆಯೇ ಅಪನಂಬಿಕೆ ವ್ಯಕ್ತಪಡಿಸಿ ರುವುದು ಖಂಡನೀಯ. ಇದು ಆಪಾಯಕಾರಿ ಬೆಳವಣಿಗೆ. ಪ್ರತಿಯೊಬ್ಬರೂ ಇದೇ ಮಾರ್ಗ ಅನಸರಿಸಿದರೆ, ನ್ಯಾಯಾಂಗ ಅಸಹಾಯಕವಾಗಿಬಿಡುತ್ತದೆ. ನ್ಯಾಯದಾನ ಕಠಿಣವಾಗುತ್ತದೆ. ಅಲ್ಲದೆ, ಒಬ್ಬ ನ್ಯಾಯಮೂರ್ತಿಯ ತೀರ್ಪಿನಲ್ಲಿ ತಪ್ಪು ಕಂಡುಬಂದಲ್ಲಿ ಅದರ ಬಗ್ಗೆ ಮೇಲ್ಮನವಿ ಸಲ್ಲಿಸಲು ನ್ಯಾಯಾಂಗ ವ್ಯವಸ್ಥೆಯಲ್ಲಿ ಅವಕಾಶವಿದೆ. ಅದನ್ನು ಹೊರತುಪಡಿಸಿ ಇಂತಹ ಪ್ರಮಾಣಪತ್ರ ಸಲ್ಲಿಸುವುದು ಉತ್ತಮ ಬೆಳವಣಿಗೆಯಲ್ಲ ಎಂದು ನ್ಯಾಯಮೂರ್ತಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ತಪ್ಪು ಅಂಶಗಳು: ದೂರುದಾರರು ಪ್ರಮಾಣಪತ್ರದಲ್ಲಿ ನ್ಯಾಯಮೂರ್ತಿಗಳು ತಮ್ಮ ಕೇವಿಯಟ್ ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ. ಜತೆಗೆ, ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ದಸರಾ ರಜೆಯ ನಂತರ ಪೀಠಕ್ಕೆ ಮುಂದೂಡಿದ್ದರು ಎಂದೂ ಕೂಡ ಆರೋಪಿಸಲಾಗಿದೆ.
ಆದರೆ, ವಾಸ್ತವಾಂಶವೆಂದರೆ ದೂರುದಾರರು ಸಲ್ಲಿಸಿದ್ದ ಕೇವಿಯಟ್ ವಿಚಾರಣೆ ಹಂತದಲ್ಲಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ಅಲ್ಲದೆ, ದೂರುದಾರರ ಕೋರಿಕೆ ಮೇರೆಗೆ ವಿಚಾರಣೆ ಮುಂ ದೂಡಲ್ಪಟ್ಟಿತ್ತು. ಆದರೂ ಸಿರಾಜಿನ್ ಬಾಷ ಸುಳ್ಳು ಆರೋಪಗಳನ್ನು ಹೊರಿಸಿ ನ್ಯಾಯಾಂಗದ ಹಾದಿ ತಪ್ಪಿಸಲು ಮುಂದಾಗಿದ್ದಾರೆ ಎಂದು ನ್ಯಾಯಮೂರ್ತಿಗಳು ಕಿಡಿ ಕಾರಿದ್ದಾರೆ.
ವಕೀಲರಿಂದ ಇಂತಹ ತಪ್ಪುಗಳು ಸಲ್ಲದು: ಬಾಷ ಪರ ವಾದ ಮಂಡಿಸಿದ ಹಿರಿಯ ವಕೀಲ ಅನೂಪ್ ಜಾರ್ಜ್ ಚೌಧರಿ, ಇಂತಹ ಆರೋಪಗಳನ್ನು ನಿರ್ಲಕ್ಷ್ಯಿಸುವುದರಿಂದ ನ್ಯಾಯಾಂಗದ ಘನತೆ ಹೆಚ್ಚಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಯಿಸಿದ ನ್ಯಾಯಮೂರ್ತಿಗಳು, ಈ ಪ್ರಮಾಣ ಪತ್ರವನ್ನು ಸಾಮಾನ್ಯ ವ್ಯಕ್ತಿ ಸಲ್ಲಿಸಿದ್ದರೆ ಅದನ್ನು ನಿರ್ಲಕ್ಷ್ಯಿಸಬಹುದಿತ್ತು.
ಆದರೆ, ಸುಮಾರು ೭ ವರ್ಷ ಹೈಕೋರ್ಟ್‌ನಲ್ಲಿ ವಕೀಲನಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿಕೊಂಡಿರುವವರಿಂದ ಇಂತಹ ವರ್ತನೆ ಸಲ್ಲದು. ವಕೀಲರ ಸಂಘದ ಸದಸ್ಯನಾಗಿ, ಪ್ರಮಾಣವಚನ ಸ್ವೀಕರಿಸಿ, ವಕೀಲರ ಸಮವಸ್ತ್ರ ಧರಿಸಿರುವವರು ತಮ್ಮ ಜವಾಬ್ದಾರಿ ಮರೆತು ನ್ಯಾಯಾಂಗ ವ್ಯಸ್ಥೆಯನ್ನೇ ಅಲ್ಲಗೆಳೆಯುವ ಕೀಳು ಮಟ್ಟಕ್ಕೆ ಇಳಿದಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.
ಕಾಲು ಕಿತ್ತ ಬಾಷ
ಶನಿವಾರ ಮುಂಜಾನೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ತಾನು ವಿಚಾರಣೆಯಲ್ಲಿ ಮುಂದುವರಿ ಯುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಮೂರ್ತಿಗಳು, ಹಾಗೆಂದು ದೂರುದಾರರನ್ನು ಕ್ಷಮಿ ಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ದೂರುದಾರರು ತಮ್ಮ ಉದ್ಧಟತನದ ಕೃತ್ಯಕ್ಕೆ ವಿವರಣೆ ನೀಡಬೇಕು ಎಂದು ಪ್ರಕರಣವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.
ಮಧ್ಯಾಹ್ನ ಬಾಷ ಪರ ವಕೀಲರು ಸ್ಪಷ್ಟೀಕರಣ ನೀಡಿದರಾದರೂ, ನ್ಯಾಯಮೂರ್ತಿಗಳು ಅದನ್ನು ಅಂಗೀಕರಿಸಿಲಿಲ್ಲ. ಸ್ವತಃ ವಕೀಲರಾಗಿರುವ ಬಾಷ ವರ್ತನೆಯನ್ನು ನ್ಯಾಯಮೂರ್ತಿಗಳು ಪದೇ ಪದೇ ಖಂಡಿಸಿದಾಗ ಅಪಾಯ ಅರಿತ ವಕೀಲರು ಹೊರಬಂದು ಸಿರಾಜಿನ್ ಬಾಷಾಗೆ ಪರಾರಿಯಾಗುವಂತೆ ಸೂಚಿಸಿದರು.
ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಾಗ ಆರೋಪಿಗಳು ಹಾಜರಿದ್ದಲ್ಲಿ ತತ್‌ಕ್ಷಣವೇ ಬಂಧನದ ಆದೇಶ ಹೊರಡಿಸುವ ಅಧಿಕಾರ ನ್ಯಾಯಮೂರ್ತಿಗಳಿಗಿದೆ. ಇದನ್ನು ಅರಿತ ಬಾಷ, ಪ್ರಕರಣದ ಸಾಕ್ಷಿದಾರ ಕೆ.ಎನ್. ಬಾಲರಾಜ್ ಅವರೊಂದಿಗೆ ನ್ಯಾಯಾಲಯದಿಂದ ಕಾಲುಕಿತ್ತರು.
ಮುಂದೇನು?: ಸಿರಾಜಿನ್ ಬಾಷಾ ವಿರುದ್ಧ ರಿಜಿಸ್ಟ್ರಾರ್ ಜನರಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ ನಂತರ ಪ್ರಕರಣ ವಿಭಾಗೀಯ ಪೀಠದ ಮುಂದೆ ಬರಲಿದೆ. ಇತರೆ ಕ್ರಿಮಿನ ಲ್ ಪ್ರಕರಣಗಳಂತೆ ಆರೋಪಿ ವಿರುದ್ಧ ಸಮನ್ಸ್ ಜಾರಿಯಾಗಲಿದೆ. ಆರೋಪಿ ನ್ಯಾಯಾಲಯದ ಮುಂದೆ ಹಾಜರಾಗದಿದ್ದಲ್ಲಿ ವಾರಂಟ್ ಜಾರಿಯಾಗುತ್ತದೆ. ನಂತರ ಆರೋಪಿಗಳು ಖುದ್ದು ಹಾಜರಾಗಿ ಜಾಮೀನು ಅರ್ಜಿ ಸಲ್ಲಿಸಬೇಕಾಗುತ್ತದೆ.
ಪ್ರಕರಣವೇನು?
ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಕೀಲ ಸಿರಾಜಿನ್ ಬಾಷ ತಮ್ಮ ವಿರುದ್ಧ ಸಲ್ಲಿಸಿದ್ದ ದೂರಿನ ಬಗ್ಗೆ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸಿರಾಜಿನ್ ಬಾಷ ಮತ್ತು ಅವರ ಪರ ವಕೀಲರು ಕೇವಿಯೆಟ್ ಸಲ್ಲಿಸಿದ್ದು, ಮಧ್ಯಂತರ ಕೋರಿಕೆ ಸಲ್ಲಿಸಿದ್ದ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ನ್ಯಾಯಮೂರ್ತಿಗಳು ವಕೀಲರ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದರು.
ಈ ತಡೆಯಾಜ್ಞೆ ವಿಭಾಗೀಯ ಪೀಠದಲ್ಲಿ ತೆರವುಗೊಂಡ ಬಳಿಕ ಸಿರಾಜಿನ್ ಬಾಷ ಅರ್ಜಿಯ ವಿಚಾರಣೆಯನ್ನು ಬೇರೆ ಪೀಠಕ್ಕೆ ವರ್ಗಾಯಿಸುವಂತೆ ಮಧ್ಯಂತರ ಕೋರಿಕೆ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ನ್ಯಾಯಮೂರ್ತಿಗಳ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು -ಗಲ್ಪ ಕನ್ನಡಿಗ
0 comments:
Post a Comment