PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಅ. : ಒಬ್ಬ ಸಾಮಾನ್ಯ ಪ್ರಜೆಯೂ ಕೂಡ ದೇಶ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಬಲ್ಲನು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಮಹಾತ್ಮಾ ಗಾಂಧೀಜಿ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಬಣ್ಣಿಸಿದರು.
  ಮಹಾತ್ಮಾ ಗಾಂಧೀಜಿಯವರ ೧೪೨ ನೇ ಜಯಂತಿ ಅಂಗವಾಗಿ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.
  ದಾಸ್ಯ, ಅವಹೇಳನ, ಅಪಮಾನ, ದಬ್ಬಾಳಿಕೆಯನ್ನು ಸಹಿಸಿ ನಲುಗುತ್ತಿದ್ದ ಭಾರತೀಯರನ್ನು ಜಡ ನಿದ್ರೆಯಿಂದ ಎಬ್ಬಿಸಿ, ಅವರಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸಿ, ಅಹಿಂಸಾ ಮಾರ್ಗವಾಗಿ ಸತ್ಯಾಗ್ರಹವೆಂಬ ಅಸ್ತ್ರ ಪ್ರಯೋಗಿಸಿ ಬಾರತ ಮಾತೆಯನ್ನು ಗುಲಾಮಗಿರಿಯಿಂದ ಬಿಡಿಸಿ, ಭಾರತೀಯರಿಗೆ ಆತ್ಮಗೌರವ ತಂದು ಕೊಟ್ಟ ಮಹಾನ್ ವ್ಯಕ್ತಿ ಮಹಾತ್ಮ ಗಾಂಧೀಜಿಯವರು.  ಕೇವಲ ಸತ್ಯ ಮತ್ತು ಅಹಿಂಸೆಗಳೆಂಬ ಎರಡು ಆತ್ಮಬಲಗಳಿಂದ ಬ್ರಿಟೀಷರನ್ನು ಮಣಿಸಿ ಜಗತ್ತಿಗೆ ಅಚ್ಚರಿ ಮೂಡಿಸಿದರು.  ಪ್ರಸಕ್ತ ಜಗತ್ತಿನಾದ್ಯಂತ ಕಂಡು ಬರುತ್ತಿರುವ ಹಿಂಸಾ ಚಟುವಟಿಕೆಯನ್ನು ತಹಬಂದಿಗೆ ತರುವ ದಿಸೆಯಲ್ಲಿ ಗಾಂಧಿ ಮಾರ್ಗ ಅತ್ಯಂತ ಸೂಕ್ತವಾಗಿದೆ.  ಮಹಾತ್ಮಾ ಗಾಂಧೀಜಿಯವರು ದೊರಕಿಸಿಕೊಟ್ಟ ಸ್ವಾತಂತ್ರ್ಯ ಭಾರತದಲ್ಲಿ ನಾಗರಿಕ ಸೇವೆ ಸಲ್ಲಿಸುತ್ತಿರುವ ನಾವು, ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು.  ಇದೇ ಮಹಾತ್ಮಾ ಗಾಂಧೀಜಿಯವರಿಗೆ ಗೌರವ ಸಲ್ಲಿಸುವುದಕ್ಕೆ ಏಕೈಕ ಮಾರ್ಗವಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಕರೆ ನೀಡಿದರು.
  ಸಮಾರಂಭದಲ್ಲಿ ಭಾಗವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಟೇಲಿಂಗಾಚಾರಿ ಅವರು ಮಾತನಾಡಿ, ಪ್ರಪಂಚದ ಅನೇಕ ದೇಶಗಳು ಸಾರ್ವಭೌಮತ್ವವನ್ನು ನಾನಾ ಬಗೆಯ ಕ್ರಾಂತಿ, ಹಿಂಸೆ ಮೂಲಕ ಪಡೆದಿವೆ.  ಆದರೆ ಜಗತ್ತಿನಲ್ಲಿ ರಕ್ತಪಾತವಿಲ್ಲದೆ, ಯುದ್ಧ ಮಾಡದೆ, ಶಾಂತಿ ಸತ್ಯಾಗ್ರಹದಿಂದ ಸ್ವಾತಂತ್ರ್ಯ ಪಡೆದ ಏಕೈಕ ದೇಶವೆಂದರೆ ಅದು ಭಾರತ ಮಾತ್ರ.  ಗಾಂಧೀಜಿಯವರಲ್ಲಿದ್ದ ನಿಸ್ವಾರ್ಥ ದೇಶ ಸೇವೆ, ಅನನ್ಯ ರಾಷ್ಟ್ರ ಭಕ್ತಿ, ದೀನ, ದಲಿತರ ಮೇಲಿನ ಅವರ ಸಾಮಾಜಿಕ ಕಳಕಳಿ, ಜನರ ಮೇಲೆ ಇಟ್ಟಿದ್ದ ಪ್ರೀತಿ, ಸತ್ಯ, ಅಹಿಂಸೆಯ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಿದ್ದವರು.  ಅವರ ತತ್ವಗಳನ್ನು ಅಲ್ಪ-ಸ್ವಲ್ಪವಾದರೂ ಜೀವನದಲ್ಲಿ ಅಳವಡಿಸಿಕೊಂಡು ಬಾಳುವುದೇ ಅವರಿಗೆ ನಾವು ಸಲ್ಲಸಬೇಕಾದ ಗೌರವ.  ಸ್ವಾರ್ಥ, ದುರಾಸೆ, ಭ್ರಷ್ಟಾಚಾರಗಳೆಂಬ ಪಿಡುಗುಗಳನ್ನು ತೊಡೆದುಹಾಕಲು ಮಹಾತ್ಮಾ ಗಾಂಧೀಜಿಯವರ ಮಾರ್ಗವನ್ನು ಅನುಸರಿಸಿದಲ್ಲಿ ಮಾತ್ರ ಸಾಧ್ಯವಾಗಲಿದೆ.  ದೇಶದ ಉಜ್ವಲ ಭವಿಷ್ಯಕ್ಕೆ ಸನ್ಮಾರ್ಗದ ಜೀವನ ಅಗತ್ಯ ಎಂದು ಅವರು ನುಡಿದರು.
  ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ಭವನದಲ್ಲಿ ಕಾರ್ಯ ನಿರ್ವಹಿಸುವ ವಿವಿಧ ಕಚೇರಿಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿ ಮಹಾತ್ಮಾ ಗಾಂಧೀಜಿಯವರಿಗೆ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಿದರು.  ಇದೇ ಸಂದರ್ಭದಲ್ಲಿ ಅಂಬಿಕಾ ಭಾಗ್ಯನಗರ ಅವರು ಉತ್ತಮ ಗಾಯನವನ್ನು ನೀಡಿದರು.  ಗಾಯನಕ್ಕೆ ಶ್ರೀನಿವಾಸ ಜೋಷಿ ಅವರು ತಬಲಾ ಸಾಥ್ ನೀಡಿದರು.  ಕೃಷ್ಣಮೂರ್ತಿ ದೇಸಾಯಿ ಅವರು ಕಾರ್ಯಕ್ರಮ ನಿರೂಪಿಸಿದರು.

Advertisement

0 comments:

Post a Comment

 
Top