ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧದ ಜಂತಕಲ್ ಮೈನಿಂಗ್ ಗುತ್ತಿಗೆ ನವೀಕರಣ ಹಾಗೂ ವಿಶ್ವಭಾರತಿ ಹೌಸಿಂಗ್ ಸೊಸೈಟಿ ಸೈಟು ಹಂಚಿಕೆ ಪ್ರಕರಣವನ್ನು ಹೈಕೋರ್ಟ್ ಶುಕ್ರವಾರ ರದ್ದುಗೊಳಿಸುವ ಮೂಲಕ ಎಚ್‌ಡಿಕೆ ದಂಪತಿಗೆ ರಿಲೀಫ್ ಸಿಕ್ಕಂತಾಗಿದೆ.
ವಕೀಲ ವಿನೋದ್ ಕುಮಾರ್ ಎಂಬವರು, ಕುಮಾರಸ್ವಾಮಿ ಮತ್ತು ಪತ್ನಿ ಅನಿತಾಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ವಿನೋದ್ ಕುಮಾರ್ ಅವರು ರಾಜಕೀಯ ಪ್ರೇರಿತವಾಗಿ ದೂರು ಸಲ್ಲಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದಾಗಿ ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ಪೀಠ, ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ದೂರುದಾರ ವಿನೋದ್ ಕುಮಾರ್ ಅವರಿಗೆ 1 ಲಕ್ಷ ರೂಪಾಯಿ ದಂಡ ಕೂಡ ವಿಧಿಸಿದೆ.
ಈ ಅರ್ಜಿಯನ್ನು ಪುರಸ್ಕರಿಸಿದ್ದ ಲೋಕಾಯುಕ್ತ ಕೋರ್ಟ್ ತನಿಖೆಗೆ ಆದೇಶಿಸಿತ್ತು. ಏತನ್ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠ ಎಚ್‌ಡಿಕೆ ದಂಪತಿಗೆ ನಿರೀಕ್ಷಣಾ ಜಾಮೀನು ಕೂಡ ಮಂಜೂರು ಮಾಡಿತ್ತು. ಪ್ರಕರಣದ ವಿಚಾರಣೆ ಲೋಕಾಯುಕ್ತ ಕೋರ್ಟ್‌ನಲ್ಲಿ ಮುಂದುವರಿದಿರುವ ನಡುವೆಯೇ ಹೈಕೋರ್ಟ್ ಎರಡೂ ಪ್ರಕರಣಗಳನ್ನ ರದ್ದುಪಡಿಸಿರುವುದು ದಂಪತಿಗೆ ರಿಲೀಫ್ ಸಿಕ್ಕಿದಂತಾಗಿದೆ.
ಸತ್ಯಕ್ಕೆ ದೊರೆತ ಜಯ-ಕುಮಾರಸ್ವಾಮಿ:
ತಮ್ಮ ವಿರುದ್ಧ ದಾಖಲಾದ ಎರಡೂ ಪ್ರಕರಣಗಳನ್ನು ಹೈಕೋರ್ಟ್ ರದ್ದುಗೊಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದು ಸತ್ಯಕ್ಕೆ ಸಂದ ಜಯವಾಗಿದೆ. ಅಲ್ಲದೇ ನಮಗೆ ಕಾನೂನು ಹೋರಾಟ ನಡೆಸಲು ಮತ್ತಷ್ಟು ನೈತಿಕ ಸ್ಥೈರ್ಯ ಮೂಡಿಸಿದೆ ಎಂದರು.
0 comments:
Post a Comment