PLEASE LOGIN TO KANNADANET.COM FOR REGULAR NEWS-UPDATES


ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅನಕ್ಷರಸ್ಥರೆ ಹೆಚ್ಚಾಗಿರುವ ಭಾರತದಲ್ಲಿ ಚುನಾವಣೆ ಆಯೋಗವು ಆಧುನಿಕ ತಂತ್ರeನ ಬಳಕೆ, ಪಾರದರ್ಶಕ ಚುನಾವಣಾ ಕ್ರಮಗಳಿಂದಾಗಿ ವಿಶ್ವವೇ ಬೆರಗಾಗುವಂತೆ ಚುನಾವಣೆಗಳನ್ನು ನಡೆಸುತ್ತಿರುವುದು ಜಾಗತಿಕ ಮೆಚ್ಚುಗೆ, ಪ್ರಶಂಸೆ, ವಿಶ್ವಾಸಾರ್ಹತೆಗೆ ಪಾತ್ರವಾಗಿದೆ.
 ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಅಗತ್ಯ ಸೌಲಭ್ಯ ಕಲ್ಪಿಸುವುದು ಒಂದು ಸಾಹಸದ ಕೆಲಸ. ಬದಲಾದ ರಾಜಕೀಯ ಸ್ವರೂಪ, ಮತದಾರರ ಮನೋಭಾವ, ತಾಂತ್ರಿಕ ಬದಲಾವಣೆಗೆ ತಕ್ಕಂತೆ ನಿಂiiಮಾವಳಿಗಳನ್ನು ರೂಪಿಸುತ್ತ ಬಂದಿದೆ, ೨೦೦೪ ಕ್ಕಿಂತ ಮೊದಲು ಚುನಾವಣೆಯಲ್ಲಿ ಕಾಗದ ಮತ ಪತ್ರವನ್ನು ಬಳಸಲಾಗುತ್ತಿತ್ತು. ವಿದ್ಯುನ್ಮಾನ ಮತಯಂತ್ರಗಳನ್ನು ಚುನಾವಣಾ ಕಾರ್ಯದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಆಧುನಿಕ ತಂತ್ರeನವನ್ನು ಮತದಾನ ವ್ಯವಸ್ಥೆಯಲ್ಲಿ ಜಾರಿಗೊಳಿಸಿರುವ ಭಾರತದ ಚುನಾವಣಾ ಆಯೋಗದ ಕಾರ್ಯ ಜಗತ್ತಿಗೆ ಮಾದರಿಯಾಗಿದೆ. 
ವಿಶಾಲ ಭೂಪ್ರದೇಶ, ವಿಭಿನ್ನ ವಾತಾವರಣ ಹಾಗೂ ಹೆಚ್ಚಿನ ಪ್ರಮಾಣದ ಅನಕ್ಷರಸ್ಥ ಮತದಾರರಿರುವ ನಮ್ಮ ರಾಷ್ಟ್ರದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡಸುವುದು ಹರಸಾಹಸದ ಕೆಲಸ. ಗುಡ್ಡಗಾಡುಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸುವ ಪರಿಸ್ಥಿತಿ, ತಿರಸ್ಕೃತ ಮತಗಳು, ಅಕ್ರಮ ಮತದಾನದ ಪರಿಸ್ಥಿತಿಯಲ್ಲಿ  ಮುಕ್ತ, ನ್ಯಾಯಸಮ್ಮತ, ಸಮರ್ಪಕ ಚುನಾವಣೆ ನಡೆಸುವಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ.  ಈ ಎಲ್ಲ ಸವಾಲುಗಳಿಗೆ  ಪರಿಹಾರವೆಂಬಂತೆ ಈಗ ಮತಗಟ್ಟೆಗೆ ಬಂದಿದೆ ವಿದ್ಯುನ್ಮಾನ ಮತಯಂತ್ರ. ಜೀವನದ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿರುವ ವಿದ್ಯುನ್ಮಾನ ಸಾಧನಗಳು ಈಗ ಮತಗಟ್ಟೆ ಪ್ರವೇಶಿಸಿದೆ. ಅನಕ್ಷರಸ್ಥ ಮತದಾರರು ಸುಲಭವಾಗಿ ಬಳಸಬಹುದಾದೆ.  ತ್ವರಿತ ಹಾಗೂ ನ್ಯಾಯ ಸಮ್ಮತ ಪಾರದರ್ಶಕ ಚುನಾವಣೆಗೆ ಈ ವಿದ್ಯುನ್ಮಾನ ಮತಯಂತ್ರದ ಬಳಕೆ ಕ್ರಾಂತಿಕಾರಕ ಹೆಜ್ಜೆಯಾಗಿದೆ. 
ಹಿನ್ನೆಲೆ : ನಮ್ಮ ದೇಶದಲ್ಲಿ ೧೯೫೨ ರಿಂದ ೧೯೯೯ರವರೆಗೆ ನಡೆದ ಎಲ್ಲ ಸಾರ್ವತ್ರಿಕ ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ಮತಪತ್ರಗಳ ಮೂಲಕ ಮತದಾನ ಮಾಡುವ ವ್ಯವಸ್ಥೆ ಇತ್ತು. ನಂತರ ನಡೆದ ಕೆಲ ಸಾರ್ವತ್ರಿಕ ಹಾಗೂ ಉಪಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆಯಾದರೂ ೨೦೦೪ರಲ್ಲಿ ಜರುಗಿದ ಲೋಕಸಭಾ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭಾ ಸಾರ್ವತ್ರಿಕ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಯಿತು. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಜರುಗಿದ ೨೦೦೮ರ ವಿಧಾನಸಭಾ ಚುನಾವಣೆ ಹಾಗೂ ೨೦೦೯ ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ಈ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಯಿತು. ದೇಶದಲ್ಲಿ ಮೊಟ್ಟಮೊದಲು ಕೇರಳ ರಾಜ್ಯ ವಿದ್ಯುನ್ಮಾನ ಮತಯಂತ್ರ ಬಳಸಿದ ಕೀರ್ತಿಗೆ ಪಾತ್ರವಾಗಿದೆ.  
 ಸದ್ಯ ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸೆ. ೨೬ ರಂದು ನಡೆಯಲಿದ್ದು, ಮತದಾನ ಪ್ರಕ್ರಿಯೆ ಅಂದು  ಬೆಳಿಗ್ಗೆ ೭ ರಿಂದ ಸಂಜೆ ೫ ದರವರಗೆ ಮತದಾನ ನಡೆಯಲಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ೨೧೦ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಮತಯಂತ್ರಗಳನ್ನು ಬಳಕೆ ಮಾಡುವ ನಿಟ್ಟಿನಲ್ಲಿ ಎಲ್ಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಮತಯಂತ್ರಗಳ ತಾಂತ್ರಿಕ ಪರಿಶೀಲನೆ, ಮತಯಂತ್ರ ಬಳಕೆ ಕುರಿತಂತೆ ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
ಹಕ್ಕು ರಕ್ಷಣೆ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ೧೮ ವರ್ಷ ತುಂಬಿದ ಎಲ್ಲರಿಗೂ ಮತದಾನ ಮಾಡುವ ಹಕ್ಕು ಪ್ರಾಪ್ತವಾಗುತ್ತದೆ. ಇದು ಸಂವಿಧಾನದತ್ತ ಹಕ್ಕಾಗಿದೆ. ಯಾವುದೇ ಒತ್ತಡ, ಆಮಿಷ, ತಂತ್ರಗಳಿಗೆ ಒಳಗಾಗದೆ ನಿರ್ಭಯವಾಗಿ ಮತ ಚಲಾಯಿಸಲು ಭಾರತ ಚುನಾವಣಾ ಆಯೋಗ ಎಲ್ಲಾ ವ್ಯವಸ್ಥೆ ಕೈಗೊಂಡಿದೆ. ಪ್ರತಿ ಮತವು ಮಹತ್ವದ್ದಾಗಿದ್ದು, ಪ್ರತಿ ಮತದಾರನು ತನ್ನ ಮತದಾನದ ಹಕ್ಕಿನಿಂದ ವಂಚಿತವಾಗಬಾರದು ಎಂಬ ಧ್ಯೇಯದಿಂದ ಚುನಾವಣಾ ಆಯೋಗವು ದರ್ಶನ್‌ದಾಸ್ ಎಂಬ ಒಬ್ಬನೇ ಒಬ್ಬ ವ್ಯಕ್ತಿಯ ಸಲುವಾಗಿ ಗುಜರಾತ್‌ನ ಗೀರ್ ಅರಣ್ಯ ಪ್ರದೇಶದಲ್ಲಿ ಒಂದು ಮತಗಟ್ಟೆ ಸ್ಥಾಪಿಸಿದೆ. ಹಾಗೇಯೆ ದಂಪತಿಗಳು ಮಾತ್ರ ಇರುವ ಛತ್ತೀಸ್‌ಗಡದ ಕೋರಿಯಾ ಜಿಲ್ಲೆಯ ಸೋನಾಹತ್ ಕಾಡಿನಲ್ಲಿ ಈ ಎರಡು ಮತದಾರರ ಹಕ್ಕುಚಲಾವಣೆಗೆ ಮತಗಟ್ಟೆ ಸ್ಥಾಪಿಸಿ ಸಂವಿಧಾನದ ಹಕ್ಕನ್ನು ಸಾಮಾನ್ಯನಿಗೆ ದೊರಕಿಸಿ ಕೊಟ್ಟಿರುವುದು ಮಾದರಿಯಾಗಿದೆ. 
ಮತಯಂತ್ರ ಮಾದರಿ : ಎಲೆಕ್ಟ್ರಾನಿಕ್ಸ್ ವೋಟಿಂಗ್ ಮೆಷಿನ್ ಎಂಬ ವಿದ್ಯುನ್ಮಾನ ಮತಯಂತ್ರವು ದೊಡ್ಡದಾದ  ಕ್ಯಾಲ್‌ಕ್ಯೂಲೇಟರ್ ಮಾದರಿಯಲ್ಲಿದೆ. ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಹೈದ್ರಾಬಾದಿನ ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ೧೯೮೯-೯೦ರಲ್ಲಿ ರೂಪಿಸಿದ ಈ ವಿದ್ಯುನ್ಮಾನ ಮತಯಂತ್ರ  ಎರಡು ಘಟಕಗಳನ್ನು ಹೊಂದಿರುತ್ತದೆ. ಮತದಾರರು ತಮ್ಮ ಮತ ಚಲಾಯಿಸಲು ಬಳಸುವ ಮತದಾನ ಘಟಕವೇ (ಬ್ಯಾಲೇಟ್ ಯೂನಿಟ್) ಮೊದಲನೇ ಘಟಕ. ಮತಗಟ್ಟೆಯಲ್ಲಿ ಪ್ರಿಸೈಡಿಂಗ್ ಅಧಿಕಾರಿಗಳ ನಿಯಂತ್ರಣದಲ್ಲಿರುವ ನಿಯಂತ್ರಣ ಘಟಕವೇ (ಕಂಟ್ರೋಲ್ ಯೂನಿಟ್) ಎರಡನೆಯದು. 
ಮತದಾನ ಘಟಕ (ಬ್ಯಾಲೆಟ್ ಯೂನಿಟ್): ಮತದಾನ ಘಟಕದ ನಿರ್ವಹಣೆ ಅತ್ಯಂತ ಸರಳವಾಗಿದೆ. ಆಯತಾಕಾರದ ಹಲಗೆಯ ಮಾದರಿಯಲ್ಲಿರುವ ಈ ಉಪಕರಣದಲ್ಲಿ ಒಟ್ಟು ೧೬ ಉಮೇದುವಾರರ ಹೆಸರು ಮತ್ತು ಅವರಿಗೆ ಚುನಾವಣಾ ಆಯೋಗ ನೀಡಿರುವ ಚಿಹ್ನೆಗಳನ್ನು ದಾಖಲಿಸಿಕೊಳ್ಳಬಹುದು. ಉಮೇದುವಾರರು ೧೬ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಇದರೊಂದಿಗೆ ಇನ್ನೊಂದು ಬ್ಯಾಲೆಟ್ ಯೂನಿಟ್‌ನ್ನು ಸೇರಿಸಿಕೊಳ್ಳಲಾಗುವುದು. ಈ ರೀತಿ ಗರಿಷ್ಟ ಒಟ್ಟು ನಾಲ್ಕು ಬ್ಯಾಲೆಟ್ ಯೂನಿಟ್‌ಗಳನ್ನು (೬೪ ಉಮೇದುವಾರರಿದ್ದಲ್ಲಿ) ಸೇರಿಸಿಕೊಳ್ಳಬಹುದು.  ಈ ಮತಯಂತ್ರಕ್ಕೆ ವಿದ್ಯುತ್ ಬೇಕಿಲ್ಲ. ಆರು ವೋಲ್ಟಿನ ಸಾಮಾನ್ಯ ಬ್ಯಾಟರಿ ಶೆಲ್ ಸಾಕು. ಶೆಲ್ ಮುಗಿದರೆ ಅಥವಾ ಹಾಳಾದರೆ ಮತದಾಖಲೆ ಹೊಂದಿರುವ ಚಿಪ್‌ಗೆ ಯಾವುದೇ ಧಕ್ಕೆ ಆಗುವುದಿಲ್ಲ. ಪ್ರತಿ ಉಮೇದುವಾರನ ಗುರುತಿನ ಬಲಭಾಗದಲ್ಲಿ ಒಂದು ಒತ್ತುಗುಂಡಿ ಇರುತ್ತದೆ. ಮತದಾರರು ಮತಹಾಕಲು ಬಯಸುವ ಅಭ್ಯರ್ಥಿಯ ಚಿಹ್ನೆ (ಗುರುತು) ಪಕ್ಕದಲ್ಲಿರುವ ನೀಲಿ ಗುಂಡಿಯನ್ನು ಒತ್ತಿದರೆ ಸಾಕು. ಮತದಾರರ ಮತವು ಈ ಬ್ಯಾಲೆಟ್ ಯೂನಿಟ್‌ನಲ್ಲಿ ದಾಖಲಾಗುವುದು.
ಕಂಟ್ರೋಲ್ ಯೂನಿಟ್: ಉಮೇದುವಾರರ ಕ್ರಮ ಸಂಖ್ಯೆ ಮತ್ತು ದಾಖಲಾದ ಒಟ್ಟು ಮತಗಳನ್ನು ಅಂಕಿಗಳಲ್ಲಿ ತೋರಿಸುವ ವ್ಯವಸ್ಥೆಯನ್ನು ಈ ನಿಯಂತ್ರಣ ಘಟಕ (ಕಂಟ್ರೋಲ್ ಯೂನಿಟ್)ಹೊಂದಿದೆ. ಕಂಟ್ರೋಲ್ ಯೂನಿಟ್ಟಿನ ಕೆಳಭಾಗದಲ್ಲಿ ಯಾರಿಗೆ ಎಷ್ಟು ಮತಗಳು ಲಭಿಸಿವೆ ಎಂದು ತಿಳಿದುಕೊಳ್ಳಲು ಹಾಗೂ ಮತದಾನ ಪ್ರಾರಂಭವಾಗುವ ಮೊದಲು ಬ್ಯಾಲೆಟ್ ಯೂನಿಟ್‌ನಲ್ಲಿ ಯಾರಿಗೂ ಒಂದು ಮತವೂ ದಾಖಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರತ್ಯೇಕ ಒತ್ತುಗುಂಡಿಗಳಿವೆ. 
ಕಾರ್ಯ ವಿಧಾನ: ಬ್ಯಾಲೆಟ್ ಯೂನಿಟ್‌ನ್ನು ಕಂಟ್ರೋಲ್ ಯೂನಿಟ್‌ದೊಂದಿಗೆ ಸಂಪರ್ಕ ಕಲ್ಪಿಸಿದ ಬಳಿಕ ಮತಯಂತ್ರ ಕಾರ್ಯನಿರ್ವಹಿಸಲು ಸಿದ್ಧವಾಗಿರುತ್ತದೆ. ಮತದಾನ ಪ್ರಾರಂಭವಾಗುವ ಮೊದಲು ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಕರೆದು ಅವರ ಸಮ್ಮುಖದಲ್ಲಿ ಮತಯಂತ್ರದಲ್ಲಿನ ಕ್ಲಿಯರ್ ಗುಂಡಿ ಒತ್ತಿ ತೋರಿಸಲಾಗುತ್ತದೆ. ಅದುವರೆಗೆ ಯಾವ ಚಿಹ್ನೆಗೂ ಮತದಾನವಾಗಿಲ್ಲವೆಂದು ಖಾತರಿಯಾದ ಮೇಲೆ ಪಕ್ಷದ ಪ್ರತಿನಿಧಿಗಳಿಂದ ಪರಿಶೀಲಿಸಿದ ಬಗ್ಗೆ ಹಾಳೆಯಲ್ಲಿ ಸಹಿ ಪಡೆದು ಈ ಹಾಳೆಯನ್ನು ಕ್ಲಿಯರ್ ಗುಂಡಿಯಿರುವ ಭಾಗದಲ್ಲೇ ಮುಚ್ಚಿಟ್ಟು ಸೀಲ್ ಮಾಡಿದ ನಂತರ ಮತದಾನ ಮಾಡುವ ಪ್ರಕ್ರಿಯೆ ಪ್ರಾರಂಭವಾಗುವುದು. 
ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಅಥವಾ ಭಾರತ ಚುನಾವಣಾ ಆಯೋಗವು ಸೂಚಿಸಿದ  ೨೧ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಪರಿಶೀಲಿಸಿದ ನಂತರ ನೋಂದಣಿ ಪುಸ್ತಕದಲ್ಲಿ ಸಹಿ ಅಥವಾ ಹೆಬ್ಬೆಟ್ಟು ಒತ್ತಿಸಿಕೊಂಡು ಅವರನ್ನು ಬ್ಯಾಲೆಟ್ ಯೂನಿಟ್ ಇರುವ ಸ್ಥಳಕ್ಕೆ ಕಳುಹಿಸಲಾಗುವುದು. ಮತಗಟ್ಟೆ ಅಧಿಕಾರಿ ತನ್ನ ಬಳಿಯಿರುವ ಕಂಟ್ರೋಲ್ ಯೂನಿಟ್‌ದಲ್ಲಿ ವೋಟ್ ಎಂಬ ಗುಂಡಿ ಒತ್ತಿದ ಕೂಡಲೇ ಬ್ಯಾಲೆಟ್ ಯೂನಿಟ್‌ನಲ್ಲಿ ರೆಡಿ ಎಂದು ಸೂಚಿಸುವ ಹಸಿರು ದೀಪ ಉರಿಯುವುದು. ಮತದಾರರು ಮತಹಾಕಲು ಬ್ಯಾಲೆಟ್ ಯೂನಿಟ್ ಇರುವ ವಿಭಾಗಕ್ಕೆ (ಕಂಪಾರ್ಟ್‌ಮೆಂಟ್) ಹೋದ ಕೂಡಲೇ ಅಲ್ಲಿರುವ ಮತದಾನ ಯಂತ್ರ (ಬ್ಯಾಲೆಟ್ ಯೂನಿಟ್) ದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಮೇಲ್ಭಾಗದಲ್ಲಿ ಹಸಿರು ದೀಪ ಉರಿಯುತ್ತಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಹಸಿರು ದೀಪ ಉರಿಯುತ್ತಿದ್ದಲ್ಲಿ ಆ ವಿದ್ಯುನ್ಮಾನ ಯಂತ್ರ ಸುಸ್ಥಿಯಲ್ಲಿದ್ದು, ಮತಚಲಾವಣೆಗೆ ಸಿದ್ಧವಾಗಿದೆ ಎಂದು ತಿಳಿಯಬೇಕು. ನಂತರ ತಮಗೆ ಬೇಕಾದ ಅಭ್ಯರ್ಥಿಯ ಹೆಸರಿನ ಮುಂದಿರುವ ಗುರುತಿನ ಚಿತ್ರದೆದುರಿನ ನೀಲಿ ಗುಂಡಿಯನ್ನು ಒತ್ತಬೇಕು. ನೀಲಿ ಗುಂಡಿ ಒತ್ತಿದ ಕೂಡಲೇ ಹಸಿರು ದೀಪ ಆರಿಹೋಗಿ   ಮತದಾರ ಆಯ್ಕೆ ಮಾಡಿದ ಗುರುತಿನ ಬಲಭಾಗದಲ್ಲಿ ಕೆಂಪು ದೀಪ ಉರಿಯುವುದು. ನಂತರ ೧೦ ಸೆಕೆಂಡುಗಳ ಕಾಲ  ಬೀಪ್ ಎಂಬ ಶಬ್ದ ಕೇಳಿಬರುವುದು. ಕೆಂಪು ದೀಪ ಆರಿಹೋಗಿ ಬೀಪ್ ಶಬ್ದವೂ  ನಿಂತುಹೋದರೆ, ಆಗ  ಮತ ಚಲಾವಣೆಯಾಗಿದೆ ಎಂದು ತಿಳಿಯಬೇಕು. ಬೀಪ್ ಶಬ್ದ ಬಾರದಿದ್ದಲ್ಲಿ ಕೂಡಲೇ ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಬೇಕು. ನಂತರ ಸರದಿಯಂತೆ ಮತದಾರರು  ಮತದಾನ ಮಾಡಲು ಹೋಗಬಹುದು. ಒಬ್ಬ ಮತದಾರ ಎಷ್ಟೇ ಗುಂಡಿಗಳನ್ನು ಒತ್ತಿದರೂ ದಾಖಲಾಗುವುದು ಒಂದೇ ಒಂದು ಮತ ಮಾತ್ರ.
ಉಪಯೋಗ : ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಂಟ್ರೋಲ್ ಯೂನಿಟ್‌ನ್ನು ಮಾತ್ರ ಮತ ಎಣಿಕೆ ಕೇಂದ್ರಗಳಿಗೆ ಕೊಂಡೊಯ್ದರೆ ಸಾಕು. ಮತಗಳನ್ನು ತ್ವರಿತವಾಗಿ ಎಣಿಕೆ ಮಾಡಬಹುದು. ಸಾಮಾನ್ಯವಾಗಿ ಮತ ಚೀಟಿಗಳಂತೆ ಕಂಟ್ರೋಲ್ ಯೂನಿಟ್‌ಗಳನ್ನು ಸಹ ೩ ವರ್ಷಗಳಿಗೆ ಭದ್ರಪಡಿಸಬಹುದು. ವಿದ್ಯುನ್ಮಾನ ಮತಯಂತ್ರವು ಅನಕ್ಷರಸ್ಥ ಮತದಾರರಿಗೆ ಒಂದು ವರದಾನವಾಗಿದೆ. ಉಮೇದುವಾರನ ಚಿಹ್ನೆಯ ಪಕ್ಕದಲ್ಲಿರುವ ನೀಲಿ ಗುಂಡಿ ಒತ್ತಲು ಯಾರಿಗೂ ಕಷ್ಟವಾಗದು. ಒಬ್ಬರಿಗೆ ಒಂದೇ ಒಂದು ಮತ ಚಲಾಯಿಸಲು ಅವಕಾಶವಿರುವುದರಿಂದ ಅಕ್ರಮ ಮತದಾನಕ್ಕೆ ಹಾಗೂ ತಿರಸ್ಕೃತ ಮತಗಳಿಗೆ ಅವಕಾಶವಿರುವುದಿಲ್ಲ. ಮುಕ್ತ , ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನ ಕಾರ್ಯಕ್ಕೆ ಈ ವಿದ್ಯುನ್ಮಾನ ಮತಯಂತ್ರಗಳು ನಂಬಿಕೆಗೆ ಅರ್ಹವಾಗಿರುತ್ತವೆ. ಈ ಕಾರಣದಿಂದಲೇ ಭಾರತೀಯ ಕೋಟ್ಯಾಂತರ ಮತದಾರರ ಪ್ರಶಂಸೆಗೆ ಭಾಜನವಾಗಿರುವ ಭಾರತ ಚುನಾವಣಾ ಪದ್ದತಿ ವಿಶ್ವದ ಅಗ್ರ ಪಂಕ್ತಿಯ ರಾಷ್ಟ್ರಗಳ ಮೆಚ್ಚುಗೆಗೆ ಪಾತ್ರವಾಗಿದೆ. 
                                                                       --     ತುಕಾರಾಂ ರಾವ್ ಬಿ.ವಿ.
                                                                                ಜಿಲ್ಲಾ ವಾರ್ತಾಧಿಕಾರಿ,
                                                                              ವಾರ್ತಾ ಇಲಾಖೆ, ಕೊಪ್ಪಳ

Advertisement

0 comments:

Post a Comment

 
Top