ಕೊಪ್ಪಳ, ಸೆ.25: ಸೋಮವಾರ ನಡೆಯಲಿರುವ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ. ನಾಳೆ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ನಡೆಯಲಿರುವ ಮತದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡಾ ಏರ್ಪಡಿಸಲಾಗಿದೆ. ಚುನಾವಣೆಗೆ ಬೂತ್ ಮಟ್ಟದ ಅಧಿಕಾರಿಗಳು, ಮತಗಟ್ಟೆಯ ಸಿಬ್ಬಂದಿ ಈಗಾಗಲೇ ತೆರಳಿದ್ದು, ಮತದಾನ ಪ್ರಕ್ರಿಯೆಗೆ ಸಿದ್ಧತೆ ನಡೆಸಿದ್ದಾರೆ.
ಮತದಾನ ಶಾಂತಿಯುತವಾಗಿ ನಡೆಯುವಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ನಾಳೆ ನಡೆಯಲಿರುವ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಅಂತಿಮ ತೆರೆ ಬಿದ್ದ ಹಿನ್ನೆಲೆಯಲ್ಲಿ ಇಂದು ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಅಂತಿಮ ಪ್ರಚಾರದ ಕಸರತ್ತು ನಡೆಸಿದರು.
ಘಟಾನುಘಟಿ ನಾಯಕರೆಲ್ಲರೂ ಕ್ಷೇತ್ರ ಬಿಟ್ಟು ತೆರಳಿರುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ, ಕಾಂಗ್ರೆಸ್‌ನ ಬಸವರಾಜ ಹಿಟ್ನಾಳ್ ಹಾಗೂ ಜೆಡಿಎಸ್‌ನ ಪ್ರದೀಪ್ ಗೌಡ ಬೀದಿ ಬೀದಿಯಲ್ಲಿ ಜನರ ಮನೆಗೆ ತೆರಳಿ ಮತ ಯಾಚಿಸಿದರು.
ಮತದಾರರ ವಿವರ: ಕೊಪ್ಪಳ ಕ್ಷೇತ್ರದಲ್ಲಿ ಒಟ್ಟು 1,88,196 ಮತದಾರರಿದ್ದಾರೆ. ಈ ಪೈಕಿ 95,467 ಪುರುಷ ಮತದಾರರು ಹಾಗೂ 92,729 ಮಹಿಳಾ ಮತದಾರರಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಒಟ್ಟು 924 ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಅವರು ತಮ್ಮ ತಮ್ಮ ಮತಗಟ್ಟೆಯತ್ತ ತೆರಳಿ ಸಿದ್ಧತೆ ನಡೆಸಿದ್ದಾರೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿರುವ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.
14 ಮಂದಿ ಅಭ್ಯರ್ಥಿಗಳು ಕಣದಲ್ಲಿ: ಚುನಾವಣಾ ಕಣದಲ್ಲಿ ಒಟ್ಟು 19 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಕರಡಿ ಸಂಗಣ್ಣ(ಬಿಜೆಪಿ), ಪ್ರದೀಪ್ ಗೌಡ(ಜೆಡಿಎಸ್), ಬಸವರಾಜ ಹಿಟ್ನಾಳ್(ಕಾಂಗ್ರೆಸ್), ಶರಣಪ್ಪ ಗೌಡ(ಆರ್‌ಪಿಐ), ಎಹಸಾನುಲ್ಲಾ ಪಟೇಲ್(ಪಕ್ಷೇತರ), ನಿರ್ಮಲ ಮಲ್ಲಿಕಾರ್ಜುನ(ಪ), ಕರಡಿ ಬಸವರಾಜ(ಪ), ಮನ್ಸೂರ್ ಬಾಷಾ(ಪ), ಕರಾಟೆ ವೌನೇಶ್(ಪ), ಯಮನೂರಪ್ಪ ಮರಿಯಪ್ಪ(ಪ), ರಾಮುಲು(ಪ), ವಿಠ್ಠಪ್ಪ ಗೋರಂಟ್ಲಿ(ಪ), ಸಣ್ಣ ವೌಲಸಾಬ(ಪ) ಹಾಗೂ ಹಿರೇಮಠ(ಪ).
ಮತಗಟ್ಟೆ ವಿವರ: ಕೊಪ್ಪಳ ಉಪ ಚುನಾವಣೆಗೆ ಒಟ್ಟು 210 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಆ ಪೈಕಿ 94 ಅತಿಸೂಕ್ಷ್ಮ, 65 ಸೂಕ್ಷ್ಮ ಹಾಗೂ 51 ಸಾಮಾನ್ಯ ಮತಗಟ್ಟೆಗಳು ಎಂದು ಗುರುತಿಸಲಾಗಿದೆ ಎಂದು ಚುನಾವಣಾಧಿಕಾರಿ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.
ಮತಗಟ್ಟೆ ಅಧಿಕಾರಿ ಸೇರಿದಂತೆ ಒಟ್ಟು 1050 ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಅವರು ವಿವರ ನೀಡಿದ್ದು, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್
ಚುನಾವಣೆಯ ಹಿನ್ನೆಲೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ್ ತಿಳಿಸಿದ್ದಾರೆ.
ಕೊಪ್ಪಳ ವಿಧಾನಸಭಾ ಕ್ಷೇತ್ರದಾದ್ಯಂತ ಒಟ್ಟು 1200 ಮಂದಿ ಹೆಡ್ ಕಾನ್‌ಸ್ಟೇಬಲ್ಸ್ ಮತ್ತು ಕಾನ್‌ಸ್ಟೇಬಲ್ಸ್, 4 ಡಿವೈಎಸ್ಪಿ, 14 ಸರ್ಕಲ್ ಇನ್ಸ್‌ಪೆಕ್ಟರ್, 35 ಸಬ್‌ಇನ್ಸ್‌ಪೆಕ್ಟರ್, 64 ಎಎಸ್‌ಐ, 500 ಹೋಮ್‌ಗಾರ್ಡ್ಸ್, 18 ಸಶಸ್ತ್ರ ಮೀಸಲು ಪಡೆಯ ತುಕಡಿಗಳನ್ನು ಚುನಾವಣಾ ಬಂದೋಬಸ್ತ್‌ಗಾಗಿ ನೇಮಿಸಲಾಗಿದೆ.
ಅತಿ ಸೂಕ್ಷ್ಮ ಪ್ರದೇಶದಲ್ಲಿ ಒಬ್ಬ ಹೆಡ್‌ಕಾನ್‌ಸ್ಟೇಬಲ್, ನಾಲ್ಕು ಮಂದಿ ಕಾನ್‌ಸ್ಟೇಬಲ್, ಇಬ್ಬರು ಹೋಮ್‌ಗಾರ್ಡ್ಸ್‌ಗಳನ್ನು ನೇಮಿಸಿದರೆ, ಸೂಕ್ಷ್ಮ ಪ್ರದೇಶದಲ್ಲಿ ಒಬ್ಬ ಹೆಡ್‌ಕಾನ್‌ಸ್ಟೇಬಲ್, ಮೂವರು ಪೊಲೀಸ್ ಪೇದೆಗಳನ್ನು ಹಾಗೂ ಇಬ್ಬರು ಹೋಮ್‌ಗಾರ್ಡ್ಸ್‌ಗಳನ್ನು ನೇಮಸಲಾಗಿದೆ. ಸಾಮಾನ್ಯ ಮತಗಟ್ಟೆಯಲ್ಲಿ ಒಬ್ಬ ಹೆಡ್‌ಕಾನ್‌ಸ್ಟೇಬಲ್, ತಲಾ ಇಬ್ಬರು ಪೇದೆ ಹಾಗೂ ಹೋಮ್‌ಗಾರ್ಡ್ಸ್‌ಗಳನ್ನು ನೇಮಿಸಲಾಗಿದೆ ಎಂದು ಎಸ್ಪಿ ಪ್ರಕಾಶ್ ವಿವರ ನೀಡಿದ್ದಾರೆ.
. ಕರಡಿ ಸಂಗಣ್ಣ(ಬಿಜೆಪಿ), ಪ್ರದೀಪ್ ಗೌಡ(ಜೆಡಿಎಸ್), ಬಸವರಾಜ ಹಿಟ್ನಾಳ್(ಕಾಂಗ್ರೆಸ್) ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
. ಚುನಾವಣೆಗೆ 924 ಮಂದಿ ಸಿಬ್ಬಂದಿಗಳ ನೇಮಕ
. ಶಾಂತಿಯುತ ಚುನಾವಣೆಗಾಗಿ 2 ಸಾವಿರಕ್ಕೆ ಹೆಚ್ಚು ಮಂದಿ ಪೊಲೀಸರ ನೇಮಕ
. ಒಟ್ಟು ಮತದಾರರ ಸಂಖ್ಯೆ 1,88,196(95,467 ಪುರುಷರು, 92,729 ಮಹಿಳಾ)
. 210 ಮತಗಟ್ಟೆಗಳ ಸ್ಥಾಪನೆ( 94 ಅತಿಸೂಕ್ಷ್ಮ, 65 ಸೂಕ್ಷ್ಮ ಹಾಗೂ 51 ಸಾಮಾನ್ಯ)
0 comments:
Post a Comment