ಶಿವಮೊಗ್ಗ, : ಯಡಿಯೂರಪ್ಪನಾಯಕತ್ವದಿಂದಲೇ ಕೊಪ್ಪಳ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ವಿಜಯ ಸಾಧಿಸಲು ಸಾಧ್ಯವಾಯಿತೆಂಬ ಅಬಕಾರಿ ಸಚಿವ ರೇಣುಕಾಚಾರ್ಯರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ
ಕೆ.ಎಸ್. ಈಶ್ವರಪ್ಪಸಿಡಿಮಿಡಿಗೊಂಡಿದ್ದಾರೆ. ‘‘ಪಕ್ಷದ ಚೌಕಟ್ಟು ಮೀರದಂತೆ ಈ ಹಿಂದೆಯೇ ಸ್ಪಷ್ಟ ಸೂಚನೆಯನ್ನು ಅವರಿಗೆ ನೀಡಲಾಗಿದೆ. ಆದರೆ ಅವರು ಇನ್ನೂ ತಮ್ಮ ಕೆಟ್ಟ ಚಾಳಿ ಬಿಟ್ಟಿಲ್ಲ. ಹದ್ದುಮೀರಿದ ವರ್ತನೆ ಮುಂದುವರಿಸಿದ್ದಾರೆ.
ಅವರಿಗೆ ಯಾವ ಭಾಷೆಯಲ್ಲಿ ಹೇಳಬೇಕೋ, ಆ ಭಾಷೆಯಲ್ಲಿ ಹೇಳುತ್ತೇನೆ’’ ಎಂದು ರೇಣುಕಾಚಾರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊಪ್ಪಳ ಚುನಾವಣೆಯಲ್ಲಿ ಬಿಜೆಪಿ ವಿಜಯಕ್ಕೆ ಸಾಮೂಹಿಕ ನಾಯಕತ್ವ ಕಾರಣ. ಪಕ್ಷದ ವರಿಷ್ಠರ ಮಾರ್ಗದರ್ಶನದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಜಯ ಸಾಧಿಸಿದ್ದೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಸರಕಾರದ ಅಭಿವೃದ್ಧಿ ಪರ ಆಡಳಿತವನ್ನು ಮೆಚ್ಚಿ ಕೊಪ್ಪಳದ ಜನತೆ ಬಿಜೆಪಿಗೆ ಮತ ಹಾಕಿದ್ದಾರೆ. ಪ್ರತಿಪಕ್ಷಗಳಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು. ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ. ಪಕ್ಷದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇವೆಲ್ಲ ಮಾಧ್ಯಮಗಳ ಸೃಷ್ಟಿಯಾಗಿದೆ. ನಾವೆಲ್ಲ ಒಟ್ಟಾಗಿಯೇ ಇದ್ದೇವೆ ಎಂದು ಈಶ್ವರಪ್ಪ ತಿಳಿಸಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆದು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಈ ನಿಟ್ಟಿನಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವಿಭಾಗೀಯ ಮಟ್ಟದ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಪಕ್ಷದ ವರಿಷ್ಠ ಲಾಲ್‌ಕೃಷ್ಣ ಅಡ್ವಾಣಿಯವರ ರಥಯಾತ್ರೆ ಅಕ್ಟೋಬರ್ 30ರಂದು ರಾಜ್ಯಕ್ಕೆ ಆಗಮಿಸಲಿದೆ. ಸುಮಾರು ಮೂರು ದಿನಗಳ ಕಾಲ ರಥಯಾತ್ರೆ ಸಂಚರಿಸಲಿದೆ. ಬೆಂಗಳೂರು, ಮಂಗಳೂರು ಮೊದಲಾದೆಡೆ ಬಹಿರಂಗ ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ಸರಕಾರಕ್ಕೆ ಸಲ್ಲಿಸಿರುವ ವರದಿಯ ಪರಿಶೀಲನೆಯನ್ನು ರಾಜ್ಯದ ಅಡ್ವೊಕೇಟ್ ಜನರಲ್ ಹಾಗೂ ಮುಖ್ಯ ಕಾರ್ಯದರ್ಶಿಗಳು ನಡೆಸುತ್ತಿದ್ದಾರೆ. ಅವರು ಸಲ್ಲಿಸುವ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಚಂಡಿಕಾಯಾಗ: ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಈಶ್ವರಪ್ಪ ಅವರು ಕುಟುಂಬ ಸದಸ್ಯರೊಂದಿಗೆ ಇಂದು ಚಂಡಿಕಾ ಯಾಗವನ್ನು ನಡೆಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ, ಪುತ್ರರು ಉಪಸ್ಥಿತರಿದ್ದರು.
ಕೊಪ್ಪಳ ಚುನಾವಣೆಯಲ್ಲಿ ಬಿಜೆಪಿ ವಿಜಯಕ್ಕೆ ಸಾಮೂಹಿಕ ನಾಯಕತ್ವ ಕಾರಣ. ರೇಣುಕಾಚಾರ್ಯರಿಗೆ ಯಾವ ಭಾಷೆಯಲ್ಲಿ ಹೇಳಬೇಕೋ, ಆ ಭಾಷೆಯಲ್ಲಿ (ಬುದ್ಧಿ) ಹೇಳುತ್ತೇನೆ
0 comments:
Post a Comment