PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಕೊಪ್ಪಳ ವಿಧಾನ ಸಭೆ ಉಪ ಚುನಾವಣೆಯಲ್ಲಿ ಮತಗಳ ಆಧಾರದಲ್ಲಿ ಮೇಲ್ನೋಟಕ್ಕೆ ಕಮಲ ಪಕ್ಷ ಜಯ ಗಳಿಸಿದ್ದರೂ, ವಾಸ್ತವದಲ್ಲಿ ಇಲ್ಲಿ ವ್ಯಕ್ತಿಗತವಾಗಿ ಗೆದ್ದಿದ್ದು ಕರಡಿ ಸಂಗಣ್ಣ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.
ಚುನಾವಣಾ ನಾಯಕತ್ವ ಯಾರ ಹೆಗಲಿಗೆ ಎಂಬ ಜಿಜ್ಞಾಸೆಯಲ್ಲೇ ಕರಡಿ ಸಂಗಣ್ಣರನ್ನು ಗೆಲ್ಲಿಸಲು ಅಖಾಡಕ್ಕಿಳಿದ ಬಿಜೆಪಿ ನಾಯಕರು ಈಗ ಚುನಾವಣೆ ಮುಗಿದು ಅಧಿಕೃತ -ಲಿತಾಂಶ ಘೋಷಣೆ ಆದ ಮೇಲೆಯೂ `ಚುನಾವಣಾ ನಾಯಕತ್ವದ' ಬಗ್ಗೆ ವಿಶ್ಲೇಷಣೆ ಮುಂದುವರೆಸಿದ್ದಾರೆ. ಗೃಹ ಸಚಿವ ಅಶೋಕ್ ಗೆಲುವನ್ನು ಸಾಮೂಹಿಕ ನಾಯಕತ್ವಕ್ಕೆ ಸಮರ್ಪಿಸಿದರೆ, ಗೆಲುವಿನ ರೂವಾರಿ ಮಾಜಿ. ಸಿಎಂ ಯಡಿಯೂರಪ್ಪ ಎಂದು ಸಚಿವರಾದ ರೇಣುಕಾಚಾರ್ಯ ಹಾಗೂ ವರ್ತೂರ್ ಪ್ರಕಾಶ ತಮ್ಮ ಎಂದಿನ `ವ್ಯಕ್ತಿನಿಷ್ಠೆ' ಯನ್ನು ತೋರ್ಪಡಿಸಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ಕಳಂಕ ಹೊತ್ತು ಸಿಎಂ ಕುರ್ಚಿಯಿಂದ ಕೆಳಗಿಳಿದು ಮೈತುಂಬಾ ಕೋರ್ಟ್ ಖಟ್ಲೆಗಳನ್ನು ವೆತ್ತಿಕೊಂಡು ಬಂಧನ ಭೀತಿಯಲ್ಲಿ ದಿನ ಕಳೆಯುತ್ತ ರಾಜಕೀಯವಾಗಿ ಜರ್ಜರಿತರಾಗಿದ್ದ ಯಡಿಯೂರಪ್ಪ, ಪಕ್ಷದ ತಿರಸ್ಕಾರದ ಜೊತೆಗೆ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಕೇಂದ್ರ ನಾಯಕ ಅನಂತ್‌ಕುಮಾರ್ ಮತ್ತಿರರ ತೀವ್ರ ವಿರೋಧದ ನಡುವೆಯೂ ಕೊಪ್ಪಳ ವಿಧಾನಸಭೆ ಉಪ ಚುನಾವಣೆಯ ಸ್ವಯಂ ನಾಯಕತ್ವವನ್ನು ವಹಿಸಿಕೊಂಡು `ರಾಜಕೀಯ ಪುನರ್‌ನೆಲೆ' ಕಂಡು ಕೊಳ್ಳಲು ಹೆಣೆದಿದ್ದ ತಂತ್ರ -ಲಿಸಿದೆ.
ಅಧಿಕಾರಕ್ಕೆ ಬಂದಾಗಿನಿಂದ ಅಸ್ಥಿರತೆ ಎದುರಿಸುತ್ತಾ, ಭಿನ್ನಮತ, ಹಗರಣಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಹೆಣಗುತ್ತಿರುವ ಬಿಜೆಪಿ ಸರಕಾರದಲ್ಲಿ `ಅಭಿವೃದ್ದಿಯ ಮಹಾದಾಸೆ' ಇಟ್ಟುಕೊಂಡು ಜೆಡಿಎಸ್‌ಗೆ ರಾಜಿನಾಮೆ ನೀಡಿ ಕೇಸರಿ ಪಕ್ಷಕ್ಕೆ ಜಾರಿದ ಕರಡಿ ಸಂಗಣ್ಣ ೬ ತಿಂಗಳ ರಾಜಕೀಯ ವಿರಾಮದ ನಂತರ ಮತ್ತೊಮ್ಮೆ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ. ಇದು ಅವರ ನಾಲ್ಕನೆ ಪ್ರವೇಶ ಆಗಿದ್ದು, ಕೊಪ್ಪಳದಲ್ಲಿ ಪ್ರಥಮ ಬಾರಿ ಕಮಲ ಅರಳಲು ಕಾರಣರಾಗಿದ್ದಾರೆ.
ಕರಡಿ ಸಂಗಣ್ಣ ಅವರ ಈ ಗೆಲುವು ಪಕ್ಷದ ಪ್ರಭಾವ ಅಥವಾ ಸರಕಾರದ ಜನಪರತೆಗಿಂತ ಹೆಚ್ಚಾಗಿ ಅವರು ಕಳೆದ ಮೂರು ದಶಕಗಳಿಂದ ಕ್ಷೇತ್ರದಲ್ಲಿ ಕಾಪಾಡಿಕೊಂಡು ಬಂದಿರುವ ವೈಯುಕ್ತಿಕ ವರ್ಚಸ್ಸು ಹಾಗೂ ಮೂಡಿಸಿದ ಛಾಪಿಗೆ ಸಲ್ಲುತ್ತದೆ. ೧೯೯೪ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ, ೧೯೯೯ರಲ್ಲಿ ಜೆಡಿಯುನಿಂದ ಸ್ಪರ್ಧಿಸಿ ಜಯಗಳಿಸಿದ್ದರು. ೨೦೦೪ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ತಮ್ಮ ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್‌ನ ಬಸವರಾಜ್ ಹಿಟ್ನಾಳರಿಂದ ಸೋಲು ಕಂಡು ಪಾಠ ಕಲಿತ ಕರಡಿ, ೨೦೦೮ರಲ್ಲಿ ಜೆಡಿಎಸ್‌ನಿಂದ ವಿಧಾನಸಭೆ ಪ್ರವೇಶಿಸಿದರು.
ವೈಯುಕ್ತಿಕ ಓಟ್ ಬ್ಯಾಂಕ್: ಕೊಪ್ಪಳ ಕ್ಷೇತ್ರದಲ್ಲಿ ಕರಡಿ ಸಂಗಣ್ಣ ಅವರಿಗಿರುವ ವೈಯುಕ್ತಿಕ `ಓಟ್ ಬ್ಯಾಂಕ್' ಅವರ ಈ ಗೆಲುವಿಗೆ ಪ್ರಮುಖ ಕಾರಣ. ೨೦೦೮ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕರಡಿ ಸಂಗಣ್ಣ ಶೇ. ೪೦.೫೭ರಂತೆ ೪೮, ೩೭೨ ಮತಗಳನ್ನು ಪಡೆದಿದ್ದರು. ಅದೇ ರೀತಿ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ೬೬, ೪೦೫ ಮತಗಳನ್ನು ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ೨೦೦೮ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅಂದಾನಪ್ಪ ಅಗಡಿ ಪಡೆದ ಮತಗಳು ಕೇಚಲ ೨೨ ಸಾವಿರ (ಶೇ.೧೯.೧೬). ೨೦೦೮ರಲ್ಲಿ ೩೮ ಸಾವಿರ ಮತಗಳನ್ನು ಪಡೆದಿದ್ದ ಕಾಂಗ್ರೆಸ್‌ನ ಬಸವರಾಜ್ ಹಿಟ್ನಾಳ್ ಈ ಬಾರಿ ೪೭ ಸಾವಿರ ಮತಗಳನ್ನು ಪಡೆಯುವಲ್ಲಿ ಯಶ್ವಸಿಯಾಗಿದ್ದಾರೆ. ಜೆಡಿಎಸ್‌ನ ಪ್ರದೀಪಗೌಡ ಪಾಟೀಲ್ ೨೦ ಸಾವಿರ ಮತಗಳನ್ನು ಪಡೆದಿದ್ದಾರೆ.
ಹಲವು ದಾಖಲೆಗಳು: ಕರಡಿ ಸಂಗಣ್ಣ ಅವರ ಈ ಗೆಲವು ಹಲವು ದಾಖಲೆಗಳು ಮತ್ತು ಅನೇಕ ಪ್ರಥಮಗಳಿಗೆ ಕಾರಣವಾಗಿದೆ. ೧೯೭೨ ರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ನಿರಂತರ ಸ್ಪರ್ಧಿಸುತ್ತಾ ಬಂದಿದ್ದರೂ, ಜಯದ ಹೂಮಾಲೆ ಹಾಕಿಕೊಂಡಿದ್ದು ಇದೇ ಮೊದಲು. ಕರಡಿ ಸಂಗಣ್ಣ ಕೊಪ್ಪಳದಿಂದ ಆಯ್ಕೆಯಾದ ಮೊದಲ ಬಿಜೆಪಿ ಶಾಸಕ. 
ಕಳೆದ ಆರು ಚುನಾವಣೆಗಳಲ್ಲಿ ಆಡಳಿತ ಪಕ್ಷಕ್ಕೆ ವಿರುದ್ಧವಾಗಿ ಈ ಕ್ಷೇತ್ರದಲ್ಲಿ ಜನ ಮತ ಚಲಾಯಿಸಿರುವುದು ವಿಶೇಷ. ಇದೇ ಮೊದಲ ಬಾರಿ ಆಡಳಿತಾರೂಢ ಪಕ್ಷಕ್ಕೆ ಜನ ಮತ ನೀಡಿದ್ದಾರೆ. ೧೯೮೯ರಲ್ಲಿ ಎಂ.ಬಿ. ದಿವಟರ್ ಪಕ್ಷೇತರರಾಗಿ ಗೆದ್ದಾಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅದೇ ರೀತಿ ೧೯೯೪ರಲ್ಲಿ ಕರಡಿ ಸಂಗಣ್ಣ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದಾಗ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಿತು. ೧೯೯೯ರಲ್ಲಿ ಇದೇ ಕರಡಿ ಸಂಗಣ್ಣ ಜೆಡಿಯುನಿಂದ ಗೆದ್ದಾಗ ಪುನಃ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತು. ೨೦೦೮ರಲ್ಲಿ ಕರಡಿ ಸಂಗಣ್ಣ ಜೆಡಿಎಸ್‌ನಿಂದ ಚುನಾಯಿತರಾದಾಗ ಬಿಜೆಪಿ ಸರಕಾರ ರಚನೆ ಮಾಡಿತು.

Advertisement

0 comments:

Post a Comment

 
Top