ಕೊಪ್ಪಳ ಸೆ ): ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯ ಸೆ. ೨೯ ರಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಯಲಿದ್ದು, ಈಗಾಗಲೆ ಜಿಲ್ಲಾಡಳಿತ ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ಜರುಗಿಸಲು ಸಕಲ ರೀತಿಯಲ್ಲಿ ಸಜ್ಜಾಗಿದೆ.
ಉಪಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೆ ಮತದಾನ ಪ್ರಕ್ರಿಯೆ ಪೂರ್ಣಗೊಂಡು, ಎಲ್ಲ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಭ್ಯರ್ಥಿಗಳ ಸೋಲು, ಗೆಲುವಿನ ಲೆಕ್ಕಾಚಾರಗಳಿಗೆ ಸೆ. ೨೯ ರಂದು ಮಧ್ಯಾಹ್ನದ ವೇಳೆಗೆ ತೆರೆ ಬೀಳಲಿದೆ. ಮತ ಎಣಿಕೆ ಕಾರ್ಯಕ್ಕಾಗಿ ಕಾಲೇಜಿನಲ್ಲಿ ಎರಡು ಎಣಿಕಾ ಕೊಠಡಿಗಳನ್ನು ಸಿದ್ಧಗೊಳಿಸಲಾಗಿದ್ದು, ಪ್ರತಿ ಕೊಠಡಿಗೆ ೭ ಟೇಬಲ್‌ಗಳಂತೆ ಒಟ್ಟು ೧೪ ಟೇಬಲ್‌ಗಳನ್ನು ಸಿದ್ಧಪಡಿಸಲಾಗಿದೆ. ಈ ಬಾರಿಯ ವಿಶೇಷವೆಂದರೆ ರಾಜ್ಯದ ಚುನಾವಣಾ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಪ್ರತಿ ಟೇಬಲ್‌ನಲ್ಲಿ ನಡೆಯುವ ಮತ ಎಣಿಕೆ ಕಾರ್ಯದ ಮೇಲೆ ನಿಗಾ ಇಡಲು ಪ್ರತಿ ಟೇಬಲ್‌ಗೆ ಒಂದರಂತೆ ಒಟ್ಟು ೧೪ ಕ್ಯಾಮರಾ ಗಳನ್ನು ಅಳವಡಿಸಲಾಗಿದೆ. ಮತ ಎಣಿಕೆಗೆ ಪ್ರತಿ ಟೇಬಲ್‌ಗೆ ಇಬ್ಬರು ಸಿಬ್ಬಂದಿಯಂತೆ ಒಟ್ಟು ೨೮ ಜನ ಮತ ಎಣಿಕೆ ಸಿಬ್ಬಂದಿ ಹಾಗೂ ಪ್ರತಿ ಟೇಬಲ್‌ಗೆ ಒಬ್ಬರು ಮೈಕ್ರೋ ಅಬ್ಸರ್‌ವರ್ ಅಧಿಕಾರಿಯನ್ನು ನೇಮಿಸಲಾಗಿದೆ. ಮತ ಎಣಿಕೆ ಕಾರ್ಯವನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಲು ಅನುಕೂಲವಾಗುವಂತೆ ಎರಡು ಕೊಠಡಿಗಳಿಗೆ ತಲಾ ಇಬ್ಬರು ಕಂಪ್ಯೂಟರ್ ಆಪರೇಟರ್‌ಗಳನ್ನು ನಿಯೋಜಿಸಲಾಗಿದೆ.
ಈಗಾಗಲೆ ಮತದಾನದ ದಾಖಲೆಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ವಿದ್ಯುನ್ಮಾನ ಮತಯಂತ್ರಗಳನ್ನು ಇದೇ ಕಾಲೇಜಿನ ಕೊಠಡಿಯಲ್ಲಿ ಇರಿಸಲಾಗಿದ್ದು, ಈ ಕೊಠಡಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಮತ ಎಣಿಕೆ ಕಾರ್ಯವನ್ನು ಶಾಂತಿ, ಸುವ್ಯವಸ್ಥೆಯಿಂದ ಜರುಗಿಸಲು ಅನುಕೂಲವಾಗುವಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ಇದಕ್ಕಾಗಿ ೩-ಡಿವೈಎಸ್‌ಪಿ, ೧೪- ಪಿ.ಎಸ್.ಐ., ೩೦- ಎ.ಎಸ್.ಐ., ೬೫- ಹೆಡ್‌ಕಾನ್ಸ್‌ಟೇಬಲ್ಸ್, ೧೬೮- ಪೊಲೀಸ್ ಕಾನ್ಸ್‌ಟೇಬಲ್ಸ್, ೧೦೦- ಗೃಹರಕ್ಷಕ ದಳದ ಸಿಬ್ಬಂದಿ, ೪- ಕೆ.ಎಸ್.ಆರ್.ಪಿ. ತುಕಡಿಗಳು ಹಾಗೂ ೬- ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕಾರ್ಯ ನಡೆಯುವ ಕಾಲೇಜಿನ ಒಳಗೆ ಸಕ್ಷಮ ಪ್ರಾಧಿಕಾರ ನೀಡಿರುವ ಚುನಾವಣಾ ಮತ ಎಣಿಕೆ ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದ್ದು, ಕಾಲೇಜಿನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
0 comments:
Post a Comment