PLEASE LOGIN TO KANNADANET.COM FOR REGULAR NEWS-UPDATES


 ಕೊಪ್ಪಳ ಸೆ. ೧೯ (ಕರ್ನಾಟಕ ವಾರ್ತೆ) : ಗಂಗಾವತಿ ನಗರಸಭೆಯ ವ್ಯಾಪ್ತಿಯಲ್ಲಿ ಲೈಸನ್ಸ ಪಡೆಯದೆ ಅನಧಿಕೃತವಾಗಿ ಮನೆ ನಿರ್ಮಾಣ ಮಾಡುತ್ತಿರುವ ಪ್ರಕರಣ, ವಾಸದ ಮನೆ ಕಟ್ಟಲು ಲೈಸನ್ಸ ಪಡೆದು ರೈಸ್ ಮಿಲ್ ನಿರ್ಮಿಸುತ್ತಿರುವ ಪ್ರಕರಣ ಹಾಗೂ  ಉದ್ಯಾನವನ ಜಾಗ ಅತಿಕ್ರಮಿಸಿ ಮಿನರಲ್ ವಾಟರ್ ಪ್ಲಾಂಟ್ ನಿರ್ಮಾಣ ಸೇರಿದಂತೆ ಒಟ್ಟು ೦೩ ಪ್ರಕರಣಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ರಜನೀಶ್ ಗೋಯೆಲ್ ಅವರು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  
  ಅನಧಿಕೃತ ಕಟ್ಟಡಗಳ ನಿರ್ಮಾಣ ಹಾಗೂ ಉದ್ಯಾನವನ ಒತ್ತುವರಿ ಮಾಡಿ ಅನಧಿಕೃತವಾಗಿ ಮಿನರಲ್ ವಾಟರ್ ಪ್ಲಾಂಟ್ ನಿರ್ಮಾಣ ಕುರಿತಂತೆ  ಬಂದಿದ್ದ ದೂರಿನ ಹಿನ್ನೆಲೆಯಲ್ಲಿ ತನಿಖೆಗಾಗಿ ಪ್ರಾದೇಶಿಕ ಆಯುಕ್ತರು ತಮ್ಮ ಕಚೇರಿಯ ಸಿಬ್ಬಂದಿಯವರನ್ನು ನಿಯೋಜಿಸಿದ್ದರು.  ಈ ಸಿಬ್ಬಂದಿಗಳು ನೀಡಿದ ತನಿಖಾ ವರದಿಯ ಆಧಾರದ ಮೇಲೆ ತಪ್ಪಿತಸ್ಥ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಲು ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಗೆ ಸೂಚನೆ ನೀಡಲಾಗಿದೆ.
ಪ್ರಕರಣ-೧:  ಗಂಗಾವತಿ ನಗರದ ವಾರ್ಡ್ ನಂ.೨೦ರಲ್ಲಿ ಕಟ್ಟಡ ಪರವಾನಿಗೆ ಪಡೆಯದೇ ಮನೆ ನಂ. ೪-೯-೩೫ ರಿಂದ ೪-೯-೩೮ ರಲ್ಲಿರುವ ನಿವೇಶನದಲ್ಲಿ ಒಂದಂತಸ್ತಿನ ಮನೆಯನ್ನು ನಿರ್ಮಾಣ ಮಾಡುತ್ತಿದ್ದ  ಯಂಕನಗೌಡ ಮುರ್ತುಜಪ್ಪಗೌಡ ಇವರಿಗೆ ಮೂರು ನೋಟೀಸುಗಳನ್ನು ನೀಡಿದ್ದರೂ ಕಟ್ಟಡ ನಿರ್ಮಿಸಿದ್ದರು.  ಪೌರಾಯುಕ್ತರು ಈ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.  ಅಲ್ಲದೆ ಸಹಾಯಕ ಕಾರ್ಯಪಾಲಕ ಅಬಿಯಂತರರಾದ  ಗಂಗಾಧರ ಹಾಗೂ ಕಿರಿಯ ಅಭಿಯಂತರ  ಗುರುರಾಜ್ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವುದು ಕಂಡುಬಂದಿದೆ.
ಪ್ರಕರಣ-೨: ಗಂಗಾವತಿ ರಾಯಚೂರು ಹೆದ್ದಾರಿಯಲ್ಲಿ  ಕೆ.ಚಂದ್ರಪ್ಪ ತಂ ಹಾಲಪ್ಪ ಎಂಬುವರಿಗೆ ವಾಸದ ಮನೆ ಕಟ್ಟಡ ರಚನೆಗೆ ಪರವಾನಿಗೆ ನೀಡಿದ್ದು ಇವರು ಅದರ ಬದಲಿಗೆ ದೊಡ್ಡ ಗೋಡೌನ್ (ಉಗ್ರಾಣ) ನಿರ್ಮಾಣ ಮಾಡಿ ಯಾವುದೇ ಯಂತ್ರಗಳನ್ನು ಅಳವಡಿಸದೆ ಸಾಮಾಗ್ರಿ ದಾಸ್ತಾನುಗಳಿಗಾಗಿ ಬಳಕೆ ಮಾಡುತ್ತಿರುವುದು, ಲೈಸನ್ಸ ಷರತ್ತು ಉಲ್ಲಂಘಿಸಿರುವುದು ಹಾಗೂ ಇದನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ ಗಂಗಾಧರ ಹಾಗೂ ಕಿರಿಯ ಅಭಿಯಂತರ ಗುರುರಾಜ್ ದಾಸನಾಳ ಅವರು ಪರಿಶೀಲನೆ ನಡೆಸಿಲ್ಲ. 
ಪ್ರಕರಣ-೩: ಗಂಗಾವತಿ ನಗರದ ಮಂಜುನಾಥ ಬಡಾವಣೆಯ ನಂ. ೫-೧-೧೫೫ ಪ್ಲಾಟ ನಂ. ೬೧, ೬೨ ನಿವೇಶನದಲ್ಲಿ ಕಟ್ಟಡ ಕಟ್ಟಲು ಪರವಾನಿಗೆ ಕೋರಿ ಮಂಜುನಾಥ ಹಿಟ್ಟಿನ ತಂದೆ ಸಿದ್ರಾಮಪ್ಪ ಅವರು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ಪೌರಾಯುಕ್ತರು  ಈ ಜಾಗವು ಸಾರ್ವಜನಿಕ ಉದ್ಯಾನವನ ಜಾಗ ಇದನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಕಾಯ್ದಿರಿಸಿರುವುದರಿಂದ ಆ ಜಾಗದಲ್ಲಿ ಕಟ್ಟಡ ಕಟ್ಟಲು ಅನುಮತಿ ನೀಡಲು ಬರುವುದಿಲ್ಲವೆಂಬುದಾಗಿ ಹಿಂಬರಹ ನೀಡಿ ಅರ್ಜಿ ರದ್ದುಪಡಿಸಿದ್ದರು. ಆದರೂ ಸಹ ಮಂಜುನಾಥ ಅವರಿಂದ ಉದ್ಯಾನವನ ಜಾಗದಲ್ಲಿ ವಿಶ್ವಗಂಗಾ ಮಿನರಲ್ ವಾಟರ್ ಪ್ಲಾಂಟ್ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದೆ.  ಈ ಬಗ್ಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ ಗಂಗಾಧರ, ಕಿರಿಯ ಅಭಿಯಂತರ ಗುರುರಾಜ್ ಹಾಗೂ ಪೌರಾಯುಕ್ತರು ಸ್ಪಷ್ಟೀಕರಣ ನೀಡಿಲ್ಲ.
  ಇವೆಲ್ಲ ಪ್ರಕರಣಗಳನ್ನು ಗಮನಿಸಿದಾಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಂಗಾಧರ ಹಾಗೂ ಕಿರಿಯ ಅಭಿಯಂತರ ಗುರುರಾಜ್ ಹಾಗೂ ಪೌರಾಯುಕ್ತರ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.  ಈ ಹಿನ್ನೆಲೆಯಲ್ಲಿ ಉದ್ಯಾನವನ ಜಾಗದಲ್ಲಿ ನಿರ್ಮಾಣ ಮಾಡಿರುವ ವಾಟರ್ ಪ್ಲಾಂಟ್ ತೆರವುಗೊಳಿಸಲು ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಕೂಡಲೆ ಪ್ರಸ್ತಾವನೆ ಕಳುಹಿಸುವಂತೆ ಪ್ರಾದೇಶಿಕ ಆಯುಕ್ತ ಡಾ. ರಜನೀಶ ಗೋಯಲ್ ಅವರು ಕೊಪ್ಪಳ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಗೆ ಆದೇಶಿಸಿದ್ದಾರೆ.

Advertisement

0 comments:

Post a Comment

 
Top