PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ಸೆ.19: ಖ್ಯಾತ ನಾಟಕಕಾರ, ಕವಿ, ಹಿರಿಯ ಲೇಖಕ, ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ, ಮಾಜಿ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಕಂಬಾರರ ಸಮಗ್ರ ಸಾಹಿತ್ಯಕ್ಕೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಈ ಮೂಲಕ ಸಾಹಿತ್ಯಕ್ಕೆ ದೊರಕುವ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಕನ್ನಡವು 8ನೆ ಬಾರಿಗೆ ತನ್ನದಾಗಿಸಿಕೊಂಡಿದೆ.ಉತ್ತರ ಕರ್ನಾಟಕದ ಗಂಡುಮೆಟ್ಟಿನ ನಾಡಾದ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘೋಡಗೇರಿಯಲ್ಲಿ 1937ರ ಜನವರಿ 2ರಂದು ಜನಿಸಿದ ಚಂದ್ರಶೇಖರ ಕಂಬಾರ, ಜಾನಪದ ಹಾಡು, ಕುಣಿತ, ನಾಟಕಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಅಪರೂಪದ ವ್ಯಕ್ತಿ. ಧಾರವಾಡದ ವರಕವಿ ಡಾ.ದ.ರಾ.ಬೇಂದ್ರೆಯವರ ನಂತರ ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ದುಡಿಸಿಕೊಂಡವರಲ್ಲಿ ಕಂಬಾರರು ಒಬ್ಬರು. ಹೇಳತೇನ ಕೇಳ, ಸಿರಿಸಂಪಿಗೆ, ಬೆಳ್ಳಿಮೀನು, ಋಷ್ಯಶೃಂಗ, ಕಾಡುಕುದುರೆ, ನಾಯಿಕಥೆ, ಹರಕೆಯ ಕುರಿ, ಬೋಳೇಶಂಕರ, ಸಿಂಗಾರವ್ವ ಮತ್ತು ಅರಮನೆ ಮುಂತಾದವು ಚಂದ್ರಶೇಖರ ಕಂಬಾರರ ಪ್ರಮುಖ ಕೃತಿಗಳು. ‘ಶಿವರಾತ್ರಿ’ ಅವರ ಇತ್ತೀಚೆಗಿನ ಹೊಸ ನಾಟಕ ಕೃತಿ. ಶಿಖರ ಸೂರ್ಯ 26 ವರ್ಷಗಳ ನಂತರ ಹೊರ ಬಂದ ಇತ್ತೀಚೆಗಿನ ಕಾದಂಬರಿ. ಕನ್ನಡ ಜಾನಪದ ವಿಶ್ವಕೋಶ ಸಂಪಾದಿತ ಕೃತಿಯಾಗಿದ್ದು, ಅವರ ಒಟ್ಟು 40ಕ್ಕೂ ಹೆಚ್ಚು ಕೃತಿಗಳು ಹೊರ ಬಂದಿವೆ. ಶಿಖರಸೂರ್ಯ ಕಂಬಾರ ಹೊರ ಬಂದ ವಿಶಿಷ್ಟ ಕಾವ್ಯ ಪ್ರಕಾರ.ಚಂದ್ರಶೇಖರ ಕಂಬಾರರು ತಾನೇ ಬರೆದ ಕಾದಂಬರಿಗಳನ್ನು ಚಲನ ಚಿತ್ರಗಳನ್ನಾಗಿಸಿದರು. ಕರಿಮಾಯಿ, ಸಂಗೀತಾ, ಕಾಡುಕುದುರೆ ಅತಿಮುಖ್ಯವಾದವು. ಕಂಬಾರರು ತನ್ನ ಚಿತ್ರಗಳಿಗೆ ತಾನೇ ಸಂಗೀತ ನೀಡಿದ್ದಾರೆ. ಕಾಡುಕುದುರೆಯ ಹಿನ್ನೆಲೆ ಸಂಗೀತದ ‘ಕಾಡು ಕುದುರೆ ಓಡಿಬಂದಿತ್ತಾ...’

ಹಾಡಿಗೆ ಶಿವಮೊಗ್ಗ ಸುಬ್ಬಣ್ಣನವರಿಗೆ ರಾಷ್ಟ್ರಪತಿ ಪ್ರಶಸ್ತಿ ದೊರೆತಿದೆ. ‘ಜೀಕೆ ಮಾಸ್ತರ ಪ್ರಣಯ ಪ್ರಸಂಗ’ ಕಾದಂಬರಿಯನ್ನು ಕಿರುತೆರೆಗೂ ಅಳವಡಿಸಿದ್ದಾರೆ. ಹತ್ತಾರು ಸಾಕ್ಷ್ಯಚಿತ್ರಗಳನ್ನೂ ನಿರ್ಮಿಸಿರುವ ಕಂಬಾರರು ಉತ್ತಮ ನಾಟಕಕಾರರು. ಜೊತೆಗೆ ಜಾನಪದ ಶೈಲಿಯ ಹಾಡುಗಳಿಗೆ ಜನಪ್ರಿಯರು. ತಾವೇ ಸ್ವತಃ ಹಾಡುಗಾರರಾಗಿಯೂ ಪ್ರಸಿದ್ಧಿ ಹೊಂದಿದ್ದಾರೆ.ಕಂಬಾರರ ಐದು ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಜೋಕುಮಾರಸ್ವಾಮಿ’ ನಾಟಕಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ‘ಜೈಸಿದ ನಾಯ್ಕ’ ಕೃತಿಗೆ ವರ್ಧಮಾನ ಪ್ರಶಸ್ತಿ, ‘ಸಾವಿರದ ನೆರಳು’ ಕಾವ್ಯ ಕೃತಿಗೆ ಕೇರಳದ ಆಶನ್ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕಂಬಾರರು 1991ರಲ್ಲಿ ಅವರ ‘ಸಿರಿಸಂಪಿಗೆ’ ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.
ಉತ್ತರ ಕರ್ನಾಟಕದ ರಂಗಭೂಮಿ ಬಗ್ಗೆ 1965ರಲ್ಲಿ ಸಂಶೋಧನೆ ಕೃತಿ. ದೇಶಾದ್ಯಂತ ಪ್ರಚುರಗೊಂಡ ಪ್ರಸಿದ್ಧ ಸಂಗ್ಯಾ-ಬಾಳ್ಯ ನಾಟಕ, ಬಯಲಾಟಗಳು, ನಮ್ಮ ಜಾನಪದ ಸೇರಿದಂತೆ ಮತ್ತಿತರ ಸಂಪಾದನೆಗಳನ್ನು ಅವರು ಹೊರ ತಂದಿದ್ದಾರೆ.ಕನ್ನಡ ನಾಡಿನ ಪ್ರತಿಷ್ಟಿತ ವಿಶ್ವ ವಿದ್ಯಾಲಯದಲ್ಲಿವೊಂದಾದ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಸಂಸ್ಥಾಪಕರಲ್ಲಿ ಒಬ್ಬರಾದ ಕಂಬಾರರು, ಎರಡು ಸಲ ವಿ.ವಿ.ಯ ಕುಲಪತಿಗಳಾಗಿ ವಿ.ವಿ.ಯನ್ನು ಕಟ್ಟಿ ಬೆಳೆಸುವ ಮೂಲಕ ನಾಡಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ

Advertisement

1 comments:

  1. i like your ಕನ್ನಡದ ಸಿರಿಸಂಪಿಗೆಗೆ

    ReplyDelete

 
Top