ಕೊಪ್ಪಳ ಆ. ೧೩ : ಪ್ರತಿಯೊಬ್ಬರಿಗೂ ವಿಶಿಷ್ಟ ಸಂಖ್ಯೆಯ ಗುರುತಿನ ಕಾರ್ಡ್ ನೀಡುವ ಆಧಾರ್ ಯೋಜನೆಯಡಿ ಸಾರ್ವಜನಿಕರ ನೋಂದಣಿ ಕಾರ್ಯ ಭರದಿಂದ ಸಾಗಿದ್ದು, ಈಗಾಗಲೆ ಜಿಲ್ಲೆಯಲ್ಲಿ ೧೦೦೭೦ ಜನರನ್ನು ನೋಂದಾಯಿಸುವ ಕಾರ್ಯ ಪೂರ್ಣಗೊಂಡಿದೆ.
ಕೊಪ್ಪಳ ಜಿಲ್ಲೆಯಲ್ಲಿ ಸುಮಾರು ೧೪ ಲಕ್ಷ ಜನಸಂಖ್ಯೆ ಇದ್ದು, ಪ್ರತಿಯೊಬ್ಬರೂ ಆಧಾರ್ ಕಾರ್ಡ್‌ಗೆ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನೋಂದಣಿ ಕಾರ್ಯಕ್ಕಾಗಿ ಕೊಪ್ಪಳ ತಾಲೂಕಿನಲ್ಲಿ ೮, ಗಂಗಾವತಿ- ೧೨, ಕುಷ್ಟಗಿ- ೧೦ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೧೦ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೪೦ ಘಟಕಗಳನ್ನು ಸ್ಥಾಪಿಸಲಾಗಿದ್ದು, ಶೀಘ್ರದಲ್ಲೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಘಟಕಗಳನ್ನು ಹೋಬಳಿ ಮಟ್ಟದಲ್ಲಿ ಸ್ಥಾಪಿಸಲಾಗುವುದು. ಕೊಪ್ಪಳ ನಗರದ ಸಾಹಿತ್ಯ ಭವನ, ಬ್ರಹ್ಮನವಾಡಿ ಶಾಲೆ, ಜಿಲ್ಲಾಡಳಿತ ಭವನದಲ್ಲಿ ನೋಂದಣಿ ಘಟಕಗಳನ್ನು ಸ್ಥಾಪಿಸಲಾಗಿದೆ. ಗಂಗಾವತಿಯಲ್ಲಿ ಶ್ರೀಕೃಷ್ಣದೇವರಾಯ ಸಭಾ ಭವನ, ತಹಸಿಲ್ದಾರರ ಕಚೇರಿ, ಕಾರಟಗಿಯ ಎಪಿಎಂಸಿ ಕಚೇರಿ, ಕನಕಗಿರಿಯ ಸಮುದಾಯ ಭವನ, ಕುಷ್ಟಗಿಯ ರಾಜಕುಮಾರ ಕಲ್ಯಾಣ ಮಂಟಪ, ಯಲಬುರ್ಗಾದ ತಾಲೂಕಾ ಪಂಚಾಯತಿಯ ಸಾಮರ್ಥ್ಯ ಸೌಧ, ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ಉಪವಿಭಾಗ ಕಚೇರಿ, ಕುಕನೂರಿನ ಗ್ರಾ.ಪಂ. ಕಚೇರಿಯಲ್ಲಿ ಆಧಾರ್ ಕಾರ್ಡ್ ನೋಂದಣಿ ಕಾರ್ಯ ನಡೆದಿದೆ. ನೋಂದಣಿ ಕಾರ್ಯಕ್ಕೆ ಯಾವುದೇ ಕೊನೆಯ ದಿನಾಂಕವನ್ನು ನಿಗದಿಪಡಿಸಿರುವುದಿಲ್ಲವಾದ್ದರಿಂದ ಸಾರ್ವಜನಿಕರು ಶಾಂತರೀತಿಯಿಂದ ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ನೋಂದಣಿ ಮಾಡಿಸುವಂತೆ ಆಧಾರ್ ಯೋಜನೆಯ ಕೊಪ್ಪಳ ಜಿಲ್ಲಾ ನೋಡಲ್ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ತಿಳಿಸಿದ್ದಾರೆ.
0 comments:
Post a Comment