PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಆ. ೧೩ : ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸಂದರ್ಭದಲ್ಲಿ ಅಥವಾ ಇನ್ನಿತರೆ ಯಾವುದೇ ಸಮಯದಲ್ಲಿ ಕಾಗದದ ಅಥವಾ ಪ್ಲಾಸ್ಟಿಕ್ ರಾಷ್ಟ್ರಧ್ವಜವನ್ನು ಬಳಸುವುದು ಹಾಗೂ ಪ್ಲಾಸ್ಟಿಕ್ ರಾಷ್ಟ್ರಧ್ವಜವನ್ನು ಅಂಗಡಿಗಳಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಎಚ್ಚರಿಕೆ ನೀಡಿದ್ದಾರೆ.
ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ರಾಷ್ಟ್ರಧ್ವಜ ನಮ್ಮ ದೇಶದ ಸ್ವಾತಂತ್ರ್ಯ, ರಾಷ್ಟ್ರಾಭಿಮಾನದ ಸಂಕೇತವಾಗಿದೆ. ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಬೇಕಾದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಆದರೆ ಇತ್ತೀಚೆಗೆ ಕೆಲವರು ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ಬಳಸಿ, ಅದನ್ನು ಮಾರಾಟದ ವಸ್ತುವನ್ನಾಗಿಸಿಕೊಂಡು, ಧನಧಾಹಿಗಳಾಗಿರುವುದು ವಿಷಾದದ ಸಂಗತಿಯಾಗಿದೆ. ಸರ್ಕಾರ ಕಾಗದ ಹಾಗೂ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ಬಳಸುವುದು ಅಥವಾ ಅಂಗಡಿಗಳಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಿದ್ದು, ಬಳಕೆದಾರರು, ಉತ್ಪಾದಕರು, ವಿತರಕರು, ಮಾರಾಟಗಾರರು ಕಠಿಣ ಶಿಕ್ಷೆಗೆ ಅರ್ಹರು ಅಲ್ಲದೆ ನಿಯಮ ಉಲ್ಲಂಘನೆ ದಂಡನಾತ್ಮಕ ಅಪರಾಧವಾಗಿದೆ. ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ಅಷ್ಟೇ ನಮ್ಮ ಕರ್ತವ್ಯವಲ್ಲ, ರಾಷ್ಟ್ರದ್ವಜದ ಅವಮಾನವನ್ನು ತಡೆಗಟ್ಟುವುದೂ ಸಹ ನಮ್ಮೆಲ್ಲರ ಆದ್ಯ ಕರ್ತವ್ಯ. ಆದ್ದರಿಂದ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ಯಾರೂ ಖರೀದಿಸಬೇಡಿ, ಒಂದು ವೇಳೆ ಪ್ಲಾಸ್ಟಿಕ್ ರಾಷ್ಟ್ರಧ್ವಜ ಅಂಗಡಿಗಳಲ್ಲಿ ಮಾರಾಟವಾಗುತ್ತಿದ್ದಲ್ಲಿ ಅದನ್ನು ತಡೆಯಲು ಮುಂದಾಗಬೇಕು. ಅಲಂಕಾರಕ್ಕೆಂದು ರಾಷ್ಟ್ರಧ್ವಜಗಳನ್ನು ಉಪಯೋಗಿಸಬಾರದು, ಮುಖ ಮತ್ತು ಬಟ್ಟೆಗಳ ಮೆಲೆ ರಾಷ್ಟ್ರಧ್ವಜವನ್ನು ಬಿಡಿಸಿಕೊಳ್ಳಬಾರದು, ಸಣ್ಣ ಮಕ್ಕಳಿಗೆ ರಾಷ್ಟ್ರಧ್ವಜವನ್ನು ಆಟಿಕೆಯೆಂದು ಆಡಲು ಕೊಡಬಾರದು. ಯಾವುದೇ ಮಕ್ಕಳು ಪ್ಲಾಸ್ಟಿಕ್ ರಾಷ್ಟ್ರಧ್ವಜವನ್ನು ಬಳಸದಂತೆ ಆಯಾ ಶಾಲಾ ಕಾಲೇಜುಗಳ ಮುಖ್ಯಸ್ಥರು ಎಚ್ಚರಿಕೆ ವಹಿಸಬೇಕು, ಶಾಲೆ, ಕಚೇರಿಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ರಾಷ್ಟ್ರಧ್ವಜಾರೋಹಣ ಸಂದರ್ಭದಲ್ಲಿ ಧ್ವಜ ತಲೆಕೆಳಗಾಗದಂತೆ, ಅರ್ಧಕ್ಕೆ ಹಾರಿಸದಂತೆ, ಕೆಳಗೆ ಬೀಳದಂತೆ ಮುನ್ನೆಚ್ಚರಿಕೆ ವಹಿಸಬೇಕು, ಒಂದು ವೇಳೆ ರಾಷ್ಟ್ರಧ್ವಜಕ್ಕೆ ಅವಮಾನವೆಸಗಿದ ಪ್ರಕರಣ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

Advertisement

0 comments:

Post a Comment

 
Top