PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಆ. : ಗೌರಿ-ಗಣೇಶ ಹಬ್ಬ ಹಾಗೂ ರಂಜಾನ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಗೌರಿ-ಗಣೇಶ ಹಾಗೂ ರಂಜಾನ್ ಹಬ್ಬದ ಆಚರಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕಳೆದ ವರ್ಷದಂತೆ ಈ ವರ್ಷವೂ ಕೂಡ ಗೌರಿ-ಗಣೇಶ ಹಾಗೂ ರಂಜಾನ್ ಹಬ್ಬ ಒಂದೇ ಅವಧಿಯಲ್ಲಿ ಬಂದಿರುವುದರಿಂದ ಎರಡೂ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು. ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರ ಪ್ರಾರ್ಥನೆ ಸುಮಾರು ಬೆಳಿಗ್ಗೆ ೧೧ ಗಂಟೆಯೊಳಗೆ ಮುಗಿಯಲಿದ್ದು, ಗಣೇಶ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುವವರು ಬೆಳಿಗ್ಗೆ ೧೧ ಗಂಟೆ ನಂತರ ತೆಗೆದುಕೊಂಡು ಹೋಗಬೇಕು. ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಸೂಕ್ತ. ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೂರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸುವ ಸಂಘಟಕರು ನಗರಸಭೆ, ಜೆಸ್ಕಾಂ ಹಾಗೂ ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಹಣ ಪಾವತಿಸಿ ಅನುಮತಿ ಪಡೆದುಕೊಳ್ಳಬೇಕು. ಈ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಏಕ-ಗವಾಕ್ಷಿ ವ್ಯವಸ್ಥೆಯಲ್ಲಿ ಅನುಮತಿ ನೀಡಲು ನಗರಸಭೆ ಕಚೇರಿಯಲ್ಲಿ ಕೌಂಟರ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ಸಂಪರ್ಕಕ್ಕೆ ಜೆಸ್ಕಾಂ, ಮೈಕ್ ವ್ಯವಸ್ಥೆಗಾಗಿ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ನಗರಸಭೆಯಿಂದ ಅನುಮತಿ ಪಡೆಯುವುದು ಅಗತ್ಯವಾಗಿದೆ. ಆಯಾ ಇಲಾಖೆಗಳು ನಿಗದಿಪಡಿಸಿದ ಶುಲ್ಕವನ್ನು ಸಂದಾಯಮಾಡಿ ಅನುಮತಿ ಪಡೆದುಕೊಳ್ಳಬೇಕು. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವುದು, ಮೈಕ್ ಬಳಸುವುದನ್ನು ನಿಷೇಧಿಸಲಾಗಿದೆ. ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಲಾಗಿದೆ. ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿ, ಅದಕ್ಕೆ ನೈಸರ್ಗಿಕ ಬಣ್ಣವನ್ನು ಮಾತ್ರ ಬಳಸಬೇಕು. ರಾಸಾಯನಿಕ ಬಣ್ಣಗಳನ್ನು ಬಳಸಬಾರದು. ಇದರಿಂದ ಪರಿಸರ ಹಾಳಾಗುವುದಲ್ಲದೆ, ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಕುಡಿಯುವ ನೀರಿನ ಬಾವಿಗಳಲ್ಲಿ ಗಣೇಶ ಮೂರ್ತಿ ವಿಸರ್ಜಿಸಲು ಅವಕಾಶವಿರುವುದಿಲ್ಲ. ಗಣೇಶ ಮೂರ್ತಿ ವಿಸರ್ಜನೆಯ ಸಂದರ್ಭದಲ್ಲಿ ಹುಲಿಕೆರೆ ಮಾರ್ಗದಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆಗಳನ್ನು ಕೈಗೊಳ್ಳಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಒಟ್ಟಾರೆಯಾಗಿ ಶಾಂತಿ ಹಾಗೂ ಸೌಹಾರ್ದತೆಯಿಂದ ಗೌರಿ-ಗಣೇಶ ಹಾಗೂ ರಂಜಾನ್ ಹಬ್ಬ ಆಚರಿಸುವಲ್ಲಿ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್ ಅವರು ಮಾತನಾಡಿ, ಹೊಸದಾಗಿ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಪೊಲೀಸ್ ಇಲಾಖೆಗೆ ಮಾಹಿತಿ ಒದಗಿಸಬೇಕು. ಕೊಪ್ಪಳ ಜಿಲ್ಲೆಯಲ್ಲಿ ಎಲ್ಲಾ ಸಮಾಜದ ಬಾಂಧವರು ಸೌಹಾರ್ದತೆಯ ಮನೋಭಾವದಿಂದ ಸಂಭ್ರಮದಿಂದ ಹಬ್ಬಗಳ ಆಚರಣೆ ನಡೆಸಬೇಕು ಎನ್ನುವುದು ನಮ್ಮ ಆಶಯವಾಗಿದೆ. ಗಣೇಶ ಮೂರ್ತಿ ವಿಸರ್ಜನೆ ದಿನದಂದು ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಗೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಡಿವೈಎಸ್‌ಪಿ ವಿಜಯ ಡಂಬಳ ಅವರು ಮಾತನಾಡಿ ಗಣೇಶ ಮೂರ್ತಿ ಮೆರವಣಿಗೆ ಸಮಯದಲ್ಲಿ ಮಸೀದಿ, ಮಂದಿರಗಳ ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಕಾಪಾಡಿಕೊಂಡು ಬರಬೇಕು. ನಗರಸಭೆ ಊರಿನ ಸ್ವಚ್ಛತೆ, ಬೆಳಕಿನ ವ್ಯವಸ್ಥೆ ಹಾಗೂ ನೀರಿನ ವ್ಯವಸ್ಥೆಯನ್ನು ಒದಗಿಸಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಮೂರ್ತಿ ವಿಸರ್ಜನೆ ಆಗುವವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುವುದು. ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು, ಇಂತಹ ಘಟನೆಗಳಿಗೆ ಯಾರೂ ಅವಕಾಶ ಮಾಡಿಕೊಡಬಾರದು ಎಂದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ, ನಗರಸಭೆ ಸದಸ್ಯರುಗಳಾದ ಇಂದಿರಾ ಬಾವಿಕಟ್ಟಿ, ಗವಿಸಿದ್ದಪ್ಪ ಮುಂಡರಗಿ, ಮಾನ್ವಿಪಾಷಾ, ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್, ಸಹಾಯಕ ಆಯುಕ್ತ ಶರಣಬಸಪ್ಪ, ಸೇರಿದಂತೆ ಗಣೇಶ ಉತ್ಸವ ಸಮಿತಿಯ ಪದಾಧಿಕಾರಿಗಳು, ಮುಸ್ಲಿಂ ಪಂಚಕಮಿಟಿಗಳ ಪದಾಧಿಕಾರಿಗಳು ವಿವಿಧ ಸಮಾಜಗಳ ಮುಖಂಡರು, ಗಣ್ಯರು, ಹಲವು ಸಂಘಟನೆಗಳ ಪದಾಧಿಕಾರಿಗಳು ಸಾರ್ವಜನಿಕರು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

Advertisement

0 comments:

Post a Comment

 
Top