PLEASE LOGIN TO KANNADANET.COM FOR REGULAR NEWS-UPDATES


ಹೊಸದಿಲ್ಲಿ, ಆ.27: ಭ್ರಷ್ಟಾಚಾರದ ವಿರುದ್ಧ 12 ದಿನಗಳಿಂದ ನಿರಶನದಲ್ಲಿರುವ ಅಣ್ಣಾ ಹಝಾರೆಯವರ ಮೂರು ಮುಖ್ಯ ಬೇಡಿಕೆಗಳ ಕುರಿತು ಸಂಸತ್ ಇಂದು ‘ಸದನದ ಭಾವನೆ’ಯನ್ನು ಸರ್ವಾನುಮತದಿಂದ ಅಂಗೀಕರಿಸಿದ್ದು, ಗಾಂಧಿವಾದಿ ನಾಳೆ ಪೂರ್ವಾಹ್ಣ 10 ಗಂಟೆಗೆ ನಿರಶನ ಕೊನೆಗೊಳಿಸುವೆನೆಂದು ಘೋಷಿಸಿದ್ದಾರೆ. ವಿತ್ತ ಸಚಿವ ಪ್ರಣವ್ ಮುಖರ್ಜಿ ಮಂಡಿಸಿದ ಈ ನಿರ್ಣಯವನ್ನು ಮೊದಲು ಲೋಕಸಭೆಯು ಸದಸ್ಯರ ಹರ್ಷೋದ್ಗಾರ ಹಾಗೂ ಮೇಜು ಬಡಿತಗಳ ನಡುವೆ ಸರ್ವಾನುಮತದಿಂದ ಅಂಗೀಕರಿಸಿದ ಬಳಿಕ ರಾಜ್ಯ ಸಭೆಯೂ ಇದೇ ಕ್ರಮ ಕೈಗೊಂಡಿತು.
‘ಸದನದ ಭಾವನೆ’ಯನ್ನು ಶೀಘ್ರವೇ ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಮೂಲಕ ಹಝಾರೆಯವರಿಗೆ ರವಾನಿಸಲಾಗುವುದೆಂದು ಮೂಲಗಳು ತಿಳಿಸಿವೆ. ಮುಖರ್ಜಿ ಮಂಡಿಸಿದ ‘ಸದನದ ಭಾವನೆ’ ನಿರ್ಣಯವು, ‘‘ಈ ಸದನವು ಈ ಮುಂದಿನ ವಿಷಯಗಳನ್ನು ತಾತ್ತ್ವಿಕವಾಗಿ ಒಪ್ಪಿದೆ: (1) ನಾಗರಿಕ ಸನದು (2) ಸೂಕ್ತ ವ್ಯವಸ್ಥೆಯೊಂದರ ಮೂಲಕ ಕೆಳ ಹಂತದ ಆಡಳಿತ ಶಾಹಿಯನ್ನು ಲೋಕಪಾಲದ ವ್ಯಾಪ್ತಿಗೆ ತರುವುದು ಹಾಗೂ (3) ರಾಜ್ಯಗಳಲ್ಲಿ ಲೋಕಾಯುಕ್ತ ಸ್ಥಾಪನೆ. ‘‘ಮಾತ್ರವಲ್ಲದೆ ಸದನದ ಕಲಾಪವನ್ನು ವರದಿ ಅಂತಿಮಗೊಳಿಸುವುದಕ್ಕಾಗಿ ಕಾನೂನು ಹಾಗೂ ನ್ಯಾಯದ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲು ನಿರ್ಣಯಿಸಲಾಗಿದೆ’’ ಎಂದು ಹೇಳಿದೆ. ಅಣ್ಣಾ ತಂಡದ ಮೂರು ಬೇಡಿಕೆಗಳನ್ನು ಒಳಗೊಳಿಸಿ ನಿರ್ಣಯವೊಂದನ್ನು ಸಂಸತ್ತಿನಲ್ಲಿ ಕೈಗೊಳ್ಳುವುದಕ್ಕೆ ಸರಕಾರ ಹಾಗೂ ವಿಪಕ್ಷಗಳು ಒಪ್ಪಂದಕ್ಕೆ ಬಂದವು ಲೋಕಪಾಲ ಮಸೂದೆಯ ಕುರಿತ ನಿರ್ಣಯದ ಬಗ್ಗೆ ಮತ ವಿಭಜನೆಗೆ ವಿಪಕ್ಷ ನಿರಾಸಕ್ತಿ ತೋರಿಸಿದೆಯೆಂದು ಸರಕಾರ ತಿಳಿಸಿದೆಯೆಂದು ಅಣ್ಣಾ ಬಳಗದ ಅರವಿಂದ್ ಕೇಜ್ರಿವಾಲ್ ರಾಮ್‌ಲೀಲಾ ಮೈದಾನದಲ್ಲಿ ಘೋಷಿಸಿದುದನ್ನು ಕೇಳಿದ ಬಿಜೆಪಿ ಈ ಕುರಿತು ಅಸಮಾಧಾನ ಸೂಚಿಸಿದ ಬಳಿಕ ಈ ಬೆಳವಣಿಗೆ ನಡೆಯಿತು. ಎನ್‌ಡಿಎ ಕಾರ್ಯಾಧ್ಯಕ್ಷ ಎಲ್.ಕೆ. ಅಡ್ವಾಣಿ, ಲೋಕಸಭೆ ಹಾಗೂ ರಾಜ್ಯಸಭೆಗಳ ವಿಪಕ್ಷ ನಾಯಕರಾದ ಸುಶ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಈ ವಿಷಯವನ್ನು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮುಖರ್ಜಿ ಯವರ ಬಳಿಗೊಯ್ದರು. ಸರಕಾರ ಅಂತಹ ಹೇಳಿಕೆ ನೀಡಿದೆಯೆಂಬುದನ್ನು ಮುಖರ್ಜಿ ಹಾಗೂ ಕಾನೂನು ಸಚಿವ ಸಲ್ಮಾನ್ ಖುರ್ಶಿದ್ ನಿರಾಕರಿಸಿದರೆಂದು ಮೂಲಗಳು ತಿಳಿಸಿವೆ.
ಬದಲಾದ ಸನ್ನಿವೇಶದಲ್ಲಿ ಬಿಜೆಪಿಯು, ನಿರ್ಣಯವೊಂದನ್ನು ಕೈಗೊಂಡು ಅದನ್ನು ಮತಕ್ಕೆ ಹಾಕುವಂತೆ ಆಗ್ರಹಿಸಿತು. ಅದನ್ನು ಸರಕಾರ ಒಪ್ಪಿತು. ಇದಕ್ಕಿಂತ ಕಡಿಮೆಯಾದುದಕ್ಕೆ ಅಣ್ಣಾ ಬಳಗ ಒಪ್ಪದೆಂದು ಅಭಿಪ್ರಾಯಿಸಿದ ಕಾಂಗ್ರೆಸ್‌ನ ಕೆಲವು ಯುವ ಸಚಿವರು ಹಾಗೂ ಸಂಸದರೂ ನಿರ್ಣಯ ಹಾಗೂ ಮತ ವಿಭಜನೆಗೆ ಒತ್ತಾಯಿಸಿದರು. ಮುಖರ್ಜಿಯವರು ನಿರ್ಣಯ ಮಂಡಿಸಬೇಕು ಹಾಗೂ ಅದರ ಒಕ್ಕಣೆಯನ್ನು ವಿಪಕ್ಷಗಳೊಂದಿಗೆ ಸಮಾಲೋಚಿಸಿ ಬರೆಯಬೇಕೆಂದು ನಿರ್ಧರಿಸಲಾಯಿತು. ನಿರ್ಣಯದಲ್ಲಿ ಅಣ್ಣಾರ ಮೂರೂ ಬೇಡಿಕೆಗಳನ್ನು ನಮೂದಿಸಲಾಯಿತೆಂದು ಮೂಲಗಳು ವಿವರಿಸಿವೆ.
ಈ ಮೂರೂ ವಿಷಯಗಳನ್ನು ಸದನವು ‘ತಾತ್ತ್ವಿಕವಾಗಿ’ ಒಪ್ಪುತ್ತದೆಂದು ನಿರ್ಣಯ ಹೇಳಿದೆ. ಅದನ್ನು ಸದನದಲ್ಲಿ ಧ್ವನಿ ಮತಕ್ಕೆ ಹಾಕುವ ನಿರ್ಧಾರ ಕೈಗೊಳ್ಳಲಾಗಿದ್ದರೂ, ಬಳಿಕ ಎಲ್ಲರೂ ಮೇಜು ಗುದ್ದಿ ಸ್ವಾಗತಿಸಿದ ಕಾರಣ ‘ಸರ್ವಾನುಮತದ’ ಒಪ್ಪಿಗೆ ದೊರೆತಿದೆಯೆಂದು ಹೇಳಲಾಯಿತು. ಇದೇ ವೇಳೆ, ನಿರ್ಣಯದ ಮೂಲ ಪಾಠದ ಮರಾಠಿ ಆವೃತ್ತಿಯನ್ನು ಹಿಡಿದುಕೊಂಡು, ಉಪವಾಸ ಕೈ ಬಿಡುವಂತೆ ಪ್ರಧಾನಿಯ ಮನವಿ ಪತ್ರ ಹಿಡಿದುಕೊಂಡು ಕಾಂಗ್ರೆಸ್ ನಾಯಕರಾದ ವಿಲಾಸ್‌ರಾವ್ ದೇಶ್‌ಮುಖ್ ಹಾಗೂ ಸಂದೀಪ್ ದೀಕ್ಷಿತ್ ರಾಮ್‌ಲೀಲಾ ಮೈದಾನಕ್ಕೆ ಹೋಗಿದ್ದಾರೆ.

ಪ್ರಧಾನಿಯ ಮನವಿಗೆ ಅಣ್ಣಾ ಸೈ
ಹೊಸದಿಲ್ಲಿ, ಆ.27: ಅಣ್ಣಾ ಹಝಾರೆಯವರ ಮೂರು ಬೇಡಿಕೆಗಳಿಗೆ ಸಂಸತ್ತು ‘ತಾತ್ತ್ವಿಕ’ ಅಂಗೀಕಾರ ನೀಡಿದ ನಿರ್ಣಯದ ಮರಾಠಿ ಆವೃತ್ತಿಯೊಂದಿಗೆ, ಉಪವಾಸ ಕೈಬಿಡುವಂತೆ ಪ್ರಧಾನಿ ಮನಮೋಹನ್ ಸಿಂಗ್ ಬರೆದ ಪತ್ರವನ್ನು ಕಾಂಗ್ರೆಸ್ ನಾಯಕರಾದ ವಿಲಾಸ್‌ರಾವ್ ದೇಶ್‌ಮುಖ್ ಹಾಗೂ ಸಂದೀಪ್ ದೀಕ್ಷಿತ್ ಸಂಸತ್ತಿನ ಪರವಾಗಿ ಹಝಾರೆಯವರಿಗೆ ತಲುಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಳೆ ಪೂರ್ವಾಹ್ಣ 10 ಗಂಟೆಗೆ ಉಪವಾಸ ಕೊನೆಗೊಳಿಸುವ ನಿರ್ಧಾರವನ್ನು ಹಝಾರೆ ಪ್ರಕಟಿಸಿದ್ದಾರೆ.
‘‘ಸಂಸತ್ತಿನ ನಿರ್ಣಯದಿಂದ ನಿಮಗೆ ಸಂತೋಷವಾಗಲಿದೆ. ನಿಮ್ಮ ಮೂರೂ ಬೇಡಿಕೆಗಳನ್ನು ಸಂಸತ್ತು ‘ತಾತ್ತ್ವಿಕವಾಗಿ’ ಅಂಗೀಕರಿಸಿದೆ. ಆದುದರಿಂದ ದಯವಿಟ್ಟು ತಾವು ನಿರಶನವನ್ನು ಕೊನೆಗೊಳಿಸಬೇಕೆಂದು ವಿನಂತಿಸುತ್ತಿದ್ದೇನೆ’’ ಎಂದು ಪ್ರಧಾನಿ ಪತ್ರದಲ್ಲಿ ಹಝಾರೆಯವರಿಗೆ ಮನವಿ ಮಾಡಿದ್ದರು.

Advertisement

0 comments:

Post a Comment

 
Top