PLEASE LOGIN TO KANNADANET.COM FOR REGULAR NEWS-UPDATES

ಆತ ಆರೆಸ್ಸೆಸ್ ಕಾರ್ಯಕರ್ತ. ಆದರೆ ಬ್ರಾಹ್ಮಣನಲ್ಲ. ಲಿಂಗಾಯತ. ಉತ್ತರ ಕರ್ನಾಟಕದ ಐದಾರು ಜಿಲ್ಲೆಗಳಲ್ಲಿ ಸಂಘ ಮತ್ತು ಪಕ್ಷದ ಸಲುವಾಗಿ ಹಲವಾರು ವರ್ಷಗಳಿಂದ ದುಡಿಯುತ್ತ ಬಂದವನು. ಇಂಥವನಿಗೆ ‘ಯಡಿಯೂರಪ್ಪ ಅಧಿಕಾರ, ಕಳೆದುಕೊಳ್ಳಲು ಬ್ರಾಹ್ಮಣರ ಪಿತೂರಿ ಕಾರಣ ಎಂದು ಅನಿಸಿದೆ. ಇದನ್ನು ಆತ ನನ್ನೆದುರು ವ್ಯಕ್ತಪಡಿಸಿದ. ಆದರೆ ‘‘ಯಡಿಯೂರಪ್ಪ ಸರಕಾರ ಲಿಂಗಾಯತ ಸರಕಾರವಾಗಿರಲಿಲ್ಲ. ಅದು ವೈದಿಕರ ಸರಕಾರವಾಗಿತ್ತು’’ ಎಂದು ಗದುಗಿನ ತೋಂಟದ ಮಠದ ಶ್ರೀಸಿದ್ದಲಿಂಗ ಸ್ವಾಮಿಗಳು ಹೇಳಿದ್ದಾರಲ್ಲ ಎಂದು ಹೇಳಿದಾಗ ಆತನ ಬಳಿ ಉತ್ತರವಿರಲಿಲ್ಲ. ಹಂಪಿ ವಿ.ವಿ.ಯ ಡಾ. ಟಿ.ಆರ್.ಚಂದ್ರಶೇಖರ್ ಕೂಡ ‘ವೈದಿಕ ಸರಕಾರ ತೊಲಗಿತ್ತು’ ಎಂದಿದ್ದಾರಲ್ಲವೇ ಎಂದು ಕೇಳಿದಾಗಲೂ ಅದಕ್ಕೂ ಆತ ಪ್ರತಿಕ್ರಿಯಿಸಲಿಲ್ಲ.

ಅನಂತಕುಮಾರ್ ಮುಖ್ಯಮಂತ್ರಿಯಾಗಬೇಕೆಂದು ಕನಸು ಕಾಣುತ್ತಿದ್ದ ಮಾಧ್ಯಮದ ಪಟುಗಳು ಯಡಿಯೂರಪ್ಪ ನವರನ್ನು ಖಳನಾಯಕ ಎಂಬಂತೆ ಬಿಂಬಿಸಿದವು ಎಂಬ ಭಾವನೆ ಅನೇಕರಲ್ಲಿ ಸಹಜವಾಗಿ ಮೂಡಿದೆ. ಆದರೆ ಯಡಿ ಯೂರಪ್ಪ ಬ್ರಾಹ್ಮಣೇತರ ಎಂದ ಮಾತ್ರಕ್ಕೆ ಅವರೆಲ್ಲ ಅಪರಾಧಗಳನ್ನು ಕ್ಷಮಿಸಿ ಬೆಂಬಲಿಸಬೇಕೆ? ಯಡಿಯೂರಪ್ಪ ವಿರೋಧಿ ಬಣ ಅವರನ್ನು ಲಿಂಗಾಯತ ಇಲ್ಲವೇ ಬ್ರಾಹ್ಮಣ ವಿರೋಧಿ ಎಂಬ ಕಾರಣಕ್ಕೆ ಮಾತ್ರ ಅವರ ವಿರುದ್ಧ ಮಸಲತ್ತು ನಡೆಸಿತೆ?

ಇಂಥ ಪ್ರಶ್ನೆಗಳಿಗೆಲ್ಲ ಉತ್ತರ ಕಂಡು ಕೊಳ್ಳಲಾಗದೇ ಒಬ್ಬ ವ್ಯಕ್ತಿಯ ಹುಟ್ಟಿನ ಮೂಲವನ್ನು ಹಿಡಿದು ಸರಳೀಕರಿಸುವುದು ಸರಿಯಲ್ಲ ಎಂದು ಕೆಲ ಪ್ರಗತಿಪರ ಲಿಂಗಾಯತ ಸ್ವಾಮಿಗಳೇ ನನ್ನೆದುರು ಹೇಳಿದರು.ಯಡಿಯೂರಪ್ಪ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬ ಫ್ಯಾಸಿಸ್ಟ್ ಸಂಘಟನೆಯಲ್ಲಿ ಬೆಳೆದು ಬಂದವರು. ಬಾಲ್ಯದಲ್ಲೇ ಬ್ರಾಹ್ಮಣ್ಯಕ್ಕೆ ಶರಣಾದವರು. ಯಡಿಯೂರಪ್ಪ ಅಧಿಕಾರದಲ್ಲಿದ್ದ ಮೂರು ವರ್ಷಗಳ ಕಾಲಾವಧಿಯಲ್ಲಿ ಪುರೋಹಿತಶಾಹಿಯನ್ನು ಇಲ್ಲವೇ ವೈದಿಕ ಶಾಹಿಯನ್ನು ವಿರೋಧಿಸುವ ಯಾವುದೇ ಕಾರ್ಯಕ್ರಮ ರೂಪಿಸಿದವರಲ್ಲ. ಅವರು ಜಾರಿಗೆ ತಂದದ್ದು ಆರೆಸ್ಸೆಸ್‌ನ ವೈದಿಕಶಾಹಿ ಹಿಡನ್ ಅಜೆಂಡಾಗಳನ್ನೇ. ಗೋ ಹತ್ಯೆ ನಿಷೇಧ ಕಾನೂನು, ಶಾಲೆಗಳಲ್ಲಿ ಭಗವದ್ಗೀತೆ ಪಾಠ, ರಾಷ್ಟ್ರೋತ್ಥಾನ ಪರಿಷತ್ತಿನ ಕೋಮುವಾದಿ ಸಾಹಿತ್ಯದ ಸಗಟು ಖರೀದಿ ಇವೆಲ್ಲ ಅವರ ಕಾಲದಲ್ಲಿ ಅನುಷ್ಠಾನಕ್ಕೆ ಬಂದವು. ಹೀಗೆ ಪುರೋಹಿತಶಾಹಿಯ ಒಲೈಕೆಯೇ ಅವರ ಆಡಳಿತದ ದೈನಂದಿನ ಕಾರ್ಯಕ್ರಮವಾಗಿತ್ತು.

ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಮಾತ್ರ ಯಡಿಯೂರಪ್ಪನವರಿಗೆ ಜಾತಿ ಬೇಕಾಗಿತ್ತು. ನಿರಂತರವಾಗಿ ಅಧಿಕಾರದಲ್ಲಿ ಉಳಿದು ನಾಡಿನ ಸಂಪತ್ತನ್ನು ಕೊಳ್ಳೆ ಹೊಡೆಯಲು ಲಿಂಗಾಯತರ ಬೆಂಬಲ ಬೇಕಾಗಿತ್ತು. ಅವರ ಕಾಲದಲ್ಲಿ ಅಕ್ರಮ ಗಣಿಗಾರಿಕೆ, ಸರಕಾರಿ ಭೂಮಿ ಕಬಳಿಕೆ, ಮಠಗಳಿಗೆ ಅನುದಾನ, ಚರ್ಚ್‌ಗಳ ಮೇಲೆ ದಾಳಿ, ಇವೆಲ್ಲವುಗಳ ಜೊತೆಗೆ ಆರೆಸ್ಸೆಸ್ ಬಲವರ್ಧನೆಗೆ ಎಲ್ಲ ವಿಧದ ನೆರವನ್ನು ಅವರು ನೀಡಿದರು. ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಬಸವಣ್ಣನವರ ಹೆಸರನ್ನು ಹೇಳುವ ಈ ಮುಖ್ಯಮಂತ್ರಿ ಗೋ ಹತ್ಯೆ ನಿಷೇಧ ಶಾಸನದ ಮೂಲಕ ಅಲ್ಪಸಂಖ್ಯಾತರ ಉಣ್ಣುವ ತುತ್ತಿಗೂ ಧಕ್ಕೆ ತಂದರು. ಅನಂತ ಕುಮಾರ್ ಮುಖ್ಯಮಂತ್ರಿಯಾಗಿದ್ದರೂ ಇದನ್ನೇ ಅತ್ಯಂತ ನಾಜೂಕಾಗಿ ಮಾಡುತ್ತಿದ್ದರು. ಇದರಲ್ಲಿ ಜಾತಿ ಪ್ರಶ್ನೆ ಬರುವುದೇ ಇಲ್ಲ.

ಸಂಘ ಪರಿವಾರದಲ್ಲಿ ವ್ಯಕ್ತಿತ್ವ ರೂಪಿಸಿಕೊಂಡ ಯಾವುದೇ ವ್ಯಕ್ತಿಯನ್ನು ಬ್ರಾಹ್ಮಣ-ಶೂದ್ರ ಎಂದು ವಿಂಗಡಿಸಿ ಸಾಮಾಜಿಕ ನ್ಯಾಯದ ಮಾತನ್ನಾಡುವುದರಲ್ಲಿ ಅರ್ಥವಿಲ್ಲ. ಹಾಗೆ ನೋಡಿದರೆ ನರೇಂದ್ರ ಮೋದಿ ಕೂಡ ಹಿಂದುಳಿದ ಗಾಣಿಗ ಸಮುದಾಯಕ್ಕೆ ಸೇರಿದವರು. ಆದರೆ ಆತನ ದರ್ಬಾರಿನಲ್ಲೇ ಗುಜರಾತ್‌ನಲ್ಲಿ ಅಲ್ಪಸಂಖ್ಯಾತರ ಹತ್ಯಾಕಾಂಡ ನಡೆಯಿತು. ಸಾವಿರಾರು ಜನ ಕೊಲ್ಲಲ್ಪಟ್ಟರು. ನೂರಾರು ಮಹಿಳೆಯರು ಮಾನಭಂಗಕ್ಕೊಳಗಾದರು. ಹಲವಾರು ಮಕ್ಕಳು ಹೆತ್ತವರನ್ನು ಕಳೆದುಕೊಂಡು ಅನಾಥರಾದರು.

ಈ ನರಮೇಧದದ ವಿರುದ್ಧ ಟೀಸ್ತಾ ಸೆಟಲ್ವಾಡ್‌ರಂಥ ಆರೋಗ್ಯಕರ ಮನಸುಗಳು ದನಿಯೆತ್ತಿದವು. ಅಲ್ಲಿ ನೊಂದವರ ಪರವಾದ ನ್ಯಾಯಾಂಗ ಹೋರಾಟ ಇನ್ನೂ ನಡೆಯುತ್ತಲೇ ಇದೆ. ಅಯೋಧ್ಯೆಯ ಬಾಬರಿ ಮಸೀದಿಯನ್ನು ನೆಲ ಸಮಗೊಳಿಸಲು ಕಾರಣನಾದ ಲಾಲ್‌ಕೃಷ್ಣ ಅಡ್ವಾಣಿಯೂ ಬ್ರಾಹ್ಮಣನಲ್ಲ. ಅವರು ಪಾಕಿಸ್ತಾನದಿಂದ ವಲಸೆ ಬಂದ ಸಿಂಧಿ ಸಮುದಾಯಕ್ಕೆ ಸೇರಿದವರು. ಮಸೀದಿ ಉರುಳುವಾಗ ಕೇಕೆ ಹಾಕಿ ಸಂತಸಪಟ್ಟ ಉಮಾಭಾರತಿ ಹಿಂದುಳಿದ ಬೆಸ್ತ ಸಮುದಾಯಕ್ಕೆ ಸೇರಿದ ಮಹಿಳೆ. ಬಾಯಿ ಬಿಟ್ಟರೆ ಸಾಕು ಬೆಂಕಿ ಚೆಲ್ಲಿ ಊರೂರುಗಳನ್ನೇ ಕೋಮುದ್ವೇಷದ ಬೆಂಕಿಯಲ್ಲಿ ಬೂದಿ ಮಾಡಬಲ್ಲ ಪ್ರವೀಣ ತೊಗಾಡಿಯಾ ಪಟೇಲ್ ಸಮುದಾಯಕ್ಕೆ ಸೇರಿದವರು.

ಇವರನ್ನೆಲ್ಲ ಬ್ರಾಹ್ಮಣರಲ್ಲ ಎಂಬ ಕಾರಣಕ್ಕೆ ಸಹಾನುಭೂತಿ ತೋರಿಸಬೇಕೆ? ಇಂಥ ಪ್ರಶ್ನೆಯನ್ನು ಪೂರ್ಣಚಂದ್ರ ತೇಜಸ್ವಿ ಅವರಿಗೆ ಒಮ್ಮೆ ಕೇಳಿದಾಗ ‘ಆರೆಸ್ಸೆಸ್ ಸೇರಿದ ಹಾರುವರಿಗಿಂತ ಈ ಶೂದ್ರರು ಅಪಾಯಕಾರಿ ಕಣ್ರಿ’ ಎಂದು ನಗುತ್ತ ಹೇಳಿದ ಮಾತು ಈಗಲೂ ನೆನಪಾಗುತ್ತದೆ.ಯಡಿಯೂರಪ್ಪ, ಅನಂತಕುಮಾರ್, ಈಶ್ವರಪ್ಪ, ಸಿ.ಟಿ.ರವಿ ಇವರೆಲ್ಲ ಸಂಘ ಪರಿವಾರದಲ್ಲಿ ಬೆಳೆದವರು. ಅನಾಯಾಸವಾಗಿ ಇವರಿಗೆ ರಾಜಕೀಯ ಅಧಿಕಾರ ದೊರಕಿತು. ಅಧಿಕಾರದಿಂದ ಅನೇಕ ಸವಲತ್ತುಗಳು ದೊರಕಿವೆ. ಸಾರ್ವಜನಿಕ ಸಂಪತ್ತನ್ನು ದರೋಡೆ ಮಾಡಲು ರಾಜಕೀಯ ಅಧಿಕಾರ ರಕ್ಷಾ ಕವಚವಾಗಿದೆ. ಈ ಅಧಿಕಾರ ಸ್ವಾಧೀನಕ್ಕಾಗಿ ಇವರಲ್ಲಿ ಈಗ ಕಚ್ಚಾಟ ನಡೆದಿದೆ. ಕಬಳಿಸಿದ ಹೊಲಸು ಸಂಪತ್ತನ್ನು ಹಂಚಿಕೊಳ್ಳಲು ಭಿನ್ನಾಭಿಪ್ರಾಯ ಉಂಟಾಗಿದೆ. ಇದನ್ನು ನೇರವಾಗಿ ಹೇಳಲಾಗದೆ ಒಂದೊಂದು ನೆಪ ಮುಂದೆ ಮಾಡಿ ಪರಸ್ಪರ ಕಚ್ಚಾಡುತ್ತಿದ್ದಾರೆ. ಇದನ್ನು ಬ್ರಾಹ್ಮಣ-ಲಿಂಗಾಯತ -ಶೂದ್ರ ಜಗಳ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ.

ಯಡಿಯೂರಪ್ಪನವರು ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡದೇ ಇದ್ದಿದ್ದರೆ, ಪ್ರೇರಣಾ ಟ್ರಸ್ಟ್‌ಗೆ ಗಣಿ ಮಾಲಕರಿಂದ ಹಣಪಡೆಯದೇ ಇದ್ದಿದ್ದರೆ, ತನ್ನ ಪುತ್ರ, ಪುತ್ರಿ ಅಳಿಯಂದಿರಿಗೆ ಬಿಡಿಎ ಸೈಟುಗಳನ್ನು ನೀಡದೇ ಇದ್ದಿದ್ದರೆ, ಯಾವ ಬ್ರಾಹ್ಮಣರ ಹುನ್ನಾರವೂ ಅವರಿಗೆ ಏನನ್ನೂ ಮಾಡುತ್ತಿರಲಿಲ್ಲ. ಇದು ಉದಾಹರಣೆ ಮಾತ್ರ. ಯಡಿಯೂರಪ್ಪ ಜಾಗದಲ್ಲಿ ಅನಂತಕುಮಾರ್, ಜಗದೀಶ್ ಶೆಟ್ಟರ್, ಈಶ್ವರಪ್ಪ ಹೀಗೆ ಯಾರೇ ಇದ್ದರೂ ಇದೇ ಮಾತು ಅನ್ವಯಿಸುತ್ತದೆ.ಬಂಡವಾಳಶಾಹಿ ಪಕ್ಷಗಳಲ್ಲಿ ಇಂಥ ಭ್ರಷ್ಟಮಂತ್ರಿಗಳಿಲ್ಲದೇ ಕರ್ಪೂರಿ ಠಾಕೂರ್, ಅಚ್ಯುತ ಮೆನನ್, ನಂಬೂದ್ರಿಪಾದ ಅವರಂಥ ಮುಖ್ಯಮಂತ್ರಿಗಳು ಸಿಗಲು ಸಾಧ್ಯವೆ?

ಪಶ್ಚಿಮ ಬಂಗಾಳವನ್ನು ಕಮ್ಯುನಿಸ್ಟರು 30 ವರ್ಷಗಳ ಕಾಲ ಆಳಿದರು. ಈ ಕಾಲಾವಧಿಯಲ್ಲಿ ಜ್ಯೋತಿಬಸು ಮತ್ತು ಬುದ್ಧದೇವ ಭಟ್ಟಾಚಾರ್ಯರು ಮುಖ್ಯಮಂತ್ರಿಯಾಗಿದ್ದರು. ಇಷ್ಟು ದೀರ್ಘ ಕಾಲ ಅಧಿಕಾರದಲ್ಲಿದ್ದರೂ ಒಂದೇ ಒಂದು ಕಪ್ಪು ಕಲೆಯೂ ಅವರಿಗೆ ಅಂಟಿಕೊಂಡಿಲ್ಲ. ಸ್ವಜನ ಪಕ್ಷಪಾತ, ಭ್ರಷ್ಟಾಚಾರದ ಆರೋಪ ಅವರ ಮೇಲಿರಲಿಲ್ಲ. ಬಿಹಾರ ಮುಖ್ಯಮಂತ್ರಿಯಾಗಿದ್ದ ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಬರಿಗೈಯಿಂದ ಬಂದು ಬರಿಗೈಯಿಂದ ವಾಪಸು ಹೋದರು. ಇವರನ್ನು ಜನ ಜಾತಿ ನೋಡಿ ಗೆಲ್ಲಿಸಲಿಲ್ಲ. ಸೋಲಿಗೂ ಜಾತಿ ಕಾರಣವಾಗಿರಲಿಲ್ಲ.

ಇಂಥ ದಿಟ್ಟ ಪ್ರಾಮಾಣಿಕತೆ, ಒಂದು ಪ್ರಗತಿಪರ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದ ತತ್ವನಿಷ್ಟ ರಾಜಕಾರಣಿಗಳಿಗೆ ಮಾತ್ರ ಇದು ಸಾಧ್ಯ. ಕಾಂಗ್ರೆಸ್‌ನಲ್ಲೂ ಪ್ರಮಾಣಿಕರು ಇರಲಿಲ್ಲವೆಂದಲ್ಲ. ಗಾಂಧಿ ಕಾಲ ಮುಗಿದ ನಂತರ ರಾಜಕೀಯ ಅಧಿಕಾರ ಅವರನ್ನು ಭ್ರಷ್ಟಗೊಳಿಸಿತು. ಈಗಂತೂ ಜಾಗತೀಕರಣದ ಶಕೆ. ಲಂಚ, ಭ್ರಷ್ಟಾಚಾರಗಳ ಸ್ವರೂಪ ಬದಲಾಗಿದೆ. ಈ ಹಿಂದೆ ವರ್ಗಾವಣೆ ನೇಮಕಾತಿಗಳಲ್ಲಿ ಲಂಚ ರುಷುವತ್ತುಗಳು ವ್ಯವಹಾರ ನಡೆಯುತ್ತಿತ್ತು. ಈಗ ಅದು ಕಡಿಮೆಯಾಗಿ ಸಾರ್ವಜನಿಕ ಸಂಪತ್ತಿನ ಕಬಳಿಕೆ ನಡೆದಿದೆ. ಅಂತಲೇ ಲಕ್ಷದ ಭಾಷೆ ಹೋಗಿ ಈಗ ಕೋಟಿಯ ಭಾಷೆ ಬಂದಿದೆ.

ಯಡಿಯೂರಪ್ಪ, ಅನಂತಕುಮಾರ್, ಈಶ್ವರಪ್ಪ, ಕಲ್ಮಾಡಿ ಇಂಥವರಿಗೆಲ್ಲ ಜಾತಿ, ಧರ್ಮ ಇಲ್ಲ. ಇವರೆಲ್ಲ ಲಪಟಾವಣೆಯಲ್ಲಿ ಸಿದ್ಧಹಸ್ತರು. ಇವರಲ್ಲಿ ಯಾರ ಪರ ವಹಿಸಿದರೂ ಅದು ಜನದ್ರೋಹವಾಗುತ್ತದೆ. ಇಂಥವರನ್ನೆಲ್ಲ ಬೆಳೆಸಿ ರಾಜಕೀಯ ಅಧಿಕಾರ ನೀಡಿದ ಈ ವ್ಯವಸ್ಥೆಯ ವಿರುದ್ಧ ಪ್ರತಿಭಟನೆಯ ಚಂಡಮಾರುತ ಬರಬೇಕಾಗಿದೆ. ಬಂದೇ ಬರುತ್ತದೆ. ಆಗ ಇವರೆಲ್ಲ ತರಗೆಲೆಗಳಂತೆ ಹಾರಿಹೋಗುತ್ತಾರೆ.

ಸನತ್‌ಕುಮಾರ ಬೆಳಗಲಿ
Varthabharati

Advertisement

0 comments:

Post a Comment

 
Top