PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಯುವ ಬರಹಗಾರರು ಹಿರಿಯರ ಸಾಹಿತ್ಯವನ್ನು ಓದುವದರ ಮೂಲಕ ಅವರಿಂದ ಪ್ರೇರಣೆ ಪಡೆದುಕೊಂಡು ಹೊಸ ಸಾಹಿತ್ಯ ರಚನೆಯತ್ತ ತೊಡಗಿಕೊಳ್ಳಬೇಕು. ಕಿರಿಯರಿಗೆ ಹಿರಿಯ ಸಾಹಿತಿಗಳ ಮಾಗದರ್ಶನ , ವಿಮರ್ಶೆ ಅವಶ್ಯಕ ಎಂದು ಕಥೆಗಾರ ಲಿಂಗಾರೆಡ್ಡಿ ಆಲೂರ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೬೯ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನಮ್ಮ ಜಿಲ್ಲೆಯು ಸಾಂಸ್ಕೃತಿಕವಾಗಿ ಸಾಹಿತ್ಯಕವಾಗಿ ಸಮೃದ್ಧವಾಗಿದೆ. ಯುವ ಬರಹಗಾರರು ಇದರತ್ತ ಗಮನ ನೀಡಬೇಕು. ಕನ್ನಡನೆಟ್.ಕಾಂ ಕವಿಸಮೂಹದ ಈ ಪ್ರಯತ್ನ ಶ್ಲಾಘನೀಯವಾಗಿದೆ. ಎಲ್ಲರಿಗೂ ವೇದಿಕೆ ಕಲ್ಪಿಸುವುದರ ಜೊತೆಗೆ ಹಿರಿ ಕಿರಿಯರು ಜೊತೆಗೂಡಿ ಸಾಹಿತ್ಯ ರಚನೆಯಲ್ಲಿ ತೊಡಗಿರುವುದು ಪ್ರಶಂಸನೀಯ. ಕವಿಗಳಿಗೆ ವಾಚನ ಶೈಲಿಯೂ ಮುಖ್ಯ. ಸತತ ಅಧ್ಯಯನ ಕವಿಗೆ ಸತ್ವವನ್ನು ಕೊಡಬಲ್ಲದು ಎಂದು ಹೇಳಿದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಡಾ.ಮಹಾಂತೇಶ ಮಲ್ಲನಗೌಡರ- ದೇವರೆಲ್ಲಿದ್ದಾನೆ ?, ಪುಷ್ಪಲತಾ ಏಳುಬಾವಿ- ಮೌನ, ಶಾಂತೇಶ ಬಡಿಗೇರ-ಸ್ವತಂತ್ರ ಭಾರತ, ಎಸ್.ಎಂ.ಕಂಬಾಳಿಮಠ- ತ್ರೀರಂಗ, ಸಿರಾಜ್ ಬಿಸರಳ್ಳಿ-ಭರವಸೆ, ಎನ್.ಜಡೆಯಪ್ಪ- ಭ್ರಷ್ಟಾಚಾರ, ಬಸವರಾಜ ಚೌಡಕಿ- ಅಣ್ಣಾ ಹಜಾರೆ, ಯೋಗಾನಂದ ಲೇಬಗೇರಿ- ಜೀವನದ ಸಂತೆಯಲಿ ನಾವು ನೀವು, ವಿಜಯಲಕ್ಷ್ಮೀ ಮಠದ- ಸುವರ್ಣ ಭಾರತ, ಲಿಂಗಾರಡ್ಡಿ ಆಲೂರ- ನಮ್ಮವರು, ಲಲಿತಾ ಭಾವಿಕಟ್ಟಿ- ಮುಂಗಾರು ಸಾಲು, ಅಲ್ಲಮಪ್ರಭು ಬೆಟ್ಟದೂರು- ಗಾಂಧಿ ಇಲ್ಲದಾಗ, ರೊಟ್ಟಿ ಕವನಗಳನ್ನು ವಾಚನ ಮಾಡಿದರು.
ಲಲಿತಾ ಭಾವಿಕಟ್ಟಿಯವರು ವಾಚಿಸಿದ ಕಥೆ ಬಗ್ಗೆ ಚರ್ಚೆಯೂ ನಡೆಯಿತು. ಕಾರ್‍ಯಕ್ರಮದಲ್ಲಿ ಶಿವಾನಂದ ಹೊದ್ಲೂರ, ಬಸವರಾಜ ಶೀಲವಂತರ, ಎಸ್.ಎ.ಗಫಾರ್, ಅಕ್ಬರ್ ಪಾಷಾ ಪಲ್ಟನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸ್ವಾಗತವನ್ನು ಎನ್.ಜಡೆಯಪ್ಪ ,ವಂದನಾರ್ಪಣೆಯನ್ನು ಎಸ್.ಎಂ.ಕಂಬಾಳಿಮಠ ಮಾಡಿದರೆ ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

Advertisement

0 comments:

Post a Comment

 
Top