PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ಆ.29: ಭೂ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಮಧ್ಯಾಹ್ನ ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆಗೆ ಖುದ್ದು ಹಾಜರಾಗಿದ್ದಾರೆ.ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ 2.45ಕ್ಕೆ ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಯಡಿಯೂರಪ್ಪ ಖುದ್ದು ಹಾಜರಾದರು. ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಬಳಿಕ ನ್ಯಾಯಾಲಯದ ಕಟೆಕಟೆಯಲ್ಲಿ ನಿಂತ ಎರಡನೆ ಮಾಜಿ ಮುಖ್ಯಮಂತ್ರಿ ಎಂಬ ಹಣೆಪಟ್ಟಿಯನ್ನು ಯಡಿಯೂರಪ್ಪ ಹೊತ್ತುಕೊಂಡರು.
ಯಡಿಯೂರಪ್ಪನವರೊಂದಿಗೆ ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ. ವಿಜಯೇಂದ್ರ, ಅಳಿಯ ಸೋಹನ್ ಕುಮಾರ್, ಶಾಸಕ ಹೇಮಚಂದ್ರ ಸಾಗರ್, ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಎರಡು ಡಿನೋಟಿಫಿಕೇಷನ್ ಪ್ರಕರಣಗಳ ಸಂಬಂಧ ಒಟ್ಟು 25 ಮಂದಿ ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾದರು. ಹೈಕೋರ್ಟ್ ನಿರೀಕ್ಷಣಾ ಜಾಮೀನು ತಿರಸ್ಕರಿಸಿದು ದರಿಂದ ಸೋಮವಾರ ಯಡಿಯೂರಪ್ಪನವರು ಲೋಕಾಯುಕ್ತ ಕೋರ್ಟ್‌ಗೆ ಹಾಜರಾಗಲೇಬೇಕಾದ ಅನಿವಾರ್ಯ ಎದುರಾಗಿತ್ತು. ಬೆಳಗ್ಗೆ 11ಗಂಟೆಗೆ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾದಾಗ ಯಡಿಯೂರಪ್ಪ ಅಪರಾಹ್ಣ 3ಗಂಟೆಗೆ ಹಾಜರಾಗುವರು ಎಂದು ಅವರ ಪರ ವಕೀಲರು ತಿಳಿಸಿದರು. ಇದಕ್ಕೆ ನ್ಯಾಯಾಧೀಶರು ಸಮ್ಮತಿಸಿ ಅಪರಾಹ್ಣಕ್ಕೆ ವಿಚಾರಣೆ ಮಂದೂಡಿದರು. ಅಪರಾಹ್ಣ ವಿಚಾರಣೆ ಆರಂಭವಾಗುವ 15 ನಿಮಿಷ ಮುನ್ನವೇ ( ಮಧ್ಯಾಹ್ನ 2:45ಕ್ಕೆ ) ಯಡಿಯೂರಪ್ಪ ವಿಶೇಷ ನ್ಯಾಯಾಲಯಕ್ಕೆ ಬಂದರು.
ಅಪರಾಹ್ಣ ಸರಿಯಾಗಿ 3 ಗಂಟೆಗೆ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಕೋರ್ಟ್ ಹಾಲ್‌ಗೆ ಆಗಮಿಸಿದರು. ಮೊದಲು ಅರೆಕರೆಯಲ್ಲಿನ ಭೂ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ, ಆನಂತರ ಉತ್ತರ ಹಳ್ಳಿಯಲ್ಲಿನ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆ ನಡೆಸಿದರು.
ಭೂ ಹಗರಣ-1: ನಗರದ ಬೇಗೂರು ತಾಲೂಕಿನ ಅರಕೆರೆಹಳ್ಳಿಯ ಸರ್ವೆ ನಂ 81/3ರಲ್ಲಿನ 2.31 ಎಕ್ರೆ ಭೂಮಿಯ ಪೈಕಿ 2.5 ಎಕ್ರೆ ಭೂಮಿಯನ್ನು 2010ರ ಆ.7ರಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾನೂನು ಬಾಹಿರವಾಗಿ ಡಿನೋಟಿಫೈ ಮಾಡಿದ್ದಾರೆ. ಆ ಭೂಮಿಯನ್ನು ಯಡಿಯೂರಪ್ಪನವರ ಪುತ್ರರ ಒಡೆತನದ ದವಳಗಿರಿ ಪ್ರಾಪರ್ಟಿಸ್ ಮೂಲಕ ತಮ್ಮ ಸಂಬಂಧಿಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 20 ಕೋಟಿ ರೂ.ನಷ್ಟವಾಗಿದೆ ಎಂದು ಆರೋಪಿಸಿ ಸಿರಾಜಿನ್ ಬಾಷಾ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಆ.27ರಂದು(ಶನಿವಾರ) ನಡೆಸಿತ್ತು. ವಿಚಾರಣೆಗೆ ಯಡಿಯೂರಪ್ಪ ಹಾಜರಾಗದ ಹಿನ್ನೆಲೆಯಲ್ಲಿ, ಸೋಮವಾರ ಖುದ್ದು ಹಾಜರಾಗುವಂತೆ ಅವರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಮಂದೂಡಲಾಗಿತ್ತು.
ಇಂದಿನ ವಿಚಾರಣೆಗೆ ಯಡಿಯೂರಪ್ಪ ಸೇರಿದಂತೆ ಪ್ರಕರಣದ ಇತರ 14 ಮಂದಿ ಆರೋಪಿಗಳಾದ ಅಕ್ಕಮಹಾದೇವಿ, ಮಹಾಬಲೇಶ್ವರ, ಸತ್ಯಾ ಕುಮಾರಿ, ಮೋಹನ್ ರಾಜ್, ವಿ. ಪ್ರಕಾಶ್, ಕಾಮಾಕ್ಷಮ್ಮ, ಎನ್. ಮಂಜುನಾಥ್, ವಿ. ಅನಿಲ್ ಕುಮಾರ್, ಬಿ. ರಮೇಶ್, ಶಾಂತಾಬಾಯಿ, ಶಾಂತಾದೇವಿ, ಇಸ್ಮಾಯೀಲ್ ಶರೀಫ್, ಬಿ. ಮಂಜುನಾಥ್ ಹಾಗೂ ಕೆ. ಶಿವಪ್ಪ ಖುದ್ದು ಹಾಜರಾಗಿ, ಜಾಮೀನು ಅರ್ಜಿ ಸಲ್ಲಿಸಿದರು.

ಭೂ ಹಗರಣ-2: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಿಯಮಗಳನ್ನು ಉಲ್ಲಂಘಿಸಿ ಉತ್ತರಹಳ್ಳಿಯ ಅಗರಕೆರೆಯಲ್ಲಿ 10 ಎಕ್ರೆ ಭೂಮಿ ಡಿನೋಟಿಫೈ ಮಾಡಿದ್ದಾರೆ. ಅಲ್ಲದೆ 300 ಎಕ್ರೆ ಕೃಷಿ ಭೂಮಿ ಪರಿವರ್ತನೆ ಮಾಡಿದ್ದಾರೆ. ಅವರ ಕುಟಂಬ ಒಡೆತನದ ಧವಳಗಿರಿ ಪ್ರಾಪರ್ಟೀಸ್ ಕೆಂಪೆನಿಯು ಈ ಭೂಮಿಯ ಸಂಬಂಧ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿ ಸಿರಾಜಿನ್ ಬಾಷಾ ದೂರು ಸಲ್ಲಿಸಿದ್ದರು. ಇದರ ಈ ವಿಚಾರಣೆಗೆ ಯಡಿಯೂರಪ್ಪ, ಮತ್ತವರ ಇಬ್ಬರು ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಶಾಸಕ ಹೇಮಚಂದ್ರ ಸಾಗರ್, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸೇರಿದಂತೆ 10 ಮಂದಿ ಆರೋಪಿಗಳು ಖುದ್ದು ಹಾಜರಾಗಿ ಜಾಮೀನು ಅರ್ಜಿ ಸಲ್ಲಿಸಿದರು. ಎಲ್ಲ ಜಾಮೀನು ಅರ್ಜಿಗಳಿಗೆ ತಕರಾರು ಸಲ್ಲಿಸುವಂತೆ ನ್ಯಾಯಾಧೀಶ ಎನ್.ಕೆ.ಸುಧ್ರೀಂದ್ರ ರಾವ್, ಬಾಷಾಗೆ ಆದೇಶಿಸಿ ವಿಚಾರಣೆಯನ್ನು ಸೆ.7ಕ್ಕೆ ಮುಂದೂಡಿದರು.
ನಿಮಿಷ ಕಾಲ ಕಟಕಟೆಯಲ್ಲಿ ನಿಂತ ಬಿಎಸ್‌ವೈ: ಸೋಮವಾರ ಮಧ್ಯಾಹ್ನ 2.35ರ ವೇಳೆ ಸಿವಿಲ್ ಕೋರ್ಟ್ ಆವರಣಕ್ಕೆ ಯಡಿಯೂರಪ್ಪ ಆಗಮಿಸಿದರು. ಸರಿಯಾಗಿ 2:45ಕ್ಕೆ ಲೋಕಾಯುಕ್ತ ವಿಶೇಷ ನ್ಯಾಯಾಲಯವನ್ನು ಪ್ರವೇಶಿಸಿದ ಬಿಎಸ್‌ವೈ, ನ್ಯಾಯಾಧೀಶರು ಹಾಜರಾದ ನಂತರ 3 ಗಂಟೆಗೆ ಕಟೆಕಟೆಗೆ ಬಂದು ನಿಂತರು. ಮುಂದಿನ 30 ನಿಮಿಷಗಳ ಕಾಲ ಎರಡೂ ಭೂ ಹಗರಣ ಪ್ರಕರಣದ ವಿಚಾರಣೆ ನಡೆಯಿತು. ಸರಿಯಾಗಿ 3.30ಕ್ಕೆ ಕೋರ್ಟ್ ಹಾಲ್‌ನಿಂದ ಯಡಿಯೂರಪ್ಪ ಹೊರ ನಡೆದರು.
ಆಕ್ಷೇಪಣೆ ಸಲ್ಲಿಕೆಗೆ ಆದೇಶ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎರಡು ಭೂ ಹಗರಣಗಳಲ್ಲಿ ಒಟ್ಟು 25ಮಂದಿ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದರು. ಅರ್ಜಿ ಸ್ವೀಕರಿಸಿದ ನ್ಯಾಯಾಧೀಶರು ಸಿರಾಜಿನ್ ಬಾಷಾಗೆ ನೋಟೀಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿದರು. ಮುಂದಿನ ವಿಚಾರಣೆ ಸೆ.7ಕ್ಕೆ: ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅರಕೆರೆ ಮತ್ತು ಉತ್ತರ ಹಳ್ಳಿಯಲ್ಲಿನ ಎರಡು ಡಿನೋಟಿಫಿಕೇಷನ್ ಪ್ರಕರಣಗಳ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಸೆ.7ಕ್ಕೆ ಮುಂದೂಡಿತು. ಆಕ್ಷೇಪಣೆ ಸಲ್ಲಿಸಿದ ನಂತರ, ಜಾಮೀನು ಅರ್ಜಿಗಳ ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶರು ತಿಳಿಸಿದರು.
ಸೆ.7ರಂದು ಖುದ್ದು ಹಾಜರಾಗಲು ಆದೇಶ: ಜಾಮೀನು ಅರ್ಜಿ ಸಲ್ಲಿಸಿದ ನಂತರ ಮುಂದಿನ ವಿಚಾರಣೆಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯ್ತಿ ನೀಡುವಂತೆ ಕೋರಿ ಯಡಿಯೂರಪ್ಪ ಅರ್ಜಿ ಸಲ್ಲಿಸಿದರು. ಆದರೆ ಇದಕ್ಕೊಪ್ಪದ ನ್ಯಾಯಾಧೀಶರು, ಮಂದಿನ ವಿಚಾರಣೆಗೂ ಖುದ್ದು ಹಾಜರಾಗುಂತೆ ಆದೇಶಿಸಿದರು. ಇದರೊಂದಿಗೆ ಪ್ರಕರಣದ ಮುಂದಿನ ವಿಚಾರಣೆಗೆ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ರಾಘವೇಂದ್ರ, ಹೇಮಚಂದ್ರ ಸಾಗರ್, ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಎರಡೂ ಪ್ರಕರಣಗಳ ಒಟ್ಟು 25 ಮಂದಿ ಆರೋಪಿಗಳು ಖುದ್ದು ಹಾಜರಾಗಬೇಕಾಗಿದೆ.
ಯಡ್ಡಿಯೂರಪ್ಪನವರಿಗೆ ತಾತ್ಕಾಲಿಕ ನೆಮ್ಮದಿ: ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸೋಮವಾರ ಬೆಳಗ್ಗೆ ವಜಾಗೊಳಿಸಿತು. ಇದರಿಂದ ಯಡಿಯೂರಪ್ಪ ಅನಿವಾರ್ಯವಾಗಿ ಮಧ್ಯಾಹ್ನ ವಿಶೇಷ ನ್ಯಾಯಾಲಯದ ವಿಚಾರಣೆಗೆ ಹಾಜರಾದರು. ಬಂಧನದ ಭೀತಿಯಿಂದಲೆ ವಿಚಾರಣೆಗೆ ಹಾಜರಾಗಿ ಜಾಮೀನು ಅರ್ಜಿ ಸಲ್ಲಿಸಿದರು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಬಾಷಾಗೆ ನಿರ್ದೇಶಿಸಿ ವಿಚಾರಣೆಯನ್ನು ಸೆ.7ಕ್ಕೆ ನ್ಯಾಯಾಲಯ ಮಂದೂಡಿದ ತಕ್ಷಣವೇ ಯಡಿಯೂರಪ್ಪ ನಿರಾಳಗೊಂಡರು. ಇದರೊಂದಿಗೆ ಯಡಿಯೂರಪ್ಪನವರಿಗೆ ಸೆ.7ರವರೆಗೂ ತಾತ್ಕಾಲಿಕ ನೆಮ್ಮದಿ ಸಿಕ್ಕಿದಂತಾಗಿದೆ.
ಮುಂದಿನ ಸಾಧ್ಯತೆ:ಸೆ.7ರಂದು ಸಿರಾಜಿನ್ ಬಾಷಾ ಯಡಿಯೂರಪ್ಪ ಮತ್ತಿತರರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವರು. ಆನಂತರ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತದೆ. ದೂರಿನಲ್ಲಿ ಆರೋಪಗಳು ಮೇಲನೋಟಕ್ಕೆ ಸಾಬೀತಾಗಿ, ಸಾಕ್ಷಾಧಾರಗಳ ನಾಶಕ್ಕೆ ಪ್ರಯತ್ನಿಸಬಹುದೆಂಬ ಸಾಧ್ಯತೆ ಕಂಡುಬಂದಲ್ಲಿ ಯಡಿಯೂರಪ್ಪ ಮತ್ತು ಇತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು. ಇಲ್ಲವೆ ಜಾಮೀನು ಮಂಜೂರು ಮಾಡಬಹುದು.
ಮುಜುಗರದಿಂದಲೇ ಬಂದು-ಹೋದ ಯಡ್ಡಿ: ಇದೆ ಮೊದಲ ಬಾರಿಗೆ ವಿಚಾರಣೆಗೆ ಖುದ್ದು ಹಾಜರಾದ ಯಡಿಯೂರಪ್ಪ ತುಂಬಾ ಮುಜುಗರಕ್ಕೆ ಒಳಗಾಗಿದ್ದರು. ಅವರು ಕೋರ್ಟ್ ಹಾಲ್ ಪ್ರವೇಶಿಸುತ್ತಿದ್ದಂತೆ ವಕೀಲರು, ಕೋರ್ಟ್ ಸಿಬ್ಬಂದಿ, ಪತ್ರಕರ್ತರು, ಪೊಲೀಸರು ಇನ್ನಿತರರು ದೊಡ್ಡ ಸಂಖ್ಯೆಯಲ್ಲಿ ಕೊರ್ಟ್ ಹಾಲ್‌ನಲ್ಲಿ ಜಮಾಯಿಸಿದರು.
ಇದರಿಂದ ಯಡಿಯೂರಪ್ಪ 45 ನಿಮಿಷಗಳ ಕಾಲ ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಕಕಟೆಯಲ್ಲಿ ನಿಂತ 30 ನಿಷಮಗಳ ಕಾಲ ಅವರ ಮುಖ ಬಾಡಿಹೋಗಿತ್ತು. ವಿಚಾರಣೆ ಪೂರ್ಣಗೊಂಡ ಕ್ಷಣಮಾತ್ರದಲ್ಲಿ ಯಡಿಯೂರಪ್ಪ ಮುಜುಗರದಿಂದಲೇ ಕೋರ್ಟ್ ಹಾಲ್‌ನಿಂದ ನಿರ್ಗಮಿಸಿದರು.
ಕ್ಕಿಕ್ಕಿರಿದು ತುಂಬಿದ್ದ ಜನ: ಯಡಿಯೂರಪ್ಪನವರು ಮಧ್ಯಾಹ್ನ ವಿಶೇಷ ನ್ಯಾಯಾಲಯದ ವಿಚಾರಣೆಗೆ ಹಾಜರಾದ ತಕ್ಷಣವೆ ಕಟೆಕಟೆಯಲ್ಲಿ ನಿಂತ ಅವರನ್ನು ನೋಡಲು ಕೊರ್ಟ್ ಹಾಲ್‌ನ ಒಳಗೆ ಹಾಗೂ ಹೊರಗೆ ವಕೀಲರು, ಕೋರ್ಟ್ ಸಿಬ್ಬಂದಿ, ಪೋಲೀಸರು, ಇತರ ಪ್ರಕರಣಗಳ ವಿಚಾರಣೆಗೆ ಬಂದಿದ್ದ ಕಕ್ಷಿದಾರರು, ಪತ್ರಕರ್ತರು ಕ್ಕಿಕ್ಕಿರಿದು ತುಂಬಿದರು. ಯಡಿಯೂರಪ್ಪ ಕೋರ್ಟ್‌ಗೆ ಆಗಮಿಸುವಾಗ ಮತ್ತು ನಿರ್ಗಮಿಸುವಾಗ ಅವರನ್ನು ಸಾಕಷ್ಟು ಮಂದಿ ಹಿಂಬಾಲಿಸಿದರು

Advertisement

0 comments:

Post a Comment

 
Top