PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಆ. ೩೦ : ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗಾಗಿ ತೆರವಾಗಿರುವ ಗ್ರಾಮ ಪಂಚಾಯತಿಗಳ ಒಟ್ಟು ೧೮ ಸದಸ್ಯ ಸ್ಥಾನಗಳಿಗಾಗಿ ರಾಜ್ಯ ಚುನಾವಣಾ ಆಯೋಗ, ಚುನಾವಣೆ ವೇಳಾಪಟ್ಟಿ ಪ್ರಕಟಿಸಿದೆ.
ವಿವಿಧ ಕಾರಣಗಳಿಗಾಗಿ ತೆರವಾಗಿರುವ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕೊಪ್ಪಳ ತಾಲೂಕಿನಲ್ಲಿ ೪, ಕುಷ್ಟಗಿ- ೦೩, ಯಲಬುರ್ಗಾ- ೦೩ ಹಾಗೂ ಗಂಗಾವತಿ ತಾಲೂಕಿನಲ್ಲಿ ೦೮ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಗಳ ವಿವರ ಇಂತಿದೆ. ಕೊಪ್ಪಳ ತಾಲೂಕಿನ ಕವಲೂರು, ಅಗಳಕೇರಾ, ಗಿಣಿಗೇರಾ, ಕಾತರಕಿ-ಗುಡ್ಲಾನೂರ, ಕುಷ್ಟಗಿ ತಾಲೂಕಿನ ಮುದೇನೂರ, ಮೆಣೆದಾಳ, ಕಿಲಾರಹಟ್ಟಿ, ಯಲಬುರ್ಗಾ ತಾಲೂಕಿನ ಮುಧೋಳ, ಹಿರೇಬಿಡನಾಳ, ವಜ್ರಬಂಡಿ ಹಾಗೂ ಗಂಗಾವತಿ ತಾಲೂಕಿನ ಮಲ್ಲಾಪುರ, ಮರಳಿ, ಕಾರಟಗಿ, ಚೆಳ್ಳೂರು, ಹುಲಿಹೈದರ, ನವಲಿ, ಡಣಾಪುರ ಮತ್ತು ಚಿಕ್ಕಜಂತಕಲ್ ಗ್ರಾಮ ಪಂಚಾಯತಿಗಳಲ್ಲಿ ತೆರವಾಗಿರುವ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣಾ ಅಧಿಸೂಚನೆಯನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಸೆ. ೫ ರಂದು ಅಧಿಸೂಚನೆ ಹೊರಡಿಸುವರು. ಸೆ. ೧೨ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಸೆ. ೧೩ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಯನ್ನು ಹಿಂಪಡೆಯಲು ಸೆ. ೧೫ ಕೊನೆಯ ದಿನಾಂಕವಾಗಿದ್ದು, ಅಗತ್ಯ ಬಿದ್ದಲ್ಲಿ ಮತದಾನ ಸೆ. ೨೫ ರಂದು ಬೆಳಿಗ್ಗೆ ೭ ರಿಂದ ಸಂಜೆ ೫ ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅಗತ್ಯ ಬಿದ್ದಲ್ಲಿ ಸೆ. ೨೮ ರಂದು ನಡೆಸಲಾಗುವುದು, ಮತ ಎಣಿಕೆ ಕಾರ್ಯ ಸೆ. ೨೯ ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಚುನಾವಣೆ ಪ್ರಕ್ರಿಯೆಯನ್ನು ಸೆ. ೩೦ ರ ಒಳಗಾಗಿ ಪೂರ್ಣಗೊಳಿಸಬೇಕಾಗಿರುತ್ತದೆ. ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು, ಆಯಾ ಗ್ರಾಮ ಪಂಚಾಯತಿಯ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು, ಗ್ರಾಮ ಪಂಚಾಯತಿಗಳಿಗೆ ಒಬ್ಬರು ಚುನಾವಣಾಧಿಕಾರಿ, ಒಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಅವರಿಗೆ ಸೂಕ್ತ ತರಬೇತಿ ನೀಡಲು ಅಗತ್ಯ ಕ್ರಮ ಜರುಗಿಸುವಂತೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಚುನಾವಣೆ ನಡೆಯುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ಸೆ. ೨ ರಿಂದ ೩೦ ರವರೆಗೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement

0 comments:

Post a Comment

 
Top