PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ. ಜು. ೧೦: ಬರದ ನಾಡೆಂದೆ ಕುಖ್ಯಾತಿ ಪಡೆದಿದ್ದ ಕೊಪ್ಪಳ ಜಿಲ್ಲೆಯ ಅದರಲ್ಲೂ ಕೊಪ್ಪಳ ತಾಲೂಕಿನ ಸುಮಾರು ೩೦ಕ್ಕೂ ಹೆಚ್ಚು ಗ್ರಾಮಗಳು ಸಿಂಗಟಾಲೂರು ಏತನೀರಾವರಿ ಯೋಜನೆಯ ಲಾಭ ಪಡೆದು ನೀರಾವರಿ ಸೌಲಭ್ಯ ಹೊಂದಲಿವೆ.
ಇದೇ ಜು. ೧೧ರಂದು ಸಿಂಗಟಾಲೂರ ಏತ ನೀರಾವರಿ ಯೋಜನೆಯ ಎಡದಂಡೆ ಕಾಲುವೆ ಕಾಮಗಾರಿ ಆರಂಭವಾಗಲಿದ್ದು, ಇದಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿರುವುದರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.
ಮಳೆಯನ್ನೇ ನಂಬಿಕೊಂಡಿದ್ದ ಕೊಪ್ಪಳ ಭಾಗದ ಸಾವಿರಾರು ಕುಟುಂಬಗಳು ಇದೀಗ ಯೋಜನೆಯ ಜಾರಿಯಿಂದಾಗಿ ಒಟ್ಟು ೪೦೧೮೦ ಎಕರೆ ಜಮೀನು ನೀರಾವರಿ ಯೋಜನಾ ವ್ಯಾಪ್ತಿಗೆ ಒಳಪಡಲಿದ್ದು ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕೊಪ್ಪಳ ಭಾಗದಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಡದಂಡೆ ಕಾಲುವೆ ಬರಲಿದ್ದು, ಕಾಲುವೆಯ ಉದ್ದ ಒಟ್ಟು ೪೮ ಕಿ.ಮೀ., ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೆ ಗೇಟ್‌ಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದ್ದು, ಹೂವಿನಹಡಗಲಿ ತಾಲೂಕು- ೩೫೭೯೧ ಎಕರೆ, ಮುಂಡರಗಿ- ೫೫೧೮೬, ಕೊಪ್ಪಳ- ೪೦೧೮೬ ಹಾಗೂ ಗದಗ ತಾಲೂಕಿನ ೩೯೦೭೩ ಎಕರೆ ಸೇರಿದಂತೆ ಒಟ್ಟು ೧೭೦೨೩೬ ಎಕರೆ ಜಮೀನಿಗೆ ನೀರುಣಿಸಲು ಸಾಧ್ಯವಾಗಲಿದೆ. ಈ ಏತ ನೀರಾವರಿ ಯೋಜನೆಯ ಬಲದಂಡೆ ಹಾಗೂ ಎಡದಂಡೆ ಕಾಲುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಬಲದಂಡೆ ಕಾಲುವೆಯಿಂದ ಸೆಪ್ಟಂಬರ್ ಅಂತ್ಯದೊಳಗೆ ಹೂವಿನ ಹಡಗಲಿ ತಾಲೂಕಿನ ೯೦೦೦ ಎಕರೆಗೆ, ಡಿಸೆಂಬರ್ ವೇಳೆಗೆ ೧೨೦೦೦ ಎಕರೆ ಹಾಗೂ ಮಾರ್ಚ್ ಅಂತ್ಯದ ವೇಳೆಗೆ ಒಟ್ಟು ೪೫೦೦೦ ಎಕರೆಗೆ ನೀರು ಲಭ್ಯವಾಗಲಿದೆ.
ಸಿಂಗಟಾಲೂರ ಏತ ನೀರಾವರಿ ಯೋಜನೆಯ ಎಡದಂಡೆ ವ್ಯಾಪ್ತಿಯಲ್ಲಿ ನೆರೆಯ ಗದಗ ಹಾಗೂ ಕೊಪ್ಪಳ ಜಿಲ್ಲೆಗಳು ನೀರಾವರಿ ಕ್ಷೇತ್ರಕ್ಕೆ ಒಳಪಡಲಿದ್ದು, ಎಡದಂಡೆಯ ಭಾಗದಲ್ಲಿ ಕೊಪ್ಪಳ ತಾಲೂಕಿನ ೩೦ ಕ್ಕೂ ಹೆಚ್ಚು ಗ್ರಾಮಗಳು ನೀರಾವರಿ ಸೌಲಭ್ಯ ಪಡೆಯಲಿವೆ.
ಸಿಂಗಟಾಲೂರ ಏತ ನೀರಾವರಿ ಯೋಜನೆಯಿಂದ ಕೊಪ್ಪಳ ತಾಲೂಕಿನ ೪೦ ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶ ನೀರಾವರಿಯಾಗಲಿದ್ದು, ಇದರಿಂದ ತಾಲೂಕಿನ ಅತ್ಯಂತ ಹಿಂದುಳಿದ ಬೆಳಗಟ್ಟಿ, ನಿಲೋಗಿ, ಹಲವಾಗಲಿ, ಕೆಸಲಾಪೂರ, ಹೈದರನಗರ, ಹಟ್ಟಿ, ರಘುನಾಥನಹಳ್ಳಿ, ಕಂಪ್ಲಿ, ಘಟ್ಟರಡ್ಡಿಹಾಳ, ಮೊರನಾಳ, ಬೋಚನಹಳ್ಳಿ, ತಿಗರಿ, ಬೆಟಗೇರಿ, ಹನುಕುಂಟಿ, ಮತ್ತೂರ, ನಿರಲಗಿ, ಗುಡ್ಲಾನೂರ, ಕಾತರಕಿ, ಬೆಳೂರು, ಡಂಬ್ರಳ್ಳಿ, ಬೂದಿಹಾಳ, ಬಿಸರಹಳ್ಳಿ, ಬಿಕನಹಳ್ಳಿ, ಹಿರೇಸಿಂದೋಗಿ, ಮುರ್‍ಲಾಪೂರ, ಅಲ್ಲಿಪೂರ, ಗುಡಿಗೇರಿ, ಕವಲೂರ, ಮೈನಹಳ್ಳಿ, ಹಂದ್ರಾಳ ಗ್ರಾಮಗಳು ಸಿಂಗಟಾಲೂರ ಏತ ನೀರಾವರಿ ಯೋಜನೆಯ ಲಾಭ ಪಡೆಯಲಿವೆ.
ಹಲವಾರು ವರ್ಷಗಳಿಂದ ಈ ಗ್ರಾಮಗಳ ರೈತರು ತಮ್ಮ ಕೃಷಿಗೆ ಮಳೆಯನ್ನೇ ಆಶ್ರಯಿಸಿ ಬದುಕು ಕಟ್ಟಿಕೊಳ್ಳಬೇಕಾಗಿತ್ತು. ಒಂದೊಂದು ವರ್ಷ ಮಳೆ ಕೈಕೊಟ್ಟಾಗ ಇಡೀ ಊರಿಗೇ ಊರೇ ಸೂರು ಹಾಗೂ ಉದ್ಯೋಗ ಅರಸಿ ಬೇರೆಡೆಗೆ ಗುಳೆ ಹೋಗುವ ಪರಿಸ್ಥಿತಿ ಇತ್ತು.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗೆ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಸಿಂಗಟಾಲೂರ ಏತ ನೀರಾವರಿ ಯೋಜನೆಯಿಂದ ಗದಗ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಸುಮಾರು ೧ಲಕ್ಷ ೭೦ ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿರುವುದರಿಂದ ಲಕ್ಷಾಂತರ ಕುಟುಂಬಗಳು ಇದರ ಲಾಭ ಪಡೆಯಲಿವೆ.
ಜು. ೧೧ ರಂದು ಕಾಲುವೆ ಕಾಮಗಾರಿಗೆ ಚಾಲನೆ ದೊರೆಯಲಿದ್ದು, ಉತ್ತಮ ಗುಣಮಟ್ಟದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಯೋಜನೆ ಶೀಘ್ರ ಪೂರ್ಣಗೊಂಡು ಈ ಭಾಗದ ರೈತರ ಬದುಕು ಹಸನಾಗಬೇಕು ಎನ್ನುವ ಆಶಯವನ್ನು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಎಸ್ ಸವದಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ವ್ಯಕ್ತಪಡಿಸುತ್ತಾರೆ.

Advertisement

0 comments:

Post a Comment

 
Top