PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜುಲೈ : ತುಂಗಭದ್ರಾ ಜಲಾಶಯದಿಂದ ಮುಂಗಾರು ಹಂಗಾಮಿಗಾಗಿ ಈ ಬಾರಿ ಬಲದಂಡೆ ಕೆಳಮಟ್ಟದ ಕಾಲುವೆ ಹಾಗೂ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜು. ೨೫ ರಿಂದ ಹಾಗೂ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಹಾಗೂ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜು. ೨೭ ರಿಂದ ನೀರು ಬಿಡಲಾಗುವುದು ಎಂದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ (ಕಾಡಾ) ಅಧ್ಯಕ್ಷ ಬಸನಗೌಡ ಬ್ಯಾಗವಾಟ್ ಅವರು ಹೇಳಿದ್ದಾರೆ.
ಮುನಿರಾಬಾದಿನ ಕಾಡಾ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಕಳೆದ ೨೦೦೬ ರಲ್ಲಿ ನಡೆದ ತುಂಗಭದ್ರಾ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಿರುವಂತೆ ಪರಿಷ್ಕೃತ ಸಾಮರ್ಥ್ಯ ಪಟ್ಟಿಯನ್ವಯ ಜಲಾಶಯದ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯವು ೧೦೪. ೩೪೦ ಟಿ.ಎಂ.ಸಿ. ಆಗಿದೆ. ಕಳೆದ ಜೂ. ೧೫ ರಂದು ತುಂಗಭದ್ರಾ ಮಂಡಳಿ ಟಿ.ಬಿ. ಡ್ಯಾಂನಲ್ಲಿ ಅಧೀಕ್ಷಕ ಅಬಿಯಂತರುಗಳ ಮಟ್ಟದ ಸಭೆಯಲ್ಲಿ ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ಜಲಾಶಯದಿಂದ ನೀರಾವರಿಗೆ ಲಭ್ಯವಾಗುವ ನೀರಿನ ಪ್ರಮಾಣದ ಬಗ್ಗೆ ವಿಸ್ತೃತ ಚರ್ಚೆ ಮಾಡಲಾಗಿದ್ದು, ಕಳೆದ ಹನ್ನೆರಡು ವರ್ಷಗಳಲ್ಲಿ ಜಲಾಶಯಕ್ಕೆ ಹರಿದು ಬಂದ ಮತ್ತು ನೀರಾವರಿಗೆ ಬಳಕೆಯಾದ ನೀರಿನ ಸರಾಸರಿ ಪ್ರಮಾಣವನ್ನು ಪರಿಗಣಿಸಿ ೨೦೧೧-೧೨ ನೇ ಸಾಲಿನಲ್ಲಿ ೧೬೦ ಟಿ.ಎಂ.ಸಿ. ನೀರು ನೀರಾವರಿಗೆ ಲಭ್ಯವಾಗಬಹುದೆಂದು ಅಂದಾಜಿಸಿಸಲಾಗಿದೆ. ಕರ್ನಾಟಕಕ್ಕೆ ಲಭ್ಯವಾಗುವ ನೀರನ ಪ್ರಮಾಣ ೧೦೪. ೮೯೮ ಟಿ.ಎಂ.ಸಿ, ಆಗಿದ್ದರೆ, ಆಂಧ್ರಪ್ರದೇಶಕ್ಕೆ ೫೫. ೧೨ ಟಿ.ಎಂ.ಸಿ. ಲಭ್ಯವಾಗಲಿದೆ. ಈಗ ಅಂದಾಜಿಸಲಾಗಿರುವ ನೀರಿನ ಪ್ರಮಾಣವು ತಾತ್ಕಾಲಿಕವಾಗಿದ್ದು, ಈ ಪ್ರಮಾಣವು ಜಲಾಶಯಕ್ಕೆ ಹರಿದು ಬರುವ ನೀರಿನ ಒಳಹರಿವಿನ ಪ್ರಮಾಣದ ಮೇಲೆ ಅವಲಂಬಿತವಾಗಿದೆ. ಕರ್ನಾಟಕದ ಪಾಲಿನ ೧೦೪. ೮೯೮ ಟಿ.ಎಂ.ಸಿ. ನೀರಿಗೆ ಅನುಗುಣವಾಗಿ ವಿವಿಧ ಕಾಲುವೆಗಳಿಗೆ ನೀರಿ ಹರಿಸಲಾಗುವುದು. ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಸರಾಸರಿ ೬೦೦ ಕ್ಯೂಸೆಕ್ಸ್‌ನಂತೆ ಜು. ೨೫ ರಿಂದ ನವೆಂಬರ್ ೩೦ ರವರೆಗೆ ನೀರಿನ ಲಭ್ಯತೆ ಅನುಸಾರ ಬಿಡಲಾಗುವುದು. ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಸರಾಸರಿ ೧೧೦೦ ಕ್ಯೂಸೆಕ್ಸ್‌ನಂತೆ ಜು. ೨೫ ರಿಂದ ನವೆಂಬರ್ ೩೦ ರವರೆಗೆ ನೀರಿನ ಲಭ್ಯತೆ ಅನುಸಾರ ಬಿಡಲಾಗುವುದು. ರಾಯಾ-ಬಸವಣ್ಣ ಕಾಲುವೆಗಳಿಗೆ ಸರಾಸರಿ ೨೦೦ ಕ್ಯೂಸೆಕ್ಸ್ ನಂತೆ ನವೆಂಬರ್ ೩೦ ರವರೆಗೆ ನೀರಿನ ಲಭ್ಯತೆ ಅನುಸಾರ ಬಿಡಲಾಗುವುದು. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಹಾಗೂ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಸರಾಸರಿ ೩೨೦೦ ಕ್ಯೂಸೆಕ್ಸ್ ನಂತೆ ಜುಲೈ ೨೭ ರಿಂದ ನವೆಂಬರ್ ೩೦ ರವರೆಗೆ ನೀರಿನ ಲಭ್ಯತೆ ಅನುಸಾರ ಬಿಡಲಾಗುವುದು. ಜು. ೨೩ ರಂದು ಜಲಾಶಯದ ನೀರಿನ ಮಟ್ಟ ೧೬೨೬. ೧೫ ಅಡಿ ಇದ್ದು, ಜಲಾಶಯ ಭರ್ತಿಗೆ ಇನ್ನು ಕೇವಲ ೭ ಅಡಿ ಬಾಕಿ ಇದೆ. ಸದ್ಯ ಜಲಾಶಯದಲ್ಲಿ ೭೬. ೬೦೭ ಟಿ.ಎಂ.ಸಿ. ನೀರು ಸಂಗ್ರಹವಾಗಿದ್ದು, ಒಳಹರಿವು ೫೬೨೧೨ ಕ್ಯೂಸೆಕ್ಸ್ ಇದೆ ಎಂದು ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ್ ಅವರು ತಿಳಿಸಿದರು.
ಕೊಪ್ಪಳ ಸಂಸದ ಶಿವರಾಮಗೌಡ, ರಾಯಚೂರು ಸಂಸದ ಸಣ್ಣ ಫಕೀರಪ್ಪ, ಬಳ್ಳಾರಿ ಸಂಸದೆ ಜೆ. ಶಾಂತಾ, ಮಾನ್ವಿ ಶಾಸಕ ಹಂಪಯ್ಯ ನಾಯಕ್, ಸಿರಗುಪ್ಪ ಶಾಸಕ ಸೋಮಲಿಂಗಪ್ಪ, ಜಲಸಂಪನ್ಮೂಲ ಇಲಾಖೆ ಮುಖ್ಯ ಇಂಜಿನಿಯರ್ ದೇವರಾಜ್, ತುಂಗಭದ್ರಾ ಯೋಜನಾ ವೃತ್ತ ಅಧೀಕ್ಷಕ ಅಭಿಯಂತರ ಎಸ್.ಎಚ್. ಮಂಜಪ್ಪ ಮುಂತಾದವರು ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top