PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಮಾರಕ ರೋಗಗಳನ್ನು ಹರಡುವ ರೋಗಾಣುಗಳು, ಈಗಿನ ಔಷಧಿಗಳಿಗೆ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ರೋಗಿಗಳು ಸಮರ್ಪಕ ಚಿಕಿತ್ಸೆ ಪಡೆದುಕೊಂಡಲ್ಲಿ ಇದನ್ನು ತಡೆಗಟ್ಟಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿ.ಬಿ. ಬಸವರಾಜ್ ಅವರು ಹೇಳಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಸರದಾರ ವಲ್ಲಭಬಾಯಿ ಪಟೇಲ್ ಶಿಕ್ಷಣ ಸಂಸ್ಥೆ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಮಾರಕ ರೋಗಗಳಿಂದ ಬಳಲುವ ರೋಗಿಗಳು ತಜ್ಞ ವೈದ್ಯರುಗಳಿಂದ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ. ಆದರೆ ರೋಗಿಗಳು ತಜ್ಞ ವೈದ್ಯರನ್ನು ಸಂಪರ್ಕಿಸದೆ, ಸ್ವಯಂ ವೈದ್ಯಕೀಯ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಸೂಕ್ತ ಔಷಧ ಸೇವನೆ ಮಾಡದ ಹಾಗೂ ಚಿಕಿತ್ಸೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸುವ ರೋಗಿಗಳ ದೇಹದಲ್ಲಿನ ರೋಗಾಣುಗಳು ಈಗಿನ ಔಷಧಿಗಳಿಗೆ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕಾರಣವಾಗುತ್ತಿದೆ. ಈ ಬಾರಿಯ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಇದೇ ವಿಷಯ ಕುರಿತು ಘೋಷವಾಕ್ಯ ಪ್ರಕಟಿಸಿದ್ದು, ರೋಗಾಣುಗಳ ಔಷಧಿ ಪ್ರತಿರೋಧ ಶಕ್ತಿ ನಿಯಂತ್ರಣಕ್ಕಾಗಿ ಹೋರಾಟ, ಇಂದು ಹೋರಾಡದಿದ್ದರೆ- ನಾಳೆ ಗುಣವಿಲ್ಲ ಎಂಬುದು ಘೋಷವಾಕ್ಯವಾಗಿದೆ. ರಾಜ್ಯದ ಹಾವೇರಿ, ಬೆಂಗಳೂರು ಗ್ರಾಮಾಂತರ, ಬಿಜಾಪುರ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಬಹು ಭಾಗಗಳಲ್ಲಿ ಸ್ತ್ರೀ-ಪುರುಷ ಲಿಂಗಾನುಪಾತ ಹೆಚ್ಚಾಗಿದ್ದು, ಹೆಣ್ಣು ಭ್ರೂಣ ಹತ್ಯೆ, ಶಿಕ್ಷಣದ ಕೊರತೆ ಇದಕ್ಕೆ ಕಾರಣವಾಗಿದೆ. ಲಿಂಗಾನುಪಾತ ಕೊರತೆ ನಿವಾರಿಸಲು ಮಹಿಳೆಯರು ಹೆಚ್ಚು ಶಿಕ್ಷಿತರಾಗುವುದು ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ : ಸಿ.ಬಿ. ಬಸವರಾಜ್ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ : ಎಂ.ಎಂ. ಕಟ್ಟಿಮನಿ ಅವರು ಮಾತನಾಡಿ, ರೋಗಾಣುಗಳು ತಮ್ಮನ್ನು ನಾಶಪಡಿಸುವ ಆಂಟಿಬಯೋಟಿಕ್ ಔಷಧಿಗಳ ಸಾಮರ್ಥ್ಯವನ್ನು ನಿರುಪಯುಕ್ತೊಗೊಳಿಸುವ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ. ರೋಗಿಗಳು ಅಸಮರ್ಪಕ ಚಿಕಿತ್ಸೆಯನ್ನಾಗಲಿ ಅಥವಾ ತಜ್ಞರಲ್ಲದವರಿಂದ ಚಿಕಿತ್ಸೆಯನ್ನು ಯಾವುದೇ ಕಾರಣಕ್ಕೂ ಪಡೆಯಬಾರದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಡಾ : ಕೆ.ಜಿ. ಕುಲಕರ್ಣಿ ಅವರು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಜನರು ಮೂಢನಂಬಿಕೆ ಆಚರಣೆಯಿಂದಾಗಿ ತಜ್ಞ ವೈದ್ಯರಲ್ಲಿ ತಡವಾಗಿ ಚಿಕಿತ್ಸೆಗೆ ಬರುತ್ತಾರೆ. ಇದರಿಂದ ರೋಗ ಉಲ್ಬಣಗೊಂಡು ತೊಂದರೆಗೆ ಒಳಗಾಗುತ್ತಾರೆ. ಕೆಲವು ವೈದ್ಯರು ರೋಗಿಗಳಿಗೆ ಬೇಗನೆ ಗುಣವಾಗಲೆಂದು ಹೆಚ್ಚಿನ ಪ್ರಮಾಣದಲ್ಲಿ ಆಂಟಿಬಯಾಟಿಕ್ಸ್ ನೀಡುತ್ತಾರೆ. ಇದರಿಂದಾಗಿ ರೋಗಾಣುಗಳು ಔಷಧಿಗಳಿಗೆ ಪ್ರತಿರೋಧ ಶಕ್ತಿ ಬೆಳೆಸಿಕೊಂಡು, ಬೇರೆಯವರಿಗೆ ಮಾರಕ ರೋಗ ಹರಡಲು ಕಾರಣವಾಗುತ್ತದೆ ಎಂದು ವಿವರಿಸಿದರು. ಸರದಾರ ವಲ್ಲಭಬಾಯಿ ಪಟೇಲ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ : ಕೆ.ಬಿ. ಬ್ಯಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ : ಎಸ್.ಕೆ. ದೇಸಾಯಿ, ವೈದ್ಯಾಧಿಕಾರಿ ಡಾ : ವಿರಕ್ತಮಠ, ಕಾನೂನು ಕಾಲೇಜು ಪ್ರಾಚಾರ್ಯ ಎ. ಎಚ್. ಬಳ್ಳಾರಿ, ಡಾ. ಕೆ.ಬಿ. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಹೆಚ್. ಮಾದರ ಸ್ವಾಗತಿಸಿ, ವಂದಿಸಿದರು.

Advertisement

0 comments:

Post a Comment

 
Top