ಕೊಪ್ಪಳ ೧ - ನಗರದ ಲಯನ್ಸ್ ಕ್ಲಬ್ ಚಾರಿಟೇಬಲ್ ಟ್ರಸ್ಟ್‌ನ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕ ದಿನೋತ್ಸವ ಮತ್ತು ಕ್ರೀಡಾ ದಿನೋತ್ಸವವು ಇದೇ ದಿನಾಂಕ : ೨೯-೦೧-೧೧ ರಂದು ಬಹು ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಜರುಗಿತು.
ಸಂಜೆಯ ಅವಧಿಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಮುಖ್ಯ ಅತಿಥಿಗಳಾದ ಮೂಡಬಿದರೆಯ ಆಳ್ವಾಸ್ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಲಾಯನ್ ಜಿ.ಎಚ್. ಪ್ರಭಾಕರ ಶೆಟ್ಟಿ ಮಾತನಾಡಿ ಕೊಪ್ಪಳ ಹಿಂದುಳಿದ ಪ್ರದೇಶವಾಗಿಲ್ಲ. ಇದು ಇಲ್ಲಿಯವರ ಕಲ್ಪನೆಯಾಗಿದ್ದು, ಕೊಪ್ಪಳದ ಪ್ರತಿಭೆಗಳು ದೂರದೂರದವರೆಗೂ ಬೆಳಗಿದ್ದಾರೆ ಎಂದು ನುಡಿದರು. ಮಕ್ಕಳು ದೇಶದ ಭವಿಷ್ಯದ ಆಸ್ತಿಗಳಾಗಿದ್ದಾರೆ. ಅವರ ಬಹುಮುಖ ವ್ಯಕ್ತಿತ್ವದ ನಿರ್ಮಾಣದಲ್ಲಿ ಪಾಲಕರದ್ದೂ ಜವಾಬ್ದಾರಿ ಬಹಳಷ್ಟಿದೆ ಎಂದರು.
ಇನ್ನೊಬ್ಬ ಮುಖ್ಯ ಅತಿಥಿಗಳಾದ ಫಕೀರಪ್ಪ ಹೆಗ್ಗಡೆ ಕಾರ್ಯಕ್ರಮದ ಕುರಿತಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಕಾಯದರ್ಶಿ ಲಾಯನ್ ಬಸವರಾಜ ಬಳ್ಳೊಳ್ಳಿ ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಲಾಯನ್ ಶ್ರೀನಿವಾಸ ಗುಪ್ತಾ, ಲಾಯನ್ ಶಾಂತಣ್ಣ ಮುದಗಲ್, ಎಸ್.ಸಿ. ಹಿರೇಮಠ, ಲಾಯನ್ ವಿರೇಶ ಹತ್ತಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಭಾಗ್ಯ, ವಿಭಾ, ಪ್ರಿಯಾ ಮತ್ತು ಸ್ನೇಹಿತರು ಪ್ರಾರ್ಥಿಸಿದರೆ, ಶಾಲಾ ವಿದ್ಯಾರ್ಥಿ ಮುಖಂಡರಾದ ಬಸವರಾಜ ಬೆಲ್ಲದ್ ಮತ್ತು ಕರುಣಾ ಪಾಟೀಲ ಸ್ವಾಗತಿಸಿದರು. ಶಾಲಾ ವರದಿಯ ವಾಚನ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಶಾಲಾ ಪ್ರಾಚಾರ್ಯ ಜೆ. ರುದ್ರಸ್ವಾಮಿ ನೆರವೇರಿಸಿದರು. ನಿರೂಪಣೆಯನ್ನು ಅನುಷಾ ಗುಪ್ತಾ ಮತ್ತು ರಮ್ಯಶ್ರೀ ನೆರವೇರಿಸಿದರೆ, ಜಾಹ್ನವಿ ವಂದಿಸಿದರು. ಬಹುಮಾನ ವಿತರಣೆ ಕಾರ್ಯಕ್ರಮವನ್ನು ರಶ್ಮಿ ಮತ್ತು ಪಲ್ಲವಿ ತುಪ್ಪದ್ ನೆರವೇರಿಸಿದರು. ಕಾರ್ಯಕ್ರಮದ ನಂತರ ನಾಡು, ನುಡಿ, ಭಾವೈಕ್ಯತೆಯ ಸಂದೇಶ ಸಾರುವ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಇದಕ್ಕೂ ಮುನ್ನ ಮುಂಜಾನೆಯ ಅವಧಿಯಲ್ಲಿ ಕ್ರೀಡಾ ದಿನೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ರಾಮಕೃಷ್ಣ ವಿವೇಕಾನಂದ ಆಶ್ರಮದ ಚೈತನ್ಯಾನಂದಜೀ ಸ್ವಾಮೀಜಿ ಮಾತನಾಡಿ ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಜವಾಬ್ದಾರಿಯುತವಾಗಿ ತಮ್ಮ ವಿದ್ಯಾರ್ಜನೆಗೈದು, ಉತ್ತಮ ಮಾರ್ಗದಲ್ಲಿ ನಡೆಯುವುದರ ಮೂಲಕ ಪಾಲಕರ ಮತ್ತು ಶಾಲೆಯ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಕರೆ ನೀಡಿದರು. ಇನ್ನೊಬ್ಬ ಅತಿಥಿ ಸಿ.ವಿ. ಕಲ್ಮಠ ಸಹ ಕಾರ್ಯಕ್ರಮ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಲಾಂiiನ್ ಪರಮೇಶ್ವರಪ್ಪ ಕೊಪ್ಪಳ ವಹಿಸಿದ್ದರು. ಕ್ರೀಡಾ ವರದಿಯನ್ನು ಡಿ.ಎಚ್. ಕುರಿ ಮತ್ತು ಸ್ಕೌಟ್ಸ್ ವರದಿಯನ್ನು ಬಿ. ಪ್ರಹ್ಲಾದ ವಾಚಿಸಿದರು. ಶಾಲಾ ಪ್ರಾಚಾರ್ಯ ಜೆ. ರುದ್ರಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕ್ರೀಡೆ, ಸಾಂಸ್ಕೃತಿಕ ಮತ್ತು ಗರಿಷ್ಠ ಅಂಕಗಳ ವಿಭಾಗಗಳಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸ್ಫೂರ್ತಿ, ರಾಗಿಣಿ, ವಿಜಯಲಕ್ಷ್ಮೀ, ಪೂರ್ಣಿಮಾ ಪ್ರಾರ್ಥಿಸಿದರೆ, ಪುಷ್ಪಾ ಸ್ವಾಗತ ಭಾಷಣ, ನಿರೂಪಣೆಯನ್ನು ಅಮರನಾಥ ಮತ್ತು ಪಲ್ಲವಿ, ಕೊನೆಯದಾಗಿ ವಂದನಾರ್ಪಣೆಯನ್ನು ನಿಶಾ ನೆರವೇರಿಸಿದರು. ವೇದಿಕೆಯ ಮೇಲೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಲಾಯನ್ ವಿ.ಎಸ್. ಅಗಡಿ, ಲಾಯನ್ ವೀರೇಶ ಹತ್ತಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment