ಕೊಪ್ಪಳ ಫೆ. :ಜಿಲ್ಲೆಯಲ್ಲಿ ಕುಷ್ಠರೋಗಿಗಳ ಸಂಖ್ಯೆ ಕಡಿಮೆಯಾಗಿದ್ದು, ಆರೋಗ್ಯ ಇಲಾಖೆಯಿಂದ ನೀಡಲಾಗುತ್ತಿರುವ ಬಹು ಔಷಧಿ ಚಿಕಿತ್ಸಾ ಪದ್ಧತಿಯು ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ: ಎಸ್.ಕೆ. ದೇಸಾಯಿ ಅವರು ಹೇಳಿದ್ದಾರೆ.
ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ವಿಭಾಗ, ಗಾಣಧಾಳ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಯಲಬುರ್ಗಾ ತಾಲೂಕು ಗಾಣಧಾಳ ಗ್ರಾಮದ ಸರ್ಕಾರಿ ಹಿ.ಪ್ರಾ.ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಳೆದ ೨೦೦೪ ರಲ್ಲಿ ಜಿಲ್ಲೆಯಲ್ಲಿ ಸುಮಾರು ೪೪೬ ಕುಷ್ಠರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಇಲಾಖೆಯಿಂದ ನೀಡಲಾಗುತ್ತಿರುವ ನೂತನ ಬಹು ಔಷಧಿ ಚಿಕಿತ್ಸಾ ಪದ್ಧತಿಯು ಪರಿಣಾಮಕಾರಿ ಚಿಕಿತ್ಸೆಯಾಗಿದ್ದು ಸದ್ಯ ಜಿಲ್ಲೆಯಲ್ಲಿ ಕೇವಲ ೬೯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಕುಷ್ಠರೋಗಿಗಳ ಪ್ರಿವಿಲೆನ್ಸ್ ರೇಟ್ ಶೇ. ೦. ೫೦ ರಷ್ಟು ಇದೆ. ಕುಷ್ಠರೋಗವನ್ನು ಪ್ರಾಥಮಿಕ ಹಂತದಲ್ಲೆ ಗುರುತಿಸಿ ಚಿಕಿತ್ಸೆ ಪಡೆದಲ್ಲಿ ಶೀಘ್ರ ಗುಣಮುಖರಾಗುವ ಸಾಧ್ಯತೆ ಹೆಚ್ಚು. ಸಾರ್ವಜನಿಕರು ರೋಗಲಕ್ಷಣಗಳು ಕಂಡುಬಂದಲ್ಲಿ ಕೂಡಲೆ ಸಮೀಪದ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ವೈದ್ಯರು ಹಾಗೂ ರೋಟರಿ ಮಾಜಿ ಅಧ್ಯಕ್ಷ ಡಾ. ಕೆ.ಜಿ. ಕುಲಕರ್ಣಿ ಅವರು ಮಾತನಾಡಿ ಈ ಹಿಂದೆ ಕುಷ್ಠರೋಗಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿರಲಿಲ್ಲ. ಆದರೆ ಈಗ ನೂತನ ಔಷಧಿಯು ಪರಿಣಾಮಕಾರಿಯಾಗಿದೆ. ಇದರಿಂದಾಗಿ ಕುಷ್ಠರೋಗಿಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಗುಣಮುಖ ಹೊಂದಿದ ಕುಷ್ಠರೋಗಿಗಳಿಗೆ ಸರ್ಕಾರದಿಂದ ಲಭ್ಯವಾಗುವ ಸೌಲಭ್ಯಗಳನ್ನು ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಈ ರೋಗದ ಬಗ್ಗೆ ಸಾರ್ವಜನಿಕರು ಯಾವುದೇ ಆತಂಕ ಅಥವಾ ಭಯ ಪಡುವುದು ಅಗತ್ಯವಿಲ್ಲ. ಸೂಕ್ತ ಚಿಕಿತ್ಸೆ ಪಡೆದಲ್ಲಿ ತ್ವರಿತವಾಗಿ ಗುಣಮುಖ ಹೊಂದಲು ಸಾಧ್ಯ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಂಕ್ರಮ್ಮ ಶರಣಪ್ಪ ಹುಳ್ಳಿ, ಉಪಾಧ್ಯಕ್ಷ ಗಿರಿಯಪ್ಪ ನಾಗರಾಳ, ಎಸ್.ಡಿ.ಎಂ.ಸಿ. ಅಧ್ಯಕ್ಷರುಗಳಾದ ಹನುಮಂತಪ್ಪ ಗದ್ದಿ, ದುರಗಪ್ಪ ಪ್ಯಾಟಿಹಾಳ, ಪ್ರೌಢಶಾಲೆಯ ಮುಖ್ಯಗುರು ಎಂ.ಬಿ. ಯೂಸುಫ್, ಪ್ರಾಥಮಿಕ ಶಾಲೆ ಮುಖ್ಯಗುರು ಕಿಶನ್‌ರಾವ್ ಪಟವಾರಿ, ತಾಲೂಕು ಆರೋಗ್ಯಾಧಿಕಾರಿ ಡಾ: ಸಿ.ಎಮ್. ಹಿರೇಮಠ, ವೈದ್ಯಾಧಿಕಾರಿ ಡಾ: ಸಿ.ಬಿ. ಮಂತ್ರಿ ಮುಂತಾದವರು ಭಾಗವಹಿಸಿದ್ದರು.
0 comments:
Post a Comment