ಗುಳಿಬಿದ್ದ ಕೆನ್ನೆ, ಬಾಗಿದ ಬೆನ್ನು,
ಎಳೆ ಹುಡುಕುತ
ಪಾತಾಳಕ್ಕಿಳಿದಿರುವ ಕಣ್ಣು
ಉಸಿರಿಗೊಮ್ಮೆ ಉಬ್ಬಸಪಡುವ
ಲಾಳಿಯ ಜೊತೆ ತೋಯ್ದಾಡುವ ಜೀವ
ಶತಮಾನಗಳ ಸುಕ್ಕುಗಳು
ಹಣೆಯ ತುಂಬ
ಮಗ್ಗದ ಕುಣಿಗೆ ನೇತು ಬಿದ್ದ
ನನ್ನೂರ ಕೋಗಿಲೆಗಳು ಹಾಡುವುದಿಲ್ಲ !
ಕೋಟೆಗೆ ಕಲ್ಲಾಗಿ
ಮಹಲಿಗೆ ಮಂಚವಾಗಿ
ಉಳ್ಳವರ ಒಲೆಯ ಉರುವಲಾಗಿ
ಉರಿಯುತ್ತಿರುವ
ನನ್ನೂರ ಕೋಗಿಲೆಗಳು ಹಾಡುವುದಿಲ್ಲ !
ಶತಶತಮಾನಗಳ ಅಂಧಕಾರದಲಿ
ಬೆಳಕು ಕಾಣದೆ
ಭಾಷೆ ಮರೆತ
ನನ್ನೂರ ಕೋಗಿಲೆಗಳು ಹಾಡುವುದಿಲ್ಲ !
- ಸಿರಾಜ್ ಬಿಸರಳ್ಳಿ
0 comments:
Post a Comment