PLEASE LOGIN TO KANNADANET.COM FOR REGULAR NEWS-UPDATES



ಕಾವ್ಯದ ಸಮಯ ಮುಗಿದು ಹೋಯಿತು ಇನ್ನು ಕಾವ್ಯ ರಚನೆಯಾಗುವುದಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತದೆ. ಆದರೆ ಸೃಜನಶೀಲತೆಗೆ ಯಾವುದು ಮುಗಿದು ಹೋಗುವುದಿಲ್ಲ. ಕಾವ್ಯದ ನಿರಂತರತೆ ಯಾವತ್ತೂ ಬತ್ತುವುದಿಲ್ಲ. ಕಾವ್ಯ ರಚನೆಯಾಗಬಾರದು ಸೃಷ್ಟಿಯಾಗಬೇಕು ಎಂದು ಕೊಪ್ಪಳದ ಹಿರಿಯ ಕವಿ, ಹೃದಯವಂತ ವಿಮರ್ಶಕ ಎ.ಎಂ.ಮದರಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ಬರೆಯುವವನಿಗೆ ಕಾವ್ಯದ ಕನಿಷ್ಠ ಅರಿವಿರಬೇಕು. ಅದು ಸತತ ಅಧ್ಯಯನದ ಮೂಲಕ ಸಾಧ್ಯ ಅದನ್ನು ರೂಡಿಸಿಕೊಳ್ಳಬೇಕು ಎಂದರು. ಕಾವ್ಯ ಯಾವತ್ತೂ ಒಂದೇ ಸೂತ್ರಕ್ಕೆ ಗಂಟು ಬೀಳದೇ ಸೂತ್ರವನ್ನೂ ಮೀರುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಕವಿಸಮಯದ ಆರಂಭದಲ್ಲಿ ಮೊನ್ನೆ ನಿಧನರಾದ ಹಿರಿಯ ವಿಮರ್ಶಕ ಕಿ.ರಂ.ನಾಗರಾಜ್ ರಿಗೆ ಮೌನಾಚರಣೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ಎ.ಎಂ.ಮದರಿಯವರು ಕಿ.ರಂ.ನಾಗರಾಜ್ ರ ಬಗ್ಗೆ ಮಾತನಾಡಿದರು. ಧಾರವಾಡದಲ್ಲಿ ಬೇಂದ್ರ ಸ್ಮರಣೆಯ ಕಾರ್‍ಯಕ್ರಮದಲ್ಲಿ ಕಿ.ರಂ.ರವರ ಭಾಷಣವನ್ನು ನೆನಪಿಸಿಕೊಂಡ ಮದರಿಯವರು ಕನ್ನಡ ಸಾಹಿತ್ಯ ಬಹುದೊಡ್ಡ ವಿಮರ್ಶಕನನ್ನು ಕಳೆದುಕೊಂಡಿದೆ ಎಂದರು. ತಮ್ಮ ಎಂದಿನ ಪಂಚಿಂಗ್ ವಿಮರ್ಶೆ ಮಾಡುತ್ತ್ತ ಮದರಿಯವರು ಹಿಂದಿನ ಕೊಪ್ಪಳದ ಸಾಹಿತ್ಯಿಕ ವಾತಾವರಣವನ್ನು ನೆನಪಿಸಿಕೊಂಡರು.ಕಿರಿಯ ಕವಿಗಳು ಹೆಚ್ಚಿನ ಓದಿನ ಮೂಲಕ ವಾಚ್ಯವಾಗುವಂತಹ ಕವನಗಳನ್ನು ಕಾವ್ಯಾತ್ಮಕಗೊಳಿಸುವ ಕಲೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕವಿಗೋಷ್ಠಿಯಲ್ಲಿ ೧೮ ಕವಿಗಳು ಕವನ ವಾಚನ ಮಾಡಿದರು. ಮಹಾಂತೇಶ ಮಲ್ಲನಗೌಡರ-ಸಪಾಯಿ ಕರ್ಮಚಾರಿಯ ಬದುಕು, ಹನುಮಪ್ಪ ಬಾರಕೇರ- -ಇಟಗಿ ದೇವಾಲಯ, ಎ.ಪಿ.ಅಂಗಡಿ- ಪಾದಯಾತ್ರೆ ನಡಿಗೆ, ಶಿವಪ್ರಸಾದ ಹಾದಿಮನಿ- ಚುಟುಕು, ಎಂ.ಡಿ.ಹುಸೇನ್ -ಕೋಮುವಾದಿಗಳು, ಜಡೆಯಪ್ಪ ಎನ್-ಮಡಿವಂತ, ವಿರೇಶ ಹುಲ್ಲೂರ-ಸ್ವಾರ್ಥದ ಕತ್ತಲೆಯಿಂದ, ಶಾಂತಾದೇವಿ ಹಿರೇಮಠ- ನಾವು ಸ್ವತಂತ್ರರು, ಲಕ್ಷ್ಮೀ- ಸ್ನೇಹ, ಶ್ರೀನಿವಾಸ ಚಿತ್ರಗಾರ- ಶಿಶುಪ್ರಾಸಗಳು, ಜಿ.ಎಸ್.ಬಾರಕೇರ- ಕಾರ್ಗಿಲ್ ಕವಿತೆ, ಶಿ.ಕಾ.ಬ- ಮಗುವಾಗುತ್ತೇನೆ, ಮೆಹಮುದಮಿಯಾ- ಚಿತ್ತ, ಶಿವಾನಂದ ಹೊದ್ಲೂ- ಕನ್ನಡ, ಮಹೇಶ ಬಳ್ಳಾರಿ-ಅಗಷ್ಟ್ ೯ರ ಹಾಡು, ಶಾಂತೇಶ ಬಡಿಗೇರ- ನನ್ನ ಜನ, ಸಿರಾಜ್ ಬಿಸರಳ್ಳಿ- ಕಟ್ಟಬೇಕಿದೆ ಕವನಗಳನ್ನು ವಾಚನ ಮಾಡಿದರು. ನಂತರ ಶ್ರೀನಿವಾಸ ಚಿತ್ರಗಾರರ ಸಾಹಿತ್ಯ ಕುರಿತ ಸಂವಾದ ನಡೆಯಿತು.
ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Advertisement

0 comments:

Post a Comment

 
Top