ಕೊಪ್ಪಳ ಮೇ. ;ಜಗಜ್ಯೋತಿ ಬಸವೇಶ್ವರರ ಜಯಂತಿ ಉತ್ಸವವನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಪ್ರಭಾರಿ ಜಿಲ್ಲಾಧಿಕಾರಿ ಕೆ.ಎಸ್. ಮಂಜುನಾಥ್ ಅವರು ಹೇಳಿದ್ದಾರೆ.
ಬಸವ ಜಯಂತಿ ಆಚರಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಇಂದು ಅವರು ಮಾತನಾಡುತ್ತಿದ್ದರು.
ಗ್ರಾಮ ಪಂಚಾಯತಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೇ. ೧೬ ರಂದು ನಡೆಯಲಿರುವ ಬಸವ ಜಯಂತಿ ಉತ್ಸವ ಕಾರ್ಯಕ್ರಮಗಳನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸುವಂತೆ ಸರ್ಕಾರ ಸೂಚನೆ ನೀಡಿದೆ. ಅದೇ ರೀತಿ ಜಿಲ್ಲೆಯಲ್ಲಿ ಬಸವ ಜಯಂತಿ ಉತ್ಸವದ ಕಾರ್ಯಕ್ರಮಗಳನ್ನು ಬಸವ ಜಯಂತಿ ಉತ್ಸವ ಸಮಿತಿಯ ಸಹಯೋಗದೊಂದಿಗೆ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುವುದು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಲು ಬೆಂಗಳೂರಿನ ಪ್ರೊ. ವೀರಭದ್ರಪ್ಪ ಹಂಚಿನಮನಿ ಅವರನ್ನು ಆಹ್ವಾನಿಸಲಾಗುವುದು. ವೀಶೇಷ ಆಹ್ವಾನಿತರನ್ನಾಗಿ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಬಸವ ಕೇಂದ್ರದ ಶರಣೆ ಶ್ರೀ ಸಿಂಧೂತಾ ಶಿವಶಂಕರ ಕಾಡಾದಿ ಅವರನ್ನು ಆಹ್ವಾನಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಂಗಣ್ಣ ಕರಡಿ ಅವರು ವಹಿಸಲಿದ್ದಾರೆ. ಸಂಸ್ಥಾನ ಶ್ರೀ ಗವಿಮಠದ ಜಗದ್ಗುರು ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಸಲಿದ್ದಾರೆ. ಬಸವ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಸೇರಿದಂತೆ ಗಣ್ಯರ ಭಾಷಣಗಳನ್ನು ಧಾರ್ಮಿಕ ವಿಷಯಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದು. ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿಗಳು ತಪ್ಪದೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಆಯಾ ಇಲಾಖೆಗೆ ನಿಗದಿಪಡಿಸಿದ ಕಾರ್ಯಕ್ರಮಗಳನ್ನು ತಪ್ಪದೆ ನಿರ್ವಹಿಸಬೇಕು. ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅಧಿಕಾರಿ, ಸಿಬ್ಬಂದಿವರ್ಗದವರು ಸಹಕರಿಸಬೇಕು ಎಂದು ಪ್ರಭಾರಿ ಜಿಲ್ಲಾಧಿಕಾರಿ ಕೆ.ಎಸ್. ಮಂಜುನಾಥ್ ಅವರು ಮನವಿ ಮಾಡಿಕೊಂಡರು.
ಮೇ. ೧೬ ರಂದು ಸಂಜೆ ೪ ಗಂಟೆಗೆ ಮಹಾ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಏರ್ಪಡಿಸಲಾಗಿದ್ದು, ಮೆರವಣಿಗೆಯು ಕೋಟೆ ಮಹಾದೇಶ್ವರ ದೇವಸ್ಥಾನದಿಂದ ಹೊರಡಲಿದೆ. ಇದರ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಗ್ರಂಥಾಲಯ, ಸಣ್ಣ ಉಳಿತಾಯ, ಲಾಟರಿ ಖಾತೆ ಸಚಿವ ಕೆ. ಶಿವನಗೌಡ ನಾಯಕ್ ಅವರು ನೆರವೇರಿಸುವರು. ಮೆರವಣಿಗೆಯು ಗಡಿಯಾರ ಕಂಬ ಆಜಾದ್ ಸರ್ಕಲ್, ಕಿತ್ತೂರು ಚನ್ನಮ್ಮ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಗವಿಮಠದ ಆವರಣ ತಲುಪಲಿದೆ. ಧಾರ್ಮಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ್ ಅವರು ಹೇಳಿದರು. ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಕುಡಿಯುವ ನೀರು ಮತ್ತು ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಡಿವೈಎಸ್‌ಪಿ ವಿಜಯ ಡಂಬಳ, ನಗರಸಭೆ ಪೌರಾಯುಕ್ತ ಹೆಚ್.ಬಿ. ಬೆಳ್ಳಿಕಟ್ಟಿ, ಆಹಾರ ಇಲಾಖೆ ಉಪನಿರ್ದೇಶಕ ಸದಾಶಿವ ಮರ್ಜಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ರ್‍ಟ್ರಾಯ ಬಸವದಳದ ಜಿಲ್ಲಾ ಅಧ್ಯಕ್ಷ ವೀರಣ್ಣ ಕೊರ್‍ಲಹಳ್ಳಿ, ನಿವೃತ್ತ ಪ್ರಾಚಾರ್ಯ ಮಲ್ಲಿಕಾರ್ಜುನ ಸೋಮ್ಲಾಪುರ, ಮಲ್ಲಣ್ಣ ಅಗಡಿ, ಶಿವಾನಂದ ಹೊದ್ಲೂರ ಮುಂತಾದ ಗಣ್ಯರು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.
0 comments:
Post a Comment