PLEASE LOGIN TO KANNADANET.COM FOR REGULAR NEWS-UPDATES



















ಕೊಪ್ಪಳ : ಹೋರಾಟದ ಕಿಚ್ಚಿಲ್ಲದೇ,ಜನಪರ ಹೋರಾಟಕ್ಕೆ ಲಂಕೇಶ್ ರಂತ ಧೀಮಂತ ಬರಹಗಾರರ,ಪತ್ರಕರ್ತರ ಬೆಂಬಲವಿಲ್ಲದೇ ಕನ್ನಡ ನಾಡು ಇಂದು ತಬ್ಬಲಿತನ ಅನುಭವಿಸುತ್ತಿದೆ ಎಂದು ಮಹಾಂತೇಶ್ ಕೊತಬಾಳ ಹೇಳಿದರು. ಕೊಪ್ಪಳದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕನ್ನಡನೆಟ್.ಕಾಂ ಕನ್ನಡ ಇ ಪತ್ರಿಕಾ ಬಳಗ ಹಮ್ಮಿಕೊಂಡಿದ್ದ "ಲಂಕೇಶ್ ಇಲ್ಲದ ಒಂದು ದಶಕ' ಕಾರ್ಯಕ್ರಮದ ಸಂವಾದವನ್ನು ಲಂಕೇಶ್ ರ ಅವ್ವ ಕವನ ಓದುವುದರ ಮೂಲಕ ಆರಂಭಿಸಿದ ಅವರು ಲಂಕೇಶ್‌ರಂತಹ ವ್ಯಕ್ತಿಗಳಿಲ್ಲದೇ ಇಂದು ಹೋರಾಟಗಳು ದಿಕ್ಕುತಪ್ಪುತ್ತಿವೆ, ಸಾಕಷ್ಟು ಅವಘಡಗಳು ಜರುಗುತ್ತಿವೆ ಎಂದರು.

ಲಂಕೇಶರ ಜೊತೆಗಿನ ತಮ್ಮ ಒಡನಾಟವನ್ನು ಹಂಚಿಕೊಂಡ ಅವರು ಅವರ ಕಾವ್ಯವನ್ನು ಸ್ಮರಿಸಿ ಅದರ ಪ್ರಭಾವ ತಮ್ಮ ಮೇಲಾಗಿದ್ದನ್ನು ಹೇಳಿದರು. ಇನ್ನೊಬ್ಬ ಹೋರಾಟಗಾರ ಕೆ.ವಾಸು ಮಾತನಾಡಿ ಭ್ರಷ್ಟ ಸಮಾಜವನ್ನು ವಿರೋಧಿಸುವಲ್ಲಿ ಲಂಕೇಶ್ ತೋರುತ್ತಿದ್ದ ದಿಟ್ಟತನವನ್ನು ಸ್ಮರಿಸಿದ ಅವರು ಅಂತಹ ಲಂಕೇಶ್ ಇನ್ನೊಮ್ಮೆ ಹುಟ್ಟಿಬರಲಿ ಎಂದು ಹಾರೈಸಿದರು. ಎಡಪಂಥಿಯ ಹೋರಾಟಕ್ಕೆ ಲಂಕೇಶ್ ರ ಇಲ್ಲದಿರುವುದು ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಎ.ಭರಧ್ವಾಜ ಹೇಳಿದರು.

ಜನಸಾಮಾನ್ಯರ ಬದುಕನ್ನು ಅರ್ಥಪೂರ್‍ಣವಾಗಿಸುವಲ್ಲಿ ಲಂಕೇಶರ ಪಾತ್ರ ಹಿರಿದಾಗಿತ್ತು. ಇಂತಹ ಕಾರ್‍ಯಕ್ರಮಗಳು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯಲಿ ಎಂದು ಬಸವರಾಜ ಶೀಲವಂತರ ಆಶಿಸಿದರು. ಮಂಜುನಾಥ ಡೊಳ್ಳಿನ ಮಾತನಾಡಿ ಟ್ಯಾಬ್ಲಾಯ್ಡ್ ಪತ್ರಿಕೋಧ್ಯಮಕ್ಕೆ ರೂಪುರೇಷೆ ಹಾಕಿಕೊಟ್ಟವರು ಲಂಕೇಶ್ ಅವರಿಲ್ಲದೆ ಇಂದು ಖಾಲಿತನ ಆವರಿಸಿದೆ ಎಂದರು. ಶರಣಪ್ಪ ಬಾಚಲಾಪೂರರು ಲಂಕೇಶ್ ರ ಸಾಹಿತ್ಯ ಮತ್ತು ಬದುಕು ಅವರನ್ನು ಸದಾ ಜೀವಂತವಾಗಿಡುತ್ತವೆ. ಅವರ ಚಿಂತನೆಗಳು ನಮ್ಮನ್ನು ಮುನ್ನಡೆಸಲಿ ಎಂದರು.

ಸೋಮರೆಡ್ಡಿ ಅಳವಂಡಿ ಮಾತನಾಡಿ - ಲಂಕೇಶ್ ಆತ್ಮಸಾಕ್ಷಿಂದ ಬದುಕಿದವರು ಹೀಗಾಗಿ ಅವರು ಇಲ್ಲದ ಹತ್ತು ವರ್‍ಷಗಳ ನಂತರವೂ ನಾವು ಅವರ ಬಗ್ಗೆ ಮಾತನಾಡುತ್ತೇವೆ. ಆದರೆ ಕೆಲವರು ಅವರ ಹೆಸರನ್ನು ಹೇಳಿಕೊಂಡು ಬದುಕುತ್ತಿದ್ದಾರೆ ಎಂದರು. ಅವರು ಇದ್ದಿದ್ದರೆ ಈಗಿನ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ನೀಡುತ್ತಿದ್ದರು ಎಂದರು.

ಮಹಾಂತೇಶ ಮಲ್ಲನಗೌಡರು ಮಾತನಾಡಿ ಲಂಕೇಶ್ ಎಲ್ಲ ರಂಗದಲ್ಲಿಯೂ ಆಸಕ್ತಿಯನ್ನಿಟ್ಟುಕೊಂಡಿದ್ದವರು. ಸರಕಾರವನ್ನೇ ಎದುರು ಹಾಕಿಕೊಂಡು ವಿರೋಧಪಕ್ಷವಾಗಿ ಕೆಲಸ ಮಾಡುತ್ತಿದ್ದವರು. ಎಲ್ಲ ರಂಗದಲ್ಲಿಯೂ ಅವರು ತಮ್ಮದೇ ಛಾಪನ್ನು ಮೂಡಿಸಿದವರು. ಅವರಿಲ್ಲದೆ ಇಂದು ನಿರ್‍ವಾತ ಪರಿಸ್ಥಿತಿ ನಿರ್‍ಮಾಣವಾಗಿದೆ ಎಂದರು. ನಿಂಗಪ್ಪ ದೊಡ್ಡಮನಿ, ವಾಯ್ .ಬಿ.ಜೂಡಿ ಮಾತನಾಡಿದರು.

ಕೊನೆಯಲ್ಲಿ ಮಾತನಾಡಿದ ವಿಠ್ಠಪ್ಪ ಗೋರಂಟ್ಲಿಯವರು ಲಂಕೇಶ್ ನಮ್ಮೆಲ್ಲರ ಪ್ರಜ್ಞಾವಂತಿಕೆಯ ಸಂಕೇತವಾಗಿದ್ದವರು. ಅವರಿದ್ದಿದ್ದರೆ ಅಪರಾಧಗಳ ನಿಯಂತ್ರಣ, ಸಾಮಾಜಿಕ , ಆರ್ಥಿಕ , ರಾಜಕೀಯ ವ್ಯವಸ್ಥೆಯನ್ನು ಸರಿದಾರಿಯಲ್ಲಿ ತರುವಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತ್ರಿಕೆ ರೀತಿ ನೀತಿಗಳು ಮತ್ತು ಅವರ ಪ್ರಭಾವ ಬೇರಾವುದೇ ಪತ್ರಿಕೆಗಳಿಂದ ಇದುವರೆಗೆ ಸಾಧ್ಯವಾಗಿಲ್ಲ. ಬೇರೆ ಎಷ್ಟೋ ಪತ್ರಿಕೆಗಳು ಬಂದರೂ ಅವರಷ್ಟು ಪ್ರಭಾವಯುತವಾಗಿ ಕೆಲಸ ಮಾಡಲಾಗುತ್ತಿಲ್ಲ ಎಂದರೆ ಲಂಕೇಶ್ ರ ವ್ಯಕ್ತಿತ್ವದ ಮಹತ್ವವನ್ನು ಗಮನಿಸಬಹುದು. ಲಂಕೇಶ್ ಇಲ್ಲದ ದಶಕದಲ್ಲಿ ಕನ್ನಡ ನಾಡಿನಲ್ಲಿ ಸಾಕ್ಷಷ್ಟು ಅವಘಡಗಳು ನಡೆದು ಹೋಗಿವೆ. ಅವುಗಳನ್ನು ವಿರೋಧಿಸುವ ಕೆಲಸ ಲಂಕೇಶ್ ರಂತವರು ಸರಿಯಾಗಿ ಮಾಡುತ್ತಿದ್ದರು ಅವರ ಕ್ರಿಯಾಶೀಲತೆ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿತ್ತು. ಅವರಿಲ್ಲದ ಈ ಸಮಯದಲ್ಲಿ ಸಮಾಜ "ರೋಧಿ ಶಕ್ತಿಗಳು ಪ್ರಭಲವಾಗಿವೆ , ಅವರಂತಹ ಇನ್ನೊಬ್ಬ ಲಂಕೇಶ್ ಹುಟ್ಟಿಬರಲಿ ಅವರಿಲ್ಲದ ನಿರ್‍ವಾತ ಸ್ಥಿತಿಯನ್ನು ತುಂಬುವಂತಾಗಲಿ, ಮುಂದಿನ ದಿನಗಳಲ್ಲಿ ಲಂಕೇಶ್ ಸ್ಮರಣೆಯ ಕೆಲಸ ದೊಡ್ಡ ಪ್ರಮಾಣದಲ್ಲಿ ಆಗಲಿ ಎಂದು ಹೇಳಿದ ಅವರು ಲಂಕೇಶ್‌ರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು.

ಕಾರ್‍ಯಕ್ರಮದಲ್ಲಿ ಬಸವರಾಜ ಶೀಲವಂತರ, ಶರಣಪ್ಪ ಕೊತಬಾಳ, ಶಿ.ಕಾ.ಬಡಿಗೇರ, ನಿಂಗಪ್ಪ ದೊಡ್ಡಮನಿ, ಶರಣಪ್ಪ ಬಾಚಲಾಪೂರ, ಗಂಗಾಧರ ಬಂಡಿಹಾಳ, ಎಸ್.ಎ.ಗಫಾರ್, ಮಹಾಂತೇಶ್ ಮಲ್ಲನಗೌಡರ್, ವಾಯ್ .ಬಿ.ಜೂಡಿ, ಶಿವಾನಂದ ಹೊದ್ಲೂರ, ಎ.ಭರದ್ವಾಜ, ಕೆ.ವಾಸು, ಮಹಾಂತೇಶ ಕೊತಬಾಳ, ಮಂಜುನಾಥ ಡೊಳ್ಳಿನ, ಭೀಮರಾಯ ಹದ್ದಿನಾಳ, ಮೌನೇಶ ಬಡಿಗೇರ ಮುಂತಾದವರು ಭಾಗವಹಿಸಿದ್ದ ಸರಳ ಕಾರ್‍ಯಕ್ರಮದಲ್ಲಿ ಸಿರಾಜ್ ಬಿಸರಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಲಂಕೇಶ್ ಇಲ್ಲದ ಈ ಒಂದು ದಶಕದಲ್ಲಿ ಅವರನ್ನು ನೆಪಿಸಿಕೊಳ್ಳುವಂತಹ ಹಲವಾರು ಸಂದರ್ಭಗಳು ಬಂದಿವೆ. ಪ್ರತಿಸಲ ಅವರನ್ನು ನೆನಪಿಸಿಕೊಂಡಾಗ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತು ಎಂದು ಯೋಚಿಸುತ್ತೇವೆ ಅವರ ಸ್ಮರಣೆಗೆ ಈ ಕಾರ್‍ಯಕ್ರಮ ಹಮ್ಮಿ ಕೊಂಡಿದ್ದೇವೆ ಎಂದರು. ಕೊನೆಯಲ್ಲಿ ಬಸವರಾಜ ಶೀಲವಂತರ ವಂದನಾರ್ಪಣೆ ಮಾಡಿದರು.

Advertisement

0 comments:

Post a Comment

 
Top