ಬೆಂಗಳೂರು, ಎ.೨೩: ಭಾರತೀಯ ಸಮಾಜದಲ್ಲಿನ ಎಲ್ಲ ವರ್ಗಗಳೂ ಗೋವನ್ನು ಪವಿತ್ರ ಎಂದು ಯಾವ ಕಾಲಘಟದಲ್ಲಿಯೂ ಸರ್ವಾನುಮತದಿಂದ ಒಪ್ಪಿಕೊಂಡಿಲ್ಲ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲಂಕೇಶ್ ಪ್ರಕಾಶನ ಹಮ್ಮಿಕೊಂಡಿದ್ದ ಡಿ.ಎನ್.ಝಾ ಅವರ ಕನ್ನಡ ಅನುವಾದಿತ ‘ಗೋವು ಪವಿತ್ರ ಎಂಬ ಮಿಥ್ಯೆ’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಗೋವನ್ನು ಎಲ್ಲ ದೇವತೆಗಳ ಮಾತೆ ಎಂದು ಕರೆಯಲಾಗಿದೆ ಆದರೆ, ಅದು ಒಂದು ರೂಪಕ ಮಾತ್ರ. ಭಾರತದ ಪರಂಪರೆಯಲ್ಲಿ ಗೋವಿನ ಚಿತ್ರಣ ಬಹುರೂಪಕವಾದದ್ದು, ಎಲ್ಲಿಯೂ ಈ ಸಂಬಂಧ ಏಕಾಭಿಪ್ರಾಯ ಮೂಡಿಲ್ಲ ಎಂದು ಅವರು ತಿಳಿಸಿದರು.
ದೇಶದಲ್ಲಿ ಇಸ್ಲಾಂ ಧರ್ಮದ ಆಗಮನದ ನಂತರ ಗೋಹತ್ಯೆ ಜಾರಿಗೆ ಬಂತು ಎಂದು ಕೋಮುವಾದಿಗಳು ಸಾಮಾನ್ಯ ಜನರನ್ನು ನಂಬಿಸಲು ಯತ್ನಿಸುತ್ತಿದ್ದಾರೆ. ಈ ಮೂಲಕ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಆಹಾರ ಸೇವನೆಯ ಹಕ್ಕು ವೈಯಕ್ತಿಕವಾದದ್ದು, ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಆದರೆ, ರಾಜ್ಯ ಸರಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವ ಮೂಲಕ ಜನರನ್ನು ಧಾರ್ಮಿಕ ಆಚರಣೆಗಳನ್ನು ಮುಂದಿರಿಸಿ ಮೋಸ ಮಾಡಲು ಯತ್ನಿಸುತ್ತಿದೆ ಎಂದು ಬರಗೂರು ದೂರಿದರು.
ಈಗಾಗಲೇ ಈ ದುಷ್ಟ ಶಕ್ತಿಗಳು ಸಾಮಾನ್ಯ ಜನರನ್ನು ಮಂದಿರ-ಮಸೀದಿಯ ಹೆಸರಿನಲ್ಲಿ ಪ್ರಚೋದಿಸಿ ಸಮಾಜವನ್ನು ಒಡೆಯುವ ಕಾರ್ಯಕ್ಕೆ ಕೈ ಹಾಕಿವೆ. ಈಗ ಆಹಾರದ ಹಕ್ಕಿನ ಮೇಲೆ ದಾಳಿ ನಡೆಸುವ ಮೂಲಕ ದೇಶದ ನೈಜ್ಯ ಸಮಸ್ಯೆಗಳ ಮೇಲಿನ ಗಮನವನ್ನು ಮತ್ತೊಂದೆಡೆ ಸೆಳೆಯಲು ಈ ಕೋಮುವಾದಿ ಕಾರ್ಯಸೂಚಿಯನ್ನು ಮುಂದಾಗಿದ್ದಾರೆ ಎಂದು ಅವರು ಆಪಾದಿಸಿದರು.
ಅಭಿವೃದ್ಧಿಯ ಹೆಸರಿನಲ್ಲಿ ಆಡಳಿತ ನಡೆಸುವ ನಮ್ಮ ಆಳುವ ವರ್ಗ ಗೋವನ್ನು ಬಲಿಪಶು ಮಾಡುವುದರ ಮೂಲಕ ರಾಜಕೀಯ ದಾಳಿ ನಡೆಸುತ್ತಿದೆ. ಗೋ ಹತ್ಯೆಯನ್ನು ನಿಷೇಧಿಸಲು ಮುಂದಾಗಿರುವ ಸಂಘಪರಿವಾರದರು, ಪುರಾಣ, ವೇದ, ಉಪನಿಷತ್ತಿನಲ್ಲಿರುವ ಗೋವು, ಜಾನುವಾರುಗಳ ಬಲಿಯ ಪ್ರಸಂಗಗಳನ್ನು ತಿಳಿದುಕೊಳ್ಳುವಂತೆ ಅವರು ಸಲಹೆ ಮಾಡಿದರು.
ವಿಧಾನಪರಿಷತ್‌ನ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತಾನಾಡಿ, ಗೋ ತಳಿಗಳ ರಕ್ಷಣೆಗಾಗಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವುದಾಗಿ ಹೇಳಿಕೆ ನೀಡುತ್ತಿರುವ ಸರಕಾರ ಈ ಬಗ್ಗೆ ಒಬ್ಬ ರೈತನೊಂದಿಗೂ ಚರ್ಚೆ ನಡೆಸಿಲ್ಲ ಎಂದು ಕಿಡಿಕಾರಿದರು.
ಗೋ ತಳಿಗಳ ರಕ್ಷಣೆ ಕುರಿತು ಹೋರಾಟ ಮಾಡಬೇಕಾದ್ದು ರೈತರು, ಆದರೆ ಸರಕಾರದ ನಿರ್ಧಾರವನ್ನು ಖಂಡಿಸಿ ರೈತರೆ ಬೀದಿಗೆ ಬಂದು ಹೋರಾಟ ಮಾಡುತ್ತಿದ್ದಾರೆ. ತಮಗೆ ಅನುಪಯುಕ್ತವಾಗಿರುವ ಜಾನುವಾರುಗಳ ನಿರ್ವಹಣೆ ರೈತರಿಗೆ ತ್ರಾಸದಾಯಕವಾದದ್ದು. ಆದರೆ, ಸರಕಾರ ತನ್ನ ರಹಸ್ಯ ಕಾರ್ಯಸೂಚಿಯನ್ನ ಅನುಷ್ಠಾನ ಗೊಳಿಸಲು ಈ ಕೃತ್ಯಕ್ಕೆ ಕೈಹಾಕಿದೆ ಎಂದವರು ಆರೋಪಿಸಿದರು.
ಮಾಧ್ಯಮಗಳ ಮೂಲಕ ಸಸ್ಯಹಾರಿಗಳು-ಮಾಂಸಹಾರಿಗಳ ನಡುವೆ ಕಂದಕ ಉಂಟು ಮಾಡಲು ಯತ್ನಿಸಲಾಗುತ್ತಿದೆ. ಆಹಾರದ ಹಕ್ಕನ್ನು ಪ್ರಶ್ನಿಸಲು ಸಂವಿಧಾನದಲ್ಲಿ ಯಾರಿಗೂ ಅವಕಾಶವಿಲ್ಲ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಂಕೇಶ್ ಪ್ರಕಾಶನದ ಮುಖ್ಯಸ್ಥೆ ಗೌರಿ ಲಂಕೇಶ್ ವಹಿಸಿದ್ದರು. ಕೃತಿಯ ಅನುವಾದಕ ನಾ.ದಿವಾಕರ್ ಉಪಸ್ಥಿತರಿದ್ದರು.
ಕೃಪೆ: ಸಾಹಿಲ್ ಆನ್ಲೈನ್ ನ್ಯೂಜ್
0 comments:
Post a Comment