ಕುಲಾಂತರಿ ತಳಿಗಳ ಬಗ್ಗೆ ಸ್ಪಷ್ಟವಾದ ಅರಿವಿಲ್ಲದ ರೈತರು ಕಷ್ಟನಷ್ಟಗಳಿಗೆ ಬಲಿಯಾಗಲಿದ್ದಾರೆ
ಕೊಪ್ಪಳ :ದೇಶದ ಬೀಜ ಮಾರುಕಟ್ಟೆ ನಿಯಂತ್ರಣಕ್ಕಾಗಿ ಕಂಪನಿಗಳು ಹುನ್ನಾರ ನಡೆಸಿದ್ದು ಲಂಚ ಕೊಟ್ಟು ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿವೆ ಎಂದು ಸಹಜ ಸಾಗುವಳಿ ಪತ್ರಿಕೆಯ ಸಂಪಾದಕಿ ವಿ.ಗಾಯತ್ರಿ ಹೇಳಿದರು.
ಇಂದು ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಕೊಪ್ಪಳ,ಕೈಗನ್ನಡಿ ಪತ್ರಿಕೆ ಹಾಗೂ ಕನ್ನಡನೆಟ್.ಕಾಂ ಕನ್ನಡ ಇ- ಪತ್ರಿಕೆ ಸಂಯೋಜನೆಯಲ್ಲಿ ಹಮ್ಮಿಕೊಳ್ಳಲಾಗಿದ್ದ "ಕುಲಾಂತರಿ ತಳಿಗಳು- ಸರಕಾರ ನೀತಿ" ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಮಾನ್ಸೆಂಟೋದಂತಹ ಕಂಪನಿಗಳು ದೇಶದ ಬೀಜ ಉತ್ಪಾದನೆ,ಮಾರಾಟ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುವುದಕ್ಕಾಗಿ ಅನಾವಶ್ಯಕವಾಗಿದ್ದರೂ ಸಹ ಕುಲಾಂತರಿ ಬೀಜಗಳನ್ನು, ತಳಿಗಳನ್ನು ದೇಶದಲ್ಲಿ ಬಿಡುಗಡೆ ಮಾಡುವ ಹುನ್ನಾರ ನಡೆದಿದೆ. ಬಿಟಿ ಬದನೆಯನ್ನು ಎಲ್ಲರೂ ಎಕರೂಪವಾಗಿ ವಿರೋಧಿಸಿದ್ದರಿಂದ ಹಾಗೂ ಕೇಂದ್ರ ಸಚಿವ ಜೈ ರಾಂ ರಮೇಶ್ ಇದರ ಬಗ್ಗೆ ಆಸಕ್ತಿ ವಹಿಸಿದ್ದರಿಂದ ಅದನ್ನು ಸಧ್ಯ ಮಾರುಕಟ್ಟೆಗೆ ಬರದಂತೆ ತಡೆಗಟ್ಟಲಾಗಿದೆ ಎಂದರು. ಆದರೂ ಸರಕಾರಗಳ ಮೇಲೆ ಕುಲಾಂತರಿ ತಳಿಗಳನ್ನು ಒಪ್ಪಿಕೊಳ್ಳುವುದಕ್ಕಾಗಿ ಹೆಚ್ಚಿನ ಒತ್ತಡ ಹಾಕಲಾಗುತ್ತಿದ್ದು ಸರಕಾರ ಒತ್ತಡಕ್ಕೆ ಬಲಿಯಾದರೆ ಕುಲಾಂತರ ತಳಿಗಳು ದೇಶದ ಮಾರುಕಟ್ಟೆಗೆ ಬರಲಿದ್ದು, ರೈತರ ಇಷ್ಟವಿಲ್ಲದಿದ್ದರೂ ಬಿಟಿ ತಳಿಗಳನ್ನೇ ಬೆಳೆಯುವ ಸಮಯ ಬರಲಿದೆ. ಈ ಕುಲಾಂತರಿ ತಳಿಗಳ ಬಗ್ಗೆ ರೈತರಲ್ಲಿ ಇಲ್ಲ ಸಲ್ಲದ ಆಸೆ ಆಮೀಷಗಳನ್ನು ತೋರಿಸಲಾಗುತ್ತಿದ್ದು ಕುಲಾಂತರಿ ತಳಿಗಳ ಬಗ್ಗೆ ಸ್ಪಷ್ಟವಾದ ಅರಿವಿಲ್ಲದ ರೈತರು ಕಷ್ಟನಷ್ಟಗಳಿಗೆ ಬಲಿಯಾಗಲಿದ್ದಾರೆ ಎಂದು ಹೇಳಿದರು. ಆಂದ್ರದಲ್ಲಿ ಬಿಟಿ ಹತ್ತಿ ಬೆಳೆದು ನಷ್ಟ ಮಾಡಿಕೊಂಡ ರೈತರು ಆತ್ಮಹತ್ಯೆಮಾಡಿಕೊಂಡ ಘಟನೆಗಳು ವರದಿಯಾಗಿವೆ. ಬಿಟಿ ತಳಿಗಳು ಮನುಷ್ಯನ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಬಿಟಿ ತಳಿಗಳನ್ನು ನಾವು ವಿರೋಧಿಸದಿದ್ದರೆ ನಮ್ಮ ಇಷ್ಟವಿಲ್ಲದಿದ್ದರೂ ಅದನ್ನೇ ತಿನ್ನಬೇಕಾದ ಅನಿವಾರ್‍ಯತೆಗೆ ಗ್ರಾಹಕ ಒಳಗಾಗುತ್ತಾನೆ ಎಂದರು. ಇದರ ಬಗ್ಗೆ ಜನಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ ಎಂದರು.
ವೇದಿಕೆ ಮೇಲಿದ್ದ ಕೃಷಿ ಕಾರ್‍ಯಕರ್ತರಾದ ಕೆ.ಮಂಜು ಮತ್ತು ಬಿ.ಪತ್ರೇಗೌಡ ತಮ್ಮ ಅನುಭವಗಳನ್ನು ಹಂಚಿಕೊಂಡರು. ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾಂತೇಶ ಕೊತಬಾಳ ಕುಲಾಂತರಿ ತಳಿಗಳ ಬಗ್ಗೆ ರೈತರಲ್ಲಿ,ಜನರಲ್ಲಿ ಅರಿವು ಮೂಡಬೇಕು ಎಂದರು. ಶರಣಪ್ಪ ಕೊತಬಾಳ ಸ್ವಾಗತ ಕೋರಿದರು, ಶಿ.ಕಾ.ಬಡಿಗೇರ ನಿರೂಪಣೆ ಮಾಡಿದರು. ಕನ್ನಡನೆಟ್.ಕಾಂ ಸಂಪಾದಕ ಸಿರಾಜ್ ಬಿಸರಳ್ಳಿ ವಂದನಾರ್ಪಣೆ ಮಾಡಿದರು.ಕೊನೆಯಲ್ಲಿ ಬಿಟಿ ಹತ್ತಿ ಬೆಳೆದ ಸಂಕಷ್ಟ ಅನುಭವಿಸುತ್ತಿರುವ ರೈತರ ಸಂದರ್ಶನದ ವಿಡಿಯೋ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
0 comments:
Post a Comment