ಕೊಪ್ಪಳ ಏ. : ಜನಗಣತಿ ಕಾರ್ಯದಲ್ಲಿ ಅಲಕ್ಷ್ಯ ತೋರುವ ಹಾಗೂ ತಪ್ಪು ಮಾಹಿತಿ ಒದಗಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಜನಗಣತಿ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.
ನಗರದ ಸಾಹಿತ್ಯ ಭವನದಲ್ಲಿ ನಗರಸಭೆ ವತಿಂದ ನಗರ ವ್ಯಾಪ್ತಿಯ ಜನಗಣತಿ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಇಂದು ಅವರು ಮಾತನಾಡುತ್ತಿದ್ದರು. ಜನಗಣತಿಯಲ್ಲಿ ಜನರ ತಲೆ ಎಣಿಸುವ ಅಥವಾ ಮನೆಗಳ ಸಂಖ್ಯೆಯನ್ನು ಮಾತ್ರ ದಾಖಲಿಸುವುದು ಎಂದು ಯಾರೂ ಭಾವಿಸಬಾರದು. ಜನಸಮುದಾಯದ ಅಗತ್ಯ ಬೇಡಿಕೆಗಳನ್ನು ದಾಖಲಿಸುವುದರೊಂದಿಗೆ ದೇಶದ ನಿಖರ ಜನಸಂಖ್ಯೆಯನ್ನು ದಾಖಲಿಸಲಾಗುವುದು. ಇದರಿಂದ ದೇಶದ ಅಭಿವೃದ್ಧಿ ಕೈಕೊಳ್ಳಲು ಸಹಾಯವಾಗುವುದು. ಪರಿಶಿಷ್ಟ ಜಾತಿ/ಜನಾಂಗದವರಿಗೆ, ಇತರೆ ಹಿಂದುಳಿದ ವರ್ಗದವರಿಗೆ ಅಲ್ಲದೆ ಜನಸಮುದಾಯಕ್ಕೆ ಅಗತ್ಯ ಸೌಲಭ್ಯ ಒದಗಿಸಲು ಇದು ಪೂರಕವಾಗಲಿದೆ. ಬೇರೆ ಜಿಲ್ಲೆಯ ಜನರಲ್ಲಿ ಕೊಪ್ಪಳ ಜಿಲ್ಲೆ ಹಿಂದುಳಿದ ಜಿಲ್ಲೆ ಎಂಬ ತಪ್ಪು ಅಭಿಪ್ರಾಯ ಪ್ರಚಾರದಲ್ಲಿದೆ. ಇದನ್ನು ತೊಡೆದುಹಾಕಲು ಪ್ರತಿಯೊಬ್ಬರೂ ಶ್ರ"ಸಬೇಕು. ತಾವೆಲ್ಲ ಜಿಲ್ಲಾಡಳಿತದ ಒಂದು ಭಾಗವೇ ಆಗಿರುವುದರಿಂದ ನೀವು ಮಾಡುವ ಒಂದು ತಪ್ಪು ಜಿಲ್ಲಾಡಳಿತದ ಹೆಗಲಿಗೆ ಬರುತ್ತದೆ. ಜನಗಣತಿ ಕಾರ್ಯ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಇದರ ಬಗ್ಗೆ ಅಲಕ್ಷ್ಯ ತೋರುವ ಮತ್ತು ತಪ್ಪು ಮಾಹಿತಿಗಳನ್ನು ದಾಖಲಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಕೊಳ್ಳಲಾಗುವುದು. ತಪ್ಪಿನ ಪ್ರಮಾಣವನ್ನು ಆಧರಿಸಿ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡುವುದರ ಜೊತೆಗೆ ಸೇವೆಯಿಂದ ವಜಾ ಮಾಡುವ ಕಠಿಣ ಕ್ರಮವನ್ನು ಸಹ ಕೈಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇದೇ ರೀತಿ ನಗರದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕೊಪ್ಪಳ ಗ್ರಾಮಾಂತರ, ಹೋಬಳಿಯ ಜನಗಣತಿದಾರರ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಉದ್ಘಾಟಿಸಿ ಚಾಲನೆ ನೀಡಿದರು.
ಕಾರ್ಯಾಗಾರದ ಉದ್ಘಾಟನೆ ಸಮಾರಂಭದಲ್ಲಿ ನಗರಸಭೆ ಪೌರಾಯುಕ್ತ ಬಿ.ಎಚ್. ಬೆಳ್ಳಿಕಟ್ಟಿ, ತಹಸಿಲ್ದಾರ್ ನಾಗರಾಜ್, ಜನಗಣತಿ ಜಿಲ್ಲಾ ಸಂಯೋಜಕ ಅಶೋಕ್ ಕುಮಾರ, ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಆಕಳವಾಡಿ, ತರಬೇತಿ ಅಧಿಕಾರಿಗಳಾದ ಶ್ರೀನಿವಾಸ ಮತ್ತು ವಿಜಯಕುಮಾರ, ಸಂಪನ್ಮೂಲ ವ್ಯಕ್ತಿಗಳಾದ ಡಾ: ಪಾರ್ವತಿ ಪೂಜಾರ, ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
0 comments:
Post a Comment