PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಏ. ೦೬ ಕುಡಿಯುವ ನೀರಿನ ತೀವ್ರ ತೊಂದರೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗೆ ಕೂಡಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕುಡಿಯುವ ನೀರಿನ ಸಮಸ್ಯೆ ಹಾಗೂ ಬರ ಪರಿಹಾರ ಕಾಮಗಾರಿಗಳ ಸಂಬಂಧ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯ ೨೩೦ ಗ್ರಾಮಗಳಲ್ಲಿ  ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆ ಉದ್ಭವಿಸಬಹುದಾದ ಸಾಧ್ಯತೆಗಳಿವೆ.  ಈ ಪೈಕಿ ೫೧ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಪರಿಸ್ಥಿತಿ ಬರಬಹುದು.  ಕುಡಿಯುವ ನೀರಿನ ತೀವ್ರ ತೊಂದರೆ ಕಂಡು ಬರುವ ಗ್ರಾಮಗಳಿಗೆ ಕೂಡಲೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಪ್ರಾರಂಭಿಸಬೇಕು.  ಅಲ್ಲದೆ ಶುದ್ಧ ನೀರು ಘಟಕಗಳ ಸ್ಥಾಪನೆ ಕಾರ್ಯ ತ್ವರಿತವಾಗಿ ಪ್ರಾರಂಭವಾಗಬೇಕು.  ಬಿನ್ನಾಳ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ತೀವ್ರವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಸಮರ್ಪಕ ಕ್ರಮ ಕೈಗೊಳ್ಳದ ಅಧಿಕಾರಿಗಳ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.  ಈ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಕೂಡಲೆ ಅಳವಡಿಸಬೇಕು.  ಅಲ್ಲಿಯವರೆಗೂ ಟ್ಯಾಂಕರ್ ಮೂಲಕ ನೀರು ಪೂರೈಕೆಯನ್ನು ಕೂಡಲೆ ಪ್ರಾರಂಭಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನುದಾನದ ಕೊರತೆ ಇಲ್ಲ : ಬೇಸಿಗೆಯಲ್ಲಿ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಉದ್ಭವಿಸದಂತೆ ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆ ಪಡೆದುಕೊಳ್ಳಬೇಕು.  ಈಗಾಗಲೆ ತುರ್ತು ಕುಡಿಯುವ ನೀರು ಕಾಮಗಾರಿಗಳನ್ನು ಕೈಗೊಳ್ಳಲು ಜಿಲ್ಲಾ ಪಂಚಾಯತಿಗೆ ೫೦ ಲಕ್ಷ ರೂ. ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.  ಅಲ್ಲದೆ ಎಲ್ಲ ತಾಲೂಕುಗಳಿಗೆ ಹಾಗೂ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳಿಗೂ ಅನುದಾನ ಬಿಡುಗಡೆ ಮಾಡಿದೆ.     ಕುಡಿಯುವ ನೀರಿನ ಕ್ರಿಯಾ ಯೋಜನೆಗಳಿಗೆ ಅನುದಾನದ ಕೊರತೆಯಾಗದಂತೆ ಸರ್ಕಾರ ಹಣ ಬಿಡುಗಡೆ ಕಾರ್ಯವನ್ನು ಕೈಗೊಂಡಿದ್ದು, ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ಒದಗಿಸಲಿದೆ ಎಂದರು.  ಕೊಪ್ಪಳ ನಗರದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.  ಬೋರ್‌ವೆಲ್‌ಗಳ ದುರಸ್ತಿ, ಪೈಪ್‌ಲೈನ್ ಜೋಡಣೆ ಮುಂತಾದ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳಬೇಕು.  ಈಗಾಗಲೆ ೫೦ ಲಕ್ಷ ರೂ. ಗಳ ಅನುದಾನ ಕೊಪ್ಪಳ ನಗರಸಭೆಗೆ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ ಅವರು, ಪೈಪ್‌ಲೈನ್ ವಿಸ್ತರಣೆಗೆ ಇನ್ನೂ ೫೦ ಲಕ್ಷ ರೂ. ಗಳ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.    ಗಂಗಾವತಿ ನಗರದಲ್ಲಿ ವಿದ್ಯಾನಗರ ಹೊರತುಪಡಿಸಿ, ನೀರಿನ ಸಮಸ್ಯೆ ಇಲ್ಲ ಎಂದು ನಗರಸಭೆ ಪೌರಾಯುಕ್ತ ರಂಗಸ್ವಾಮಿ ತಿಳಿಸಿದರು.  ಯಲಬುರ್ಗಾ, ಕುಷ್ಟಗಿ, ತಾವರಗೇರಾ, ಕನಕಗಿರಿ ಸ್ಥಳೀಯ ಸಂಸ್ಥೆಗಳಿಗೂ ಸಹ ಕುಡಿಯುವ ನೀರು ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ವಾರದೊಳಗೆ ಗೋಶಾಲೆ ಪ್ರಾರಂಭಿಸಿ : ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ವಿಫಲವಾದ ಹಿನ್ನೆಲೆಯಲ್ಲಿ ಮೇವಿನ ಕೊರತೆ ಇದೆ.  ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಅಳವಂಡಿ, ಹುಲಿಹೈದರ್, ಕಲಕೇರಿ, ಕುಕನೂರು ಸೇರಿದಂತೆ ೦೪ ಕಡೆ ಮೇವು ನಿಧಿ ಸ್ಥಾಪಿಸಿ ಈಗಾಗಲೆ ೩೪. ೭೭ ಮೆ.ಟನ್ ಮೇವು ದಾಸ್ತಾನು ಮಾಡಲಾಗಿದೆ.  ಜಾನುವಾರುಗಳಿಗೆ ಮೇವಿನ ತೊಂದರೆ ಆಗದಂತೆ ತೀವ್ರ ಅಗತ್ಯ ಇರುವ ಕಡೆಗಳಲ್ಲಿ ಒಂದು ವಾರದೊಳಗೆ ಗೋಶಾಲೆ ಪ್ರಾರಂಭಿಸಬೇಕು.  ಗೋಶಾಲೆಯಲ್ಲಿ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಬೇಕು.  ಸದ್ಯ ಅಳವಂಡಿ, ಇರಕಲ್ಲಗಡ, ಕನಕಗಿರಿ, ಹುಲಿಹೈದರ್ ಗ್ರಾಮಗಳಲ್ಲಿ ವಾರದೊಳಗೆ ಗೊಶಾಲೆ ಪ್ರಾರಂಭಿಸಬೇಕು.  ಅಗತ್ಯಕ್ಕೆ ಅನುಗುಣವಾಗಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ತಲಾ ೦೨ ಗೋಶಾಲೆಗಳಂತೆ ಮುಂದಿನ ದಿನಗಳಲ್ಲಿ ಪ್ರಾರಂಭಿಸುವಂತೆ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರಿಗೆ ಸಚಿವರು ಸೂಚನೆ ನೀಡಿದರು.
ಉದ್ಯೋಗಖಾತ್ರಿ ತ್ವರಿತವಾಗಲಿ : ಮಳೆ ವಿಫಲವಾಗಿದ್ದರಿಂದ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರಿಗೆ ಉದ್ಯೋಗದ ಬೇಡಿಕೆ ಹೆಚ್ಚಾಗಿದೆ.  ಉದ್ಯೋಗಖಾತ್ರಿಯಡಿ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆಲಸ ಪ್ರಾರಂಭವಾಗಬೇಕು.  ಎಲ್ಲ ಗ್ರಾಮಗಳಲ್ಲಿ ಆದಷ್ಟು ಸಿ.ಸಿ. ರಸ್ತೆ ನಿರ್ಮಾಣ ಹಾಗೂ ಕೆರೆಗಳ ಹೂಳೆತ್ತುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಹೆಚ್ಚಿನ ಜನರಿಗೆ ಉದ್ಯೋಗ ಲಭಿಸುವಂತಾಗಬೇಕು ಎಂದು ಸಚಿವರು ಸೂಚನೆ ನೀಡಿದರು.
ವಾರ್ತಾ ಚಿತ್ರ ಬಿಡುಗಡೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ೨೦೧೫-೧೬ ನೇ ಸಾಲಿನಲ್ಲಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡ 'ವಾರ್ತಾ ಚಿತ್ರ' ಕಿರುಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಅವರು ಬಿಡುಗಡೆ ಮಾಡಿದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ವಾರ್ತಾ ಚಿತ್ರ ಕಿರುಹೊತ್ತಿಗೆಯ ಕುರಿತ ಮಾಹಿತಿ ನೀಡಿದರು. 
     ಸಭೆಯಲ್ಲಿ ಸಂಸದ ಕರಡಿ ಸಂಗಣ್ಣ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ತ್ಯಾಗರಾಜನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top