PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಮಾ. ೧೪ (ಕ ವಾ) ಸಾಮಾಜಿಕ ಸಮಾನತೆಯ ಹರಿಕಾರ, ದಿ: ಡಿ. ದೇವರಾಜ ಅರಸು ಅವರು ತಮ್ಮ ಅಧಿಕಾರಾವಧಿಯಲ್ಲಿ ಹಿಂದುಳಿದ ಮತ್ತು ಶೋಷಿತ ಜನ ಸಮುದಾಯದವರಿಗೆ ಜಾರಿಗೊಳಿಸಿರುವ ಮಹತ್ವಪೂರ್ಣ ಯೋಜನೆಗಳು ಎಲ್ಲರಿಗೂ ಸ್ಫೂರ್ತಿದಾಯಕವಾಗಿವೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
     ಸಾಮಾಜಿಕ ಸಮಾನತೆಯ ಹರಿಕಾರ, ರಾಜ್ಯದ ಮಾಜಿ ಮುಖ್ಯಮಂತ್ರಿ ದಿ: ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ಸಾಹಿತ್ಯ ಭವನದಲ್ಲಿ ಸೋಮವಾರದಿಂದ ಆಯೋಜಿಸಿರುವ ಡಿ. ದೇವರಾಜ ಅರಸು ಅವರ ಜೀವನ ಸಾಧನೆ ಕುರಿತ ಎರಡು ದಿನಗಳ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ, ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
       ಕರ್ನಾಟಕ ಬಹುಕಾಲ ನೆನಪು ಮಾಡಿಕೊಳ್ಳುವ ಹತ್ತಾರು ಅರ್ಥಪೂರ್ಣ ಯೋಜನೆಗಳನ್ನು ಅನುಷ್ಠಾನಗೊಳಿಸಿದ ದೇವರಾಜ ಅರಸರ ದೂರದೃಷ್ಟಿಯನ್ನು ಪ್ರತಿಬಿಂಬಿಸುವ ಈ ಛಾಯಾಚಿತ್ರ ಪ್ರದರ್ಶನ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲ ನೋಡುಗರಲ್ಲಿ ಸ್ಫೂರ್ತಿ ನೀಡಲಿದೆ.  ಭಾರತ ದೇಶವೇ ಕರ್ನಾಟಕದ ಪ್ರಗತಿಪರ ಅಭಿವೃದ್ಧಿ ಯೋಜನೆಗಳನ್ನು ನೋಡುವಂತೆ ಮಾಡಿದ ಹೆಗ್ಗಳಿಕೆ ಅರಸು ಅವರದ್ದು, ಕರ್ನಾಟಕ ರಾಜ್ಯ ನಾಮಕರಣ, ಭೂಸುಧಾರಣೆ ಕಾಯ್ದೆ, ಕೃಷಿ ಕಾರ್ಮಿಕರ ಕನಿಷ್ಠ ವೇತನ, ಮತ ಹೊರುವ ಪದ್ದತಿ ನಿಷೇಧ, ಜೀತ ವಿಮುಕ್ತಿ, ಋಣ ಪರಿಹಾರ, ವೃಧ್ಯಾಪ್ಯ ವೇತನ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ದೇವರಾಜ ಅರಸು ಅವರ ಆಳ್ವಿಕೆಯಲ್ಲಿ ಜಾರಿಗೊಳಿಸಿರುವ ಮಾಹಿತಿ ಛಾಯಾಚಿತ್ರ ಪ್ರದರ್ಶನದಲ್ಲಿ ಇದೆ.  ಇಂತಹ ಮಹಾನ್ ವ್ಯಕ್ತಿಯ ಜೀವನ ಸಾಧನೆಯ ಛಾಯಾಚಿತ್ರಗಳನ್ನು ನೋಡಿ, ನಿಜಕ್ಕೂ ಸಂತಸವೆನಿಸುತ್ತಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
     ರಾಜ್ಯದಲ್ಲಿ ಮಹತ್ವಪೂರ್ಣ ಯೋಜನೆಗಳನ್ನು ಜಾರಿಗೊಳಿಸಿರುವ ಡಿ. ದೇವರಾಜ ಅರಸು ಅವರ ಹೆಸರನ್ನಷ್ಟೇ ಕೇಳಿದ್ದ ವಿದ್ಯಾರ್ಥಿಗಳು, ಅವರ ಜೀವನ ಸಾಧನೆ ಹಾಗೂ ಮಹತ್ವದ ಘಟ್ಟಗಳ ಸಮಗ್ರ ವಿವರವನ್ನು ಒಳಗೊಂಡಿರುವ ಛಾಯಾಚಿತ್ರ ಪ್ರದರ್ಶನ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅತ್ಯಂತ ಸಹಕಾರಿ ಎನಿಸಿದೆ.  ಇಂತಹ ಛಾಯಾಚಿತ್ರ ಪ್ರದರ್ಶನ ಆಯೋಜಿಸಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕ್ರಮ ಶ್ಲಾಘನೀಯ ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್ ಬಣ್ಣಿಸಿದರು.
     ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್ ಅವರು, ಡಿ. ದೇವರಾಜ ಅರಸು ಅವರ ಛಾಯಾಚಿತ್ರಗಳಲ್ಲಿನ ಮಹತ್ವದ ವಿಷಯಗಳ ಕುರಿತು ಗಣ್ಯ ಮಾನ್ಯರಿಗೆ ವಿವರಣೆ ನೀಡಿದರು.  ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಶಾರದಾ ನಿಂಬರಗಿ, ಗಣ್ಯರಾದ ಶಿವಾನಂದ ಹೊದ್ಲೂರ್ ಸೇರಿದಂತೆ ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು, ಛಾಯಾಚಿತ್ರ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

Advertisement

0 comments:

Post a Comment

 
Top