PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಮಾ. ೧೧ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳಲ್ಲಿ ಇರುವ ತಾರತಮ್ಯ ನಿವಾರಿಸಲು  ರಾಜ್ಯ ಸರ್ಕಾರಿ ನೌಕರರು ಸಲ್ಲಿಸಿರುವ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ನೌಕರರ ಬೇಡಿಕೆಯನ್ನು ಪರಿಶೀಲಿಸುವಂತೆ ಕೋರಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಭರವಸೆ ನೀಡಿದರು.
     ಕೊಪ್ಪಳದ ಶ್ರೀ ಶಿವಶಾಂತವೀರ ಮಂಗಲಭವನದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ವಿಭಾಗ ಮಟ್ಟದ ಸಮಾವೇಶ ಹಾಗೂ ಪ್ರಜಾಸ್ನೇಹಿ ಆಡಳಿತ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಪ್ರಮಾಣ ಹಾಗೂ ವಿವಿಧ ಭತ್ಯೆಗಳಲ್ಲಿ ಇರುವ ವ್ಯತ್ಯಾಸ ಹಾಗೂ ತಾರತಮ್ಯವನ್ನು ನಿವಾರಿಸಿ, ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡುವಂತೆ ಕೋರಿರುವ ನೌಕರರ ಬೇಡಿಕೆ ಕ್ರಮಬದ್ಧ ಮತ್ತು ನ್ಯಾಯ ಸಮ್ಮತವಾಗಿದೆ.  ಮಾರುಕಟ್ಟೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ಖರ್ಚು, ವೆಚ್ಚ ಒಂದೇ ತೆರನಾಗಿರುತ್ತದೆ.  ವೇತನ ತಾರತಮ್ಯ ನಿವಾರಣೆ ಆಗಲೇಬೇಕಾದ ವಿಷಯವಾಗಿದೆ.  ಸರ್ಕಾರಿ ಇಲಾಖೆಗಳ ಪೈಕಿ ಮೂರು ವಿಭಾಗಗಳಿದ್ದು, ಸೇವಾ ಇಲಾಖೆಗಳು, ಅಭಿವೃದ್ಧಿಪರ ಇಲಾಖೆಗಳು ಹಾಗೂ ತೆರಿಗೆ ಸಂಗ್ರಹದ ಗುರಿ ಸಾಧಿಸುವ ಇಲಾಖೆಗಳಿವೆ.  ರಾಜ್ಯದಲ್ಲಿ ಮೂರು ವಿಭಾಗಗಳ ಇಲಾಖೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.  ಸರ್ಕಾರದ ಯಾವುದೇ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು, ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಲ್ಲಿ ನೌಕರರ ಪಾತ್ರ ಮುಖ್ಯವಾಗಿದೆ.  ಈ ನಿಟ್ಟಿನಲ್ಲಿ ನೌಕರರು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ, ಪ್ರಜಾ ಸ್ನೇಹಿ ಆಡಳಿತ ನಡೆಸಲು ಸರ್ಕಾರಕ್ಕೆ ನೆರವಾಗಬೇಕು.  ನೌಕರರ ಬೇಡಿಕೆಯನ್ನು ಸರ್ಕಾರ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಿದ್ದು, ನೌಕರರು, ಚಳುವಳಿ ಅಥವಾ ಪ್ರತಿಭಟನಾ ಮಾರ್ಗ ಅನುಸರಿಸುವ ಅಗತ್ಯವಿಲ್ಲ.  ಕಲಬುರಗಿ ವಿಭಾಗ ಮಟ್ಟದ ನೌಕರರ ಸಮಾವೇಶದಲ್ಲಿ ಮಂಡಿಸಿ, ಅನುಮೋದಿಸಲಾಗಿರುವ ಗೊತ್ತುವಳಿ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ನೌಕರರ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಯತ್ನ ಮಾಡಲಾಗುವುದು.  ಕೊಪ್ಪಳ ನಗರದಲ್ಲಿ ಈಗಾಗಲೆ ನೌಕರರ ಭವನ ಬಳಿ ಸಾಂಸ್ಕೃತಿಕ ಭವನ ನಿರ್ಮಾಣವಾಗಿದ್ದು, ಕಟ್ಟಡಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಗೆ ಸರ್ಕಾರದಿಂದ ಅಗತ್ಯ ಅನುದಾನ ದೊರಕಿಸುವ ಯತ್ನ ಮಾಡಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಭರವಸೆಯ ಮಾತುಗಳನ್ನಾಡಿದರು.
     ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಬಿ.ಪಿ. ಮಂಜೇಗೌಡ ಅವರು ಮಾತನಾಡಿ, ದೇಶದಲ್ಲಿ ಕೇಂದ್ರದ ಸರ್ಕಾರದ ವೇತನ ಮಾದರಿಯನ್ನು ಈಗಾಗಲೆ ೨೪ ರಾಜ್ಯಗಳು ಅಳವಡಿಸಿಕೊಂಡಿವೆ.  ಇತ್ತೀಚೆಗೆ ಉದಯವಾದ ತೆಲಂಗಾಣ ರಾಜ್ಯವೂ ಸಹ ಅಳವಡಿಸಿಕೊಂಡಿದೆ.  ದೇಶದಲ್ಲೇ ಅತಿ ಕಡಿಮೆ ವೇತನ ಪಡೆದುಕೊಳ್ಳುತ್ತಿರುವವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರು.  ಈಗಾಗಲೆ ಕೇಂದ್ರ ಸರ್ಕಾರ ನೌಕರರ ವೇತನ ಪರಿಷ್ಕರಿಸಲು ೭ ನೇ ವೇತನ ಆಯೋಗ ರಚಿಸಿ, ಶಿಫಾರಸು ಜಾರಿಗೊಳಿಸುವ ಹಂತದಲ್ಲಿದೆ.  ಈಗಲೇ ಕೇಂದ್ರ ನೌಕರರಿಗೂ ರಾಜ್ಯ ಸರ್ಕಾರಿ ನೌಕರರಿಗೂ ಕನಿಷ್ಠ ಶೇ. ೨೦. ೫೧ ರಿಂದ ಗರಿಷ್ಠ ಶೇ. ೮೬. ೩೯ ರಷ್ಟು ವ್ಯೆತ್ಯಾಸವಿದೆ.  ಇನ್ನು ೭ ನೇ ವೇತನ ಆಯೋಗದ ಶಿಫಾರಸು ಜಾರಿಗೊಂಡಲ್ಲಿ, ಈ ವ್ಯೆತ್ಯಾಸ ಕನಿಷ್ಠ ಶೇ. ೪೪. ೦೬ ರಿಂದ ಗರಿಷ್ಠ ಶೇ. ೧೦೯. ೯೪ ರವರೆಗೆ ಆಗಲಿದೆ.  ಅಂದರೆ ಒಬ್ಬ ಡಿ-ಗ್ರೂಪ್ ನೌಕರನಿಗೆ ಕೇಂದ್ರ ಸರ್ಕಾರ ನೀಡುವಷ್ಟು ವೇತನವನ್ನು, ರಾಜ್ಯ ಸರ್ಕಾರದ ಅಧಿಕಾರಿ ವೃಂದದವರು ಪಡೆಯುತ್ತಿದ್ದಾರೆ.  ಸಮಾನ ಕೆಲಸಕ್ಕೆ ಸಮಾನ ವೇತನ ನೀತಿ ಎಲ್ಲರಿಗೂ ಅನ್ವಯವಾಗಬೇಕು.  ಬಜೆಟ್ ಪೂರ್ವ ಸಭೆಯಲ್ಲಿ ಈ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಸಂಪನ್ಮೂಲ ಕ್ರೋಢೀಕರಣವನ್ನು ಗಮನಿಸಿ, ಬೇಡಿಕೆ ಈಡೇರಿಕೆ ಕುರಿತಂತೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.  ನೌಕರರ ಹಿತವನ್ನು ಕಡೆಗಣಿಸುತ್ತಾರೆ ಎನ್ನುವ ಅಪವಾದ ಈಗಾಗಲೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಮೇಲಿದೆ.  ಆದರೆ ಬೇಡಿಕೆಯನ್ನು ಈಡೇರಿಸುವ ಮೂಲಕ ನೌಕರರಲ್ಲಿ ಮುಖ್ಯಮಂತ್ರಿಗಳ ಬಗ್ಗೆ ಮನೆಮಾಡಿರುವ ಭಾವನೆಯನ್ನು ಬದಲಾಯಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.
     ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಪ್ಪ ಜೋಗಿ ಸ್ವಾಗತಿಸಿದರು.  ಪ್ರಜಾಸ್ನೇಹಿ ಆಡಳಿತ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ, ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಂ. ಪಟೇಲ ಪಾಂಡು ವಿಶೇಷ ಉಪನ್ಯಾಸ ನೀಡಿದರು. 
     ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಶರಣಪ್ಪ ಮಟ್ಟೂರ, ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ವಿಭಾಗದ ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರುಗಳು ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟಗಳ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top