PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಫೆ.೨೩ (ಕ ವಾ) ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ, ಕೊಪ್ಪಳ ಇವರ ವತಿಯಿಂದ ಶಿಕ್ಷಣ ಹಕ್ಕು ಕಾಯ್ದೆ ಅಡಿ ೨೦೧೬-೧೭ನೇ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತಿದೆ.
     ಅರ್ಜಿ ನಮೂನೆ ಮತ್ತು ಇತರೆ ಲಗತ್ತು ನಮೂನೆಗಳ ಮಾಹಿತಿಯನ್ನು
www.schooleducation.kar.nic.in ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಪೋಷಕರು ತಮ್ಮ ನೆರೆ-ಹೊರೆಯಲ್ಲಿರುವ ಅಲ್ಪಸಂಖ್ಯಾತವಲ್ಲದ ಅನುದಾನ ರಹಿತ ಶಾಲೆಗಳಲ್ಲಿರುವ ಪ್ರಾರಂಭಿಕ ತರಗತಿಯಾದ ಎಲ್.ಕೆ.ಜಿ ಅಥವಾ ೧ನೇ ತರಗತಿಗೆ ಪ್ರವೇಶ ಕೋರಿ ಆನ್‌ಲೈನ್ ಮೂಲಕ ಆದ್ಯತೆಯ ಮೇಲೆ ಐದು ಶಾಲೆಗಳಿಗೆ ಒಂದೇ ಅರ್ಜಿ ಸಲ್ಲಿಸಬಹುದಾಗಿದೆ. ನಗರ ಪ್ರದೇಶದಲ್ಲಿ ತಾವು ವಾಸಿಸುವ ವಾರ್ಡ್ ಒಳಗೆ ಇರುವ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ತಾವು ವಾಸಿಸುವ ಸ್ಥಳ ಅಥವಾ ಗ್ರಾಮದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಇರುವ ಶಾಲೆಗಳನ್ನು ನೆರೆಹೊರೆಯ ಶಾಲೆಗಳೆಂದು ಪರಿಗಣಿಸಲಾಗಿದೆ. ನೆರೆಹೊರೆಯ ಶಾಲೆಗಳ ಪಟ್ಟಿಯನ್ನು ಆಯಾ ಶಿಕ್ಷಣಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಮತ್ತು ಜಿಲ್ಲೆಯ ಅಧಿಕೃತ ವೆಬ್‌ಸೈಟ್
www.koppal.nic.in ಮತ್ತು ಇಲಾಖೆಯ ಅಧಿಕೃತ ವೆಬ್‌ಸೈಟ್
www.schooleducation.kar.nic.in ನಲ್ಲಿ ಸಾರ್ವಜನಿಕರ ಮಾಹಿತಿಗೆ ಪ್ರಕಟಿಸಲಾಗಿದೆ.
     ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರದ ಪೋಷಕರು ಮಗುವಿನ ಭಾವಚಿತ್ರ, ಜಾತಿ ದೃಢೀಕರಣ ಪತ್ರ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ ಮುಂತಾದ ದಾಖಲೆಗಳ ಜೆರಾಕ್ಸ್ ಪ್ರತಿ ಹಾಗೂ ಮೂಲ ದಾಖಲೆಗಳೊಂದಿಗೆ ಪ್ರಥಮ ಆದ್ಯತೆ ಕೋರುವ ಶಾಲೆಗೆ ಭೇಟಿ ನೀಡಿ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ. ಯಾವುದೇ ಅರ್ಜಿಗಳನ್ನು ಆಫ್‌ಲೈನ್‌ನಲ್ಲಿ ಸಲ್ಲಿಸುವಂತಿಲ್ಲ. ಇಲಾಖೆಯ ವೇಳಾಪಟ್ಟಿಯ ಪ್ರಕಾರ ಅರ್ಹ ಮಕ್ಕಳ ಪಟ್ಟಿಯನ್ನು ಮಾ.೨೨ ರಂದು ಹಾಗೂ ಆನ್‌ಲೈನ್ ಮೂಲಕ ಪ್ರಥಮ ಸುತ್ತಿನ ಸೀಟು ಹಂಚಿಕೆ ಆಯ್ಕೆ ಮಾಡಿದ ಮಕ್ಕಳ ಪಟ್ಟಿಯನ್ನು ಏ.೦೬ ರಂದು  ಪ್ರಕಟಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಪ್ಪಳದ ಉಪನಿರ್ದೇಶಕ ಎ.ಶ್ಯಾಮಸುಂದರ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top